ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

                              ಕಂದು ಹೂ                                                                  ©  ಡಾ. ಶಿಶುಪಾಲ ಎಸ್.
 

ಏಷ್ಯಾ ಖಂಡದ ಸಮತಟ್ಟು ಪ್ರದೇಶ, ಎಲೆ ಉದುರುವ ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಈ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜುನೋನಿಯಾ ಇಫಿಟಾ (Junonia iphita) ಎಂದು ಕರೆಯಲಾಗುತ್ತದೆ. ಕಿತ್ತಳೆ ಕಂದು ಬಣ್ಣದ ಮೇಲ್ಭಾಗವನ್ನು ಹೊಂದಿದ್ದು, ಹಲವಾರು ಕಂದು ಪಟ್ಟೆಗಳನ್ನೂ ಸಹ ಹೊಂದಿದೆ. ಕೆಳಗಿನ ರೆಕ್ಕೆಗಳ ಮೇಲೆ ಹಲವಾರು ಕೆಂಪು ಮಿಶ್ರಿತ ಕಂದು ಬಣ್ಣದ ಕಣ್ಣಿನಂತಹ ಮಚ್ಚೆಗಳ ಸರಣಿಯನ್ನು ಹೊಂದಿದೆ. ಸಾಮಾನ್ಯವಾಗಿ ರೆಕ್ಕೆಗಳನ್ನು ತೆರೆದು ಗಿಡ ಅಥವಾ ನೆಲದ ಮೇಲೆ ಕೂತು ಬೇಟೆಯಾಡುತ್ತದೆ. ಅಕಾಂಥೇಸಿ (Acanthaceae) ಕುಟುಂಬಕ್ಕೆ ಸೇರುವ ರುಯೆಲಿಯಾ ರಿಪನ್ಸ್ (Ruellia repens) ಮತ್ತು ಹೆಮಿಗ್ರಾಫಿಸ್ ರೆಪ್ಟಾನ್ಸ್ (Hemigraphis reptans) ಇದರ ಅತಿಥೇಯ ಸಸ್ಯಗಳಾಗಿವೆ.

 ಅಲೆಮಾರಿ                                                                                                                                                              ©  ಡಾ. ಶಿಶುಪಾಲ ಎಸ್.
 

ಏಷ್ಯಾ ಮತ್ತು ಆಸ್ಟ್ರೇಲಿಯಾ ಖಂಡಗಳ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ಎಲೆ ಉದುರುವ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಈ ಅಲೆಮಾರಿ ಚಿಟ್ಟೆಯು ಪಿಯರಿಡೇ (Pieridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಕ್ಯಾಟೊಪ್ಸಿಲಿಯಾ ಪೊಮೊನಾ (Catopsilia pomona) ಎಂದು ಕರೆಯಲಾಗುತ್ತದೆ. ರೆಕ್ಕೆಗಳು ಹಳದಿ ಅಥವಾ ತೆಳು ಹಸಿರು ಮಿಶ್ರಿತ ಬಿಳಿ ಬಣ್ಣದ್ದಾಗಿವೆ. ಕೆಲವೊಮ್ಮೆ ಹೆಣ್ಣು ಚಿಟ್ಟೆಗಳು ತೆಳು ಹಳದಿ ಬಣ್ಣವಿದ್ದು, ಕೆಳಗಿನ ರೆಕ್ಕೆಗಳ ಹಿಂಭಾಗದ ಕೋಶದ ತುದಿಯಲ್ಲಿ ಕಂದು ಬಣ್ಣದ ಮಚ್ಚೆಗಳನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಸಾವಿರಾರು ಚಿಟ್ಟೆಗಳು ತೇವಾಂಶವಿರುವ ಮಣ್ಣಿನ ಮೇಲೆ ಕುಳಿತು ಖನಿಜಗಳನ್ನು ಹೀರಿಕೊಳ್ಳುತ್ತವೆ. ಗುಂಪಿನಲ್ಲಿ ವಲಸೆ ಹೋಗುತ್ತವೆ. ಫ್ಯಾಬೇಸಿ (Fabaceae) ಕುಟುಂಬದ ಸೀಮೆತಂಗಡಿ ಮರ, ಮುತ್ತುಗ ಮರ ಇದರ ಅತಿಥೇಯ ಸಸ್ಯಗಳಾಗಿವೆ.

ನೀಲಿ ಕುಪ್ಪಿ ©  ಡಾ. ಶಿಶುಪಾಲ ಎಸ್.
 

ಪೂರ್ವ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಎಲೆ ಉದುರುವ ಕಾಡು ಮತ್ತು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ನೀಲಿ ಕುಪ್ಪಿ ಚಿಟ್ಟೆಯು ಪ್ಯಾಪಿಲಿಯೊನಿಡೆ (Papilionidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಗ್ರ್ಯಾಫಿಯಂ ಸಾರ್ಪೆಡಾನ್ (Graphium sarpedon) ಎಂದು ಕರೆಯಲಾಗುತ್ತದೆ. ಕೆಳಗಿನ ಮತ್ತು ಮೇಲಿನ ರೆಕ್ಕೆಗಳು ಕಪ್ಪಾಗಿದ್ದು, ತಳದ ಹೊರಭಾಗದಲ್ಲಿ ಉದ್ದವಾದ ನೀಲಿ ಪಟ್ಟೆಯಿರುತ್ತದೆ ಮತ್ತು ಅದರ ಸುತ್ತ ಕೆಲವು ಕೆಂಪು ಬಣ್ಣದ ಮಚ್ಚೆಗಳಿರುತ್ತವೆ. ಅಂಚಿನಲ್ಲಿ ಅರ್ಧ ಚಂದ್ರಾಕೃತಿಯ ನೀಲಿ ಮಿಶ್ರಿತ ಹಸಿರು ಮಚ್ಚೆಗಳಿರುತ್ತವೆ. ವೇಗವಾಗಿ ಹಾರಾಡುತ್ತವೆ ಮತ್ತು ತೇವಾಂಶವಿರುವ ಮಣ್ಣಿನ ಮೇಲೆ ಗುಂಪುಗುಂಪಾಗಿ ಕಂಡು ಬರುತ್ತವೆ. ಲಾರೇಸಿ (Lauraceae) ಕುಟುಂಬದ ಕಾಡು ದಾಲ್ಚಿನ್ನಿ ಹಾಗೂ ಕರ್ಪೂರದ ಮರದ ಜಾತಿಗೆ ಸೇರಿದ ವಿವಿಧ ಮರಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

     ತ್ರಿವರ್ಣೆ                                                                                                             ©  ಡಾ. ಶಿಶುಪಾಲ ಎಸ್.
 

ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ತೇವಾಂಶವಿರುವ ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಕಮಾಂಡರ್ ಚಿಟ್ಟೆಯು ನಿಂಫಾಲಿಡೇ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಮಾಡುಜಾ ಪ್ರೊಕ್ರಿಸ್ (Moduza procris) ಎಂದು ಕರೆಯಲಾಗುತ್ತದೆ. ಮೇಲಿನ ರೆಕ್ಕೆಗಳು ಕಂದು ಮಿಶ್ರಿತ ಕೆಂಪು ಬಣ್ಣವಿದ್ದು, ಮಧ್ಯಭಾಗದಲ್ಲಿ ದೊಡ್ಡದಾದ ಬಿಳಿ ಚುಕ್ಕೆಗಳ ಪಟ್ಟಿಯನ್ನು ಹೊಂದಿದೆ. ಹಾರಾಡುವಾಗ ಈ ಪಟ್ಟಿಯು ಎರಡು ರೆಕ್ಕೆಗಳ ಮೇಲೆ V ಆಕಾರದಲ್ಲಿ ಕಾಣುತ್ತದೆ.  ರೆಕ್ಕೆಗಳ ಹಿಂಭಾಗವು ಮಂದವಾದ ಕೆಂಪು, ಕಂದು ಬಣ್ಣದಲ್ಲಿದ್ದು, ಬಿಳಿ ಬೂದು ಬಣ್ಣವನ್ನು ಕೆಳಭಾಗದಲ್ಲಿ ಹೊಂದಿರುತ್ತದೆ. ವೇಗದ ಹಾರಾಟಗಾರ, ಕುಳಿತಾಗ ರೆಕ್ಕೆಯನ್ನು ಹಿಂದೆ ಮುಂದೆ ಆಡಿಸುತ್ತದೆ ಹಾಗೂ ತೇವಾಂಶವಿರುವ ಮಣ್ಣಿನ ಮೇಲೆ ಕುಳಿತು ಖನಿಜಾಂಶವನ್ನು ಹೀರಿಕೊಳ್ಳುತ್ತದೆ. ಕ್ಯಾಪರೇಸೀ (Capparaceae) ಕುಟುಂಬದ ಮರಗಾಡೆ ಗಿಡ, ರೋಸೇಸಿ (Rosaceae) ಕುಟುಂಬದ ಬಾದಾಮಿ ಮರ, ರುಬಿಯೇಸಿ (Rubiaceae) ಕುಟುಂಬದ ನೀರು ಕದಂಬ, ಕದಂಬ, ಬೆಳ್ಳೋತಿ ಮರ ಇತ್ಯಾದಿ ಇವುಗಳ ಅತಿಥೇಯ ಸಸ್ಯಗಳಾಗಿವೆ.

ಚಿತ್ರ : ಡಾ. ಶಿಶುಪಾಲ ಎಸ್.
ಲೇಖನ: ದೀಪ್ತಿ ಎನ್.

Spread the love
error: Content is protected.