ಘಟ್ಟದಲ್ಲಿನ ಪಯಣ

ಘಟ್ಟದಲ್ಲಿನ ಪಯಣ

© ನಾಗೇಶ್ ಓ ಎಸ್

ಅದೊಂದು ದಿನ ಮುಂಜಾವಿನ ಸಮಯ, ಇ-ಪ್ರಹಾರಿ ತಂತ್ರಾಂಶ ಬಳಸಿ “ಕಾನನ”ದಲ್ಲಿ ಗಸ್ತು ಸಂಚರಿಸಲು ನಾವೆಲ್ಲರೂ ಸೇರಿದ್ದೆವು. ಮೂಡಣ ದಿಕ್ಕಿನಲ್ಲಿ ಸೂರ್ಯ ಉದಯಿಸಿದ ಯಾವುದೇ ಕುರುಹುಗಳಿರಲಿಲ್ಲ. ಅಷ್ಟು ಬೇಗನೇ ಎದ್ದು ನಾವುಗಳು ದಟ್ಟವಾದ ಕಾಡಿನ ಅಂಚಿನಲ್ಲಿ ಒಬ್ಬೊಬ್ಬರಾಗಿ ಒಂದು ನಿರ್ದಿಷ್ಟ ಜಾಗದಲ್ಲಿ ಸೇರಿಕೊಂಡು, ಪಿರಾಮಿಡ್ಡುಗಳನ್ನೇ ಮೀರಿಸುವಂತಹ ಬೆಟ್ಟವನ್ನು ಹತ್ತಲು ಪ್ರಾರಂಭಿಸಿದೆವು. ಅಪರೂಪದ ಸಸ್ಯ ರಾಶಿಗಳ ಮಧ್ಯದಲ್ಲಿ ನಮ್ಮ ಪಯಣ ಇರುವೆಗಳ ಸಾಲಿನಂತೆ ಸಾಗಿ ಕೊನೆಗೆ ಬೆಟ್ಟದ ಶಿರವನ್ನು ತಲುಪಿತು.

ಬೆಟ್ಟದ ಶಿರವನ್ನು ತಲುಪುತ್ತಿದ್ದಂತೆ ಮೂಡಣ ದಿಕ್ಕಿನಿಂದ ಸೂರ್ಯನು, ಕ್ಷಿತಿಜದ ಅಂಚಿನಿಂದ ಕೆಂಪುವರ್ಣ ತಳೆದು ದಟ್ಟವಾದ ವೃಕ್ಷಗಳ ಮಧ್ಯದಿಂದ ತನ್ನ ಸುಂದರ ಹೊಂಗಿರಣಗಳ ಹೊರಸೂಸುವಿಕೆಯನ್ನು ವೃಕ್ಷಗಳ ಮೇಲಿನಿಂದ ವೃಕ್ಷದೇವತೆಯು ತನ್ನ ಹಸ್ತಗಳ ಮೂಲಕ ನಮ್ಮನ್ನು ಆಶೀರ್ವದಿಸಿದ ಅನುಭವ ಮೂಡಿತು. ಆಗಲೇ ಬೆಟ್ಟದ ಶಿರದ ಮೇಲಿದ್ದ ನಮಗೆ ಆಹ್ಲಾದಕರ ಮಾರುತವು ಪ್ರಕೃತಿಯ ಮಧ್ಯದಿಂದ ನುಸುಳಿ ನಮ್ಮ ಅಂಗಾಂಗಗಳನ್ನು ಸೋಕಿದಾಗ ತಂಪಾದ ಪುಳಕಿತ ಅನುಭವ ನಮಗಾಯಿತು.

         ಹಕ್ಕಿಗಳ ಚಿಲಿಪಿಲಿ ಕಲರವ ಇಂಪಾಗಿ ಪ್ರತಿಧ್ವನಿಸುತ್ತಿತ್ತು, ಪ್ರಮುಖವಾಗಿ ‘ಸರಳೆಸಿಳ್ಳಾರ’ (Malabar whistling thrush)” ಹಕ್ಕಿಯ ಹಾಡಿಗೆ ತಲೆಯಾಡಿಸುವ ಕೆಲಸ ಮಾತ್ರ ಬಾಕಿ ಉಳಿದಿತ್ತು, ತಾನೇನೂ ಕಮ್ಮಿ ಇಲ್ಲ ಎನ್ನುವಂತೆ ‘ಕೆಂಪು ಕೊರಳಿನ ಪಿಕಳಾರ’ (Flame throated Bulbul)” ಹಾಗೂ ‘ಬೂದು ತಲೆಯ ಪಿಕಳಾರ’ (Gray headed Bulbul)” ಹಕ್ಕಿಗಳ ಕೂಗು ನಮ್ಮ ಕಿವಿಗಳಲ್ಲಿ ಗುನುಗುತ್ತಿತ್ತು. ಹಾಗೆಯೇ ನಮ್ಮ ಪಯಣ ದಟ್ಟವಾದ ಕಾಡಿನ ಮಧ್ಯದಲ್ಲಿ ಪ್ರಕೃತಿಯ ವಿಸ್ಮಯವನ್ನು ಆಲಿಸುತ್ತಾ ಹಾಗೂ ಕಣ್ಣು ತುಂಬಿಕೊಳ್ಳುತ್ತಾ ಸಾಗುತ್ತಿರುವಾಗ, “psychotria dalzellii” ಹಾಗೂ “Strobilanthes callosus” ನಂತಹ ಸಸ್ಯಗಳನ್ನು ಸೀಳಿಕೊಂಡು ಹೋಗಲು ನಾವುಗಳು ಹರಸಾಹಸವೇ ಪಡಬೇಕಾಯಿತು. ಈ ಎರಡು ಪ್ರಭೇದದ ಸಸ್ಯಗಳು ಇಲ್ಲಿ ಅತಿ ಹೇರಳವಾಗಿ ಮರಗಳ ಕೆಳಗೆ ಬೆಳೆದಿರುವುದು ಕಂಡುಬಂದಿತು. 

ಪಯಣದ ಮಧ್ಯದಲ್ಲಿ ವಿವಿಧ ಪ್ರಭೇದದ ಜೇಡರ ಬಲೆಗಳು ಇಬ್ಬನಿ ಹನಿಗಳನ್ನು ತಮ್ಮ ರೇಷ್ಮೆಯಲ್ಲಿ ಹಿಡಿದಿಟ್ಟುಕೊಂಡು ಅದರಲ್ಲಿದ್ದ “ಜೇಡಗಳು” ತಮ್ಮ ಅಲ್ಪೋಪ ಆಹಾರಕ್ಕಾಗಿ ಬಲೆಯಲ್ಲಿ ಕಾದು ಕುಳಿತ ದೃಶ್ಯ ಸಾಮಾನ್ಯವಾಗಿತ್ತು. ಮೇಲೆ ನೋಡಿದಾಗ ಆಕಾಶವನ್ನೇ ಚುಂಬಿಸುವಂತಹ ಮರಗಳ ಮುಕುಟ, ಸೂರ್ಯನ ರಶ್ಮಿಗಳನ್ನು ಭೂಮಿಗೆ ಬೀಳದಂತೆ ತಡೆ ಹಿಡಿದು, ತಮ್ಮ ಆಹಾರ ತಯಾರಿಸುವ ಕೆಲಸ ಪ್ರಾರಂಭಿಸಿರುವುದು ನಮ್ಮ ತರ್ಕಕ್ಕೆ ನಿಲುಕದ ದೃಶ್ಯವಾಗಿತ್ತು. ಈ ಮರಗಳಲ್ಲಿ “Weaver ant” ಗಳು ಎಲೆಗಳನ್ನು ಬಳಸಿಕೊಂಡು ರಚಿಸಿದ ಗೂಡುಗಳು ಹಾಗೂ “Crematogaster Ant” ಗಳು ತಮ್ಮ ಸಂತಾನಾಭಿವೃದ್ಧಿಯನ್ನು ಮುಂದುವರಿಸಲು ಮೊಟ್ಟೆ ಇಟ್ಟು ಮರಿ ಮಾಡಲು ರಚಿಸಿದ ಗೂಡುಗಳು ಈಗಿನ ಆಧುನಿಕ ತಂತ್ರಜ್ಞಾನವನ್ನೇ ಬುಡಮೇಲು ಮಾಡುವಷ್ಟು ಕುಶಲತೆಯಿಂದ ಕೂಡಿತ್ತು.

© ನಾಗೇಶ್ ಓ ಎಸ್

ಇಂತಹ ಅಪೂರ್ವ ಪಶ್ಚಿಮ ಘಟ್ಟಗಳ ಕಾಡಿನ ಮಧ್ಯದಲ್ಲಿ ನಮ್ಮ ಪಯಣ ಸಾಗಿರುವಾಗ ನಿತ್ಯ ಹರಿದ್ವರ್ಣ ಕಾಡಿನ ಅಪರೂಪದ ವೃಕ್ಷವಾದ “Myristica malabarica” ಮರಗಳು ಹೇರಳವಾಗಿ ಕಂಡುಬಂದವು. ಈ ಮರದ ಕಾಯಿಗಳನ್ನು “Hornbill” (ಮಂಗಟ್ಟೆ) ಹಕ್ಕಿಗಳು ತಿನ್ನುತ್ತವೆ ಹಾಗೆಯೇ ಇದರ ಕಾಯಿಯ ಮಧ್ಯದಲ್ಲಿರುವ ಕೆಂಪಾದ ತಿರುಳನ್ನು ಮಸಾಲೆ ಪದಾರ್ಥವಾಗಿ ಉಪಯೋಗಿಸುತ್ತಾರೆ. ಈ ಮರವು IUCN ಪಟ್ಟಿಯ ಪ್ರಕಾರ ಅಳಿವಿನಂಚಿನಲ್ಲಿರುವ ಮರವಾಗಿದೆ. ಇಲ್ಲಿ ಈ ಮರಗಳು ಅತಿ ಹೇರಳವಾಗಿವೆ ಎಂದಾದರೆ ಇಲ್ಲಿಯ ಅರಣ್ಯ ಎಷ್ಟು ಶ್ರೀಮಂತವಾಗಿದೆ ಎಂದು ನೀವೇ ತಿಳಿದುಕೊಳ್ಳಿ. ಹೀಗೆ ಹಲವಾರು ಮರಗಳನ್ನು ಗಮನಿಸುತ್ತಾ ನಾವು ಸಾಗುತ್ತಿರುವಾಗ ದಾರಿಯುವುದಕ್ಕೂ ಕಾಡು ಹಂದಿ ಹಾಗೂ ಕಡವೆಗಳು ಬಿದ್ದು ಹೊರಳಾಡಿದ್ದ ಜಾಗಗಳು ಹೂವಿನ ಹಾಸಿಗೆಯಿಂದ ಮಾಡಿದ ಪಥದಂತೆ ಭಾಸವಾಗುತ್ತಿತ್ತು. ದಾರಿ ಮಧ್ಯದಲ್ಲಿ ಸಿಕ್ಕ ಚಿರತೆಯ ಮಲವು ಅದು ಹಿಂದಿನ ದಿನ ಮಂಗನನ್ನು ಭೇಟಿಯಾಡಿ ತಿಂದಿದ್ದ ಕುರುಹುಗಳು ಅದರ ಮಲದಲ್ಲಿದ್ದ ರೋಮ ಹಾಗೂ ಮೂಳೆಗಳ ಸಾಕ್ಷಿಯ ಮೂಲಕ ಹೇಳುತ್ತಿದ್ದವು.

© ಬಸನಗೌಡ ಎನ್. ಬಗಲಿ

ಹಾಗೆಯೇ ಮುಂದೆ ಸಾಗಿದ ನಮಗೆ ಔಷಧಿ ಸಸ್ಯಗಳಲ್ಲಿಯೇ ಅಪರೂಪದ ಸಸ್ಯವಾದ “Mappia foetida”ಎಂಬ ಸಸ್ಯವು ತನ್ನ ಮುಕುಟದ ತುಂಬೆಲ್ಲ ಹೂವುಗಳ ರಾಶಿಯನ್ನು ತುಂಬಿಕೊಂಡು ನಿಂತಿರುವುದು ಕಂಡುಬಂದಿತು. ಇದು ಒಂದು ಪ್ರಮುಖ ಔಷಧ ಸಸ್ಯವಾಗಿದ್ದು, ಈ ಗಿಡದ ಕೆಲವೊಂದು ಭಾಗಗಳನ್ನು ಕ್ಯಾನ್ಸರ್ ರೋಗ ನಿವಾರಕವಾಗಿ ಬಳಸುತ್ತಾರೆ. ಹಾಗೆ ದಾರಿ ಉದ್ದಕ್ಕೂ ಪಶ್ಚಿಮಘಟ್ಟದ ಅಪರೂಪದ ಮರಗಳಾದ ಹೊನ್ನೆ (Pterocarpus marsupium), ಮತ್ತಿ (Terminalia tomentosa), ಬೀಟೆ (Dalbergia latifolia) ಗಳಂತಹ ಬೆಲೆಬಾಳುವ ಮರಗಳು, ಈ ಕಾಡಿನ ಶ್ರೀಮಂತಿಕೆಯನ್ನು ಸಾರಿ ಸಾರಿ ಹೇಳುತ್ತಿದ್ದವು. ಹೀಗೆ ಪ್ರಕೃತಿಯ ಮಧ್ಯದಲ್ಲಿ ಸಾಗಿದ ನಮ್ಮ ಪಯಣ ಹಲವಾರು ಕಲಿಕೆಗಳೊಂದಿಗೆ ಕೊನೆಗೆ ಸಣ್ಣ ಝರಿಯ ಪಕ್ಕದಲ್ಲಿದ್ದ ಮಣ್ಣಿನ ರಸ್ತೆಯಿಂದ ಮುಕ್ತಾಯಗೊಂಡಿತು.

 ಪಶ್ಚಿಮ ಘಟ್ಟವು ದೇಶದಲ್ಲಿಯೇ ಅತಿ ಹೆಚ್ಚು ಶ್ರೀಮಂತಿಕೆಯ ಜೀವವೈವಿಧ್ಯತೆ ಹೊಂದಿದ ಅಕ್ಷಯ ಪಾತ್ರೆಯಾಗಿದೆ. ಇಲ್ಲಿ ಕಾಣಸಿಗುವ ಅಪರೂಪದ ಜೀವಿಗಳಾದ ಹಾವುಗಳು, ಕಪ್ಪೆಗಳು, ಜೇಡಗಳು, ಜೀರುಂಡೆಗಳು, ಅಪರೂಪದ ಇರುವೆಗಳು, ಸ್ನೇಲ್ ಗಳು, ಸ್ಲಗ್ ಗಳು, ಸಿಹಿ ನೀರಿನ ಏಡಿಗಳು, ಬೆಲೆಬಾಳುವ ಮರಗಳು ಅಪರೂಪದ ಔಷಧ ಸಸ್ಯಗಳು ಇವುಗಳ ತವರಮನೆ. ಪಶ್ಚಿಮ ಘಟ್ಟಗಳ ಉದರದಿಂದ ಹರಿಯುವ ನದಿಗಳು ಸರ್ವಕಾಲಿಕ ನದಿಗಳಾಗಿವೆ. ಅದೆಷ್ಟೋ ಜೀವಿಗಳು ಸಂಶೋಧನೆಯಾಗದೆ ಅಳಿದು ಹೋಗಿವೆ, ಎಷ್ಟೋ ಜೀವಿಗಳ ಶೋಧನೆಯಾಗಬೇಕಾಗಿದೆ, ಆದ್ದರಿಂದ ಇವುಗಳನ್ನು ಕಾಪಾಡುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಆದ್ದರಿಂದ ಕಾಡು ಉಳಿಸೋಣ ಬೆಳೆಸೋಣ, ವನ್ಯಜೀವಿಗಳನ್ನು ಉಳಿಸೋಣ, ಇಂತಹ ಅಪರೂಪದ ಜೀವ ವೈವಿಧ್ಯತೆಯನ್ನು ನಮ್ಮ ಮುಂದಿನ ಪೀಳಿಗೆಗೆ ಜತನದಿಂದ ಕಾಪಾಡೋಣ.

ಲೇಖನ: ಬಸನಗೌಡ ಎನ್. ಬಗಲಿ
         ಉತ್ತರ ಕನ್ನಡ ಜಿಲ್ಲೆ

Print Friendly, PDF & Email
Spread the love
error: Content is protected.