ಇದಕ್ಕೆ ಪ್ಲಾಸ್ಟಿಕ್ಕೇ ಪರಿಹಾರ?!

ಇದಕ್ಕೆ ಪ್ಲಾಸ್ಟಿಕ್ಕೇ ಪರಿಹಾರ?!

ಬೆಳಿಗ್ಗೆ 5 ಘಂಟೆಗೆ ಮೊದಲ ಬಸ್ಸು. ಬಟ್ಟೆಯೆಲ್ಲ ಪ್ಯಾಕ್ ಮಾಡಿದೆ, ಎಲ್ಲಾ ರೆಡಿ ಇದೆ. ಈ ಒಂದು ರಾತ್ರಿ ಕಳೆಯಬೇಕಷ್ಟೇ. ಕಳೆದ ತಕ್ಷಣ ಊರಿಗೆ ಹೊರಡಬೇಕು. ಆದರೆ ಹಾಳಾದ್ದು ಸಮಯವೇ ಮುಂದೆ ಹೋಗುತ್ತಿಲ್ಲ. ಕಣ್ಣು ಮುಚ್ಚಿದರೆ ನಿದ್ದೆ ಬಾರದು. ಎದ್ದು ಸಮಯ ನೋಡಲು, ನಿಮಿಷದ ಮುಳ್ಳು 2 ನಿಮಿಷಕ್ಕಿಂತ ಹೆಚ್ಚು ಚಲಿಸಿರದು. ಬೆಳಿಗ್ಗೆ ಎಂದಾಗುವುದೋ? ಯಾವಾಗ ಬಸ್ಸು ಹತ್ತಿ ನಮ್ಮ ಅಜ್ಜಿ-ಮಾವಂದಿರ ಮನೆಗೆ ಬೇಸಿಗೆ ರಜೆ ಕಳೆಯಲು ಹೊರಡುವೆನೋ? ಎಂಬ ಎರಡೇ ಪ್ರಶ್ನೆಗಳು ತಲೆಯಲ್ಲಿ ದಿಕ್ಕಾಪಾಲಾಗಿ ಚಲಿಸಿ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿದ್ದವು. ಇವುಗಳ ನಡುವಲ್ಲೇ ನನಗರಿಯದಂತೆಯೇ ನಿದ್ರಾ ದೇವಿ ಬಂದು ಲಾಲಿ ಹಾಡಿ ಮಲಗಿಸಿಬಿಡುತ್ತಿದ್ದಳು. ಬೆಳಿಗ್ಗೆ ಆಯಿತು, ಊರಿಗೆ ಹೊರಟಾಯಿತು.

ಮಾವಂದಿರು ಪ್ರೀತಿಯಿಂದ ಕೊಡಿಸುತ್ತಿದ್ದ ಎಲ್ಲಾ ತಿಂಡಿಗಳನ್ನು ಕೊಟ್ಟಿರುವ ಹಣಕ್ಕೆ ಧಕ್ಕೆಯಾಗದಂತೆ ತಿನ್ನುತ್ತಿದ್ದೆ.ಅವು  ಕುರು-ತಿಂಡಿಗಳೇ ಆದರು ಬಿಡದೆ (Junk Food) ಚಪ್ಪರಿಸಿ ತಿನ್ನುತ್ತಿದ್ದ ನನಗೆ ಕೆಲವೇ ಘಂಟೆಗಳಲ್ಲಿ ಉದರ ಭಾದೆ ಅಗಮಿಸುತ್ತಿತ್ತು. ಕಾರಣ, ನಿಮಗೆ ತಿಳಿಯದುದೇ..? ಅದೇ ಫುಡ್ ಪಾಯಿಸನ್. ಹಳ್ಳಿಯಲ್ಲೇ ಇರುವ ನನಗೆ ವರ್ಷಕ್ಕೊಮ್ಮೆ ಸಿಗುವ ಆ ರುಚಿಯ ಅಸ್ವಾದವನ್ನು ಅನುಭವಿಸದೆ ಇರಲಾಗುತ್ತಿರಲಿಲ್ಲ. ‘ಹೊಟ್ಟೆ ಕೆಟ್ಟರೆ ಕೆಟ್ಟಿತು, ಅದು ಹೇಗೋ ಸರಿಯಾಗುತ್ತದೆ. ಆದರೆ ಈಗಾಗಲೇ ಕೆಟ್ಟಿರುವ ನಾಲಿಗೆಯ ಬಗ್ಗೆ ವರ್ಷಕ್ಕೊಮ್ಮೆ ಗಮನ ಹರಿಸಬೇಕಾದುದು ನನ್ನ ಕರ್ತವ್ಯ’ ಎಂಬ ಭಂಡ ಸಿದ್ಧಾಂತ ನನ್ನದು!

ಆದರೆ ಆಗ ನಾನು ಈ ಫುಡ್ ಪಾಯಿಸನ್ ಎಂದರೇನು? ಏಕೆ ಬರುತ್ತದೆ? ಎಂಬುದರ ಬಗ್ಗೆ ಯಾವುದೇ ಗಮನ ಹರಿಸಿರಲಿಲ್ಲ. ಇವಕ್ಕೆ ಈಗ ಕಾರಣಗಳೆಂದರೆ, ಸರಿಯಾಗಿ ಆಹಾರವನ್ನು ಬೇಯಿಸದೆ ಇರುವುದು. ರುಚಿಗಾಗಿ ಬಳಸುವ ಯಾವುದೋ ರಾಸಾಯನಿಕದಿಂದ ಇರಬಹುದು. ಇವೆಲ್ಲ ಸಾಮಾನ್ಯವಾಗಿ ಹೊರಗೆ ತಿನ್ನುವ ಆಹಾರಗಳಿಂದ ಬರಬಹುದು. ಹಾಗಾದರೆ ನಾವು ಫುಡ್ ಪಾಯಿಸನ್ ನನ್ನು,  ಹೊರಗೆ ಹೆಚ್ಚಾಗಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡುವ ಮೂಲಕ ತಡೆಯಬಹುದು. ಆದರೆ ಕೆಲವೊಮ್ಮೆ ಮನೆಯಲ್ಲೇ ಮಾಡಿದ ಆಹಾರಗಳಿಂದಲೂ ಸಹ ಫುಡ್ ಪಾಯಿಸನ್ ಆಗಿರುವ ಉದಾಹರಣೆಗಳುಂಟು. ಹಾಗಾದರೆ ಇದಕ್ಕೆ ಕಾರಣವೇನು? ಇದನ್ನು ತಡೆಯುವುದು ಹೇಗೆ? ಎಂಬುವು ಪ್ರಮುಖ ಪ್ರಶ್ನೆಗಳು. ಮನೆಯಲ್ಲೇ ಆಹಾರ ತಯಾರಿಸಿದರೂ ತರಕಾರಿ, ಮಾಂಸ ಇತ್ಯಾದಿಗಳನ್ನು ಹೊರಗಿಂದಲೇ ತರಬೇಕು ಅಲ್ಲವೇ? ಸಂತೆಯಲ್ಲಿ ನನ್ನ ತಂದೆ ತರಕಾರಿ ತರುವಾಗ ನಾನು ನೋಡಿದ್ದೇನೆ ಹೇಗೆ ಪರೀಕ್ಷಿಸಿ, ಚೌಕಾಸಿ ಮಾಡಿ ತರುತ್ತಿದ್ದರೆಂದು. ಆದರೆ ಈಗಿನ ಬ್ಯುಸಿ ಪ್ರಪಂಚದಲ್ಲಿ ಅದಕ್ಕೆಲ್ಲ ಸಮಯವಿಲ್ಲ. ಈಗಂತೂ ಸೂಪರ್ ಮಾರ್ಕೆಟ್ಗಳಲ್ಲಿ ಎಲ್ಲವೂ ಪ್ಯಾಕೆಟುಗಳಲ್ಲಿ ವಿವಿಧ ಬ್ರಾಂಡ್ ಗಳಲ್ಲಿ ದೊರೆಯುತ್ತಿವೆ. ಹೀಗಿರುವಾಗ ಅದನ್ನು ಪರೀಕ್ಷಿಸಿ ನೋಡಿ ತರುವ ಗೋಜಿಗೆ ಯಾರು ಹೋಗುವುದೇ ಇಲ್ಲ. ಈ ತರಹದ ಅಶುದ್ಧ ಆಹಾರ ಸೇವನೆಯಿಂದ ಪ್ರತಿ ವರ್ಷ ಪ್ರಪಂಚದಲ್ಲಿ 4,20,000 ಜನರು ಸಾವನ್ನಪ್ಪುತ್ತಿದ್ದಾರೆ ಎನ್ನುತ್ತಿದೆ ಡಬ್ಲ್ಯೂ. ಹೆಚ್. ಓ (World Health Organization). ಹಾಗಾದರೆ ಈ ಬ್ಯುಸಿ ಪ್ರಪಂಚಕ್ಕೆ ಈ ಆಹಾರ ಪರೀಕ್ಷಿಸುವ ಕೆಲಸ ಮಾಡುವವರು ಯಾರು?

ನಾನು..! ಎನ್ನುತ್ತಿದೆ “ಪ್ಲಾಸ್ಟಿಕ್ ” ಎನ್ನುತ್ತಾರೆ McMaster University in Hamilton ನ ರಸಾಯನ ಶಾಸ್ತ್ರಜ್ಞ, ಕಾರ್ಲೋಸ್ ಫಿಲಿಪ್ (Carlos Filipe). ಅಹುದು, ಕಾರ್ಲೋಸ್ ಮತ್ತು ಅವರ ಸಹೋದ್ಯೋಗಿಗಳ ಹೊಸ ಸಂಶೋಧನೆ ಹಾಗೆಯೆ ಇದೆ. ನಮಗೆ ಹೆಚ್ಚಾಗಿ ಅನಾರೋಗ್ಯ ತರುವ ಪ್ರಮುಖ ರೋಗಾಣು ಎಂದರೆ ಅದು E. Coli ಬ್ಯಾಕ್ಟೀರಿಯಾ. ಕೆಲವು ಬಗೆಯ ಈ ಬ್ಯಾಕ್ಟೀರಿಯಾ ನಮಗೆ ಜೀರ್ಣ ಕ್ರಿಯೆಯಲ್ಲಿ ಒಳಿತು ಮಾಡುತ್ತಿದ್ದರೂ, ಇನ್ನು ಕೆಲವು ನಮಗೆ ರೋಗಗಳನ್ನು ತಂದೊಡ್ಡುತ್ತಿವೆ. ಹಾಗಾಗಿ ಕಾಲೋಸ್ ಮತ್ತು ತಂಡ ತಯಾರಿಸಿದ ಒಂದು ಬಗೆಯ ಪೊರೆಯಿಂದ ಈ E. Coli ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಅದು ಹೇಗೆಂದರೆ.. ಆಹಾರ ಪದಾರ್ಥಗಳನ್ನು ಈ ಹೊಸದಾಗಿ ತಯಾರಿಸಿದ  ಪ್ಲಾಸ್ಟಿಕ್ ನಂತಹ ಪೊರೆಯಲ್ಲಿ ಸುತ್ತಿ ಇಟ್ಟರೆ ಸಾಕು. ಬೇರೇನೂ ಇಲ್ಲ. ಅಕಸ್ಮಾತ್ ಆ ಆಹಾರ ಪದಾರ್ಥದಲ್ಲಿ ರೋಗಾಣು ಇದ್ದರೆ,  ಆ ಪ್ಲಾಸ್ಟಿಕ್ ಪೊರೆಯ ಬಣ್ಣ ಬದಲಾಗುತ್ತದೆ. ಹೌದು! ಆ ಪೊರೆಯಲ್ಲಿ ಅಳವಡಿಸಿರುವ E. Coliಯನ್ನು ಗ್ರಹಿಸುವ ಸಂವೇದಕಗಳು ಪ್ಲಾಸ್ಟಿಕ್ ನ ಬಣ್ಣವನ್ನು ಬದಲಾಯಿಸುತ್ತವಂತೆ. ಇದನ್ನು ಕೆಲವು ಚೆನ್ನಾಗಿರುವ ಹಾಗು ಹಾಳಾದ ಆಹಾರದ ಮೇಲೆ ಪರೀಕ್ಷಿಸಲಾಗಿದ್ದು ಉತ್ತಮ ಫಲಿತಾಂಶವು ಬಂದಿದೆ.

ಆದರೆ ಈ ಬದಲಾದ ಬಣ್ಣವನ್ನು ನಾವು ಬರಿಗಣ್ಣಿನಿಂದ ನೆರವಾಗಿ ನೋಡಲು ಸಾಧ್ಯವಿಲ್ಲ. ಬದಲಾದ ಬಣ್ಣವನ್ನು ಗಮನಿಸಲು ಆ ಪ್ಲಾಸ್ಟಿಕ್ ನನ್ನು ಅತಿ ನೇರಳೆ (Ultraviolet) ಕಿರಣಗಳಡಿ ಇರಿಸಿ ನೋಡಬೇಕು. ಇದೊಳ್ಳೆ ಕಥೆ. ಅತಿ ನೇರಳೆ ಕಿರಣಗಳನ್ನು ಎಲ್ಲಿ ಹುಡುಕಿ ಹೋಗುವುದು? ಅಲ್ಲವೇ… ಅದಕ್ಕೆಂದೇ ಕೆಲವು ಸಾಧಕಗಳಿವೆ. ಈಗಿನ ಯುಗದ ಎಲ್ಲರ ಬ್ರಹ್ಮಾಸ್ತ್ರವಾದ  ನಮ್ಮ ಸ್ಮಾರ್ಟ್ ಫೋನ್ ಗೆ ಈ ಭಗೆಯ ಸಾಧಕಗಳನ್ನು ಸಿಕ್ಕಿಸಿ ಅದರಿಂದ ಪರೀಕ್ಷಿಸಬಹುದು ಎನ್ನುತ್ತಾರೆ ಕಾರ್ಲೋಸ್. ಹಾಗು ಹೆಚ್ಚಾಗಿ ಆಹಾರ ಪದಾರ್ಥ ಖರೀದಿಸುವ ಸೂಪರ್ ಮಾರ್ಕೆಟ್ಟುಗಳಲ್ಲಿ ಇಂಥಹ ಸಾಧನಗಳನ್ನು ಅಳವಡಿಸುವುದು ದೊಡ್ಡ ವಿಷಯವೇನಲ್ಲ ಬಿಡಿ. 

ಆಹಾರ ಪದಾರ್ಥದ ಬಣ್ಣ ಬದಲಾಗಿರುವುದು ಗಮನಿಸಬಹುದು

ಈ ಸಂಶೋಧನೆ ಇಲ್ಲಿಗೆ ಮುಗಿಯದೆ, ಇನ್ನು ಆಹಾರದ ಮೂಲಕ ಹರಡುವ ರೋಗಗಳನ್ನು ತಡೆಯಲು ಹೆಚ್ಚು ಪರಿಣಾಮಕಾರಿಯಾದ ಪ್ಲಾಸ್ಟಿಕ್ ನನ್ನು ತಯಾರಿಸಲು ಕರ್ಲೋಸ್ ತಂಡ ತವಕದಲ್ಲಿದೆ. ಎಲ್ಲಾ ಚೆನ್ನಾಗಿಯೇ ಇದೆ. ಆದರೆ ಈಗಾಗಲೇ ನಮ್ಮ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಹೋಗಿರುವ, ಎಷ್ಟೋ ಜೀವರಾಶಿಗಳನ್ನು ಅಳಿಸಿರುವ, ಈ ಒಂದು ಹೊಸ ಹಾಗು ಉತ್ತೇಜಕ ಮುಖವಾಡದೊಂದಿಗೆ ಬರುತ್ತಿರುವ ಪ್ಲಾಸ್ಟಿಕ್ ರಾಕ್ಷಸನನ್ನು ನಮ್ಮ ಜೀವನಕ್ಕೆ ಬರಮಾಡಿಕೊಳ್ಳಬೇಕೆ…? ಬೇಡವೇ…? ಯಾವುದು ಪರಿಹಾರ…?

ನಿಮ್ಮ ಮುಕ್ತ ಹಾಗೂ ವಿಚಾರಿತ ಅಭಿಪ್ರಾಯಗಳನ್ನು ನಮಗೆ ಬರೆದು ತಿಳಿಸಿ

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.