ಸಮುದಾಯ ರಕ್ಷಿತ ‘ವಡೇನ ಕೆರೆ’
© WCG
ಕಾಳೇಶ್ವರಿ ಗ್ರಾಮ ಬೆಂಗಳೂರಿಗೆ ಹೊಂದಿಕೊಂಡಂತೆಯೇ ಇರುವ ಒಂದು ಪುಟ್ಟ ಹಳ್ಳಿ. 15 ಮನೆಗಳಿರುವ ಈ ಗ್ರಾಮವು ಬನ್ನೇರುಘಟ್ಟ-ಆನೇಕಲ್ ಹೆದ್ದಾರಿಯ ಅನತಿದೂರದಲ್ಲಿ ಇದ್ದರೂ ಸಹ ಹಳ್ಳಿಯ ಸೊಗಡನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದೆ. ಈ ಹಳ್ಳಿಯ ಮತ್ತೊಂದು ಬದಿಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇದಕ್ಕೆ ಕಾರಣವಿರಬಹುದು ಎಂದರೆ ಬಹುಶಃ ತಪ್ಪಾಗಲಾರದು. ಇಲ್ಲಿನ ಜನರು ಈಗಲೂ ಹಸು, ಕುರಿ, ಎಮ್ಮೆಗಳ ಸಾಕಾಣಿಕೆಯಲ್ಲಿ ಸಕ್ರಿಯವಾಗಿದ್ದು, ಅವುಗಳನ್ನು ಮೇಯಿಸಲು ಸುತ್ತಲಿನ ಗೋಮಾಳಗಳ ಮೇಲೆ ಅವಲಂಬಿತರಾಗಿದ್ದಾರೆ.
ಈ ಹಳ್ಳಿಗೆ ಸೇರಿರುವ 5 ಎಕರೆಯ ಒಂದು ಸಣ್ಣ ಕೆರೆಯು ಈ ಎಲ್ಲಾ ಜಾನುವಾರುಗಳಿಗೆ ನೀರಿನ ಸೆಲೆಯಾಗಿದೆ. ಈ ಕೆರೆಯು ಎಂತಹ ಬೇಸಿಗೆಯಲ್ಲಿಯೂ ತನ್ನೊಡಲಲ್ಲಿ ಅಲ್ಪ ನೀರನ್ನಾದರೂ ಇಟ್ಟುಕೊಂಡಿರುತ್ತದೆ. ಆದ ಕಾರಣ ಈ ಹಳ್ಳಿಯ ಜಾನುವಾರುಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ಜಾನುವಾರುಗಳಿಗೂ ನೀರಿನ ಮೂಲವಾಗಿದೆ. ಈ ಹಳ್ಳಿಯ ಹಿರಿಯರ ಮಾತಿನ ಪ್ರಕಾರ ಹಿಂದೆ ಒಮ್ಮೆ ಮೈಸೂರು ಮಹಾರಾಜರು ಇಲ್ಲಿಗೆ ಭೇಟಿ ನೀಡಿದ್ದಾಗ ನೀರಿನ ಅಭಾವವನ್ನು ಕಂಡು ಈ ಜಾಗದಲ್ಲಿ ಕೆರೆ ನಿರ್ಮಿಸಲು ಆಜ್ಞಾಪಿಸಿದರಂತೆ. ಇದರ ನೆನಪಿನಲ್ಲಿಯೇ ಈ ಕೆರೆಯನ್ನು ‘ಒಡೆಯನ ಕೆರೆ’ ಎಂದು ಕರೆಯಲು ಶುರುಮಾಡಿದರಂತೆ. ಬಾಯಿಂದ ಬಾಯಿಗೆ ಬರುತ್ತ ಅದು ಇಂದು ‘ವಡೇನ ಕೆರೆ’ ಯಾಗಿದೆ.

ಈ ವಡೇನ ಕೆರೆ ನೀರು ಬರಿ ಜಾನುವಾರುಗಳಿಗೆ ಮಾತ್ರ ಉಪಯೋಗಕಾರಿಯಾಗಿರದೆ ಹಲವಾರು ವಿಭಿನ್ನ ಕಾರ್ಯಗಳಾದ ಭತ್ತ ಬೆಳೆಯುವುದು, ಊರಿನ ಜನರ ಸ್ನಾನಕ್ಕೆ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಕೆಲವೊಮ್ಮೆ ಕುಡಿಯಲೂ ಸಹ ಬಳಕೆಯಾಗುತ್ತಿತ್ತು. ಈ ಕೆರೆಯಿಂದ ಕೇವಲ 300 ಮೀಟರ್ ದೂರದಲ್ಲಿಯೇ ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನ ಇರುವ ಕಾರಣ ಕಾಡಿನ ವನ್ಯಪ್ರಾಣಿಗಳೂ ಸಹ ಬೇಸಿಗೆಯಲ್ಲಿ ಇಲ್ಲಿ ನೀರು ಕುಡಿಯಲು ಬರುತ್ತಿದ್ದವು.
ಈ ರೀತಿ ಎಷ್ಟೊಂದು ಜೀವಿಗಳನ್ನು ಸಾಕಿ ಸಲಹುತ್ತಿದ್ದ ಕೆರೆಗೂ ಆಧುನಿಕತೆಯ ಬಿಸಿ ತಟ್ಟಿತು. ಸುತ್ತಲೂ ಇದ್ದ ಹೊಲ-ಗದ್ದೆಗಳನ್ನು ರೈತರು ಪುಡಿಗಾಸಿಗೆ ಬೆಂಗಳೂರಿನವರಿಗೆ ಮಾರಿದರು. ಕೊಂಡು ಕೊಂಡ ವ್ಯಕ್ತಿಯು ಬಂಡವಾಳವನ್ಹೂಡಿ ಸುಮ್ಮನೆ ಕೂರುತ್ತಾನೆಯೇ? ಬೆಂಗಳೂರಿನ ಪಕ್ಕದಲ್ಲಿರುವ ಕಾರಣ, ಕೃಷಿ ಭೂಮಿಯನ್ನು ಸಮಮಾಡಿ ಬಡಾವಣೆ ಮಾಡಲು ರಸ್ತೆಗಳನ್ನು ಮಾಡಿ ಸೈಟ್ ಗಳಾಗಿ ವಿಂಗಡಿಸಿದ. ಬಡಾವಣೆಯ ಯಾವುದೇ ಜಾಗದಲ್ಲಿ ಮಳೆ ಬಿದ್ದರೂ ನೀರು ನೇರವಾಗಿ ಕೆರೆಗೆ ಹರಿಯುವುದನ್ನು ಗಮನಿಸಿದ ಅವನು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಆಗುವ ಕೆಲಸಕ್ಕೆ ಶ್ರಮವೇಕೆ ಎಂದು ಆಲೋಚಿಸಿ ಬಡಾವಣೆಯ ಎಲ್ಲಾ ಚರಂಡಿ ನೀರನ್ನು, ಮನೆಯಿಂದ ಬರುವ ನೀರಿನ ಪೈಪ್ ಗಳನ್ನು ಕೆರೆಗೆ ತಿರುವಿದ. ಕೆರೆಯ ಒಡಲನ್ನು ಜೆಸಿಬಿ, ಹಿಟಾಚಿ ಯಂತಹ ದೊಡ್ಡ ಯಂತ್ರಗಳಿಂದ ಬಗೆದು 5 ಎಕರೆಯ ಕೆರೆಯನ್ನು 3 ಎಕರೆಗೆ ಇಳಿಸಿ, ಸುತ್ತಲೂ ವಾಹನಗಳು ಸರಾಗವಾಗಿ ಓಡಾಡಲು ರಸ್ತೆಗಳನ್ನು ನಿರ್ಮಿಸಿದ. ಹಿಂದೆಂದೂ ಬತ್ತದಿದ್ದ ಕೆರೆ ಅಂದು ನೀರಿಲ್ಲದೆ ಸೊರಗಿತು. ಕಾಡಿನ ವನ್ಯಜೀವಿಗಳು ನೀರನ್ನು ಕುಡಿಯಲು ಕೆರೆಗೆ ಬರುವ ಮಾತಾಗಿರಲಿ, ಊರಿನ ಜಾನುವಾರುಗಳೇ ಬೇಸಿಗೆಯಲ್ಲಿ ನೀರಿಲ್ಲದೆ ಪರದಾಡಿದವು. ಸ್ಥಳೀಯರು ಟ್ಯಾಂಕರ್ ನೀರಿನ ಮೊರೆಹೋದರು. ಎಲ್ಲಿಂದಲೋ ಬಂದವನಿಂದ ನಮಗೆ ಇಷ್ಟು ತೊಂದರೆಯಾಯಿತಲ್ಲ ಎಂದು ಕೊರಗಿದರು, ಸೊರಗಿದರು, ದಾರಿ ಕಾಣದೆ ಬೆಪ್ಪಾದರು.


ಆದರೆ ಕಾಲೇಜುಗಳಲ್ಲಿ ಓದುತ್ತಿದ್ದ ಅದೇ ಗ್ರಾಮದ ಬಿಸಿ ರಕ್ತದ ಯುವಕರು ಅವರ ಊರಿನ ಕೆರೆಯ ಅಳಲನ್ನು ಅರ್ಥಮಾಡಿಕೊಂಡು ಕೂಡಲೇ ಕಾರ್ಯೋನ್ಮುಖರಾಗಲು ಚಿಂತಿಸಿದರು. ಅವರದೇ ಊರಿನ WCG ಎಂಬ ಸಂಘ ಸಂಸ್ಥೆಯು ಅವರ ನೆರವಿಗೆ ನಿಂತಿತು. ಎಲ್ಲರೂ ಸೇರಿ ಗ್ರಾಮ ಪಂಚಾಯಿತಿಗೆ ಪತ್ರ ಬರೆದರು. ಒಂದು ವಾರವಾದರೂ ಬಡಾವಣೆಯವರಿಂದ ಕೆರೆಗೆ ಆಗುತ್ತಿರುವ ಘೋರ ಅನ್ಯಾಯ ನಿಲ್ಲಲಿಲ್ಲ. ಯುವಕರು ಇದು ಕೈಕಟ್ಟಿ ಕೂರುವ ಸಮಯವಲ್ಲ ಎಂದರಿತು ಎಲ್ಲಾ ಅಧಿಕಾರಿಗಳಿಗೂ ಒಂದೊಂದು ಪತ್ರ ತಯಾರಿಸಿದರು. ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಜಿಲ್ಲಾಧಿಕಾರಿಗಳು, ಕೆರೆ ಅಭಿವೃದ್ಧಿ ಪ್ರಾಧಿಕಾರ, ಮುಖ್ಯಮಂತ್ರಿಗಳಿಗೂ ಸಹ. ಆದರೆ ಅವರನ್ನು ಭೇಟಿ ಇತ್ತು ಖುದ್ದಾಗಿ ಅವರಿಗೆ ಪತ್ರ ತಲುಪಿಸದಿದ್ದರೆ ನಮ್ಮ ಕೆರೆಗೆ ಉಳಿಗಾಲವಿಲ್ಲ ಎಂದು ಎಲ್ಲಾ ಕಚೇರಿಗಳಿಗೂ ಅಲೆದರು. ಅಧಿಕಾರಿಗಳನ್ನು ಭೇಟಿ ಮಾಡಲಾಗದೆ ಬೇಸತ್ತು ದಿನಗಟ್ಟಲೆ ಕಾಯ್ದರು. ಆದರೆ ಭೇಟಿ ಮಾಡಿ ಪತ್ರ ಕೊಡುವ ಛಲ ಮಾತ್ರ ಬಿಡಲಿಲ್ಲ ಅಂದುಕೊಂಡಂತೆ ಎಲ್ಲಾ ಅಧಿಕಾರಿಗಳಿಗೂ. ಮುಖ್ಯಮಂತ್ರಿಗಳಿಗೂ ಪತ್ರ ತಲುಪಿಸಿದರು. ವೈಜ್ಞಾನಿಕವಾಗಿ ಬೇಕಾದ ಎಲ್ಲಾ ದಾಖಲೆಗಳನ್ನು ತಯಾರಿಸಿ ಗ್ರಾಮಸ್ಥರಿಂದ ಸಹಿಗಳನ್ನು ಪಡೆದು ನೀಡಿದ್ದ ಪತ್ರವನ್ನು ಗಮನಿಸಿ; ಮುಖ್ಯಮಂತ್ರಿಗಳು ಒಮ್ಮೆ ಇದನ್ನು ಕೂಲಂಕುಷವಾಗಿ ಪರಿಶೀಲಿಸಿ ಎಂದು ತಾಲೂಕಿನ ಅಧಿಕಾರಿಗಳಿಗೆ ಆದೇಶಿಸಿದರು. ಮರುಭೂಮಿಯಲ್ಲಿ ನೀರು ಸಿಕ್ಕಂತಾಯಿತು ನಮ್ಮ ಯುವಕರಿಗೆ. ಈ ವಿಷಯ ತಾಲೂಕಿನ ಕೋರ್ಟ್ ಮೆಟ್ಟಿಲೇರಿತು. ಕೋರ್ಟಿನಲ್ಲಿ ಚರ್ಚೆ ನಡೆದು ಕೆರೆಯನ್ನು ಸರ್ವೇ ಮಾಡಿ ಕೆರೆಯ ಮೂಲ ಜಾಗವನ್ನು ಬಿಟ್ಟುಕೊಡುವಂತೆ ಆಜ್ಞೆಯಾಯಿತು. ಸರ್ವೇ ಬರುವ ಸಮಯಕ್ಕೆ ಕೆರೆಯ ಎರಡು ಬದಿಯಲ್ಲಿ ಬಡಾವಣೆಯ ರಸ್ತೆಗಳು ನಿರ್ಮಾಣಗೊಂಡಿದ್ದವು ಆದರೂ ಬಡಾವಣೆ ಮಾಲೀಕ ವಿಧಿಯಿಲ್ಲದೆ ಕೆರೆಯ ವಿಷಯದಲ್ಲಿ ಸುಮ್ಮನಾದನು. ಆದರೆ ಇಷ್ಟೆಲ್ಲಾ ನಡೆಯುವ ಹೊತ್ತಿಗಾಗಲೇ ಕೆರೆಯ ಚಿತ್ರಣವನ್ನೇ ಬದಲಿಸಿದ್ದನು.

ಇದು ಇಷ್ಟಕ್ಕೆ ನಿಲ್ಲುವುದಲ್ಲ, ಮುಂದೆ ಬರುವ ಸಮಸ್ಯೆ ಎದುರಿಸಲು ತಯಾರಾಗೋಣ ಅದಕ್ಕಾಗಿ ಎಲ್ಲಾ ಸಾರ್ವಜನಿಕರನ್ನು ಒಟ್ಟುಗೂಡಿಸಿ ಒಂದು ಕಾರ್ಯಕ್ರಮವನ್ನು ಮಾಡೋಣವೆಂದು WCG ಸದಸ್ಯರು, ಗ್ರಾಮದ ಯುವಕರು ‘ಈ ಕೆರೆ ನಮ್ಮದು’ ಎಂಬ ಶೀರ್ಷಿಕೆಯಡಿ ಪ್ಲಾಸ್ಟಿಕ್ ಮುಕ್ತ ಕೆರೆ ಅಭಿಯಾನವನ್ನು 2016ರ ಮಾರ್ಚ್ ತಿಂಗಳಲ್ಲಿ ಆಯೋಜಿಸಿದರು. ಭಾಗವಹಿಸಿದ್ದ ಸುಮಾರು 50 ಜನರು ಸೇರಿ ಕೆರೆಯ ಸುತ್ತಲೂ ಹಾಗೂ ಕೆರೆಯಲ್ಲಿದ್ಧ ಪ್ಲಾಸ್ಟಿಕ್, ಬಾಟಲಿಗಳನ್ನು ಆಯ್ದರು. ನಿಬ್ಬೆರಗಾಗುವಂತೆ ಕಸದ ರಾಶಿ ಒಟ್ಟುಗೂಡಿತು. ಎಲ್ಲವನ್ನು ವಿಭಜಿಸಿ ತ್ಯಾಜ್ಯ ವಿಲೇವಾರಿಗೆ ಕಳಿಸಲಾಯಿತು. ಬಡಾವಣೆಯ ಮಾಲೀಕನ ಮಧ್ಯಸ್ಥಿಕೆಯಿಂದ ಹಾಳಾಗಿದ್ದ ಕೆರೆಯನ್ನು ಮತ್ತೆ ಹಿಂದಿನ ರೂಪಕ್ಕೆ ತರುವ ಆಲೋಚನೆ ಕಾಳೇಶ್ವರಿ ಯುವಕರಲ್ಲಿ ಹಾಗೂ WCG ತಂಡದ ಸದಸ್ಯರಲ್ಲಿತ್ತು. ಆದರೆ ಅದಕ್ಕೆ ಬೇಕಾಗಿದ್ದ ಧನಸಹಾಯವಿಲ್ಲದೆ ಸುಮ್ಮನಿದ್ದರು.

ಇದಾದ ಸುಮಾರು 5 ವರ್ಷಗಳ ತರುವಾಯ ಅಂದರೆ 2021ರಲ್ಲಿ ‘ಸ್ನೇಹ ಸಂಪದ’ ಎಂಬ ಮತ್ತೊಂದು ಸಂಘ ಸಂಸ್ಥೆಯು ಕೆರೆಯ ಪುನರ್ ನಿರ್ಮಾಣಕ್ಕೆ ಧನಸಹಾಯ ಮಾಡಲು ಮುಂದಾಯಿತು. ಕೆರೆಯ ಮರುಸ್ಥಾಪನೆಯ ಕನಸು ಅಂದು ನನಸಾಗುವ ಸ್ಥಿತಿ ತಲುಪಿತು. ಇದರ ಕಾರ್ಯವಿಧಾನದ ಬಗ್ಗೆ, ಖರ್ಚು ವೆಚ್ಚಗಳ ಬಗ್ಗೆ ಸವಿವರವಾಗಿ ಮಾಹಿತಿ ಒದಗಿಸುವಂತೆ ಸ್ನೇಹ ಸಂಪದ ತಂಡವು ಕೇಳಿಕೊಂಡಿತು. ಅಂತೆಯೇ ಎಲ್ಲಾ ದಾಖಲೆಗಳನ್ನು ನೀಡಿದ ನಂತರ ಕೆರೆಯ ನಿರ್ವಹಣೆಗೆ ಬೇಕಾದ ಅನುಮತಿಯನ್ನು ಪಂಚಾಯಿತಿಯಲ್ಲಿ ಪಡೆಯಲಾಯಿತು. ಹಿಂದೆ ನಡೆದಿದ್ದ ಸರ್ವೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ WCG ತಂಡ ಮತ್ತೊಮ್ಮೆ ಸರ್ವೆಗೆ ಅರ್ಜಿ ಸಲ್ಲಿಸಲಾಯಿತು. ಸರ್ವೆ ಅಧಿಕಾರಿಗಳು ಬಂದು ಕೆರೆಯ ಗಡಿಗಳನ್ನು ಗುರುತಿಸಿ ಗಡಿಗಳಿಗೆ ಕಲ್ಲು ನೆಟ್ಟು ಹೋದರು. ಆಶ್ಚರ್ಯವೆಂದರೆ ಬಡಾವಣೆಯ ಎರಡು ರಸ್ತೆಗಳು ಕೆರೆಯ ಆವರಣದಲ್ಲಿಯೇ ಇದ್ದದ್ದು. ಆ ದಿನದ ಸಂಜೆಯೇ ಬಡಾವಣೆಯ ಉಸ್ತುವಾರಿಯವನು ಬಂದು WCG ತಂಡದವರೊಡನೆ ಜಗಳವಾಡಿ ಗಡಿ ಕಲ್ಲನ್ನು ಕಿತ್ತೆಸೆದನು. ಇದನ್ನು ಪತ್ರ ಮುಖೇನ ಪಂಚಾಯಿತಿಗೆ ದೂರು ನೀಡಲಾಯಿತು. ಕಡೆಗೆ ಕಂದಾಯ ಅಧಿಕಾರಿ, ಪೋಲೀಸರ ಸಮ್ಮುಖದಲ್ಲಿ ಕೆರೆಯ ಗಡಿಯನ್ನು ಗುರುತಿಸಿ, ಕೆರೆಯ ಆವರಣದಲ್ಲಿದ್ದ ಬಡಾವಣೆಯ ರಸ್ತೆಗಳನ್ನು, ಕಟ್ಟಡಗಳನ್ನು ಕೆಡವಲಾಯಿತು. ಕಾನೂನು ಪ್ರಕಾರ ಕೆರೆಯ ಸಂಪೂರ್ಣ ಜಾಗವನ್ನು ಗುರುತಿಸಿದ ನಂತರ ಮರು ನಿರ್ಮಾಣದ ಕೆಲಸಕ್ಕೆ ಚಾಲನೆ ನೀಡಲಾಯಿತು.


1. ಗಡಿ ಗುರುತಿಸಿ ತಂತಿ ಬೇಲಿ ನಿರ್ಮಾಣ: ಸರ್ವೇ ನಂತರ ಕೆರೆಯ ಎರಡೂ ಬದಿ ತಂತಿ ಬೇಲಿ ನಿರ್ಮಿಸಿ ಬಡಾವಣೆಯವರ ಅತಿಕ್ರಮಣಕ್ಕೆ ಅಂತ್ಯವಾಡಲಾಯಿತು.
2. ಕೆರೆಯ ಕಟ್ಟೆ ಎತ್ತರಿಸುವುದು: ಕೆರೆಯ ಎರಡು ಬದಿ ಬಡಾವಣೆಯ ಮಾಲೀಕನೇ ಜಮೀನನ್ನು ಖರೀದಿಸಿದ್ದ ಕಾರಣ ವಾಹನ ಓಡಾಡಲು ಅನುಕೂಲವಾಗುವಂತೆ ಕೆರೆಯ ಕಟ್ಟೆಯ ಎತ್ತರವನ್ನು 4-5 ಅಡಿ ಇಳಿಸಿ ರಸ್ತೆ ಮಾಡಲಾಗಿತ್ತು. ಆದ್ದರಿಂದ ತುಂಬಿದ ಕೆರೆಯ ನೀರು ಕೋಡಿಯಲ್ಲಿ ಹೋಗದೆ ಕೆರೆಕಟ್ಟೆಯ ಮಧ್ಯದಲ್ಲಿಯೇ ಹರಿದು, ಕೆರೆಕಟ್ಟೆ ಒಡೆದು ಹೋಗುವ ಪರಿಸ್ಥಿತಿ ತಲುಪಿತ್ತು ಆದ್ದರಿಂದ ಕೆರೆಕಟ್ಟೆಯನ್ನು ಐದು ಅಡಿ ಎತ್ತರಗೊಳಿಸಲಾಯಿತು.
3. ಕೋಡಿ ನಿರ್ಮಾಣ: ಕೆರೆಯು ತುಂಬಿದ ನಂತರ ಸರಾಗವಾಗಿ ನೀರು ಹೊರಹೋಗುವಂತೆ ದುರಸ್ತಿಯಲ್ಲಿದ್ದ ಕೋಡಿಯನ್ನು ಸರಿಪಡಿಸಲಾಯಿತು.


4. ಕೆರೆ ಹಬ್ಬ ಆಚರಣೆ: ಪರಿಸರದ ಬಗ್ಗೆ, ಕೆರೆಗಳ ಬಗ್ಗೆ ಸಾರ್ವಜನಿಕರಲ್ಲಿ, ವಿದ್ಯಾರ್ಥಿಗಳಲ್ಲಿ, ಕೆರೆಯ ಸುತ್ತಲೂ ವಾಸವಿರುವ ಜನರಲ್ಲಿ ಜಾಗರೂಕತೆಯನ್ನು ಮೂಡಿಸಬೇಕೆಂಬ ಉದ್ದೇಶದಿಂದ ಪ್ಲಾಸ್ಟಿಕ್ ಮುಕ್ತ ಕೆರೆ ಹಾಗು ಸ್ಥಳೀಯ ಪ್ರಭೇದದ ಸಸಿಗಳನ್ನು ನೆಡುವ ಚಟುವಟಿಕೆಗಳನ್ನು ‘ಕೆರೆ ಹಬ್ಬ’ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ 2021ನೇ ಆಗಸ್ಟ್ ನಲ್ಲಿ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸರಿಸುಮಾರು 200 ಸಾರ್ವಜನಿಕರು ಭಾಗವಹಿಸಿ ಸ್ಥಳೀಯ ಸಸಿಗಳನ್ನು ಕೆರೆಯ ಆವರಣದಲ್ಲಿ ನೆಟ್ಟು ಕೆರೆಯ ಸುತ್ತಲೂ ಇರುವ ಪ್ಲಾಸ್ಟಿಕ್ ಅನ್ನು ಆಯ್ದು ಬೇರ್ಪಡಿಸಿ ತ್ಯಾಜ್ಯ ವಿಲೇವಾರಿಗೆ ಕಳುಹಿಸಲಾಯಿತು.

ಸ್ನೇಹ ಸಂಪದ ತಂಡದ ಸಹಕಾರದೊಂದಿಗೆ ಕೆರೆಯನ್ನು ಮೊದಲಿನ ಸ್ಥಿತಿಗೆ ಮರುಕಳಿಸಲಾಯಿತು. ಸುತ್ತಮುತ್ತಲು ಇರುವ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು, ಸಾರ್ವಜನಿಕರನ್ನು ಈ ಕೆರೆಯ ಅಭಿವೃದ್ಧಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಜೊತೆ ಜೊತೆಗೆ ಅವರಿಗೆ ಕೆರೆಗಳ, ಪರಿಸರದ ಮಹತ್ವವನ್ನು ತಿಳಿಸಬೇಕು ಎಂಬ ಉದ್ದೇಶದಿಂದ ಹಾಗೂ ನೆಟ್ಟಿರುವ ಸಸಿಗಳನ್ನು ಪೋಷಿಸಿ ಅವುಗಳನ್ನು ದೊಡ್ಡ ಮರಗಳನ್ನಾಗಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಪ್ರತಿ ವರ್ಷ ಕೆರೆ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ತಂಡದ ಪ್ರತೀತಿಯಾಯಿತು. ಅದರಂತೆಯೇ ಕೆರೆ ಹಬ್ಬ ಮೂರು ಆವೃತ್ತಿಗಳನ್ನು ಕಂಡಿದ್ದು, ನೂರಾರು ಯುವಕರನ್ನು ತೊಡಗಿಸಿಕೊಂಡಿದೆ ಮತ್ತು ಸುಮಾರು ಸಾವಿರಕ್ಕೂ ಹೆಚ್ಚು ಸಸಿಗಳನ್ನು ಜಾಗರೂಕತೆಯಿಂದ ಪೋಷಿಸಿ ಮರವಾಗಿಸಿದೆ. ಈ ಕೆರೆಯ ಆವರಣದಲ್ಲಿ ನೆಟ್ಟಿರುವ ಎಲ್ಲಾ ಸಸಿಗಳು ಸಹ ಸ್ಥಳೀಯ ಸಸಿಗಳಾಗಿವೆ.

ಕೆರೆಯನ್ನು ಮೊದಲಿನ ಸ್ಥಿತಿಗೆ ತಲುಪಿಸಿದ ನಂತರವೂ ಕೆರೆಯಲ್ಲಿನ ಹೂಳು ಯಥೇಚ್ಛವಾಗಿ ಇರುವುದನ್ನು ಕಂಡ WCG ತಂಡವು ಕೆರೆಯ ಹೂಳೆತ್ತುವ ಕಾರ್ಯಕ್ಕೆ ಹಲವಾರು ಸಂಘ ಸಂಸ್ಥೆಗಳನ್ನು ದಾನಿಗಳನ್ನು ಕೇಳಿತು. 2025ರಲ್ಲಿ ಡೊನೇಟ್ ಕಾರ್ಟ್ ಮತ್ತು ಲುಮೆನ್ ಟೆಕ್ನಾಲಜಿಯವರ ಸಹಯೋಗದೊಂದಿಗೆ ಹೂಳೆತ್ತುವ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಈ ಹೂಳೆತ್ತುವ ಕಾರ್ಯದ ವಿಶೇಷತೆಯೆಂದರೆ ಇಲ್ಲಿರುವ ಜೀವವೈವಿಧ್ಯತೆಯನ್ನು ಹಾಗೆಯೇ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ. ಹೂಳೆತ್ತುವ ಸಮಯದಲ್ಲಿ ಕೆರೆಯ ಪಕ್ಕದಲ್ಲಿಯೇ ಒಂದು ಸಣ್ಣ ಹೊಂಡವನ್ನು ಮಾಡಿ ಕೆರೆಯಲ್ಲಿದ್ದ ಜೀವಿಗಳನ್ನು ಅಲ್ಲಿಗೆ ಬಿಡಲಾಯಿತು. ಹೂಳೆತ್ತಿದ ನಂತರ ಮತ್ತೆ ಆ ಜೀವಿಗಳನ್ನು ಕೆರೆಗೆ ಪರಿಚಯಿಸಲಾಯಿತು. ಹೂಳೆತ್ತಿದ ಎರಡೇ ತಿಂಗಳಲ್ಲಿ ಹೂಳೆತ್ತುವ ಮುಂಚೆ ಕೆರೆಯಲ್ಲಿದ್ದ ಮೊಸಳೆ ವಾಪಸ್ಸಾಗಿ ಇಲ್ಲಿಯೇ ನೆಲೆಸಿದೆ ಎಂದರೆ ಜೀವವೈವಿಧ್ಯ ಸಾಕಷ್ಟು ಮರುಕಳಿಸಿದೆ ಎಂದೇ ಹೇಳಬಹುದು. ಮತ್ತೊಂದು ವಿಶೇಷತೆ ಎಂದರೆ ಬೇಸಿಗೆ ಸಮಯದಲ್ಲಿ ಜಾನುವಾರುಗಳಿಗೆ ನೀರಿನ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹೂಳೆತ್ತುವ ಸಮಯದಲ್ಲಿ ಕೆರೆಯ ಒಂದು ಬದಿಯಲ್ಲಾದರೂ ನೀರಿರುವಂತೆ ಜಾಗರೂಕತೆ ವಹಿಸಿದ್ದು.


ಈಗ ಕೆರೆ ಸಂಪೂರ್ಣ ಸುಸ್ಥಿತಿಯಲ್ಲಿದೆ. ಕೆರೆಯಲ್ಲಿನ ನೀರಿನ ಪ್ರಮಾಣ ಹೆಚ್ಚಾಗಿದೆ. 2021ರಿಂದ ಪ್ರತೀ ವರ್ಷ ‘ಕೆರೆ ಹಬ್ಬ’ದಂದು ನೆಟ್ಟ ಸಸಿಗಳು ಮರಗಳಾಗಿ ನೆರಳು ನೀಡುತ್ತಿವೆ. ಜೀವ ವೈವಿಧ್ಯ ಮರುಕಳಿಸುತ್ತಿದೆ. ಎಮ್ಮೆ, ಹಸು, ಕುರಿಗಳು ಕೆರೆಯಲ್ಲಿ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿವೆ. ಗ್ರಾಮದ ಜನರು ಸೂರ್ಯಾಸ್ತ ಸಮಯದಲ್ಲಿ ಕೆರೆಯ ಬಳಿ ಮೊಸಳೆ ನೋಡುತ್ತಾ ವಿರಮಿಸಿ ಹೋಗುತ್ತಿದ್ದಾರೆ. ಆದರೆ ಈಗಲೂ ತೊಂದರೆಗಳು ಕಡಿಮೆಯಾಗಿಲ್ಲ ಹಿಂದಿನ ವಾರವಷ್ಟೇ ಪಂಚಾಯ್ತಿಯವರು ಕೆರೆಯನ್ನು ಮೀನು ಸಾಕಾಣಿಕೆಗೆ ಟೆಂಡರ್ ಕರೆದು ಕೆರೆಯನ್ನು ಯಾರಿಗೋ ಗುತ್ತಿಗೆ ನೀಡಲಾಗಿತ್ತು ಮೇಲಧಿಕಾರಿಗಳ ಸಹಕಾರದಿಂದ ಅದನ್ನು ನಿಲ್ಲಿಸಲಾಯಿತು. ಮೊಸಳೆಯಿಂದ ತೊಂದರೆಯಾಗುತ್ತಿದೆ ಎಂದು ಬಡಾವಣೆಯವರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಮೊಸಳೆಯನ್ನು ಹಿಡಿಯಲು ಬಂದ ಇಲಾಖೆಯವರನ್ನು ತಡೆದು ಇದು ಸುಳ್ಳು ಸುದ್ದಿ ಮೊಸಳೆಯಿಂದ ನಮಗೆ ಯಾವುದೇ ತೊಂದರೆಯಾಗಿಲ್ಲ ಸುಖಾಸುಮ್ಮನೆ ಬಡಾವಣೆಯವರು ದೂರು ನೀಡಿದ್ದಾರೆ. ಗ್ರಾಮಸ್ಥರು ಜಾನುವಾರಿನ ವಾರಸುದಾದರೂ ಸಹ ಯಾವುದೇ ತೊಂದರೆ ಅನುಭವಿಸದೇ ಆರಾಮಾಗಿ ಇದ್ದಾರೆ ಎಂದು ಅವರಿಗೆ ಮನವರಿಕೆ ಮಾಡಿಸಿ ಮೊಸಳೆ ಕೆರೆಯಲ್ಲಿಯೇ ಸ್ವತಂತ್ರವಾಗಿ ಬದುಕಲು ಅನುವುಮಾಡಿಕೊಡಲಾಗಿದೆ. ಮುಂದೆ ಯಾವ ಸಮಸ್ಯೆ ಬರುವುದೋ ತಿಳಿಯದು ಆದರೆ ನಮ್ಮ ಈ ಯೋಜನೆಯ ಹೆಸರಿನಂತೆ ‘ಈ ಕೆರೆ ನಮ್ಮದು’ ಎಂದು ಎಲ್ಲಾ ಗ್ರಾಮಸ್ಥರು, WCG ತಂಡದವರು ಜೊತೆಯಾಗಿ ಕೆರೆಯ ಏಳ್ಗೆಗೆ ಊರಿನ ಒಳಿತಿಗೆ ಒಟ್ಟಾಗಿ ನಿಂತಿರುವುದಂತೂ ಸತ್ಯ.
ಇದು ಕೇವಲ ಒಂದು ಸಂಘ ಸಂಸ್ಥೆಯ, ಧನ ಸಹಾಯ ಮಾಡಿದ ದಾನಿಗಳ ಗೆಲುವಲ್ಲ. ಇದು ಊರಿನ ಯುವಕರ ಗೆಲವು. ಊರಿನ ಪ್ರತಿಯೊಬ್ಬ ವ್ಯಕ್ತಿಯ ಗೆಲುವು. ಸಮುದಾಯದವರು ಮನಸ್ಸು ಮಾಡಿದರೆ ನಮ್ಮ ಸ್ವತ್ತನ್ನು ಎಷ್ಟೇ ಸಂಕಷ್ಟಗಳು ಎದುರಾದರೂ ಒಳಿತಾಗುವ ರೀತಿಯಲ್ಲಿ ನಾವು ಉಳಿಸಿಕೊಳ್ಳಬಹುದು ಎಂಬುದಕ್ಕೆ ಈ ನಮ್ಮ ವಡೇನ ಕೆರೆಯ ಪುನರುತ್ಥಾನದ ಕಥೆಯೇ ಸಾಕ್ಷಿ. ಪ್ರತಿ ಗ್ರಾಮಸ್ಥರು, ಅವರಿಗೆ ಸೇರಿರುವ ಸಾರ್ವಜನಿಕ ಆಸ್ತಿಗಳನ್ನು (ಕಾಮನ್ಸ್ ಗಳನ್ನು) ಕಾಳೇಶ್ವರಿ ಯುವಕರಂತೆ ನಮ್ಮ ಆಸ್ತಿ ಎಂದು ಪರಿಗಣಿಸಿ ಕಾಪಾಡಿಕೊಂಡರೆ ಎಷ್ಟೋ ಅತಿಕ್ರಮಗಳು, ಪರಿಸರಕ್ಕೆ ತೊಂದರೆಯಾಗುವ ದುಷ್ಕೃತ್ಯಗಳು ಕಡಿಮೆಯಾಗುತ್ತವೆ. ‘ಈ ಕೆರೆ ನಮ್ಮದು’ ಎಂದು ಶುರು ಮಾಡಿರುವ WCG ಯೋಜನೆಗೆ ಯಾವ ಕೆರೆಯನ್ನಾದರೂ (ಕರ್ನಾಟಕದ ಯಾವ ಮೂಲೆಯಲ್ಲಿದ್ದರೂ ಸರಿಯೆ) ಸೇರಿಸಿಕೊಂಡು ಸಾರ್ವಜನಿಕರಿಗೆ, ಸಕಲ ಜೀವಚರಗಳಿಗೆ ಉಪಯುಕ್ತವಾದಂತಹ ಕಾರ್ಯವನ್ನು ಮಾಡಲು ಸಿದ್ಧವಿದೆ. ಆಸಕ್ತರು ವಿವರಗಳನ್ನು WCG ಗೆ ಒಂದು ಇಮೇಲ್ ಕಳುಹಿಸಿದರೆ ಸಾಕು. WCG ಯ ಇಮೇಲ್ ವಿಳಾಸ: wcg.bnp@gmail.com.
ಈ ಯೋಜನೆಯು ಯಶಸ್ವಿಯಾಗಲು ಹಲವಾರು ಜನ ಸಹಕರಿಸಿದ್ದಾರೆ ಈ ಯಶಸ್ಸು ಎಲ್ಲರಿಗೂ ಸೇರಿದ್ದು. ಇದೆ ರೀತಿ ಭೂತಾಯಿಯ ಸೇವೆಗೆ ಎಲ್ಲರೂ ಕೈ ಜೋಡಿಸಿ ಮುನ್ನಡೆಯೋಣ.

ಲೇಖನ: ನಾಗೇಶ್ ಒ. ಎಸ್.
ಬೆಂಗಳೂರು ಜಿಲ್ಲೆ
