ಡಾ. ಕಣಜ ಅನಸ್ತೀಷಿಯಾ ತಜ್ಞರು ಮತ್ತು ಇಂಜಿನಿಯರ್

ಡಾ. ಕಣಜ ಅನಸ್ತೀಷಿಯಾ ತಜ್ಞರು ಮತ್ತು ಇಂಜಿನಿಯರ್

© ಧನರಾಜ್ ಎಂ

© ಮಹದೇವ ಕೆ ಸಿ

ಮೊನ್ನೆ ಬೆಳ್ಳಂಬೆಳಗ್ಗೆ ನನ್ನ ಫೋನ್ ರಿಂಗಣಿಸುತ್ತಿತ್ತು. ಇದ್ಯಾರಪ್ಪಾ ಇಷ್ಟೊತ್ತಿಗೆ ಫೋನ್ ಮಾಡ್ತಿದಾರಲ್ಲಾ ಎಂದು, ಎದ್ದು ಕಣ್ಣುಜ್ಜುತ್ತಾ ನೋಡಿದರೆ ಅದು ನನ್ನ ಮಡಿದಿಯ ಕರೆಯಾಗಿತ್ತು. ಗಾಬರಿಯಿಂದ ಎದ್ದು ಕುಳಿತು ಕರೆ ಸ್ವೀಕರಿಸಿದೆ… ಆ ಕಡೆಯಿಂದ “ಪಪ್ಪಾ….. ಪಪ್ಪಾಆಆಆಆಆಆಆಆಆಆ……” ಎಂದಳು ನನ್ನ ಮಗಳು ಚಿನ್ಮಯಿ…. ಅದೇನೋ ವಿವರಿಸಲು ಆರಂಭಿಸಿದಳು.. ನನಗೋ ಗಾಬರಿ ಮತ್ತಷ್ಟು ಹೆಚ್ಚಾಯಿತು… ಅಷ್ಟರಲ್ಲಿ ಮೆಲುದನಿಯೊಂದು “ರೀ ಅವಳೇನೋ ಕಣಜ ಬಗ್ಗೆ ಹೇಳ್ಬೇಕಂತೆ…”  ಎಂಬ ನನ್ನ ಮಡದಿಯ ಮಾತು ಕಿವಿಗೆ ಬಿದ್ದಿತು. ಸಮಾಧಾನದಿಂದ “ಏನಾಯ್ತು ಮಗಳೇ…” ಎಂದೆ. ಕಳೆದ ವಾರ ರಜೆಯ ಮೇಲೆ ಮನೆಗೆ ಬಂದಿದ್ದಾಗ ರಜೆಯ ಬಹುತೇಕ ಸಮಯ ಮಗಳಿಗಾಗಿಯೇ ಮೀಸಲಿಟ್ಟು ಅವಳೊಟ್ಟಿಗೆ ಆಟ, ಪಾಠ, ಊಟ ಎಲ್ಲವೂ ನಡೆದಿತ್ತು. ಹಾಗೇ ಒಂದು ಮಧ್ಯಾಹ್ನ ಮನೆಯ ಒಳಗೊಂದು ಕಣಜ (ವಾಸ್ಪ್) ಓಡಾಡುತ್ತಿದ್ದದ್ದನ್ನು ನನ್ನ ಮೂರು ವರ್ಷದ ಮಗಳೇ ನೋಡಿ ನನಗೆ ತೋರಿಸಿದ್ದಳು. ಆ ಕಣಜ ಅಲ್ಲೆ ಗೋಡೆಯ ಮೇಲೆ ತನ್ನ ಗೂಡನ್ನು ಕಟ್ಟಲು ತಯಾರಿ ನಡೆಸಿತ್ತು. ಆದ್ದರಿಂದ ಅಂದು ಸುಮಾರು ಸಮಯ ಈ ಕಣಜವು ಗೂಡುಕಟ್ಟುವ ಕೆಲಸವನ್ನೆಲ್ಲ ಇಬ್ಬರೂ ಕೂತು ಗಮನಿಸಿದ್ದೆವು. ಎಡಬಿಡದೆ ಎಲ್ಲಿಂದಲೋ ಮುದ್ದೆ ಮಾಡಿದ ಮಣ್ಣಿನ ಉಂಡೆಯನ್ನ ಹೊತ್ತು ತಂದು ಗೂಡು ಕಟ್ಟುತ್ತಿತ್ತು.

© ಧನರಾಜ್ ಎಂ

ರಜೆ ಮುಗಿಸಿ ನಾನು ಮೈಸೂರಿಗೆ ಹಿಂದಿರುಗುವಾಗ ಕಣಜದ ಗೂಡನ್ನು ಗಮನಿಸುವಂತೆ ಮಗಳಿಗೆ ಹೇಳಿ ಬಂದಿದ್ದರಿಂದ ಅವಳು ದಿನವೂ ಈ ಗೂಡನ್ನು ಗಮನಿಸುತ್ತಿದ್ದಳು. ಆದರೆ ಮೊನ್ನೆ ಆ ಗೂಡಿನ ಮೇಲೆ ಇರುವೆಗಳು ದಾಳಿ ಮಾಡಿ ಇನ್ನೂ ಗೂಡಿನಿಂದ ಹೊರಬರದ ಕಣಜದ ಮರಿಗಳನ್ನೂ ಬಿಡದೆ ತಿಂದು ಮುಗಿಸಿದ್ದನ್ನು ನೋಡಿದ ಅವಳು..” ಪಪ್ಪಾ ಕಣಜ ಮರಿಗಳ್ನ ಇರ್ಬೆಗ್ಳು ತಿನ್ಕೋಬಿಟ್ಟವೇ… ಪಾಪ….” ಎಂದು  ಹೇಳಿ ತನ್ನ ದುಃಖವನ್ನು ತೋಡಿಕೊಂಡಳು.

© ಧನರಾಜ್ ಎಂ

             ಕಣಜ ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವುದೇ ಅವುಗಳ ಚುಚ್ಚಿನ ಉರಿಯುವ ನೋವು. ಆದರೆ ಈ ಕಣಜಗಳ ಜೀವನ ಕ್ರಮವೇ ಒಂದು ಸೋಜಿಗ. ಕಣಜಗಳಲ್ಲಿ ನಾವು ಹಲವು ಪ್ರಭೇದಗಳನ್ನು ನೋಡಬಹುದು. ಅವುಗಳ ಗಾತ್ರ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮ ತಮ್ಮ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ. ಗೂಡು ಕಟ್ಟುವುದರಲ್ಲಿ ಇವು ಯಾವ ಇಂಜಿನಿಯರ್ಗೂ ಕಮ್ಮಿ ಏನಿಲ್ಲ. ಅದರಲ್ಲೂ ಈ ಮಡಿಕೆ ಕಣಜಗಳು     (Potter wasp) ಕಲೆಸಿದ ಮಣ್ಣಿನ ಉಂಡೆಗಳನ್ನು ಎಡಬಿಡದೇ ತಂದು ಸುಂದರವಾದ ಮಡಿಕೆಯಾಕಾರದಲ್ಲಿ ಮಣ್ಣಿನ ಗೂಡನ್ನು ಕಟ್ಟುತ್ತವೆ. ಆದರೆ ನಮ್ಮನ್ನೂ ಸೇರಿ ಹಲವಾರು ಜೀವಿಗಳು ಗೂಡು ಕಟ್ಟಿಕೊಳ್ಳುವುದು ಸೂರಿಗಾಗಿ, ಆಶ್ರಯಕ್ಕಾಗಿ ಅಲ್ಲವೆ? ಆದರೆ ಈ ಕಣಜಗಳು ಗೂಡುಕಟ್ಟಲು ಬೇರೆಯೇ ಕಾರಣವಿದೆ. ಸಾಮಾನ್ಯವಾಗಿ ಎಲ್ಲ ಪೋಷಕ ಜೀವಿಗಳು ತಮ್ಮ ಮರಿಗಳಿಗೆ ಆಹಾರವನ್ನು ಒದಗಿಸುವುದು ಜಗದ ನಿಯಮ, ಅದೂ ತಮ್ಮ ಮರಿಗಳು ಹುಟ್ಟಿದ ಮೇಲೆ. ಆದರೆ ಈ ಕಣಜಗಳು ಹಾಗಲ್ಲ, ಮರಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತವೆ. ಇವುಗಳು ಒಂದು ಸುಂದರವಾದ ಗೂಡುಕಟ್ಟಿ, ಕಂಬಳಿಹುಳು ಅಥವಾ ಜೇಡವನ್ನು ತನ್ನ ದೇಹದಲ್ಲಿ ಉತ್ಪಾದನೆಯಾಗುವ ಮತ್ತೇರುವ ಔಷಧವನ್ನು ಅವುಗಳಿಗೆ ಚುಚ್ಚುತ್ತವೆ. ಇದರಿಂದ ಕಂಬಳಿಹುಳು ಅಥವಾ ಜೇಡ ಪ್ರಜ್ಞೆ ತಪ್ಪುತ್ತವೆ,

© ಧನರಾಜ್ ಎಂ
© ಧನರಾಜ್ ಎಂ

ಆದರೆ ಸಾಯುವುದಿಲ್ಲ. ಅಂತಹ ಪ್ರಜ್ಞೆ ತಪ್ಪಿಸಿದ ಹುಳುವನ್ನು ತಾನು ಕಟ್ಟಿದ ಗೂಡಿನಲ್ಲಿರಿಸಿ, ಅದರ ಮೇಲೆ ಒಂದು ಮೊಟ್ಟೆಯನ್ನಿಟ್ಟು ಗೂಡನ್ನು ಮುಚ್ಚುತ್ತದೆ (ಚಿತ್ರಗಳಲ್ಲಿ ಗಮನಿಸಿ ಗೂಡಿನ ಒಳಗೆ ಕಂಬಳಿ ಹುಳು ಬದುಕಿದೆ). ಹೀಗೆ ಒಂದಲ್ಲ ಹತ್ತು ಹಲವು ಮಡಿಕೆಗಳನ್ನ ಒಂದರ ಪಕ್ಕದಲ್ಲೊಂದು ಕಟ್ಟುತ್ತದೆ. ಪ್ರತೀ ಗೂಡು ಕಟ್ಟಿ ಅದರಲ್ಲಿ ಕಂಬಳಿಹುಳು ಅಥವಾ ಜೇಡವನ್ನು ತಂದಿಟ್ಟು ನಂತರ ಮೇಲೊಂದು ಮೊಟ್ಟೆಯನ್ನಿಟ್ಟು ಮುಂದಿನ ಗೂಡು ಕಟ್ಟುತ್ತದೆ. ಎಲ್ಲ ಗೂಡುಗಳನ್ನು ಮುಚ್ಚಿದ ಮೇಲೆ, ಗೂಡಿನ ಹೊರಭಾಗಕ್ಕೂ ಮತ್ತಷ್ಟು ಮಣ್ಣು ತಂದು, ಗೂಡುಗಳ ಮೇಲೆ ಮತ್ತೊಂದು ಪದರ ಮಣ್ಣನ್ನು ಮೆತ್ತುತ್ತದೆ. ಕಾಲ ಕಳೆದಂತೆ ಗೂಡಿನೊಳಗಿನ ಮೊಟ್ಟೆ ಒಡೆದು ಹೊರಬಂದ ಮರಿಗೆ ಬದುಕಿರುವ ಕಂಬಳಿ ಹುಳುವೇ ಮೊದಲ ಆಹಾರ. ಮಾನವರಾದ ನಾವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅನಸ್ತೀಷಿಯಾ ಬಳಸುವುದನ್ನು ಕಂಡುಹಿಡಿದಿದ್ದೇವೆ ಎಂದು ಬೀಗುತ್ತೇವೆ, ಆದರೆ ನಮಗಿಂತ ಮೊದಲೇ ವಿಕಸನಗೊಂಡಿರುವ ಈ ಚಿಕ್ಕ ಕೀಟಗಳು ನಮಗಿಂತ ಮೊದಲೇ ಈ ಅನಸ್ತೀಷಿಯಾವನ್ನು ಉಪಯೋಗಿಸುತ್ತಿವೆ.  ಈ ಕಣಜಗಳಲ್ಲಿ ಬೇರೆ ಬೇರೆ ಪ್ರಭೇದದ ಕಣಜಗಳು, ಬೇರೆ ಬೇರೆ ರೀತಿಯ ಆಹಾರದ ಮೇಲೆ ಅವಲಂಬಿಸಿವೆ. ಕೆಲವು ಕಣಜಗಳು ಜೇಡಗಳನ್ನು ಬೇಟೆಯಾಡಿದರೆ ಇನ್ನೂ ಕೆಲವು ಕಣಜಗಳು ಕಂಬಳಿಹುಳು, ಮುಂತಾದ ಕೀಟಗಳನ್ನು  ಬೇಟೆಯಾಡುತ್ತವೆ. ಇದಲ್ಲದೆ ಕಣಜಗಳು ಇತರೆ  ಕೀಟಗಳ ಸಂಖ್ಯೆಯ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಾನು ಮೊದಲೇ ಹೇಳಿರುವಂತೆ ಪ್ರಕೃತಿಯಲ್ಲಿ ಸಾವಿರಾರು ಪ್ರಭೇದದ ಕಣಜಗಳನ್ನು ಕಾಣಬಹುದು. ಅವುಗಳಲ್ಲಿ ಒಂದಾದ ‘ಫಿಗ್ ವಾಸ್ಪ್’ ನ ಜೀವನದಲ್ಲಿ ಹತ್ತಿ ಹಣ್ಣಿಗಿರುವ ವಿಶೇಷ ಸಂಬಂಧದ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಸುತ್ತೇನೆ..


ಲೇಖನ : ಮಹದೇವ ಕೆ ಸಿ
ಬೆಂಗಳೂರು
ಜಿಲ್ಲೆ.

Print Friendly, PDF & Email
Spread the love
error: Content is protected.