ಪ್ರಕೃತಿ ಬಿಂಬ
ಸ್ವರ್ಣೆ © ಅರವಿಂದ ಕೂಡ್ಲ
ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ವಿವಿಧ ಪ್ರದೇಶಗಳ ಕುರುಚಲು ಕಾಡುಗಳು, ಎಲೆ ಉದುರುವ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಸ್ವರ್ಣೆ ಚಿಟ್ಟೆಯು ಪ್ಯಾಪಿಲಿಯೊನಿಡೆ (Papilionidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಟ್ರಾಯ್ಡಸ್ ಮಿನೋಸ್ (Troides minos) ಎಂದು ಕರೆಯಲಾಗುತ್ತದೆ. ಮೇಲಿನ ರೆಕ್ಕೆಗಳು ಕಪ್ಪಾಗಿದ್ದು, ಪೇಲವ ಬಿಳಿಯ ರೇಖೆಗಳನ್ನು ಹೊಂದಿರುತ್ತವೆ. ಕೆಳಗಿನ ರೆಕ್ಕೆಗಳ ಮೇಲೆ ಹಳದಿ ಮಿಶ್ರಿತ ಚಿನ್ನದ ಬಣ್ಣವಿರುತ್ತದೆ. ಭಾರತದ ಅತ್ಯಂತ ದೊಡ್ಡ ಚಿಟ್ಟೆಯಾಗಿದ್ದು, ಬಹಳ ಎತ್ತರದಲ್ಲಿ ನಿಧಾನಗತಿಯಲ್ಲಿ ಹಾರಾಡುತ್ತದೆ. ಕರ್ನಾಟಕದ ರಾಜ್ಯ ಚಿಟ್ಟೆಯೂ ಆಗಿದೆ. ಆತಿಥೇಯ ಸಸ್ಯಗಳಿಂದ ದೇಹದೊಳಗೆ ಶೇಖರಿಸಿರುವ ವಿಷವನ್ನು ತನ್ನ ಪ್ರಕಾಶಮಾನವಾದ ರೆಕ್ಕೆಗಳಿಂದ ತೋರ್ಪಡಿಸಿ ಪರಭಕ್ಷಕಗಳು ತಮ್ಮನ್ನು ತಿನ್ನಲಾಗದಂತೆ ಎಚ್ಚರಿಕೆ ನೀಡುತ್ತವೆ. ಅರಿಸ್ಟೋಲೋಕಿಯೇಸಿ (Arstolochiaceae) ಕುಟುಂಬಕ್ಕೆ ಸೇರಿದ ಚಕ್ರನಿಕೆ, ಈಶ್ವರ ಬಳ್ಳಿ ಮುಂತಾದ ಗಿಡಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ನೇಪಾಳ, ಭಾರತ ಮತ್ತು ಶ್ರೀಲಂಕಾದ ಸಮತಟ್ಟು ಪ್ರದೇಶ, ಎಲೆ ಉದುರುವ ಕಾಡು, ಕುರುಚಲು ಕಾಡು, ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಗೆ ಸ್ಥಳೀಯವಾಗಿರುವ ಅಶೋಕ ಚಿಟ್ಟೆಯು ಪ್ಯಾಪಿಲಿಯೊನಿಡೆ (Papilionidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಗ್ರಾಫಿಯಂ ಅಗಮೆಮ್ನಾನ್ (Graphium agamemnon) ಎಂದು ಕರೆಯಲಾಗುತ್ತದೆ. ಮೇಲಿನ ಮತ್ತು ಕೆಳಗಿನ ರೆಕ್ಕೆಗಳ ಬಣ್ಣ ಕಪ್ಪಾಗಿದ್ದು, ರೆಕ್ಕೆಗಳ ಮೇಲೆ ಉದ್ದವಾದ ನಾಲ್ಕು ಸಾಲು ಹಸಿರು ಮಚ್ಚೆಗಳಿರುತ್ತವೆ ಹಾಗೂ ಕೆಳಗಿನ ರೆಕ್ಕೆಗಳಲ್ಲಿ ಬಾಲವಿರುತ್ತದೆ. ಅತ್ಯಂತ ವೇಗವಾಗಿ ಹಾರಾಡುತ್ತಿರುತ್ತವೆ ಮತ್ತು ತೇವಾಂಶವಿರುವ ಮಣ್ಣಿನ ಮೇಲೆ ಕುಳಿತು ಖನಿಜಾಂಶವನ್ನು ಹೀರಿಕೊಳ್ಳುತ್ತವೆ. ಕಂಬದ ಮರ (False Ashoka) ಇದರ ಅತಿಥೇಯ ಸಸ್ಯವಾಗಿದೆ.

ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಕಾಡು ಕಪ್ಪು ಚುಕ್ಕೆ ಚಿಟ್ಟೆಯು ಲೆಪಿಡೊಪ್ಟೆರಾ (Lepidoptera) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಕ್ಯಾಲೆಟಾ ಡೆಸಿಡಿಯಾ (Caleta decidia) ಎಂದು ಕರೆಯಲಾಗುತ್ತದೆ. ಇದರ ಮೇಲ್ಭಾಗವು ಗಾಢ ಕಂದು ಬಣ್ಣದಲ್ಲಿರುತ್ತದೆ. ಹಿಂಭಾಗದ ರೆಕ್ಕೆಯ ಮೇಲೆ ಅಗಲವಾದ ಬಿಳಿ ಅಡ್ಡ ಪಟ್ಟಿಯನ್ನು ಹೊಂದಿದ್ದು, ಬುಡದಲ್ಲಿ ಗಾಢ ಕಂದು ಬಣ್ಣದವಿರುತ್ತದೆ. ಈ ಪಟ್ಟಿಯು ಮುಂಭಾಗದ ರೆಕ್ಕೆಯ ಅರ್ಧದಷ್ಟು ಮುಂದುವರಿದು, ಕೊಕ್ಕೆಯಂತಹ ಗುರುತನ್ನು ರೂಪಿಸುತ್ತದೆ. ಕೆಳಭಾಗವು ಬಿಳಿಯಾಗಿದ್ದು, ದೊಡ್ಡ ಕಪ್ಪು ತೇಪೆಗಳನ್ನು ಹೊಂದಿರುತ್ತದೆ. ಗಂಡು ಚಿಟ್ಟೆಗಳು ಕಾಡಿನ ಹಾದಿಗಳಲ್ಲಿ ಮಣ್ಣು ಹೀರುತ್ತಾ ಓಡಾಡುತ್ತಿರುವುದು ಕಂಡುಬರುತ್ತದೆ. ರಾಮ್ನೇಸಿ (Rhamnaceae) ಕುಟುಂಬದ ಕೊಟ್ಟೆ ಹಣ್ಣಿನ ಮರ (Zizipus rugosa) ಇದರ ಅತಿಥೇಯ ಸಸ್ಯವಾಗಿದೆ.

ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ತೇವಾಂಶವಿರುವ ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಕಮಾಂಡರ್ ಚಿಟ್ಟೆಯು ನಿಂಫಾಲಿಡೇ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಮಾಡುಜಾ ಪ್ರೊಕ್ರಿಸ್ (Moduza procris) ಎಂದು ಕರೆಯಲಾಗುತ್ತದೆ. ಮೇಲಿನ ರೆಕ್ಕೆಗಳು ಕಂದು ಮಿಶ್ರಿತ ಕೆಂಪು ಬಣ್ಣವಿದ್ದು, ಮಧ್ಯಭಾಗದಲ್ಲಿ ದೊಡ್ಡದಾದ ಬಿಳಿ ಚುಕ್ಕೆಗಳ ಪಟ್ಟಿಯನ್ನು ಹೊಂದಿದೆ. ಹಾರಾಡುವಾಗ ಈ ಪಟ್ಟಿಯು ಎರಡು ರೆಕ್ಕೆಗಳ ಮೇಲೆ V ಆಕಾರದಲ್ಲಿ ಕಾಣುತ್ತದೆ. ರೆಕ್ಕೆಗಳ ಹಿಂಭಾಗವು ಮಂದವಾದ ಕೆಂಪು, ಕಂದು ಬಣ್ಣದಲ್ಲಿದ್ದು, ಬಿಳಿ ಬೂದು ಬಣ್ಣವನ್ನು ಕೆಳಭಾಗದಲ್ಲಿ ಹೊಂದಿರುತ್ತದೆ. ವೇಗದ ಹಾರಾಟಗಾರ, ಕುಳಿತಾಗ ರೆಕ್ಕೆಯನ್ನು ಹಿಂದೆ ಮುಂದೆ ಆಡಿಸುತ್ತದೆ ಹಾಗೂ ತೇವಾಂಶವಿರುವ ಮಣ್ಣಿನ ಮೇಲೆ ಕುಳಿತು ಖನಿಜಾಂಶವನ್ನು ಹೀರಿಕೊಳ್ಳುತ್ತದೆ. ಕ್ಯಾಪರೇಸೀ (Capparaceae) ಕುಟುಂಬದ ಮರಗಾಡೆ ಗಿಡ, ರೋಸೇಸಿ (Rosaceae) ಕುಟುಂಬದ ಬಾದಾಮಿ ಮರ, ರುಬಿಯೇಸಿ (Rubiaceae) ಕುಟುಂಬದ ನೀರು ಕದಂಬ, ಕದಂಬ, ಬೆಳ್ಳೋತಿ ಮರ ಇತ್ಯಾದಿ ಇವುಗಳ ಅತಿಥೇಯ ಸಸ್ಯಗಳಾಗಿವೆ.
ಚಿತ್ರ : ಅರವಿಂದ ಕೂಡ್ಲ
ಲೇಖನ: ದೀಪ್ತಿ ಎನ್.