ಕರ್ನಾಟಕದ ದೈತ್ಯ ಪತಂಗಗಳು

ಕರ್ನಾಟಕದ ದೈತ್ಯ ಪತಂಗಗಳು

© ನಾಗರಾಜ್ ಬೆಳ್ಳೂರ್

© ಮಂಜುನಾಥ ಎಸ್. ನಾಯಕ

ಸ್ಯಾಟರ್ನಿಡೇ ಕುಟುಂಬಕ್ಕೆ ಸೇರಿದ ಮಲೇಷಿಯನ್ ಚಂದ್ರ ಪತಂಗ/ಇಂಡೋನೇಷಿಯನ್ ಚಂದ್ರ ಪತಂಗವು (ಆ್ಯಕ್ಟಿಯಾಸ್ ಮೆನಸ್) ಕಾಡುರೇಷ್ಮೆ ಪ್ರಭೇದದ ದೊಡ್ಡಪತಂಗವಾಗಿದ್ದು, ಮಲೇಷಿಯಾದಿಂದ ಸುಮಾತ್ರಾ ಮತ್ತು ಆಗ್ನೇಯ ಏಷಿಯಾದ ಉಷ್ಣವಲಯದ ಮಳೆಕಾಡು ಹಾಗೂ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಪಶ್ಚಿಮಘಟ್ಟ, ಡೆಹ್ರಾಡೂನ್, ಅಸ್ಸಾಂ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಾದ ಅರಣ್ಯಪ್ರದೇಶಗಳಲ್ಲಿ ಮಾತ್ರ ಹಂಚಿಕೆಯಾಗಿದ್ದು, ಈ ಕುಟುಂಬದಲ್ಲಿ ಚಂದ್ರಪತಂಗ (ಆ್ಯಕ್ಟಿಯಾಸ್ ಸೆಲೆನ) ಮತ್ತು ಅಟ್ಲಾಸ್ ಪತಂಗಗಳು (ಅಟ್ಯಾಕಸ್ ಅಟ್ಲಾಸ್) ಅತ್ಯಂತ ಸುಂದರ ಪತಂಗಗಳಾಗಿವೆ. ಅಟ್ಲಾಸ್ ಪತಂಗವು ಭಾರತದಲ್ಲಿ ಅತ್ಯಂತ ದೊಡ್ಡ ಪತಂಗವಾಗಿದ್ದು, (ವಿಶ್ವದಲ್ಲಿ ಎರಡನೇ ದೊಡ್ಡಪತಂಗ) ರೆಕ್ಕೆಗಳು 25 ರಿಂದ 26 ಸೆಂ.ಮೀ ಇರುತ್ತವೆ. ಹರ್ಕ್ಯುಲಸ್ ಪತಂಗವು ವಿಶ್ವದಲ್ಲೇ ಅತಿ ದೊಡ್ಡ  ಪತಂಗ (27 ಸೆ.ಮೀ). ಆವಾಸದ ನಾಶ, ಕಾಳ್ಗಿಚ್ಚಿನಿಂದಾಗಿ ಈ ಸುಂದರ ಪತಂಗ ಪ್ರಭೇದಗಳು ಭೀತಿಯನ್ನೆದುರಿಸುತ್ತಿವೆ. ಹೆಚ್ಚಿನ ಪತಂಗಗಳು ನಿಶಾಚರಿಗಳಾಗಿದ್ದು, ರಾತ್ರಿ ಹೂ ಬಿಡುವ ಸಸ್ಯಗಳ ಪರಾಗಸ್ಪರ್ಶಕ್ರಿಯೆಗೆ ಬಹು ಸಹಾಯಕವಾಗಿವೆ. ಇದಲ್ಲದೆ ಪತಂಗಗಳು ಹಲ್ಲಿ, ಓತಿಕ್ಯಾತ, ಪಕ್ಷಿ, ಕಪ್ಪೆ, ಬಾವಲಿಗಳಿಗೆ ಆಹಾರವಾಗಿದ್ದು, ಜೀವವೈವಿಧ್ಯೆತೆಯಲ್ಲಿನ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪತಂಗಗಳು ಅರಣ್ಯ ಪರಿಸರ ವ್ಯವಸ್ಥೆಯ ಆರೋಗ್ಯದ ಜೈವಿಕ ಸೂಚಕಗಳಾಗಿದ್ದು, ಮಲೇಷಿಯನ್ ಚಂದ್ರ ಪತಂಗ, ಚಂದ್ರ ಪತಂಗ, ಅಟ್ಲಾಸ್ ಪತಂಗಗಳು ವಿರಳವಾದರೂ ಆಗಾಗ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಗೋಚರಿಸುತ್ತಿರುವುದು ಪಶ್ಚಿಮ ಘಟ್ಟಗಳ ಸೌಂದರ್ಯಕ್ಕೆ ಸಾಕ್ಷಿಯಾಗಿವೆ.

 ವಿಶೇಷತೆ: ಚಂದ್ರ ಪತಂಗಗಳ ಬಾಲವು ಉದ್ದವಾಗಿದ್ದು, ಪರಭಕ್ಷಕಗಳಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತವೆ. ಇವುಗಳ ಬಾಲದ ಚಲನೆಯು ಬಾವಲಿಗಳ ದಾಳಿಯ ಚಲನೆಯ ದಿಕ್ಕನ್ನು ಬದಲಿಸುವುದರ ಮೂಲಕ ರಕ್ಷಣಾತಂತ್ರವನ್ನಾಗಿ ಅಳವಡಿಸಿಕೊಂಡಿವೆ.

© ಮಂಜುನಾಥ ಎಸ್. ನಾಯಕ

ಲೇಖನ : : ಮಂಜುನಾಥ ಎಸ್. ನಾಯಕ
                      ಗದಗ ಜಿಲ್ಲೆ

Spread the love
error: Content is protected.