ಜೈವಪ್ರಕಾಶಕ ಅಣಬೆಗಳು
© ಅರವಿಂದ ರಂಗನಾಥ್
ಸಾಮಾನ್ಯವಾಗಿ ಎಲ್ಲರಿಗೂ ಅಣಬೆಗಳ ಪರಿಚಯವಿದೆ. ಆದರೆ ಕೆಲವು ವಿಶೇಷ ರೀತಿಯ ಅಣಬೆಗಳ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಅಂತಹುದರಲ್ಲಿ ಈ ಜೈವಪ್ರಕಾಶಕ ಅಣಬೆಯೂ ಒಂದು. ಜೀವಿಗಳಿಂದ ಹೊರಸೂಸಲ್ಪಡುವ ಬೆಳಕನ್ನೇ ಜೈವಪ್ರಕಾಶನ ಅಥವಾ ಜೈವದೀಪ್ತಿ (Bioluminescemce) ಎನ್ನುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಮಿಂಚುಹುಳು. ಮಿಂಚುಹುಳುಗಳಂತೆಯೇ ಜೈವಪ್ರಕಾಶಕ ಅಣಬೆಗಳು ಸಹ ತಮ್ಮಲ್ಲಿ ನಡೆಯುವ ಕೆಲವು ಜೀವರಾಸಾಯನಿಕ ಕ್ರಿಯೆಗಳಿಂದ ಬೆಳಕನ್ನು ಹೊರಹೊಮ್ಮುವ ಗುಣವನ್ನು ಪಡೆದಿವೆ.
ವಿಶ್ವದಾದ್ಯಂತ ಸುಮಾರು 70 ಪ್ರಭೇದದ ಜೈವಪ್ರಕಾಶಕ ಅಣಬೆಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಕೆಲವು ಪ್ರಭೇದದ ಅಣಬೆಗಳು ಭಾರತದ ಪಶ್ಚಿಮ ಘಟ್ಟಗಳಲ್ಲಿಯೂ ಕಾಣಸಿಗುತ್ತವೆ. ಜುಲೈ ನಿಂದ ಸೆಪ್ಟಂಬರ್ ಸಮಯದಲ್ಲಿ ಇವುಗಳನ್ನು ಗಮನಿಸಬಹುದಾಗಿದೆ. ಹಸಿರು ಬಣ್ಣದ ಬೆಳಕನ್ನು ಸೂಸುವ ಈ ಅಣಬೆಗಳು ಕೊಳೆತ ಮರದ ಮೇಲೆ ಬೆಳೆಯುತ್ತವೆ ಮತ್ತು ಸೂಕ್ಷ್ಮವಾಗಿ ಗಮನಿಸಿದರೆ ಬರಿಗಣ್ಣಿಗೆ ಕಾಣಿಸುತ್ತವೆ. ಮೊದಲಿಗೆ ಈ ಬೆಳಕಿನ ಮೂಲ ರಹಸ್ಯವಾಗಿದ್ದರೂ ಹಲವಾರು ಅಧ್ಯಯನದ ನಂತರ ಬೆಳಕಿನ ಮೂಲವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ಜೀವಿಗಳಲ್ಲಿ ನಡೆಯುವ ಜೀವರಾಸಾಯನಿಕ ಕ್ರಿಯೆಗಳಿಂದ ರಾಸಾಯನಿಕ ಶಕ್ತಿಯು ಬೆಳಕಿನ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ಲ್ಯೂಸಿಫರಿನ್ ಎಂಬ ಸಂಯುಕ್ತ ವಸ್ತುವು ಲ್ಯೂಸಿಫರೆಸ್ ಕಿಣ್ವ ಹಾಗೂ ಆಮ್ಲಜನಕದೊಂದಿಗೆ ಸೇರಿ ಈ ಪರಿವರ್ತನೆಯಲ್ಲಿ ಪಾಲ್ಗೊಳ್ಳುತ್ತದೆ.
ಈ ಬೆಳಕಿಗೆ ಆಕರ್ಷಿತವಾಗಿ ಕೆಲವು ಕೀಟಗಳು ಅಣಬೆಯನ್ನು ಸ್ಪರ್ಶಿಸಿ ಬೀಜಾಣುಗಳ ಪ್ರಸರಣಕ್ಕೆ ಸಹಾಯ ಮಾಡುತ್ತವೆ.
ಈ ಸೋಜಿಗ ಜಗತ್ತಿನಲ್ಲಿ ಬುದ್ಧಿವಂತ ಎಂದು ಬೀಗುತ್ತಿರುವ ಮನುಷ್ಯನು ಬೆಳಕಿಗಾಗಿ ಬೇರೆಯವರನ್ನು ಅವಲಂಬಿಸಿರುವಾಗ ತನ್ನದೇ ಸ್ವಂತ ಬೆಳಕನ್ನು ತಯಾರಿಸುವ ಇಂತಹ ಜೀವಿಗಳು ನಿಜಕ್ಕೂ ಮನುಷ್ಯನಿಗಿಂತ ಬುದ್ಧಿವಂತ ಎಂದರೆ ತಪ್ಪೇನಿಲ್ಲ ಎನಿಸುತ್ತದೆ
ಲೇಖನ : ಕಾರ್ತಿಕಕುಮಾರ ಹೆಗಡೆ
ಉತ್ತರ ಕನ್ನಡ ಜಿಲ್ಲೆ