ವಿಶ್ವ ಹಾವುಗಳ ದಿನಾಚರಣೆ
ಹಾವೆಂದರೆ ಭಯದಿಂದ ಮಾರು ದೂರ ಓಡುವ ಮನುಷ್ಯ, ಭಕ್ತಿಯಿಂದ ನಾಗರ ಕಲ್ಲಿಗೆ (ಕಲ್ಲು ನಾಗರಕ್ಕೆ) ಹಾಲೆರೆಯುತ್ತಾನೆ. ಇಲ್ಲಿ ಭಯ ಮತ್ತು ಭಕ್ತಿಗಳ ನಡುವೆ ಇರುವ ಅಂತರ ನಂಬಿಕೆ ಅಷ್ಟೇ. ಹೌದು ಎಲ್ಲಾ ವಿಷಯಗಳಲ್ಲೂ ನಂಬಿಕೆ ಗಳಿಸುವುದು ಸುಲಭವಲ್ಲ. ಅಂತಹ ಸಾಲಿನಲ್ಲಿ ಹಾವುಗಳ ವಿಷಯವೂ ಒಂದು. ಬಹುಶಃ ಹಾವಿನ ಕುರಿತಾಗಿ ನಮ್ಮ ಪುರಾಣಗಳಲ್ಲಿ ಬರುವ ರೋಚಕ ಸಂಗತಿಗಳು, ಸಿನಿಮಾ ಮತ್ತು ಈಗೀಗ ಧಾರಾವಾಹಿಗಳಲ್ಲಿ ತೋರಿಸುವ ವಿಜೃಂಭಿತ ದೃಶ್ಯಗಳು ಹಾಗೂ ಜನ ಕಟ್ಟುವ ಕಲ್ಪಿತ ಕಥೆಗಳಿಂದ, ಹಾವು ನಮ್ಮಲ್ಲಿ ಭಯವನ್ನುಂಟು ಮಾಡುವ ಭಯಾನಕ ಜೀವಿಯಾಗಿ ಉಳಿದಿದೆ.
ಪ್ರಪಂಚದಲ್ಲಿ ಸುಮಾರು 3500ಕ್ಕೂ ಹೆಚ್ಚಿನ ಜಾತಿಯ ಹಾವುಗಳಿದ್ದು ಶೇಕಡಾ ತೊಂಭತ್ತರಷ್ಟು ಹಾವುಗಳು ವಿಷರಹಿತ (Non-Venomous) ವಾಗಿದ್ದು ಉಳಿದ ಹತ್ತರಷ್ಟು ಮಾತ್ರ ವಿಷಪೂರಿತ (Venomous) ಹಾವುಗಳಾಗಿವೆ. ಹಾವು ಶೀತರಕ್ತಪ್ರಾಣಿ (Cold-Blooded). ಭಾರತದಲ್ಲಿ ಸುಮಾರು ಎರಡುನೂರಾ ಎಪ್ಪತ್ತಕ್ಕೂ ಅಧಿಕ ಪ್ರಭೇದದ ಹಾವುಗಳಿದ್ದು ಅವುಗಳಲ್ಲಿ ಮನುಷ್ಯನನ್ನು ಕೊಲ್ಲುವಷ್ಟು ವಿಷವಿರುವುದು ನಾಲ್ಕು ಹಾವುಗಳಾದ ಕಾಳಿಂಗ (King Cobra) ನಾಗರಹಾವು (Cobra), ಕನ್ನಡಿ ಅಥವಾ ಕೊಳಕು ಮಂಡಲ (Viper) ಮತ್ತು ಕಡಂಬಳ ಅಥವಾ ಕಟ್ಟುಹಾವು (Common Krait). ತಿಳುವಳಿಕೆಯ ಕೊರತೆ ಮತ್ತು ಅಜಾಗರೂಕತೆಯಿಂದ ಈ ಹಾವುಗಳ ಕಡಿತದಿಂದ ಭಾರತದಲ್ಲಿ ಪ್ರತಿ ವರ್ಷ 40000 – 45000 ಕ್ಕೂ ಅಧಿಕ ಮಾನವನ ಸಾವುಗಳುಂಟಾಗುತ್ತಿವೆ. ನಾಗರ ಹಾವು ಮತ್ತು ಕನ್ನಡಿ ಜಾತಿಯ ಹಾವುಗಳ ಕಡಿತದಿಂದ ಹೆಚ್ಚಿನ ಸಾವು ದಾಖಲಾಗಿವೆ. ಕಾಳಿಂಗ ಸರ್ಪಗಳು ಪಶ್ಚಿಮಘಟ್ಟದ ದಟ್ಟ ಅರಣ್ಯದ ಆವಾಸದಲ್ಲಿ ಮಾತ್ರ ಕಾಣಸಿಗುತ್ತವೆ.
ಇನ್ನು ಬಯಲುಸೀಮೆಯಲ್ಲಿ ನಾಗರಹಾವುಗಳ ಸಂತತಿ ಶ್ರೀಮಂತಿಕೆಯಿಂದ ಕೂಡಿದ್ದು ಜೀವವೈವಿಧ್ಯತೆಯ ಮಹತ್ವ ಮತ್ತು ಜಾಗೃತಿ ಕೊರತೆಯಿಂದಾಗಿ ಪ್ರತಿದಿನ ಒಂದಿಲ್ಲೊಂದು ಸ್ಥಳದಲ್ಲಿ ನಾಗರಹಾವುಗಳು ಕೊಲ್ಲಲ್ಪಡುತ್ತಿವೆ. ಮೇಲೆ ತಿಳಿಸಿದ ನಾಲ್ಕು ಜಾತಿ ಹಾವು ಬಿಟ್ಟು ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಕಾರಿಯಲ್ಲದ (Non-Venomous) ಹಾವುಗಳೆಂದರೆ ತೋಳ ಹಾವು (Wolf Snake), ಕೇರೆಹಾವು (Rat Snake), ಹಸಿರು ಚೌಕಳಿ ಹಾವು (Green Keelback), ಚೌಕಳಿ ಹಾವು(Checkered Keelback), ಕುಕ್ರಿ ಹಾವು, ಡುಮರಿಲ್ ಕಪ್ಪು ತಲೆ ಹಾವು (Dumeril black headed snake ), ಬ್ರಾಹ್ಮಿಣಿ ಕುರುಡು ಹಾವು-ಅತಿ ಚಿಕ್ಕ ಹಾವು (Brahmini blind snake), ಆಭರಣ ಹಾವು (Common Trinket) ಹಸಿರು ಬಳ್ಳಿ ಹಾವು (Green Vine Snake), ಕಂದು ಬಳ್ಳಿ ಹಾವು (Brown Vine Snake), ಮಣ್ಣುಮುಕ್ಕಹಾವು (Sand Boa), ವ್ಹಿಟ್ಟಕರ್ಸ್ ಬೋವಾ (Whitaker’s boa), ಬೋಲನಾಥಿ (Coluber gracilis) ಹಾವು ಮತ್ತು ಜೋರು ಪೋತ (Banded Racer) – ಇವು ಗೋಚರಿಸುವುದು ತೀರ ವಿರಳ. ಈ ವಿಷಕಾರಿಯಲ್ಲದ ಹಾವುಗಳ ವಿಷ (ಮೈಲ್ಡ್ ವೆನಮ್) ತಮ್ಮ ಬೇಟೆಯನ್ನು ನಿಷ್ಕ್ರಿಯಗೊಳಿಸುವಷ್ಟು ಮಾತ್ರ ಸಾಮರ್ಥ್ಯ ಹೊಂದಿದ್ದು ಮನುಷ್ಯರಿಗೆ ಅಥವಾ ಪ್ರಾಣಿಗಳಿಗೆ ಮಾರಣಾಂತಿಕವಲ್ಲ/ ಯಾವುದೇ ಅಪಾಯವಿರುವುದಿಲ್ಲ. ಸಾಮಾನ್ಯವಾಗಿ ಹಾವುಗಳು ಮನುಷ್ಯನ ಆವಾಸಸ್ಥಾನದಿಂದ ದೂರವಿರಲು ಇಷ್ಟಪಡುತ್ತವೆ, ಮನುಷ್ಯನ ಆವಾಸದ ಹತ್ತಿರಕೂಡಾ ಸುಳಿಯುವುದಿಲ್ಲ. ಕಪ್ಪೆ ಅಥವಾ ಇಲಿ ಅಂದರೆ ತನ್ನ ಆಹಾರ ಹುಡುಕುವ ಸಂದರ್ಭದಲ್ಲಿ ಅಥವಾ ನುಂಗಿದ ಸಂದರ್ಭದಲ್ಲಿ ಮನುಷ್ಯನ ಆವಾಸದಲ್ಲಿರುವ ಮನೆ ಅಥವಾ ಪಾಳು ಬಿದ್ದ ಕಟ್ಟಡಗಳಲ್ಲಿ ಆಶ್ರಯ ಪಡೆಯಬಹುದು.
ಭಯದಿಂದ ಹಾವು ಕಂಡ ತಕ್ಷಣ ಕೊಲ್ಲುವುದು, ಅರಣ್ಯನಾಶ, ಆವಾಸ ನಾಶ, ರಸ್ತೆ ಅಪಘಾತಗಳು, ಕಳ್ಳಸಾಗಣೆಯಂತಹ ಕಾನೂನು ಬಾಹಿರ ಚಟುವಟಿಕೆಗಳಿಂದ ಇಂದು ಹಾವುಗಳ ಸಂತತಿ ನಶಿಸುತ್ತಿದೆ. ಹಾವುಗಳು ತಮ್ಮ ಜೀವಿತಾವಧಿಯಲ್ಲಿ ಸಾವಿರಕ್ಕೂ ಹೆಚ್ಚು ಇಲಿಗಳನ್ನು ಭಕ್ಷಿಸುವುದರ ಮೂಲಕ ಇಲಿಗಳಿಂದ ಹರಡಬಹುದಾದ ರೋಗದಿಂದ ರಕ್ಷಿಸುವುದಲ್ಲದೆ ರೈತಮಿತ್ರನಾಗಿ ಪರಿಸರ ವ್ಯವಸ್ಥೆಯ ಆಹಾರ ಸರಪಳಿಯಲ್ಲಿ ಮತ್ತು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾವುಗಳನ್ನು ಸಂರಕ್ಷಿಸಲು ಹಾಗೂ ಸಾರ್ವಜನಿಕರಿಗೆ ಪರಿಸರದಲ್ಲಿ ಉರಗಗಳ ಮಹತ್ವದ ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 16ರಂದು ವಿಶ್ವ ಹಾವುಗಳ ದಿನವನ್ನು ಆಚರಿಸಲಾಗುತ್ತದೆ. (2013 ಜುಲೈ 16 ರಿಂದ ಪ್ರಾರಂಭ-ಪ್ರತಿ ವರ್ಷ ಜುಲೈ ತಿಂಗಳಲ್ಲಿ ದಿನಾಂಕ ಬದಲಾಗಬಹುದು). ಈ ದಿನದಂದು ವಿಶ್ವದಾದ್ಯಂತ ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಉರಗಗಳ ಮಹತ್ತರವಾದ ಪಾತ್ರ ಮತ್ತು ಮಾನವ-ಉರಗಗಳ ಸಂಘರ್ಷ ನಿಯಂತ್ರಿಸುವ ಕ್ರಮ ಹಾಗೂ ಉರಗಗಳ ಬಗ್ಗೆ ಇರುವ ಮೂಢನಂಬಿಕೆಗಳ ಕುರಿತು ಶಾಲಾ-ಕಾಲೇಜು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಉರಗಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ :
ಹಾವು ಕಂಡರೆ ಭಯಪಡದೆ ಆತಂಕಗೊಳ್ಳದೆ ಹತ್ತಿರದಲ್ಲಿ ಲಭ್ಯವಿರುವ ನುರಿತ ಉರಗಸಂರಕ್ಷಕರನ್ನು ಸಂಪರ್ಕಿಸಿ ವಿಷಯ ತಿಳಿಸಿ ಅವರು ಬರುವವರೆಗೂ ದೂರವಾಣಿ ಮೂಲಕ ಅವರು ನೀಡುವ ಸೂಚನೆಗಳನ್ನು ಪಾಲಿಸಿ, ಅವಸರ ಪಡಬೇಡಿ. ಅವರು ಬರುವವರೆಗೂ ಸಹಕರಿಸಿ ನಂತರ ಅವರು ಉರಗವನ್ನು ಸಂರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡುತ್ತಾರೆ. ಕೆಲುವು ಪ್ರಭೇದದ ಹಾವುಗಳು ಅಂದರೆ ತೋಳಹಾವು, ಆಭರಣ ಹಾವು ನಿಶಾಚರಿಯಾಗಿದ್ದು ಮನುಷ್ಯನ ಆವಾಸದ ಸುತ್ತಮುತ್ತ ಇರುವ ವಿಷಕಾರಿಯಲ್ಲದ ಹಾವುಗಳಾಗಿದ್ದು ಹಲ್ಲಿಗಳ ಸಂತತಿಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ.
ಉರಗ ಪ್ರೇಮಿ/ಸಂರಕ್ಷಕರಲ್ಲಿ ಮನವಿ :
ಹಾವುಗಳನ್ನು ಹಿಡಿದು ರಕ್ಷಿಸಿ ಅವುಗಳ ಆವಾಸಕ್ಕೆ ಬಿಡುವುದು ಒಂದು ಕಲೆ. ಸರಿಯಾದ ಸಂಪೂರ್ಣ ಜ್ಞಾನವಿಲ್ಲದೆ ದುಸ್ಸಾಹಸಕ್ಕೆ ಕೈಹಾಕಬಾರದು. ರಾಜ್ಯದ ಎಲ್ಲೆಡೆ ಸುಮಾರು ವರ್ಷಗಳಿಂದ ನುರಿತ ಉರಗ ಸಂರಕ್ಷಕರಿದ್ದಾರೆ, ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರು ಪ್ರತಿ ಬಾರಿ ಹಾವನ್ನು ರಕ್ಷಿಸುವಾಗ ಜಾಗೃತಿ ವಹಿಸಬೇಕು, ಅಜಾಗರೂಕತೆಯಿಂದ ಸಮಸ್ಯೆಗಳಿಗೆ ಆಹ್ವಾನ ನೀಡಬಾರದು. ಎಷ್ಟೋ ಸಾರಿ ಸಂರಕ್ಷಕರೇ, ತಾವು ಎಸಗುವ ತಪ್ಪಿನಿಂದಾಗಿಯೋ ಅಥವಾ ಅಜಾಗರೂಕತೆಯಿಂದಾಗಿಯೋ ಹಾವುಗಳ ಕಡಿತಕ್ಕೊಳಗಾದ ಎಷ್ಟೋ ಘಟನೆಗಳು ಸಂಭವಿಸಿವೆ. ಯಾವುದೇ ಹಾವನ್ನು ಸಂರಕ್ಷಿಸುವಾಗ ಹಾವನ್ನು ಸಾರ್ವಜನಿಕರ ಮನರಂಜನೆಗೆ ಪ್ರದರ್ಶಿಸಬಾರದು. ಇಲ್ಲಿ ಹಾವು ಸಂರಕ್ಷಿಸುವುದು ಎಷ್ಟು ಮುಖ್ಯವೋ ಸಂರಕ್ಷಕನ ಪ್ರಾಣವೂ ಅಷ್ಟೇ ಮುಖ್ಯ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಫೋಟೋಗಾಗಿ ಮೇಲೆತ್ತುವುದು, ಹೆಡೆಗೆ ಮುತ್ತಿಡುವುದು ಮುಂತಾದ ದುಸ್ಸಾಹಸಗಳನ್ನು ಮಾಡಬೇಡಿ. ಸಾಧ್ಯವಾದಷ್ಟು ಬೇಗನೆ ಉತ್ತಮವಾದ ಚೀಲದೊಳಕ್ಕೆ ಹಾಕಿ ಅವುಗಳ ಆವಾಸ ಸ್ಥಾನಕ್ಕೆ ಬಿಡುವುದು ಒಳಿತು.
ಇನ್ನೊಂದು ಪ್ರಮುಖ ವಿಚಾರವೆಂದರೆ ನಾಗರ ಹಾವಾಗಲಿ ಅಥವಾ ಇನ್ನಾವುದೇ ಹಾವಾಗಲಿ ಹಾಲು ಕುಡಿಯುವುದಿಲ್ಲ ಹಾಗಾಗಿ ಅವುಗಳಿಗೆ ಒತ್ತಾಯಪೂರ್ವಕವಾಗಿ ಹಾಲು ಕುಡಿಸಬೇಡಿ. ಹಾಲಿನಲ್ಲಿರುವ ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹಾವಿನ ಜೀರ್ಣಾಂಗ ವ್ಯವಸ್ಥೆಯಲ್ಲಿ ಇಲ್ಲ. ಹಾವುಗಳು ತಮ್ಮ ಆಹಾರವನ್ನು ಜೀವಂತ ಬೇಟೆಯಾಡಿ ತಿನ್ನುವಂಥ ಪ್ರಾಣಿ. ಹಾವುಗಳು ಆಹಾರ ತಿಂದ ಸಮಯದಲ್ಲಿ ಅವುಗಳನ್ನು ಹಿಡಿಯಲು/ ಮುಟ್ಟಲು ಹೋಗಬಾರದು, ಆಗ ತಿಂದ ಆಹಾರವನ್ನು ಹೊರಹಾಕುತ್ತವೆ, ಕಾರಣ ಮನುಷ್ಯ ಹಿಡಿಯಲು ಹೋದಾಗ ಪಲಾಯನ ಮಾಡಲು ಪ್ರಯತ್ನಿಸುತ್ತವೆ. ಇಂಥ ಸಮಯದಲ್ಲಿ ತಮ್ಮ ಹೊಟ್ಟೆಯಲ್ಲಿರುವ ಆಹಾರ ಹೊರಹಾಕಿದರೆ ಅವುಗಳ ದೇಹ ಭಾರ ಕಡಿಮೆಯಾಗಿ ಚಲನೆಗೆ ಸುಲಭವಾಗಲೆಂದು ವಾಂತಿ ಮಾಡುತ್ತವೆ. ಆಹಾರ ಜೀರ್ಣವಾಗುವವರೆಗೂ ಒಂದೇ ಸ್ಥಳದಲ್ಲಿ ವಿಶ್ರಮಿಸಿ ನಂತರ ಹೊರಟು ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಹಾವನ್ನು ಸ್ವಲ್ಪ ಗಮನವಿಟ್ಟು ನೋಡಿಕೊಂಡು ನಂತರ ಸಾಗಿಸುವುದು ಒಳಿತು.
ಪ್ರಥಮ ಚಿಕಿತ್ಸೆ:
ನಮ್ಮ ಭಾಗದ ಜನ ಹಾವು ನೋಡಿದರೆ ಭಯಪಡುವರು, ಅದು ವಿಷಕಾರಿಯೋ ಅಥವಾ ವಿಷರಹಿತವೋ ಅನ್ನುವುದನ್ನು ವಿವೇಚಿಸದೆ ಗಾಬರಿಯಿಂದಲೇ ಅರ್ಧ ಸಾಯುತ್ತಾರೆ. ನಾಗರ ಹಾವು, ಕೊಳಕ ಮಂಡಲ (ದಾಸರಹಾವು/ ರಸಲ್ ವೈಪರ್) ಕಚ್ಚಿದರೆ ಸಮಯಕ್ಕೆ ಸರಿಯಾಗಿ ಪ್ರಥಮ ಚಿಕೆತ್ಸೆ ಮಾಡಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೆ ಖಂಡಿತಾ ಪ್ರಾಣ ಉಳಿಸಬಹುದು. ಕಚ್ಚಿದ ಜಾಗವನ್ನು ಸಾಬೂನು ಮಿಶ್ರಿತ ನೀರಿನಿಂದ ತೊಳೆದು ಕಚ್ಚಿದ ಜಾಗದಿಂದ ಸ್ವಲ್ಪ ಮೇಲಕ್ಕೆ ಒಂದು ಸಣ್ಣ ಬೆರಳು ತೂರುವಷ್ಟು ಸಡಿಲವಾಗಿ ಕಟ್ಟನ್ನು ಕಟ್ಟಿ ಸಾಧ್ಯವಾದಷ್ಟು ಬೇಗನೆ ಆಸ್ವತ್ರೆಗೆ ಸಾಗಿಸಬೇಕು. ಕಡಿತಕ್ಕೊಳಗಾದ ವ್ಯಕ್ತಿಗೆ ಧೈರ್ಯ ತುಂಬಿ ಹತ್ತಿರದ ಸರಕಾರಿ ಆಸ್ವತ್ರೆಗಳಲ್ಲಿ ಪ್ರತಿವಿಷ ಹಾಗೂ ಅದನ್ನು ನೀಡುವ ನುರಿತ ವೈದ್ಯರಿರುವ ವ್ಯವಸ್ಥೆ ಇರುವೆಡೆ ಕರೆದೊಯ್ಯಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ ಸಂಗ್ರಹ ಕೋಣೆ (ಸ್ಟೋರ್ ರೂಂ) ಗಳನ್ನು ಆಗಾಗ ಸ್ವಚ್ಛಗೊಳಿಸಿ ಹಾವುಗಳು ಬರುವುದಿಲ್ಲ. ರೈತರು ರಾತ್ರಿ ಸಮಯದಲ್ಲಿ ತೋಟಗಳಲ್ಲಿ ನೀರು ಹಾಯಿಸುವಾಗ ಒಳ್ಳೆ ಟಾರ್ಚ್ ಬಳಸಿ ಸಾಧ್ಯವಾದರೆ ಗಮ್-ಬೂಟ್(Ankle cut shoe) ಬಳಸಬಹುದು. ಸಾಮಾನ್ಯವಾಗಿ ಹಾವುಗಳು ಮನುಷ್ಯನನ್ನು ಕಂಡರೆ ಭಯಪಟ್ಟು ಪಲಾಯನ ಮಾಡುತ್ತವೆ.
ಪರಿಸರ ಅಧ್ಯಯನ ಪಠ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮನೋಭಾವನೆಯನ್ನು ಪರಿವರ್ತಿಸಲು ಅಳವಡಿಸಲಾಗಿದ್ದು ಶಿಕ್ಷಕರ ಪಾತ್ರ ಮಹತ್ವವಾಗಿದ್ದು ‘ಪರಿಸರ ಅಧ್ಯಯನ’ ಪರೀಕ್ಷೆಗಷ್ಟೆ ಸೀಮಿತವಾಗಬಾರದು. ಶಾಲೆಯೊಳಗಡೆ ಹಾವುಗಳು ಅಕಸ್ಮಾತಾಗಿ ಬಂದಾಗ ಶಿಕ್ಷಕರೇ ಹಾವುಗಳನ್ನು ಸಾಯಿಸಿದ ಉದಾಹರಣೆಗಳಿವೆ. ಹಾವು ಮನುಷ್ಯನ ಆವಾಸ ಸ್ಥಾನಕ್ಕೆ ಬರದಂತೆ ಸ್ವಚ್ಛತೆಯನ್ನು ಕಾಪಾಡಿದರೆ ಕಡಿತಕ್ಕೊಳಗಾಗುವುದನ್ನು ತಪ್ಪಿಸಬಹುದು.
ಬಿಬ್ರಾನ್ ಹವಳದ ಹಾವು:
ಈ ವಿಷಕಾರಿ ಅಪರೂಪದ ಹಾವು ಕೇವಲ ಪಶ್ಚಿಮಘಟ್ಟದ ಅರಣ್ಯಗಳಲ್ಲಿ ಮಾತ್ರ ಕಂಡುಬರುವುದು, ಶುಷ್ಕ ಅರಣ್ಯಗಳಲ್ಲಿ ಕಂಡುಬಂದ ದಾಖಲೆಗಳು ಅತಿವಿರಳ.
ರಸ್ತೆ ಅಪಘಾತ: ರಸ್ತೆ ಅಪಘಾತವು ಹಾವುಗಳ ಸಂತತಿಯ ಇಳಿಕೆಯಲ್ಲಿ ಒಂದು ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಮುಂಗಾರಿನ ಋತುವಿನಲ್ಲಿ ಕರ್ನಾಟಕದ ಪಶ್ಚಿಮಘಟ್ಟಗಳ ರಸ್ತೆಯಲ್ಲಿ ಪ್ರತಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಎರಡು-ಮೂರು ವಿವಿಧ ಜಾತಿಯ ಹಾವುಗಳು ವಾಹನ ಹಾಯ್ದು ಸಾಯುತ್ತಿರುತ್ತವೆ. (ಇದರಲ್ಲಿ ಹೆಚ್ಚಾಗಿ ಹಸಿರುಬಳ್ಳಿ ಹಾವು ಮತ್ತು ಕಂದು ಬಳ್ಳಿ ಹಾವು ಸಾವನ್ನಪ್ಪುತ್ತವೆ). ಕೆ.ಟಿ.ಆರ್ ಕ್ಷೇತ್ರ ವ್ಯಾಪ್ತಿಯಲ್ಲಿ ವರ್ಷಕ್ಕೆ 2000-2500 ವಿವಿಧ ಪ್ರಭೇದದ ಹಾವುಗಳು ಸಾಯುತ್ತವೆ (ವನ್ಯಜೀವಿ ವಲಯದಲ್ಲಿ ವಾಹನಗಳನ್ನು ನಿಧಾನವಾಗಿ ಓಡಿಸುವುದರ ಮೂಲಕ ಸಾವುಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದು).
ಉರಗಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಸ್ಕೆಡ್ಯೂಲ್-IIರ ಅಡಿಯಲ್ಲಿ ಸಂರಕ್ಷಣೆ ಪಡೆದಿವೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅವಶ್ಯ. ವನ್ಯಜೀವಿ ಕಾಯ್ದೆ ಪ್ರಕಾರ ಭಾರತದಲ್ಲಿ ಹಾವಾಡಿಗರು ಹಾವು ಹಿಡಿದು ಸಾರ್ವಜನಿಕರ ಮನರಂಜನೆಗೆ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದ್ದು ಅಂತಹ ಪ್ರಕರಣಗಳು ಕಂಡುಬಂದಲ್ಲಿ ಹತ್ತಿರದ ಪೋಲೀಸ್ ಇಲಾಖೆ ಅಥವಾ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು (ಪ್ರಾಣಿದಯ/ಸಂರಕ್ಷಣ ಸಂಸ್ಥೆಗಳಿಗೆ ಕೂಡಾ ತಿಳಿಸಬಹುದು) ಅರಣ್ಯ ಇಲಾಖೆ ಜೊತೆ ಸಾರ್ವಜನಿಕರು ಸಹಕರಿಸಿ ಹಾವುಗಳ ಸಂತತಿಯನ್ನು ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳೋಣ.
ನರಗುಂದದಲ್ಲೊಬ್ಬ ಉರಗಪ್ರೇಮಿ:
ಬುಡ್ನೆಸಾಬ ರಾಜೆಸಾಬ ಸೂರೇಬಾನ, ವಯಸ್ಸು-40 ನರಗುಂದದ ನಿವಾಸಿ. ವೃತ್ತಿಯಿಂದ ಗೃಹರಕ್ಷಕದಳ ಸಿಬ್ಬಂದಿಯಾಗಿ ಹನ್ನೊಂದು ವರ್ಷದಿಂದ ಸೇವೆಸಲ್ಲಿಸುತ್ತಿದ್ದು, ಸ್ಥಳೀಯರಲ್ಲಿ ಉರಗಪ್ರೇಮಿಯೆಂದೇ ಚಿರಪರಿಚಿತರು. ನರಗುಂದದ ಯಾವುದೇ ಮನೆ, ಕಛೇರಿ, ಶಾಲೆಯಲ್ಲಿ ಹಾವುಗಳು ಅಕಸ್ಮಾತಾಗಿ ಸೇರಿಕೊಂಡಿದ್ದರೆ ತಕ್ಷಣವೇ ನೆನಪಿಗೆ ಬರೋದು ಈ ಬುಡ್ಡಾ. ಸುಮಾರು ಮೂರು ವರ್ಷಗಳಿಂದ ತಮ್ಮ ವೃತ್ತಿಯೊಂದಿಗೆ ಉರಗ ಸಂರಕ್ಷಣೆಯ ಸೇವೆಯನ್ನು ಮಾಡುತ್ತಿದ್ದು ಇಲ್ಲಿವರೆಗೆ ನಾಲ್ಕುನೂರಕ್ಕೂ ಅಧಿಕ ವಿವಿಧ ಜಾತಿಯ ಹಾವುಗಳನ್ನು ಸಂರಕ್ಷಿಸಿದ್ದಾರೆ. ಯಾರಾದರೂ ಸರಿ ಯಾವ ಸಮಯದಲ್ಲಿ ( ಹಲವಾರು ಸಂದರ್ಭಗಳಲ್ಲಿ ಮಧ್ಯರಾತ್ರಿ 1ಗಂಟೆ ಮತ್ತು 3ಗಂಟೆ)ಉರಗ ರಕ್ಷಣೆಗಾಗಿ ಕರೆ ಮಾಡಿದರೂ ತಕ್ಷಣ ಸ್ಥಳಕ್ಕೆ ಧಾವಿಸಿ ಉರಗಗಳನ್ನು ಸುರಕ್ಷಿತವಾಗಿ ರಕ್ಷಿಸಿ ಅವುಗಳ ಆವಾಸಕ್ಕೆ ಬಿಡುತ್ತಾರೆ. ಇವರು ಒಬ್ಬ ಉತ್ತಮ ನೈತಿಕ ಸಂರಕ್ಷಕರಾಗಿದ್ದು ಸರಳ ಮತ್ತು ಸುರಕ್ಷ ಸಂರಕ್ಷಣಾ ವಿಧಾನದ ಮೂಲಕ ಹಾವುಗಳನ್ನು ರಕ್ಷಿಸುತ್ತಾರೆ. ಅನಿವಾರ್ಯತೆ ಇದ್ದಾಗ ಮಾತ್ರ ಹಾವುಗಳನ್ನು ಕೈಯಿಂದ ಹಿಡಿದು ಬ್ಯಾಗ್ ನಲ್ಲಿ ಹಾಕುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಕಾಟನ್ ಬಟ್ಟೆಯ ಚೀಲದ ಬಾಯಿಗೆ ನಾಲ್ಕು ಇಂಚು ಸುತ್ತಳತೆ ಮತ್ತು ಐದು ಅಡಿ ಉದ್ದವಿರುವ ಪೈಪನ್ನು ಕಟ್ಟಿ ಹಾವಿನ ಎದುರಿಗೆ ಇಡುತ್ತಾರೆ. ಆಗ ಹಾವು ತಾನಾಗಿಯೇ ಒಳಗೆ ಸೇರಿಕೊಳ್ಳುತ್ತದೆ.
ಲಾಕ್ ಡೌನ್ ಸಂದರ್ಭದಲ್ಲಿ ಇವರು ನೂರಕ್ಕೂ ಅಧಿಕ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದು ಅದರಲ್ಲಿ ಹೆಚ್ಚಾಗಿ ನಾಗರಹಾವುಗಳೇ ಇದ್ದವು ಎನ್ನುವುದು ವಿಶೇಷ. ಕೊಳಕು ಮಂಡಲ ಅಥವಾ ದಾಸರ ಹಾವು (ರಸ್ಸೆಲ್ಸ್ ವೈಪರ್) ಅತ್ಯಂತ ಭಯಾನಕ ಮತ್ತು ವಿಷಕಾರಿ ಹಾವಾಗಿದ್ದು ಉರಗರಕ್ಷಕ ಎಷ್ಟೆ ಅನುಭವಿಯಾಗಿದ್ದರೂ ರಕ್ಷಿಸುವುದು ಸುಲಭದ ಮಾತಲ್ಲ. ಆದರೆ ಬುಡ್ಡಾ, ದಾಸರ ಹಾವು ರಕ್ಷಣೆಯಲ್ಲಿ ಎತ್ತಿದ ಕೈ. ಇಲ್ಲಿಯವರೆಗೆ ಇವರು ಹತ್ತಕ್ಕೂ ಅಧಿಕ ದಾಸರ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ (ಪೈಪ್-ಇನ್-ಬ್ಯಾಗ್ ಮೆಥಡ್).
“ಮೂರು ವರ್ಷಗಳ ಕಾಲ ನನ್ನ ಬಳಿ ಇವರು ಹಾವು ಸಂರಕ್ಷಣೆಯ ತರಬೇತಿಯನ್ನು ಪಡೆದುಕೊಂಡರು. ಇವರು ಸಂರಕ್ಷಿಸಿದ ಮೊದಲ ಹಾವು, ನಾಗರ ಹಾವು ಎಂಬುದು ವಿಶೇಷ. ನಾನು ಎಷ್ಟೋ ಆಸಕ್ತರಿಗೆ ಉರಗ ಸಂರಕ್ಷಣೆಯ ತರಬೇತಿ ನೀಡಿದ್ದು, ನಾ ಕಂಡ ಉರಗಸಂರಕ್ಷಕರಲ್ಲಿ ಬುಡ್ಡಾ ಒಬ್ಬ ಅದ್ಭುತ ಸಂರಕ್ಷಕ. ಹಾವನ್ನು ರಕ್ಷಿಸಿದ ಸ್ಥಳದಲ್ಲಿಯೇ ಸಾರ್ವಜನಿಕರಿಗೆ ಉರಗಗಳ ಮಹತ್ವ ಮತ್ತು ಮೂಢ ನಂಬಿಕೆ ಹಾಗೂ ತಪ್ಪು ಕಲ್ಪನೆಗಳ ಕುರಿತು ಜಾಗೃತಿ ಮೂಡಿಸುತ್ತಾರೆ. ಇವರು ಉರಗ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಉಚಿತವಾಗಿ ಮಾಡುತ್ತಾರೆ ಯಾರಿಂದಲೂ ಯಾವುದೆ ಹಣವನ್ನು ಪಡೆಯುವುದಿಲ್ಲ.
ಪರಿಸರ ಸಮತೋಲನದಲ್ಲಿ ಉರಗಗಳು ಮಹತ್ವದ ಪಾತ್ರ ವಹಿಸುತ್ತವೆ. ಪರಿಸರ ಸಮತೋಲನ ವ್ಯವಸ್ಥೆಯಲ್ಲಿ ಸೂಕ್ಷ್ಮ ಜೀವಿಗಳಿಂದ ಹಿಡಿದು ಬೃಹತ್ ಗಾತ್ರದ ಸಸ್ತನಿಗಳು ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ-ಮಾನವರ ಹಸ್ತಕ್ಷೇಪದಿಂದಾಗಿ ಭೂಮಿಯ ಮೇಲಿನ ಎಷ್ಟೋ ಜೀವಿಗಳು ಅಳಿದು ಹೋಗುತ್ತಿವೆ, ಹಲವಾರು ಪ್ರಭೇದದ ಜೀವಿಗಳು ಅಳಿವಿನಂಚಿನಲ್ಲಿವೆ – ಎಲ್ಲ ಪ್ರಾಣಿ/ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ.”
ಚಿತ್ರ-ಲೇಖನ: ಮಂಜುನಾಥ ನಾಯಕ
ಗದಗ ಜಿಲ್ಲೆ