ಅನಿರೀಕ್ಷಿತವಾಗಿ ಸಿಕ್ಕ ಯುಲೋಪಿಯ ಹುಲ್ಲು ಆರ್ಕಿಡ್
© ವಿಪಿನ್ ಬಾಳಿಗಾ
ಇತ್ತೀಚೆಗೆ ನಾವು ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದ ಕಾಡಂಚಿನಲ್ಲಿರುವ ಜೀಡೀ ಬೆಟ್ಟಕ್ಕೆ ವನವಿಹಾರಕ್ಕೆ ಹೋಗಿದ್ದೆವು. ಅಲ್ಲಿ ಸುತ್ತಾಡುವಾಗ ಒಂದು ಬಹು ಅಪರೂಪದ ಸಸ್ಯ ನಮಗೆ ಕಾಣಸಿಕ್ಕಿತು.
ನಾವು ನಡೆದು ಸಾಗುತ್ತಿದ್ದ ದಾರಿಯ ಪಕ್ಕದ ಇತರ ಗಿಡಗಳ ನಡುವೆ ಸುಂದರ ಹೂಗಳನ್ನು ಬಿಟ್ಟಿದ್ದ, ಎರಡುವರೆ ಅಡಿ ಎತ್ತರದ ಸಣ್ಣ ಸಸ್ಯ ನಮ್ಮ ಗಮನ ಸೆಳೆಯಿತು. ಈ ಗಿಡದ ರೂಪ ಲಕ್ಷಣಗಳನ್ನು ಗಮನಿಸಿದಾಗ ಇದು ಒಂದು ನೆಲ ಆರ್ಕಿಡ್ ಎಂದು ಗುರುತಿಸಿದೆವು. ಆದರೆ ಸುಂದರ ಹೂಗಳಿಂದ ಕಂಗೊಳಿಸುತ್ತಿದ್ದ ಈ ರೀತಿಯ ಆರ್ಕಿಡ್ ಅನ್ನು ಬನ್ನೇರುಘಟ್ಟದ ಕಾಡಿನಲ್ಲಿ ಎಂದೂ ಕಂಡೇ ಇರಲಿಲ್ಲ ಇದೇ ಮೊದಲು.
ಮನೆಗೆ ಬಂದಾದ ಮೇಲೆ, ಈ ಹೊಸ ಆರ್ಕಿಡ್ ಹೂ ಯಾವುದಿರಬಹುದು ಎಂದು ತಿಳಿಯಲು ಆರ್ಕಿಡ್ ವ್ಹಾಟ್ಸ್ ಆಪ್ ಗುಂಪಿಗೆ ಇದನ್ನು ಗುರುತಿಸಿ ಎಂದು ಹಂಚಿಕೊಂಡೆವು. ತಕ್ಷಣವೇ ನಮ್ಮ ಆರ್ಕಿಡ್ ತಜ್ಞರಾದ ಜಡೇಗೌಡ ಮಾದೇಗೌಡ ಸರ್ ರವರು ಇದನ್ನು Eulophia Graminea ಎಂದು ಗುರುತಿಸಿದರು. ಮೊದಲು ಇವರು ಈ ಆರ್ಕಿಡ್ ಅನ್ನು ಬಿಳಿಗಿರಿರಂಗಸ್ವಾಮಿ ಬೆಟ್ಟದ ಕಾಡುಗಳಲ್ಲಿ ಮಾತ್ರ ನೋಡಿದ್ದರಂತೆ. ಬನ್ನೇರುಘಟ್ಟ ಅರಣ್ಯದಲ್ಲೂ ಈ ಆರ್ಕಿಡ್ ಕಾಣಸಿಕ್ಕಿರುವುದಕ್ಕೆ ಸಂತಸಪಟ್ಟರು.
Eulophia Graminea ಏಷ್ಯಾ ಖಂಡದಲ್ಲಿ ಭೂಮಿಯ ಮೇಲೆ ಬೆಳೆಯುವ ಆರ್ಕಿಡ್ ಸಸ್ಯ. ಯುಲೋಪಿಯಾ ಸಸ್ಯ ಕುಲಕ್ಕೆ ಸೇರಿದ ಈ ಸಸ್ಯದ ಹೆಸರು ಗ್ರೀಕ್ ಭಾಷೆಯಲ್ಲಿನ ಯೂಲೋಪಿಸ್ ಎಂಬ ಪದದಿಂದ ಬಂದಿದೆ. ‘ಯುಲೋಪಿಸ್’ ಇದರ ಅರ್ಥ ಎದೆಯಾಕಾರದ ತುಟಿಯಂತಹ ಹೂವಿನ ದಳವಿರುವ ಸಸ್ಯ ಎಂದು!.
Eulophia Graminea ಒಂದು ನೆಲದ ಮೇಲೆ ಬೆಳೆಯುವ ಆರ್ಕಿಡ್ ಸಸ್ಯ. ಇದರ ಎಲೆಗಳ ರಚನೆಯು ನೀಳ ಈಟಿಯ ಆಕಾರವಿದ್ದು, ಹುಲ್ಲಿನ ಎಲೆಗಳ ರೀತಿ ಇದೆ. ತಿಳಿ ಹಸಿರು ಹಳದಿ ಮಿಶ್ರಿತ ಹೂಗಳು ಬೂದು ಬಣ್ಣವನ್ನು ಹೊಂದಿವೆ. ಎದೆಯಾಕಾರದ ತುಟಿಯಂತಹ ದಳಗಳು ಬಿಳಿ ಮತ್ತು ನೇರಳೆ ಬಣ್ಣದಿಂದ ಕೂಡಿದ್ದು, ಮಧ್ಯದಲ್ಲಿ ಕೆಂಪಾಗಿವೆ. ದಳದ ಮೇಲೆ ಬಲೆಯಾಕಾರದ ಗುರುತುಗಳಿವೆ.
ಹೂವಿರುವ ಕೊಂಬೆ ನೀಳವಾಗಿದ್ದು 60-80 ಸೆಂ.ಮೀ. ಉದ್ದವಿರುತ್ತದೆ. ಇದರ ಮಧ್ಯೆ ಗೆಣ್ಣುಗಳಲ್ಲಿ ಅಲ್ಲಲ್ಲಿ 10-20 ಹೂಗಳನ್ನು ಬಿಟ್ಟಿರುತ್ತದೆ. ಪ್ರತಿ ಕೊಂಬೆಯಲ್ಲಿರುವ ಹೂಗಳು ಒಂದಾದ ಮೇಲೆ ಒಂದರಂತೆ ಸುಮಾರು ಒಂದು ತಿಂಗಳ ಕಾಲ ಅರಳುತ್ತಿರುತ್ತವೆ. ಪ್ರತಿ ಹೂ 10-12 ದಿನಗಳವರೆಗೂ ಅರಳಿರುತ್ತದೆ. ಸಂಪೂರ್ಣವಾಗಿ ಬೆಳೆದ ಗಿಡದ ಕೊಂಬೆಯ ಮೇಲೆ ಅಲ್ಲಲ್ಲಿ ಕಿರಿದಾದ ಎಲೆಗಳನ್ನು ಹೊಂದಿರುವ ಹುಸಿ ಬುಡ್ಡೆಗಳು ಇರುತ್ತವೆ. ದುಂಡಗಿನ ಈ ಹುಸಿ ಬುಡ್ಡೆಯ ಬುಡದಲ್ಲಿ ಸಧೃಡ ಬಿಳಿ ಬೇರುಗಳು ಹೊರಹೊಮ್ಮಿರುತ್ತವೆ. ಅಲ್ಲದೆ ಈ ಆರ್ಕಿಡ್ ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಲ್ಲೂ ಹೂ ಬಿಡುತ್ತದೆ.
ತೇವವುಳ್ಳ ಎಲೆ ಉದುರುವ ಕಾಡುಗಳು ಮತ್ತು ಹುಲ್ಲುಗಾವಲಿನ ನೆರಳಿರುವ ತಾಣಗಳೇ ಇದರ ನೈಸರ್ಗಿಕ ಆವಾಸ. ಈ ಆರ್ಕಿಡ್ ಶ್ರೀಲಂಕಾ, ಬರ್ಮಾ, ನೇಪಾಳ, ಥೈಲ್ಯಾಂಡ್, ಇಂಡೋನೇಷ್ಯಾದಲ್ಲಿ ಸಮುದ್ರ ಮಟ್ಟದಿಂದ 12೦೦ ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡು ಬಂದರೆ ಭಾರತದ ಪೂರ್ವ ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 9೦೦-12೦೦ ಮೀಟರ್ ಎತ್ತರದ ಪ್ರದೇಶಗಳಲ್ಲೂ ಕಾಣಸಿಗುತ್ತವೆ.
ಈ ಆರ್ಕಿಡ್ ಭಾರತದ ಕೇರಳ, ಕರ್ನಾಟಕ, ಪಂಜಾಬ್, ಅರುಣಾಚಲ ಪ್ರದೇಶ, ಅಸ್ಸಾಂ, ಸಿಕ್ಕಿಂ, ಹಾಗೂ ಅಂಡಮಾನ್-ನಿಕೋಬಾರ್ ದ್ವೀಪ ಪ್ರದೇಶದ ಕಾಡುಗಳಿಂದ ದಾಖಲಾಗಿದೆ.
ಕೇರಳದ ಮಲ್ಲಪುರಂ, ಪಲಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲೂ ಕಂಡು ಬಂದಿದೆ. ಕರ್ನಾಟಕದ ಬಿಳಿಗಿರಿರಂಗಸ್ವಾಮಿ ಬೆಟ್ಟದ ಕಾಡು ಮತ್ತು ಈಗ ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದ ಕಾಡುಗಳಲ್ಲಿ ಕಾಣಸಿಕ್ಕಿದೆ.
ಶ್ರೀಲಂಕಾದಲ್ಲಿ ಅಳಿವಿನಂಚಿನಲ್ಲಿರುವ ಈ ಆರ್ಕಿಡ್, ಸಿಂಗಾಪುರದ ಸಮುದ್ರದ ತಟಗಳಲ್ಲಿ, ಹುಲ್ಲುಗಾವಲಿನ ಬಯಲು ಪ್ರದೇಶಗಳಲ್ಲಿ ಅಷ್ಟೆ ಏಕೆ ರಸ್ತೆಬದಿಯಲ್ಲಿ ಮತ್ತು ಅಲ್ಲಿನ ಉದ್ಯಾನಗಳಲ್ಲಿ ಕಾಣಸಿಗುತ್ತದೆ.
ತೈವಾನಿನ ತಗ್ಗುಪ್ರದೇಶದ ಪೊದೆಗಳಲ್ಲಿ, ಸಮುದ್ರ ತಟದ ಹುಲ್ಲುಗಾವಲಿನಲ್ಲಿ ನೈಸರ್ಗಿಕವಾಗಿ ಬೆಳೆದಿರುವುದು ಕಂಡುಬಂದಿದೆ. ಅಚ್ಚರಿಯೆಂದರೆ, ಈ ಆರ್ಕಿಡ್ ಆಸ್ಟ್ರೇಲಿಯಾ ಮತ್ತು ಯುಎಸ್ಎ ದೇಶಗಳಲ್ಲಿನ ಮರದ ಪುಡಿಯ ಹಸಿಗೊಬ್ಬರದ ತಿಪ್ಪೆಗುಂಡಿಗಳಲ್ಲಿ ನಾಲ್ಕು ಕಡೆ ನೈಸರ್ಗಿಕವಾಗಿ ಬೆಳೆದಿರುವುದು ಕಂಡು ಬಂದಿದೆ. ಇದು ಆಸ್ಟ್ರೇಲಿಯಾ ಮತ್ತು ಯುಎಸ್ಎ ವರೆಗೂ ಹೇಗೆ ತಲುಪಿತು ಎಂಬುದೇ ಪ್ರಶ್ನೆ?. ಬಹುಶಃ ಏಷ್ಯಾದ ದೇಶಗಳಿಂದ ಸಾಗಿಸಲ್ಪಡುವ ಮರದ ಪುಡಿಯ ಹಸಿಗೊಬ್ಬರದ ಜೊತೆ ಇದರ ಬೀಜಗಳೂ ಕೂಡ ರಫ್ತಾಗಿರಬಹುದು!. ಮತ್ತೊಂದು ಅಚ್ಚರಿಯ ವಿಷಯವೆಂದರೆ ಕರ್ನಾಟಕದ ಕಾಡುಗಳಲ್ಲಿ ಈ ಆರ್ಕಿಡ್ ಕಾಣಸಿಗುವುದೇ ಅಪರೂಪ. ನಮಗೆ ಈಗ ಕಂಡಿದೆ.
ಕನ್ನಡಕ್ಕೆ ಅನುವಾದ: ಶಂಕರಪ್ಪ ಕೆ. ಪಿ.
ಮೂಲ ಲೇಖನ: ವಿಪಿನ್ ಬಾಳಿಗಾ
ಡಬ್ಲ್ಯೂ.ಸಿ.ಜಿ. ಬೆಂಗಳೂರು
ಪರಿಸರ ಹಾಗೂ ವನ್ಯಜೀವಿಗಳಲ್ಲಿ ಆಸಕ್ತಿಯುಳ್ಳ ಐ ಟಿ ವೃತ್ತಿಯವ ನಾನು. ಚಾರಣ , ಮಳೆಗಾಲ, ಕೀಟ , ಜೇಡ, ಹಾವು, ಉಭಯಚರಗಳು, ಒಳ್ಳೆಯ ಪುಸ್ತಕ ಓದುವುದು, ಪ್ರಯಾಣ, ವಿಧ-ವಿಧದ ಆಹಾರವೆಂದರೆ ಅಪಾರವಾದ ಪ್ರೀತಿ.
This was seen in Turahalli forest too.