ಉರಗ ಸಂರಕ್ಷಕನಾಗಿ ನನ್ನ ಅನುಭವಗಳು
ಭಾರತದಲ್ಲಿ 270 ಬಗೆಯ ಹಾವುಗಳಿವೆ. ಅದರಲ್ಲಿ 60 ಬಗೆಯವು ವಿಷಕಾರಿ ಹಾವುಗಳು. ಹಾವುಗಳು ಮತ್ತು ಅವುಗಳ ಆವಾಸಗಳ ರಕ್ಷಣೆ ನನ್ನ ಹವ್ಯಾಸ ಹಾಗು ಕನಸು ಎರಡೂ ಹೌದು. ಸಣ್ಣಂದಿನಿಂದಲೇ ನಾನು ಪ್ರಕೃತಿಯೆಡೆಗೆ ಆಕರ್ಷಿತನಾದೆ ಹಾಗು ನನ್ನ ತಂದೆಯವರ ಪ್ರಕೃತಿ ಆರಾಧನಾಮನೋಭಾವ ನನಗೆ ವರವಾಗಿ ಬಂದಿತು.
ಚಿಕ್ಕವರಾಗಿದ್ದಾಗ ನಾವು ಒರಿಸ್ಸಾ ಕಾಡುಗಳ ಶ್ರೇಣಿಯಲ್ಲಿರುವ ಸಿಮ್ಮಲ್ಲಿಪಾಲ್ ಗೆ ಹೋಗುತ್ತಿದ್ದೆವು. ಅಲ್ಲಿರುವ ಬೆಟ್ಟ ಗಗನಚುಂಬಿ ಮರಗಳು, ಹುಲ್ಲುಗಾವಲು, ಸ್ವಚ್ಛವಾದ ನದಿ, ತೊರೆ, ಝರಿಗಳನ್ನು ನಾನು ಪ್ರೀತಿಸುತ್ತಿದ್ದೆ ಆದರೆ ಹಾವುಗಳೆಂದರೆ ಹೆದರಿಕೆಯಾಗುತ್ತಿತ್ತು. ರಸ್ತೆಯಲ್ಲಿ ಹಾವಿದೆ ಎಂದರೆ ನಾನು ಮನೆಯೊಳಗಿನ ಕೋಣೆಯಲ್ಲಿ ಬಾಗಿಲು ಜಡಿದು ಕೂರುತ್ತಿದ್ದೆ.
ಒಮ್ಮೆ ಶಾಲಾತರಗತಿಗೆ ಒಂದು ಹಾವು ಹೊಕ್ಕಿದಾಗ ಸಹಪಾಠಿಗಳು, ಗುರುಗಳು ಎಲ್ಲರೂ ಸೇರಿ ಅದನ್ನು ಹೊಡೆದು ಕೊಂದರು, ಹಾವಿನ ಕಣ್ಣಿನಲ್ಲಿದ್ದ ಮುಗ್ಧನೋಟ, ಅದರ ಮುರಿದ ಬೆನ್ನು ತಲೆ ಅದೆಷ್ಟು ನಿಸ್ಸಹಾಯಕ ಎಂದು ತೋರಿಸುತ್ತಿತ್ತು ಆ ಘಟನೆ ಹಾವುಗಳ ಬಗೆಗಿನ ನನ್ನ ದೃಷ್ಟಿಕೋನವನ್ನು ಬದಲಿಸಿದವು. ಆ ನೆನಪು ಇನ್ನೂ ಕಾಡುತ್ತದೆ.
ಮಳೆಗಾಲದಲ್ಲಿ ನಾವು ಫ಼ುಟ್ ಬಾಲ್ ಆಡುವಾಗ ಪಟ್ಟೆ ಬೆನ್ನೇಣು ಹಾವುಗಳನ್ನು (Keelback Snakes) ನನ್ನ ಸ್ನೇಹಿತರು ಸಾಯಿಸುತ್ತಿದ್ದರು. ಅವುಗಳನ್ನು ರಕ್ಷಿಸಬೇಕೆಂದು ನಾನು ಪಟ್ಟೆ ಬೆನ್ನೇಣು ಹಾವುಗಳನ್ನು ಕೈಯಲ್ಲಿ ಹಿಡಿದು ಅವುಗಳು ನಿರುಪದೃವಿಗಳೆಂದು ಸ್ನೇಹಿತರಿಗೆ ತೋರಿಸಿದೆ. ಅದನ್ನು ಒಂದು ರಟ್ಟಿನ ಡಬ್ಬದಲ್ಲಿರಿಸಿ ಸಮೀಪದ ಪೊದೆಗಳಲ್ಲಿ ಬಿಟ್ಟೆ.
ಉರಗಗಳ ಬಗೆಗಿನ ನನ್ನ ಆಸಕ್ತಿ ಅಂತರ್ಜಾಲವನ್ನು ಹುಡುಕುವಂತೆ ಪ್ರೇರೇಪಿಸಿತು. ಅಂತರ್ಜಾಲದಲ್ಲಿ ಹಾವುಗಳನ್ನು ಹಿಡಿಯುವ ತಂತ್ರ ಹಾಗೂ ಮುನ್ನೆಚ್ಚರಿಕೆಗಳ ಬಗ್ಗೆ ಅರಿತುಕೊಂಡೆ. ಹಾವುಗಳನ್ನು ಕಂಡರೆ ಹೆದರುವ ನನ್ನ ಸಹಪಾಠಿಗಳ ಮುಂದೆ ನಾನು ಪ್ರಸಿದ್ಡನಾದೆ.
ನನಗೆ ಹದಿಮೂರುವರ್ಷವಯಸ್ಸಾಗಿದ್ದಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದೆ, ನನ್ನ ನೆರೆಯವರು ಒಂದು ಹಾವನ್ನು ಕಂಡು ಉದ್ರಿಕ್ತರಾಗಿ ನನ್ನ ಸಹಾಯಕೇಳಿದರು. ಅಲ್ಲಿಯವರೆಗೂ ವಿಷಕಾರಿಯಲ್ಲದ ಬೆನ್ನೇಣು ಹಾವುಗಳನ್ನು ಮಾತ್ರ ಹಿಡಿದಿದ್ದೆ. ನನ್ನ ನೆರೆಮನೆಗೆ ಬಂದಿದ್ದುದು ಒಂದು ದೊಡ್ಡ ನಾಗರಹಾವು. ಅದು ಭುಸುಗುಡುತ್ತಿರುವುದನ್ನು ನೋಡಿ ಒಂದು ಕ್ಷಣ ತಣ್ಣಗಾದಂತೆನಿಸಿತು. ಆ ಹಾವನ್ನು ಕಾಪಾಡಿ ಬೇರೆಡೆ ಬಿಡದಿದ್ದರೆ ಅಲ್ಲಿರುವ ಜನರು ಅದನ್ನು ಕೊಂದು ಬಿಡುವರು ಎಂದೆನಿಸಿತು ಅದು ನಿಜವೂ ಕೂಡ. ಒಂದು ದೊಣ್ಣೆಯನ್ನು ತೆಗೆದುಕೊಂಡು ಹಾವನ್ನು ಅಟಕಾಯಿಸುತ್ತ ಅದರಬಾಲವನ್ನು ಹಿಡಿದೆತ್ತಿದ್ದ ನಾನು ಭಯದಿಂದ ತತ್ತರಿಸಿದ್ದೆನಾದರೂ ನಂತರ ಹಾವನ್ನು ರಕ್ಷಿತಪ್ರದೇಶ ಸೇರಿಸುವ ಉದ್ದೇಶದಿಂದ ಗಾಳಿಯಾಡಲು ತೂತುಗಳಿದ್ದ ಒಂದು ಪ್ಲಾಸ್ಟಿಕ್ ಜಾಡಿಯೊಳಗೆ ಹಾವನ್ನು ಸೇರಿಸಿದೆ.
ನಾನು ಉರಗ ಸಂರಕ್ಷಣೆಯನ್ನಾರಂಭಿಸಿದ್ದೆ ಅಂದಿನಿಂದ ನಾನು ಹಿಂತಿರುಗಿ ನೋಡಿದ್ದೇ ಇಲ್ಲ.
ಸಾಮಾಜಿಕ ಜಾಲಾತಾಣಗಳಿಂದ ಆಕರ್ಷಿತನಾಗಿ ಹಾವು ಹಿಡಿಯುವ ವೀಡಿಯೊಗಳನ್ನು ಫ಼ೇಸ್ ಬುಕ್ ತಾಣದಲ್ಲಿ ಹಂಚಿಕೊಂಡೆ. ರಾತ್ರೋರಾತ್ರಿ ನಾನು ಎಲ್ಲ ಗೆಳೆಯರ ನಡುವೆ ನಾಯಕನಂತಾದೆ. ಒಮ್ಮೆ ನಾಗರಹಾವಿನೊಡನೆ ಅತ್ಯತ್ತಮ ಚಿತ್ರ ತೆಗೆಸಿಕೊಳ್ಳ ಹೋದಾಗ ಹಾವಿಗೆ ಸುಸ್ತಾಗುತ್ತಿರುವುದನ್ನು ಗಮನಿಸಿ ಅದನ್ನು ಡಬ್ಬದಲ್ಲಿ ಹಾಕಿದೆ, ನಂತರ ಡಬ್ಬದ ಮುಚ್ಚಳ ತೆಗೆದಾಗ ಹಾವು ಸತ್ತಿತ್ತು. ನನ್ನ ಮೂರ್ಖತೆಗೆ ಹಾವು ಬಲಿಯಾಗಿತ್ತು ಅಂದಿನಿಂದ ನಾನು ಹಾವುಗಳೊಡನೆ ಚೆಲ್ಲಾಟವಾಡುವುದನ್ನು ಬಿಟ್ಟೆ ಹಾಗು ಬೇರೆಯವರಿಗೂ ಚೆಲ್ಲಾಟವಾಡಬೇಡಿ, ಹಾವು ಮನೊ ಒತ್ತಡಕ್ಕೊಳಗಾಗುತ್ತದೆ ಎಂದು ತಿಳಿಹೇಳಿದೆ.
ಹಾವುಗಳನ್ನು ಸಂರಕ್ಷಿಸುವುದು ಕಷ್ಟಕರ ಕೆಲಸ, ನಾವೆಷ್ಟು ಜಾಗರೂಕರಾಗಿದ್ದರೂ ವಿಷಪೂರಿತ ಹಲ್ಲುಗಳು ಯಾವಾಗಬೇಕಾದರೂ ನಾಟಬಹುದು.
ಬಲೆಯಲ್ಲಿ ಸಿಲುಕಿದ ಕೊಳಕ ಮಂಡಲ ತಿಂಗಳ ಹಿಂದೆ ಒಂದು ಕೊಳಕಮಂಡಲ ಹಾವು ಬಲೆಯಲ್ಲಿ ಸಿಲುಕಿ ಕೊಂಡಿದೆ ಎಂದು ಪಕ್ಕದ ಹಳ್ಳಿಯಿಂದ ಕರೆಬಂದಿತು. ನಾನಲ್ಲಿ ತಲುಪಿದಾಗ ಜಿಟಿಜಿಟಿ ಮಳೆ ಬರುತ್ತಿತ್ತು. ಒಂದು ಕೊಳಕುಮಂಡಲ ಹಾಗೂ ಕೇರೆಹಾವು ಬಲೆಗೆ ಸಿಕ್ಕುಹಾಕಿಕೊಂಡಿದ್ದವು. ನಾನು ಕೊಳಕಮಂಡಲದ ಕತ್ತನ್ನು ಹಿಡಿದು ಬಲೆಯನ್ನು ಕತ್ತರಿಸಲಾರಂಭಿಸಿದೆ. ಸ್ವಲ್ಪಸಮಯದಲ್ಲಿ ಚಾಕು ಬಲೆಯಲ್ಲಿ ಸಿಲುಕಿಕೊಂಡಿತು ಕೊಳಕ ಮಂಡಲದ ಮೇಲಿನ ಕೈಹಿಡಿತ ಸ್ವಲ್ಪ ಸಡಿಲಾಯಿತು, ಕ್ಷಣ ಮಾತ್ರದಲ್ಲಿ ಕೊಳಕಮಂಡಲ ನನ್ನ ಹೆಬ್ಬೆಟ್ಟನ್ನು ಕಚ್ಚಿತು. ಮುಂದಾಗಬಹುದಾದ ಪರಿಣಾಮಗಳ ಅರಿವಿದ್ದರೂ ನಾನಲ್ಲಿಂದ ತೆರಳಿದರೆ ತೋಟದವರು ಎರಡು ಹಾವುಗಳನ್ನು ಕೊಂದುಬಿಡುತ್ತಾರೆಂದು ಹಾವುಗಳನ್ನು ಬಲೆಯಿಂದ ಬಿಡಿಸುವ ಕೆಲಸ ಮುಂದುವರೆಸಿದೆ ಹಾಗು ಎರಡೂ ಹಾವುಗಳನ್ನು ಬೇರೆ ಬೇರೆ ಡಬ್ಬಗಳಿಗೆ ಹಾಕಿ ನನ್ನ ದ್ವಿಚಕ್ರವಾಹನದಲ್ಲಿ ಮನೆ ತಲುಪಿದೆ. ಡಬ್ಬಗಳನ್ನು ಗ್ಯಾರೇಜ್ ನಲ್ಲಿರಿಸಿ ಸೋದರನಿಗೆ ಹಾವುಗಳನ್ನು ಸುರಕ್ಷಿತ ಸ್ಥಳದಲ್ಲಿ ಬಿಡಲು ಹೇಳಿ ಆಸ್ಪತ್ರೆಗೆ ಧಾವಿಸಿದೆ.
ಆಸ್ಪತ್ರೆಯಲ್ಲಿ ಒಂದು ರಾಶಿ ರಕ್ತಪರೀಕ್ಷೆಗಳನ್ನು ಮಾಡಿದರು, 48 ಘಂಟೆಗಳ ಕಾಲ ನಿಗಾಘಟಕದಲ್ಲಿರಿಸಿ ನಂತರ ಮನೆಗೆ ಹೋಗಲು ಬಿಟ್ಟರು. ನನಗೆ ಕೊಳಕಮಂಡಲ ಕಚ್ಚಿದ್ದರೂ ಎಲ್ಲ ರಕ್ತಪರೀಕ್ಷೆಗಳು ಆರೋಗ್ಯವಂತ ಎಂದು ಸೂಚಿಸುವುದು ನೋಡಿ ಎಲ್ಲರೂ ಚಕಿತರಾದರು. ನಂತರ ಯೋಚಿಸಿದಾಗ ಕೊಳಕಮಂಡಲದ ಜೊತೆಗೆ ಕೇರೆಹಾವು ಕೂಡ ಬಲೆಯಲ್ಲಿ ಸಿಲುಕಿತ್ತು, ಕೊಳಕಮಂಡಲ ಕೇರೆಹಾವನ್ನು ಹಲವಾರು ಬಾರಿ ಕಚ್ಚಿದೆ ಹಾಗಾಗಿ ನನ್ನ ಬೆರಳನ್ನು ಕಚ್ಚಿದ ಕ್ಷಣಕ್ಕೆ ಹಾವಿನಲ್ಲಿ ವಿಷವಿರಲಿಲ್ಲ. ಹಾವನ್ನು ಬಿಡುಗಡೆ ಮಾಡಲು ಹೋಗಿದ್ದ ನನ್ನ ಸೋದರ ಕೇರೆಹಾವು ಕೊಳಕ ಮಂಡಲದ ಕಡಿತಕ್ಕೆ ಸತ್ತು ಹೋಗಿತ್ತು ಎಂದು ತಿಳಿಸಿದ. ಕೊಳಕು ಮಂಡಲವನ್ನು ಹಿಡಿದ ಜಾಗದ ಸಮೀಪದಲ್ಲೇ ಬಿಟ್ಟುಬಂದೆ ಎಂದು ತಿಳಿಸಿದ.
ಈ ಘಟನೆ ನನ್ನನ್ನು ಹಾವುಗಳ ಸಂರಕ್ಷಣಾಕಾರ್ಯದಲ್ಲಿ ಹೆಚ್ಚು ತೊಡಗುವಂತೆ ಮಾಡಿತು ಹಾಗು ನಾನು ಹೆಚ್ಚು ಜಾಗರೂಕವಾಗಿರಲು ಕಲಿತೆ. ಹೊರಗೆ ಕೆಲಸ ಮಾಡುವಾಗ ಇಬ್ಬರು ಜೊತೆಗೆ ಕೆಲಸ ಮಾಡಿದರೆ ತಪ್ಪುಗಳು ಕಮ್ಮಿಯಾಗುತ್ತವೆ ಎಂದು ನನ್ನ ತಂದೆಯವರು ಹೇಳುವುದು ಸತ್ಯ ಎಂದರಿವಾಯಿತು. ಈ ಹಾವು ಕಡಿತದ ಸುದ್ದಿಯಿಂದ ಹಲವಾರು ನುರಿತ ತಜ್ಞರು ನನಗೆ ಕರೆಮಾಡಿ ನನ್ನ ಆರೋಗ್ಯವನ್ನು ವಿಚಾರಿಸಿದರು, ವಿಷಪೂರಿತ ಹಾವನ್ನು ಹಿಡಿಯುವ ಬಗೆ, ಮುನ್ನೆಚ್ಚರಿಕೆ, ಪ್ರಥಮ ಚಿಕಿತ್ಸೆ, ಹೀಗೆ ನಾನು ಇನ್ನೂ ತುಂಬ ಕಲಿಯಬೇಕಿದೆ ಎಂದು ನನಗರಿವಾಯಿತು. ನನ್ನ ಈ ಹಾವಿನ ಕಡಿತದ ಅನುಭವ ಜವಾಬ್ದಾರಿ ಹಾಗೂ ಸಮಯ ಪ್ರಜ್ಞೆತೆಯನ್ನು ಹೆಚ್ಚಿಸಿದೆ.
ಬರಹಗಾರರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ
ಹೆಸರು ಅಭಿಷೇಕ್ ಆಚಾರ್ಯ ಹುಟ್ಟಿ ಬೆಳೆದಿರುವುದು ಬರಿಪಾಡ ಒಡಿಶ, ಭಾರತ 16 ವರ್ಷ ವಯಸ್ಸು, ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಅಭಿಷೇಕ್ ತನ್ನ ತಂದೆಯ ಪ್ರಕೃತಿ ಪ್ರೀತಿ, ಬದ್ಧತೆ, ಕಾಳಜಿಗಳನ್ನು ನೋಡುತ್ತಾ ಬೆಳೆದ. ಚಿಕ್ಕವಯಸ್ಸಿನಲ್ಲೇ 2750 .ಕಿ.ಮಿ ದೊಡ್ಡದಾದ ಸಿಮಲಿಪಾಲ್ ಅರಣ್ಯವನ್ನು ನೋಡುತ್ತ ಬೆಳೆದ. ಅದು ಅಭಿಷೇಕ್ ನಲ್ಲಿ ಪ್ರಕೃತಿಯ ಪಾಠವನ್ನು ಕಲಿಸಿತು.
ಮೂಲ ಲೇಖನ: : ಅಭಿಷೇಕ್ ಆಚಾರ್ಯ
ಕನ್ನಡಕ್ಕೆ ಅನುವಾದ: ಡಾ. ದೀಪಕ್ ಭದ್ರಶೆಟ್ಟಿ
ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ