ಚಮಚ ಆಕಾರದ ಕೊಕ್ಕಿನ ವಿಶಿಷ್ಟ ಹಕ್ಕಿ

ಚಮಚ ಆಕಾರದ ಕೊಕ್ಕಿನ ವಿಶಿಷ್ಟ ಹಕ್ಕಿ

    © ಡಾ. ಎಸ್. ಶಿಶುಪಾಲ

ಪಕ್ಷಿ ವೈವಿಧ್ಯದಲ್ಲಿ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಗಾತ್ರ, ಬಣ್ಣ, ಆಕಾರ, ಆವಾಸ, ಆಹಾರ, ಹಾರುವ ರೀತಿ, ಕೂಗು, ಗೂಡು ಕಟ್ಟುವ ಬಗೆ ಮುಂತಾದವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಂತೆಯೇ ಈ ಗುಣಗಳು ಅವುಗಳ ಅನುವಂಶಿಕತೆಯನ್ನು ಆಧಾರಿಸಿರುವುದಲ್ಲದೆ ಅವುಗಳ ವಿಕಾಸಕ್ಕೂ ಪರಿಗಣಿಸಲ್ಪಡುತ್ತವೆ. ಹಕ್ಕಿಗಳ ಕೊಕ್ಕು ಪ್ರಮುಖವಾದ ಅಂಗ. ಅದರ ಆಕಾರ ಮತ್ತು ಗಾತ್ರವು ಆ ಹಕ್ಕಿಯು ತಿನ್ನುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ವಿಕಾಸದ ಕಾಲಮಾನದಲ್ಲಿ ಪ್ರತಿಯೊಂದು ಜೀವಿಯೂ ಬದುಕಲು ಅವಶ್ಯಕವಾದ ಗುಣಗಳನ್ನು ಬೆಳೆಸಿಕೊಳ್ಳುವುದು ವಿಶೇಷವೇ ಸರಿ. ಅಂದಹಾಗೆ ಹಕ್ಕಿಗಳ ಸಿಕೊನೈಫಾರ್ಮೆಸ್ (Ciconiiformes) ಗಣಕ್ಕೆ ಸೇರಿದ ಚಮಚದ ಕೊಕ್ಕು ಒಂದು ವಿಶಿಷ್ಟ ಪ್ರಭೇದದ ಹಕ್ಕಿ. ಇದು ತ್ರೆಸ್ಕಿಯೋರ್ನಿತಿಡೆ (Threskiornithidae) ಕುಟುಂಬದ ಸದಸ್ಯನಾಗಿ ಆಂಗ್ಲ ಭಾಷೆಯಲ್ಲಿ ಸಾಮಾನ್ಯವಾಗಿ ಯುರೇಶಿಯನ್ ಸ್ಪೂನ್‌ಬಿಲ್ (Eurasian spoonbill) ಎಂದು ಮತ್ತು ವೈಜ್ಞಾನಿಕವಾಗಿ ಪ್ಲಾಟೆಲಿಯಾ ಲ್ಯೂಕಾರ್ಡಿಯ (Platalea leucorodia) ಎಂದೂ ಕರೆಯಲ್ಪಡುವುದು.

ಪ್ರಮುಖ ಗುಣಲಕ್ಷಣಗಳು: ಗಾತ್ರದಲ್ಲಿ ಸಾಕು ಬಾತುಕೋಳಿಗಿಂತ ದೊಡ್ಡದು (90 ಸೆಂ. ಮೀ.). ಉದ್ದ ಕುತ್ತಿಗೆಯ, ಉದ್ದ ಕಾಲುಗಳ, ಬಿಳಿ ದೇಹದ ದೊಡ್ಡ ಹಕ್ಕಿಗಳು. ಕಪ್ಪು ಕಾಲುಗಳು. ವಿಶಿಷ್ಟವಾದ, ಚಪ್ಪಟೆ ಕೊಕ್ಕಿನ ತುದಿ ಮಾತ್ರ ಚಮಚದ ಆಕಾರದಲ್ಲಿರುತ್ತದೆ. ವಯಸ್ಕ ಹಕ್ಕಿಯಲ್ಲಿ ಕಪ್ಪು ಕೊಕ್ಕು ಇದ್ದು, ತುದಿಯಲ್ಲಿ ಹಳದಿ ಬಣ್ಣವಿರುತ್ತದೆ. ಕುತ್ತಿಗೆಯ ಭಾಗದಲ್ಲಿ ಮುಂದೆ ಹಳದಿ-ಕಂದು ಬಣ್ಣವಿರುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಹಿಂತಲೆ ಮತ್ತು ಬೆನ್ನ ಮೇಲೆ ಬಿಳಿ ಗರಿಗಳು ಕಾಣಿಸುತ್ತವೆ. ಎದೆಯ ಭಾಗವು ಸಹ ಹಳದಿ ಬಣ್ಣಕ್ಕೆ ತಿರುಗುತ್ತದೆ. ಗಂಡು ಹೆಣ್ಣುಗಳಲ್ಲಿ ಕಾಣುವಂತಹ ವ್ಯತ್ಯಾಸಗಳಿಲ್ಲ. ವಯಸ್ಕವಲ್ಲದ ಹಕ್ಕಿಗಳಲ್ಲಿ ಗುಲಾಬಿ ಕೊಕ್ಕಿದ್ದು, ಹಾರುವಾಗ ಮುಂದಿನ ರೆಕ್ಕೆಯ ಗರಿಗಳ ತುದಿ ಕಪ್ಪಾಗಿರುತ್ತದೆ. ಒಂಟಿಯಾಗಿ ಅಥವಾ ಗುಂಪಿನಲ್ಲಿ ಜೀವನ.

ಆವಾಸ: ಕೆರೆ, ಸರೋವರ, ನದಿ ತೀರದ ಮರಳು ದಿಬ್ಬ, ಜೌಗು ಪ್ರದೇಶ, ಭತ್ತದ ಗದ್ದೆಗಳು ಮತ್ತು ಅಳಿವೆ ತೀರಗಳಲ್ಲಿ ಕಾಣಸಿಗುವುದು. ಭಾರತವಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಯನ್ಮಾರ್ ದೇಶಗಳಲ್ಲಿಯೂ ವಾಸಿಸುತ್ತವೆ.

© ಡಾ. ಎಸ್. ಶಿಶುಪಾಲ

ಕೂಗು: ಕರ್ಕಶ ಶಬ್ದ.

ಆಹಾರ: ಕಪ್ಪೆ, ಗೊದಮೊಟ್ಟೆಗಳು, ಜಲಕೀಟಗಳು ಮತ್ತು ಜಲಸಸ್ಯಗಳನ್ನು ತಿನ್ನುತ್ತವೆ.  ಕಾಲು ಮುಳುಗುವಷ್ಟು ನೀರಿನಲ್ಲಿ ನಡೆಯುತ್ತಾ, ಕುತ್ತಿಗೆಯನ್ನು ಉದ್ದ ಮಾಡಿ, ಚಮಚದಂತಿರುವ ಕೊಕ್ಕನ್ನು ನೀರಿನಲ್ಲಿ ಮುಳುಗಿಸಿ ಆಚೀಚೆ ಅಲ್ಲಾಡಿಸುತ್ತಾ ಜಲಚರಗಳನ್ನು ಜರಡಿ ಹಿಡಿದು ತಿನ್ನುತ್ತವೆ.

ಸಂತಾನೋತ್ಪತ್ತಿ: ಜುಲೈನಿಂದ ನವೆಂಬರ್‌ವರೆಗೆ. ದಕ್ಷಿಣ ಭಾರತದಲ್ಲಿ ಈ ಸಮಯ ಏರುಪೇರಾಗಬಹುದು.  ಮರಗಳ ಮೇಲೆ ಕಡ್ಡಿಗಳನ್ನು ಇಟ್ಟು ಮಾಡಿದ ಅಟ್ಟಣಿಗೆಯಂತಹ ಗೂಡು. ಕೆಂಪು ಮಚ್ಚೆಗಳಿರುವ ಬಿಳಿಯ ಬಣ್ಣದ ನಾಲ್ಕು ಮೊಟ್ಟೆಗಳನ್ನಿಡುತ್ತವೆ. ಪೋಷಕರಿಬ್ಬರೂ ಮರಿಗಳಿಗೆ ಆಹಾರ ನೀಡುತ್ತವೆ. ಕರ್ನಾಟಕದೆಲ್ಲೆಡೆ ಈ ಪಕ್ಷಿಗಳನ್ನು ಕಾಣಬಹುದು. ರಂಗನತಿಟ್ಟು ಪಕ್ಷಿಧಾಮ ಇವುಗಳನ್ನು ಕಾಣಲು ಪ್ರಶಸ್ತ ಸ್ಥಳವಾಗಿದೆ. ಇವು ಶಿವಮೊಗ್ಗ ಜಿಲ್ಲೆಯಲ್ಲಿರುವ ಗುಡವಿ ಪಕ್ಷಿಧಾಮದಲ್ಲಿಯೂ ಸಂತಾನಾಭಿವೃದ್ಧಿ ಮಾಡುವುದನ್ನು ಕಾಣಬಹುದಾಗಿದೆ.

© ಡಾ. ಎಸ್. ಶಿಶುಪಾಲ

ವಿಶೇಷತೆ: ಕೊಕ್ಕಿನ ಆಕಾರವೇ ಇದರ ವಿಶಿಷ್ಟ ಗುಣ. ಮೇಲ್ನೋಟಕ್ಕೆ ಬಿಳಿ ಕೊಕ್ಕರೆಗಳಂತೆ ಕಂಡರೂ ತನ್ನ ಚಮಚದ ಆಕಾರದ ಕೊಕ್ಕಿನಿಂದ ಗುರುತಿಸಲ್ಪಡುವುದು. ಆಹಾರದ ಲಭ್ಯತೆಗನುಗುಣವಾಗಿ ಸ್ಥಳಿಯವಾಗಿ ವಲಸೆ ಹೋಗಬಲ್ಲವು. ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಸ್ಥೆಯ (IUCN) ಪ್ರಕಾರ ಸದ್ಯಕ್ಕೆ ಇವುಗಳ ಸಂಖ್ಯೆಯಲ್ಲಿ ನಿರ್ದಿಷ್ಟತೆ ಇದೆ. ಅದರೂ ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಆವಾಸ ಸ್ಥಾನಗಳಿಗೆ ಧಕ್ಕೆ, ಕುಸಿಯುತ್ತಿರುವ ಜೌಗು ಪ್ರದೇಶ ಮತ್ತು ಮಾನವನ ಹಸ್ತಕ್ಷೇಪದಿಂದ ಇವುಗಳ ಸಂಖ್ಯೆಯಲ್ಲಿ ಇಳಿಮುಖವಾಗಬಹುದು. ಹಾಗಾಗಿ ನಮ್ಮಲ್ಲಿರುವ ಕೆರೆ-ತೊರೆಗಳ ಸಂರಕ್ಷಣೆಯಿಂದ ಇಂತಹ ವಿಶಿಷ್ಟ ಪ್ರಭೇದಗಳನ್ನು ಉಳಿಸಿಕೊಳ್ಳಬಹುದು.

© ಡಾ. ಎಸ್. ಶಿಶುಪಾಲ

ಲೇಖನ: ಡಾ. ಎಸ್. ಶಿಶುಪಾಲ 
          ದಾವಣಗೆರೆ ಜಿಲ್ಲೆ

Spread the love
error: Content is protected.