ಮಗುವಿನೊಂದಿಗೆ ಲಿಂಗಾಂಬುದಿ ಕೆರೆಯಲ್ಲೊಂದು ಸುತ್ತು
© ಡಾ. ದೀಪಕ್ ಭ., ಮೈಸೂರ್
ಬಹಳ ಸಮಯದ ನಂತರ ಹಕ್ಕಿಗಳ ಚಿತ್ರ ತೆಗೆಯಲು ಒಂದು ಭಾನುವಾರ ಎಂಟರ ಸಮಯಕ್ಕೆ ಮನೆಯಿಂದ ಹೊರಟೆ, ನನ್ನ ನಾಲ್ಕು ವರ್ಷದ ಮಗಳು ಪರ್ಣಿಕಾ ನನ್ನ ಜೊತೆಯಾದಳು. ಇಬ್ಬರೂ ಲಿಂಗಾಂಬುಧಿ ಕೆರೆ ತಲುಪಿದೆವು. ಅವಳ ಕೈಯಲ್ಲಿ DSC H55 ಪಾಯಿಂಟ್ ಅಂಡ್ ಶೂಟ್ (Point and shoot) ಕ್ಯಾಮೆರಾ ಕೊಟ್ಟು, ನಾನು ನಿಕಾನ್ ಕ್ಯಾಮೆರಾಗೆ 300 ಎಂ ಎಂ ಮಸೂರ ಜೋಡಿಸಿ ಫೋಟೋಗ್ರಫಿಗೆ ಅಣಿಯಾದೆವು. ಪ್ರವೇಶ ದ್ವಾರದಿಂದ ಇಬ್ಬರೂ ಒಳಹೊಕ್ಕೆವು. ಒಂದೆರಡು ಮೈನಾಗಳು ಹಾರಿ ಹೋದವು, ಅಳಿಲುಗಳು ನಮ್ಮ ಕಣ್ಣೆದುರೇ ರಸ್ತೆ ದಾಟಿ ಓಡಿದವು. ನಾವು ನೀರಿನ ಬಳಿ ಹೋಗಿ ಕುಳಿತೆವು. ನಮ್ಮ ಮಸೂರದ ಪರಿಧಿಯನ್ನು ಮೀರಿ ಹಕ್ಕಿಗಳು ಆಚೆ ಕೂತಿದ್ದವು. ನಾನು ಫೋಟೋ ತೆಗೆಯಲು ಯತ್ನಿಸಿ ವಿಫಲನಾದೆ. ನನ್ನ ಮಗಳು ಅವಳ ಕೈಯಲ್ಲಿದ್ದ ಕ್ಯಾಮೆರಾದಲ್ಲಿ ಏನನ್ನೋ ತೆಗೆಯುವವಳಂತೆ ಕ್ಲಿಕ್ಕಿಸುತ್ತಿದ್ದಳು. ನಾನು ಅವಳ ಕಡೆ ನೋಡಿ ಪ್ರೋತ್ಸಾಹಿಸುವಂತೆ ಮುಗುಳ್ನಕ್ಕು ಅಷ್ಟೇನು ಗಮನ ಕೊಡದೆ ಸುಮ್ಮನಾದೆ. ಆದರೆ ಅದೇ ಫೋಟೋವನ್ನು ಕಂಪ್ಯೂಟರಿಗೆ ಹಾಕಿ ನೋಡಿದಾಗ ಅವಳು ತೆಗೆದ ಚಿತ್ರಗಳು ಹುಬ್ಬೇರುವಂತಿದ್ದವು!
ಇಲ್ಲೇನು ಇಲ್ಲ ಎಂದು ಹಿಂತಿರುಗುವಾಗ ಒಂದೆರಡು ಹರಟೆ ಮಲ್ಲ ಹಕ್ಕಿಗಳು ಕುಳಿತಂತೆ ಮಾಡಿ ಹಾರಿಹೋದವು. ಮರದ ಮೇಲೆ ತುಂಬಾ ಹತ್ತಿರಕ್ಕೆ ಕುಳಿತಿದ್ದ ಈ ಹರಟೆಮಲ್ಲನನ್ನು ಸೆರೆ ಹಿಡಿದೆ. ಅಳಿಲುಗಳು ಓಡುವುದನ್ನು ನೋಡಿ ಮಗಳು ಅಪ್ಪ ಎಲ್ಲ ಹೊರಟೋದ್ವು ಅಲ್ವಾ ಎಂದಳು. ಗಲಾಟೆ ಮಾಡಬೇಡ ಮತ್ತೆ ಬರುತ್ತವೆ ಇರು ಎಂದೆ. ಅದಕ್ಕೆ ಅವಳು ನನಗೆ ಬಗ್ಗಲು ಹೇಳಿ ಕಿವಿಯಲ್ಲಿ “ಇನ್ನೊಂದ್ಸಲ ಬರುವಾಗ ಅಳಿಲಿನ ಊಟ ತೆಗೆದುಕೊಂಡು ಬರೋಣ ಅದು ಊಟ ಮಾಡುವಾಗ ಅದರ ಫೋಟೋ ತೆಗೆದು ಬಿಡೋಣ” ಎಂದು ಫೋಟೋಗ್ರಫಿಗೆ ಉಪಾಯ ಹೇಳಿದಳು. ಎದುರುಗಡೆಯಿಂದ ಬಂದ ಹಿರಿಯರೊಬ್ಬರು ಕವರ್ ನಲ್ಲಿ ಒಂದಿಷ್ಟು ಅಕ್ಕಿಯನ್ನು ತಂದು ಅಲ್ಲೆಲ್ಲ ಹಾಕಿದರು. ಮಗಳಿಗೆ ಕ್ಯಾಮೆರಾ ಕೊಟ್ಟಿರುವುದನ್ನು ನೋಡಿ ಆಟಿಕೆಯೊ ಅಥವಾ ನಿಜವಾದದ್ದೋ ಎಂದು ವಿಚಾರಿಸಿ ಅವಳ ಹೆಸರನ್ನು ಕೇಳಿ ಹೋದರು. ಅವರು ಹೋಗುತ್ತಲೂ ಅಳಿಲು ಹರಟೆಮಲ್ಲ ಎರಡೂ ಅಲ್ಲಿಗೆ ಬಂದು ಅಕ್ಕಿಯನ್ನು ತಿನ್ನಲಾರಂಭಿಸಿದವು, ಅವುಗಳ ಛಾಯಾಚಿತ್ರವನ್ನು ಕ್ಲಿಕ್ಕಿಸಿದೆವು. ನಂತರ ಇಬ್ಬರೂ ಹಾಗೆ ಮುಂದೆ ಸಾಗುವಾಗ ಮರದ ಹಿಂದೆ ಯಾವುದೋ ಹಕ್ಕಿ ಕುಳಿತಂತಾಯಿತು. ಗುರಿ ಹಿಡಿದು ಒಂದು ಫೋಟೋ ತೆಗೆಯುವಷ್ಟರಲ್ಲೇ ಅದು ಅಲ್ಲಿಂದ ಹಾರಿಹೋಯಿತು. ತೆಗೆದ ಚಿತ್ರವನ್ನು ಮತ್ತೆ ಗಮನಿಸಿ ನೋಡಿದಾಗ ಏಷ್ಯನ್ ಬ್ರೌನ್ ಫ್ಲೈ ಕ್ಯಾಚರ್ ಅದು ಎಂದು ತಿಳಿಯಿತು. ಮುಂದೆ ಸಾಗಿ ಅಲ್ಲಿ ಇದ್ದ ಒಂದು ಬೆಂಚಿನ ಮೇಲೆ ಕುಳಿತೆವು. ಅಲ್ಲೇ ಇದ್ದ ಬೊಗನ್ ವಿಲ್ಲಾ ನನ್ನ ಮಗಳಿಗೆ ಪರಿಚಿತ ಹೂವು ಹಾಗಾಗಿ ಪೊದೆಯಂತಿದ್ದ ಅದರ ಚಿತ್ರ ತೆಗೆದಳು ಮಗಳು.
ಹಿಂದಿನ ಮರದ ಮೇಲೆ ಏನೋ ಓಡಾಡಿದಂತೆನಿಸಿತು, ಅಲ್ಲಿ ನೋಡುತ್ತಲು ಏನೋ ಕೆಂಪು ಮೂತಿ ಕಂಡಂತಾಯಿತು. ಸ್ವಲ್ಪ ಹೊತ್ತು ದಿಟ್ಟಿಸಲು ಅದು ಕಂಚು ಕುಟಿಗ ಎಂದು ತಿಳಿಯಿತು. ಅದರ ಕ್ರಿಯಾಶೀಲತೆಯನ್ನು ಹಾಗೇ ನೋಡುತ್ತಾ ಕುಳಿತುಬಿಟ್ಟೆ. ಮಗಳು ಅಪ್ಪ ನನ್ನ ಕ್ಯಾಮೆರಾದಲ್ಲಿ ಆ ಪಕ್ಷಿ ಬರ್ತಿಲ್ಲ ಏನ್ ಮಾಡ್ಲಿ ಎಂದು ಕೇಳಿದಳು. ಅಲ್ಲೇ ಇದ್ದ ಇರುವೆ ಗೂಡು ತೋರಿಸಿ ಅದರ ಫೋಟೋ ತೆಗಿ ಎಂದೆ, ಆಯ್ತಪ್ಪ ಪಕ್ಷಿತರ ಇರುವೆ ಗೂಡು ಹಾರಿಹೋಗೋದಿಲ್ಲ ಚೆನ್ನಾಗಿ ತೆಗಿಬಹುದು ಅಂತ ಅದರ ಮುಂದೆ ಕೂತಳು. ಕಂಚು ಕುಟಿಗ ಅಲ್ಲೇ ಬಿಟ್ಟಿದ್ದ ಒಂದು ಹಣ್ಣನ್ನು ಕೊಕ್ಕಿನಲ್ಲಿ ತೆಗೆದು ಕೊಂಡಿತು, ಅದನ್ನು ಕೊಂಬೆಗೆ ಬಡಿಯಿತು, ನಂತರ ನುಂಗಿತು. ನಂಗೆ ಒಂದು ಕ್ಷಣ ಅದೇಕೆ ಕೊಂಬೆಗೆ ಬಡಿಯಿತೋ ತಿಳಿಯಲಿಲ್ಲ. ನೊಣ ಹಿಡುಕಗಳು ನೊಣವನ್ನ ಹಿಡಿದ ನಂತರ ಆ ರೀತಿ ಬಡಿಯುವುದನ್ನು ನೋಡಿದ್ದೆ. ಕಂಚು ಕುಟಿಗ ಹಣ್ಣನ್ನು ಹಾಗೇಕೆ ಬಡಿಯಿತು ಎಂದು ಯೋಚಿಸುತ್ತಿರುವಾಗ ಮಗಳು ಅಪ್ಪ ಇರುವೆ ಗೂಡು ನೋಡಿ ಎಂದು ಅವಳು ತೆಗೆದಿದ್ದ ಇರುವೆ ಗೂಡು ತೋರಿಸಿದಳು. ವಾವ್ ತುಂಬಾ ಚೆನ್ನಾಗಿ ತೆಗೆದಿರುವೆ ಮಗಳೇ ಎಂದು ಅವಳ ಕಾರ್ಯವನ್ನು ಶ್ಲಾಘಿಸಿ ಅಲ್ಲೇ ಕೂತಿದ್ದ ಕಂಚುಕುಟಿಗವನ್ನು ಮತ್ತೆ ನೋಡಲಾರಂಭಿಸಿದೆ. ಕ್ಯಾಮೆರಾದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ನೋಡುತ್ತಿರುವಾಗ ಕೊಂಬೆಗೆ ಬಡಿದಾಗ ಒಳಗಿರುವ ಬೀಜ ಹೊರ ಬರುತ್ತಿರುವುದು ಕಂಡಿತು.
ಅದರ ಹಿಂದೆ ಇನ್ನೊಂದು ಬಿಳಿ ಹುಬ್ಬಿನ ಕುಟಿಗ ಕೂತಿತ್ತು. ವಾವ್ ಎಂದು ಅದನ್ನು ಸೆರೆ ಹಿಡಿದೆ. ಬೂದು ಮಂಗಟ್ಟೆ ಹಾರಿ ಬಂದು ಅದೇ ಮರದಲ್ಲಿ ಕುಳಿತುಕೊಂಡಿತು. ವೈಯಾರದಿಂದ ಒಂದು ಹಣ್ಣನ್ನು ಕಿತ್ತುಕೊಂಡು ಗುಳುಂ ಮಾಡಿತು. ಛಾಯಾಗ್ರಹಣಕ್ಕೆ ಹೋದಾಗ ಕ್ಯಾಮೆರಾ ಹಿಡಿದವರು ಗೆಳೆಯರಾಗಿ ಬಿಡುತ್ತಾರೆ. ಇನ್ನೊಬ್ಬರು ಅಲ್ಲಿಗೆ ಕ್ಯಾಮೆರಾ ಹಿಡಿದು ಏನಿದೆ ಅಲ್ಲಿ ಎನ್ನುತ್ತಾ ಬಂದರು. ಕುಟುರ (ಕಾಪಾರ್ ಸ್ಮಿತ್) ಎಂದೆ. ಅವರದನ್ನು ತೆಗೆಯುತ್ತಿರುವಾಗ ಅಲ್ಲೇ ಇದ್ದ ಸಿಮೆಂಟ್ ಬೆಂಚಿನ ಮೇಲೆ ಕೆಂಪುಕೊರಳಿನ ನೊಣಹಿಡುಕ (ಟಿಕಲ್ಸ್ ಬ್ಲೂ) ಬಂದು ಕುಳಿತಿತ್ತು. ಕೈಯಲ್ಲಿ ಕ್ಯಾಮೆರಾ ಇರೋವಾಗ ಮತ್ತೇನು ಕೆಲಸ ಎಂದು ಅದನ್ನೂ ಕ್ಲಿಕ್ಕಿಸಿದೆ.
ಗಂಟೆ ಹತ್ತಾಗಿತ್ತು ತಿಂಡಿಯ ಸಮಯವಾದ್ದರಿಂದ ಮಗಳು ಸಹ ಜೊತೆ ಇದ್ದುದರಿಂದ ಹಸಿದಿರಬಹುದು ಎಂದು ಅಲ್ಲಿಂದ ಇಬ್ಬರೂ ಮನೆಗೆ ಹಿಂತಿರುಗಿದೆವು.
ಲೇಖನ: ಡಾ. ದೀಪಕ್ ಭ.,
ಮೈಸೂರು ಜಿಲ್ಲೆ.
ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ