ಮುಂಜಾನೆ ಮಂಜಲ್ಲಿ
ಮುಂಜಾನೆ ಮಂಜಲ್ಲಿ
ಇಬ್ಬನಿಯ ರಂಗವಲ್ಲಿ
ತಾ ನಗುತ ಬಂದಿಹನಿಲ್ಲಿ
ನೇಸರನು ಹೊಸ ರಂಗು ಚೆಲ್ಲಿ||
ಹೊಲಗಳ ನಡುವಲ್ಲಿ
ರೈತನ ಪರಿಶ್ರಮ ಗೊಣಬೆಗಳಲ್ಲಿ
ಚುಮು ಚುಮು ಚಳಿಯಲ್ಲಿ
ಮೈಯೊಡ್ಡಿ ನಿಂತಿದೆ ಬಿಸಿಲ ಅರಸುತಲಿ||
ಮಳೆ ಬೆಳೆಗಳ ನಂಟು ನೋಡಿಲ್ಲಿ
ಭೂಮಿ ತಾಯಿಯ ಸೊಬಗು ಜೊತೆಯಲ್ಲಿ
ಸುಗ್ಗಿ ಕಾಲವು ಹಿಗ್ಗು ತರುತಲಿ
ನವ ನವೀನತೆ ತುಂಬಿದೆ ಮನ, ಮನೆ, ಪ್ರಕೃತಿಯಲ್ಲಿ||
ಸವಿ ಸಮಯ ಬಾಳಿನಲ್ಲಿ
ಕಳೆದ ಪ್ರತಿ ಘಳಿಗೆ ಪೃಥ್ವಿಯ ಮಡಿಲಲ್ಲಿ
ವಿಸ್ಮಯಗಳ ಆಗರವು ಒಡಲಲ್ಲಿ
ತಿಳಿದಷ್ಟು ಜ್ಞಾನ ಭಂಡಾರ ಭುವಿಯಲ್ಲಿ||
ಬೆಳಗಿನ ಮಬ್ಬುಗತ್ತಲಲ್ಲಿ
ಹಕ್ಕಿಗಳ ಕಲರವದಲ್ಲಿ
ತಂಪುಗಾಳಿಯ ಸ್ಪರ್ಶದಲ್ಲಿ
ಇಳೆಯು ಸೃಷ್ಟಿಸಿದೆ ಹೊಸ ಲೋಕವಿಲ್ಲಿ||
– ಪ್ರತಿಭಾ ಪ್ರಶಾಂತ್.
ಉತ್ತರ ಕನ್ನಡ ಜಿಲ್ಲೆ