ಮೋಡಿವಿದ್ಯೆಯ ಮಹಾನ್ ಚತುರ

ಮೋಡಿವಿದ್ಯೆಯ ಮಹಾನ್ ಚತುರ

        © ಶ್ರೀಕಾಂತ್ ಎ ವಿ

ಇನ್ನೊಬ್ಬರ ಮನಸ್ಸನ್ನು ವಶೀಕರಣಗೊಳಿಸಿ, ಮೋಡಿ ಮಾಡಿ ತಮ್ಮ ಕಾರ್ಯಸಾಧನೆಗೋಸ್ಕರ ಬಳಸಿಕೊಂಡು ಅಪರಾಧ ಕೃತ್ಯಗಳನ್ನು ಮಾಡಿಸುವ ಮನೋವೈಜ್ಞಾನಿಕ ಕಥಾಹಂದರ ಹೊಂದಿರುವಂತಹ ಅನೇಕ ಕಾದಂಬರಿಗಳು, ಚಲನಚಿತ್ರಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಅಂತಹ ಯಾವುದೇ ಚಿತ್ರಕಥೆಗೂ ಕಡಿಮೆ ಇಲ್ಲದ ಜೀವಲೋಕದ ಅಚ್ಚರಿಯ ಕಥೆಯೊಂದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಈ ಕಥೆಯಲ್ಲಿ ಬರುವ ಯಾವುದೇ ಜೀವಿ ಅಥವಾ ಸನ್ನಿವೇಶಗಳು ಕಾಲ್ಪನಿಕವಲ್ಲ ಎಂಬ ಡಿಸ್‌ ಕ್ಲೈಮರ್ ನೊಂದಿಗೆ ಈ ಕಥೆ ಆರಂಭಿಸುತ್ತಿದ್ದೇನೆ.

ಕ್ರಿಸ್ತಪೂರ್ವ 333 ರಲ್ಲಿ ಮಹಾಯೋಧ ಅಲೆಗ್ಸಾಂಡರನು ಫ್ರಿಗಿಯಾದ ರಾಜಧಾನಿ ಗೋರ್ಡಿಯಮ್ ಗೆ ಬಂದಾಗ ಆ ಸಂಸ್ಥಾನವನ್ನು ಕಟ್ಟಿದ ಗೋರ್ಡಿಯಸ್ಸನ ರಥವೊಂದನ್ನು ತೋರಿಸಲಾಗುತ್ತದೆ. ಆ ರಥದ ನೊಗವನ್ನು ಬ್ರಹ್ಮಗಂಟಿನಷ್ಟು ಕ್ಲಿಷ್ಟಕರವಾಗಿ ಒಂದು ಕಂಬಕ್ಕೆ ಬೆಸೆಯಲಾಗಿರುತ್ತದೆ. ಆ ಗಂಟನ್ನು ಬಿಡಿಸಿ ರಥವನ್ನು ಮುಕ್ತಗೊಳಿಸುವ ವೀರನು ಮುಂದೆ ಇಡೀ ಏಷ್ಯಾ ಖಂಡವನ್ನು ಆಳುತ್ತಾನೆ ಎಂಬ ಮಹತ್ತರ ನಂಬಿಕೆಯನ್ನು ಅರಿತ ಅಲೆಗ್ಸಾಂಡರನು ತನ್ನ ಹರಿತವಾದ ಕತ್ತಿಯಿಂದ ಅದನ್ನು ತುಂಡರಿಸುತ್ತಾನೆ. ಆ ನಂತರದ ಅವನ ದಿಗ್ವಿಜಯದ ದಂಡಯಾತ್ರೆಯು ಹೇಗೆ ಸಾಗಿತೆಂಬುದು ತಿಳಿದ ವಿಚಾರ. ಇದರ ಆಧಾರದಲ್ಲೇ “Cutting the Gordian Knot” ಎಂಬ ನಾಣ್ಣುಡಿ ಚಾಲ್ತಿಗೆ ಬಂದದ್ದು. ಇಂತಹ ಗೋರ್ಡಿಯನ್ ಕ್ನೋಟ್ (Gordian knot) ನ್ನೇ ಹೋಲುವ ಈ ಕ್ರಿಮಿಯನ್ನೂ ಸಹ ಗೋರ್ಡಿಯನ್ ವರ್ಮ್ (Gordian Worm) ಎಂದು ಕರೆಯುತ್ತಾರೆ. ಇದು ಅಂತಿಂತಾ ಕ್ರಿಮಿಯಲ್ಲ. ಬೇರೊಬ್ಬರ ಮನಸ್ಸನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮೋಡಿ ಮಾಡಿ ತನ್ನ ಸ್ವಾರ್ಥಕ್ಕಾಗಿ ಅವರನ್ನು ಆತ್ಮಹತ್ಯೆಗೆ ದೂಡಿ ಬಿಡುವಂತಹ ಮಹಾನ್ ಚತುರ ಕ್ರಿಮಿ.

ನೇಮಟೋಮೋರಿಫಾ (Nematomorpha) ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಈ ಕಿರಾತಕ ಕ್ರಿಮಿಯನ್ನು ಕುದುರೆ ಜೂಲಿನ ಹುಳು (Horse hair worm or hairsnake) ಎಂದೂ ಕರೆಯುತ್ತಾರೆ. ನೀರನ್ನು ತಾಕಿದ ಕುದುರೆ ಬಾಲದ ಕೂದಲು ಕ್ರಿಮಿಯಾಗಿ ಬದಲಾಗುತ್ತದೆ ಎಂಬ ಹಿಂದಿನ ಕಾಲದ ಪ್ರತೀತಿಯಿಂದ ಈ ಹೆಸರು ಬಂದಿರಬಹುದು. ಗಾತ್ರದಲ್ಲಿಯೂ ಸಹ ಕುದುರೆ ಬಾಲದ ಕೂದಲಿನಷ್ಟೇ ತೆಳುವಾಗಿರುತ್ತದೆ. ನೀರಿನಲ್ಲಿರುವ ಇದರ ಮೊಟ್ಟೆಗಳೊಡೆದು ಹೊರಬಂದ ಮರಿಗಳು ಈಜಲೂ ಸಹ ವಿಪರೀತ ಸೋಂಬೇರಿಗಳಾಗಿರುತ್ತವೆ. ನೀರಿನಲ್ಲೇ ಬಾಲ್ಯಾವಸ್ಥೆ ಕಳೆಯುವ ಚಿಮ್ಮಂಡೆ (Cricket) ಅಥವಾ ಇನ್ನಿತರ ಕೀಟಗಳಿಗೆ ಆಹಾರವಾಗಲು ಇವು ಹವಣಿಸುತ್ತಿರುತ್ತವೆ. ಆಶ್ಚರ್ಯವಾಗುತ್ತಿದೆಯೇ??? ಆದರೂ ಇದೇ ಸತ್ಯ…ಈ ಹಂತದಲ್ಲಿಯೇ ಈ ಕ್ರಿಮಿಯ ಕೌತುಕ ಜೀವನ ಶೈಲಿಯು ಆರಂಭವಾಗುವುದು.

ಚಿಮ್ಮಂಡೆಯ ಮರಿಗಳು ಈ ಕ್ರಿಮಿಯ ಮರಿಗಳನ್ನು ಭಕ್ಷಿಸಿ ಬೆಳೆದು ವಯಸ್ಕರಾಗಿ ರೂಪಾಂತರಗೊಳ್ಳುತ್ತವೆ. ಅದರ ಹೊಟ್ಟೆ ಸೇರಿದ ಕುದುರೆ ಜೂಲಿನ ಹುಳು ಕೂಡ ತನ್ನ ಪ್ರೌಢಾವಸ್ಥೆಯನ್ನು ತಲುಪುತ್ತದೆ. ಇನ್ನಷ್ಟು ಬೆಳೆದು ರೂಪಾಂತರಗೊಂಡ ಚಿಮ್ಮಂಡೆಯು ನೀರಿಂದ ಹಾರಿ ತನ್ನ ಬದುಕಿನ ಉಳಿದ ಭಾಗವನ್ನು ಗಾಳಿಯಲ್ಲಿ ಕಳೆಯುತ್ತದೆ. ತನ್ನೊಳಗೆ ಮತ್ತೊಂದು ಜೀವಿಯ ಇರುವಿಕೆಯ ಅರಿವೇ ಇಲ್ಲದ ಚಿಮ್ಮಂಡೆಯು ಹೆರಿಗೆಯೇ ಆಗದ ಗರ್ಭಿಣಿಯಂತೆ ಅಲೆಯುತ್ತದೆ. ಚಿಮ್ಮಂಡೆಯ ದೇಹದೊಳಗೆ ಈ ಕ್ರಿಮಿಯು ಸುಮಾರು ಒಂದಡಿ ಬೆಳೆದು ಗೋರ್ಡಿಯನ್ ಕ್ನೋಟ್ (Gordian knot) ನ ಹಾಗೆ ಉದ್ದನೆಯ ದೇಹವನ್ನು ಗಂಟು ಸುತ್ತಿಕೊಂಡು ತನ್ನ ದೇಹದ ಮೇಲ್ಮೈಯಿಂದಲೇ ತನಗೆ ಬೇಕಾದ ಆಹಾರವೆಲ್ಲವನ್ನೂ ಚಿಮ್ಮಂಡೆಯ ದೇಹದಿಂದ ಹೀರಿಕೊಳ್ಳುತ್ತ ಚೆನ್ನಾಗಿ ತಿಂದುಂಡು ಬೆಳೆಯುತ್ತದೆ. ಎಷ್ಟೇ ಉಂಡರೂ ಉದ್ದವಾಗಿ ಬೆಳೆಯುತ್ತವೆಯೇ ಹೊರತು ಬೊಜ್ಜು ಬೆಳೆಸಿ ದಪ್ಪ ಆಗುವುದಿಲ್ಲ. ಕೆಲವೊಮ್ಮೆ ಇವು ಆರು ಮುಕ್ಕಾಲು ಅಡಿಗಳವರೆಗೂ ಬೆಳೆಯಬಲ್ಲವು.

ಚಿಮ್ಮಂಡೆಗಳು ಚಿರ್‌ ಚಿರ್‌ ಎಂದು ಸದ್ದು ಮಾಡುವುದು ಸಹಜ. ಕೆಲವೊಮ್ಮೆ ಈ ಸದ್ದಿನಿಂದಲೇ ಇವುಗಳನ್ನು ಗುರುತಿಸಿ ಕಪ್ಪೆ, ಓತಿ, ಹಲ್ಲಿ, ಪಕ್ಷಿಗಳು ಇವನ್ನು ಹಿಡಿದು ಕೊಂದು ತಿನ್ನುತ್ತವೆ. ಚಿಮ್ಮಂಡೆ ಸತ್ತರೆ ಅದರಳೊಗೆ ಬೆಚ್ಚಗೆ ಅವಿತಿರುವ ತಾನೂ ಸತ್ತಂತೆ ಎಂದು ಅರಿತಿರುವ ಕುದುರೆ ಜೂಲಿನ ಹುಳು ತನ್ನ ಮೋಡಿ ವಿದ್ಯೆಯ ಮೊದಲ ಪ್ರಯೋಗ ಆರಂಭಿಸುವುದೇ ಈ ಹಂತದಲ್ಲಿ. ಚಿಮ್ಮಂಡೆ ಶಬ್ದ ಮಾಡಿದರೆ ತಾನೇ ಭಕ್ಷಕ ಪ್ರಾಣಿಗಳಿಗೆ ಪತ್ತೆಯಾಗುವುದು? ಚಿಮ್ಮಂಡೆಯ ಮೆದುಳನ್ನು ತನ್ನ ವಶಕ್ಕೆ ಪಡೆದು ಅದು ಸದ್ದೇ ಮಾಡದಿರುವಂತೆ ನೋಡಿಕೊಳ್ಳುತ್ತದೆ ಮೋಡಿ ವಿದ್ಯೆಯ ಮಹಾನ್‌ ಚತುರ ಈ ಕುದುರೆ ಜೂಲಿನ ಹುಳು.

ಯೌವ್ವನಕ್ಕೆ ಬಂದಾಗ ಈ ಕ್ರಿಮಿಗೆ ತಾನು ಸಂಸಾರಸ್ಥನಾಗಲು ಮತ್ತೆ ನೀರು ತಲುಪಬೇಕು ಎಂದು ಜ್ಞಾನೋದಯವಾಗುತ್ತದೆ. ಆದರೆ ಈ ಕ್ರಿಮಿಗೆ ತನ್ನ ದೇಹವನ್ನೇ ಅರಮನೆ ಮಾಡಿ ಆಶ್ರಯ ಕೊಟ್ಟಿರುವ ಚಿಮ್ಮಂಡೆಗಳಿಗೂ ನೀರಿಗೂ ಆಗಿ ಬರುವುದಿಲ್ಲ. ಚಿಮ್ಮಂಡೆಗಳನ್ನು ಕೈಯಲ್ಲಿ ಹಿಡಿದು ಬಲವಂತವಾಗಿ ನೀರಿಗೆಸೆದರೂ ಕಾಲು ನೀರಿಗೆ ಸೋಕಿದೊಡನೆ ಚಂಗನೆ ಹಾರಿಬಿಡುತ್ತವೆ. ಈಗ ಆ ಕ್ರಿಮಿಯ ಚಾಣಾಕ್ಷತೆ ಮತ್ತೊಮ್ಮೆ ಹೊರಗೆ ಬರುತ್ತದೆ. ಈ ಹಂತದಲ್ಲಿ ಕ್ರಿಮಿಯು ಚಿಮ್ಮಂಡೆಯ ಮಿದುಳಿನ ಸಂವೇದನಾಶಕ್ತಿಯನ್ನು ತಲೆಕೆಳಗು ಮಾಡುವಂತಹ ನರಪ್ರೇಕ್ಷಕ ರಸಾಯನಿಕವನ್ನು (Neuritransmitter) ಸ್ರವಿಸುತ್ತದೆ. ಈ ಸ್ರವಿಕೆಯು ಹುಳುವಿನ ಮಿದುಳಿಗೆ ತಲುಪಿ ಅದನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತದೆ. ಈ ಪ್ರಚೋದನೆಯಿಂದ ಚಿಮ್ಮಂಡೆಯು ಪ್ರಾಣತ್ಯಾಗ ಮಾಡಲು ನೀರಿಗೆ ಹಾರುತ್ತದೆ. ಅಷ್ಟೇ ಅಲ್ಲದೆ, ನೀರಿಗೆ ಬಿದ್ದ ಮೇಲೂ ಸಹ ತಾನೊಬ್ಬ ನುರಿತ ಈಜುಪಟು ಎಂಬ ಭ್ರಮೆಗೆ ಒಳಗಾಗಿ ತನ್ನ ಕೈಕಾಲು ಆಡಿಸುತ್ತ ನೀರಿನ ಆಳಕ್ಕೆ ಮುಳುಗುತ್ತದೆ. ಈ ಅವಕಾಶವನ್ನು ಸೃಷ್ಟಿಸಿಕೊಂಡ ಕ್ರಿಮಿ ಹುಳುವಿನ ಮೈಯಲ್ಲಿ ತೂತು ಕೊರೆದು ನೀರಿಗೆ ತಲುಪುತ್ತದೆ. ತನ್ನ ಸಂಗಾತಿಯನ್ನು ತಲುಪುವ ಏಕೈಕ ಕಾರಣಕ್ಕೆ ತನ್ನನ್ನು ಅನ್ನ ಹಾಕಿ, ಸೂರು ನೀಡಿ ಸಲಹಿದ ಅಮಾಯಕ ಹುಳುವೊಂದನ್ನು ಬಲಿಕೊಟ್ಟು “ಉಂಡ ಮನೆಗೆ ಎರಡು ಬಗೆಯುತ್ತದೆ”. ಆದರೆ ಎಲ್ಲವೂ ಸೃಷ್ಟಿಯ ನಿಯಮ. ಇಲ್ಲಿ ತಪ್ಪು ಸರಿಗಳ ಲೆಕ್ಕಾಚಾರವೇ ನಿರರ್ಥಕ.

ಇದೇ ರೀತಿಯಲ್ಲಿ ನೀರು ತಲುಪಿದ ಹೆಣ್ಣೊಂದರೊಡನೆ ಮಿಲನದಲ್ಲಿ ಪಾಲ್ಗೊಳ್ಳುವ ಗಂಡು ತನ್ನೆಲ್ಲಾ ವೀರ್ಯಾಣುಗಳನ್ನು ಸ್ರವಿಸಿ ತಾನು ಭೂಮಿ ಮೇಲೆ ಬಂದ ಏಕಮಾತ್ರ ಉದ್ದೇಶವನ್ನು ಪೂರ್ಣಗೊಳಿಸಿ ಕೂಡಲೇ ಪ್ರಾಣ ಬಿಡುತ್ತದೆ. ಹೆಣ್ಣು ಸುಮಾರು ಒಂದೂವರೆ ಕೋಟಿ ಚಿಕ್ಕ ಚಿಕ್ಕ ಮೊಟ್ಟೆಗಳನ್ನು ನೀರಿನಲ್ಲಿ ತೇಲುವ ಕಡ್ಡಿಯ ಕೆಳಭಾಗಕ್ಕೋ ಅಥವಾ ಕಲ್ಲಿಗೋ ಅಂಟಿಸಿಬಿಡುತ್ತದೆ. ಆ ಒಂದೂವರೆ ಕೋಟಿಯಷ್ಟು ಮರಿಗಳು ಹೊರಬಂದು ಅವುಗಳ ಲಾಲನೆ ಪಾಲನೆ, ಹಾರ್ಲಿಕ್ಸು-ಬೂಸ್ಟು, ಸ್ಕೂಲು-ಫೀಸು, ಮದುವೆ-ಮುಂಜಿಯ ಸಹವಾಸವೇ ಬೇಡವೆಂದು ಅವು ಹೊರಬರುವ ಮುನ್ನವೇ ಹೆಣ್ಣು ಕೂಡ ಅಸುನೀಗಿ ನೀರೊಳಗೆ ದೊಡ್ಡ ಅನಾಥಾಶ್ರಮವನ್ನೇ ಸೃಷ್ಟಿಸಿ ಬಿಡುತ್ತದೆ. ಹದಿನೈದು ದಿನಗಳ ನಂತರ ಹೊರಬರುವ ಮರಿಗಳ ಪೈಕಿ ಬೆರಳೆಣಿಕೆಯಷ್ಟು ಮಾತ್ರ ಜೀವನ ಚಕ್ರವನ್ನು ಮುಂದುವರಿಸಬಲ್ಲವು.

ಕಂಡೋರ ಮದುವೇಲಿ ಉಂಡೋನೆ ಜಾಣ ಎಂಬ ಗಾದೆಯಂತೆ ಪರಾವಲಂಬಿಯಾಗಿ ಬದುಕಿ ಬೇರೆಯವರ ಬೆವರ ಫಲವನ್ನು ಉಂಡು ಬಾಳುವುದು ಈ Gordian Worm ನ ಸೌಭಾಗ್ಯವಾದರೆ, ತನ್ನದೇ ಆದ ಯಾವುದೇ ಕಾರಣವಿಲ್ಲದಿದ್ದರೂ ಆತ್ಮಹತ್ಯೆ ಮಾಡಿಕೊಳ್ಳಬೇಕಾದ್ದು ಚಿಮ್ಮಂಡೆಯಂತಹ ಕೀಟದ ದೌರ್ಭಾಗ್ಯ.

ಲೇಖನ: ಶ್ರೀಕಾಂತ್ ಎ ವಿ
                     ಶಿವಮೊಗ್ಗ ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.