ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

  ಹಳದಿ ಹುಬ್ಬಿನ ಪಿಕಳಾರ                                                                                       ©  ಅರವಿಂದ ಕೂಡ್ಲ

ಭಾರತ, ಸಿಲೋನ್, ಬಾಂಗ್ಲಾದೇಶ, ಬರ್ಮಾ ದೇಶಗಳಲ್ಲಿನ ಎಲೆ ಉದುರುವ ಕಾಡು ಮತ್ತು ಕುರುಚಲು ಕಾಡುಗಳಲ್ಲಿ ಕಾಣಸಿಗುವ ಬಿಳಿ ಹುಬ್ಬಿನ ಪಿಕಳಾರ ಹಕ್ಕಿಯು ಪಿಕ್ನೋನೋಟಿಡೇ (Pycnonotidae) ಕುಟುಂಬಕ್ಕೆ ಸೇರುತ್ತದೆ. ಇವುಗಳನ್ನು ವೈಜ್ಞಾನಿಕವಾಗಿ ಅಕ್ರಿಟಿಲ್ಲಸ್ ಇಂಡಿಕಾ (Acritillas indica) ಎಂದು ಕರೆಯಲಾಗುತ್ತದೆ.  ತೆಳು ಹಳದಿ ಮಿಶ್ರಿತ ಹಸುರು ಬಣ್ಣದ, ಮೈನಾ ಗಾತ್ರದ ಈ ಹಕ್ಕಿಯ ತಲೆಯ ಮೇಲೆ ಕಪ್ಪು ಪುಕ್ಕಗಳ ಚಿಕ್ಕ ಚೊಟ್ಟಿ ಇದ್ದು, ಹೊಟ್ಟೆ ಮತ್ತು ಎದೆ ತೆಳು ಹಳದಿ ಬಣ್ಣದಲ್ಲಿರುತ್ತದೆ ಹಾಗೂ ಹುಬ್ಬಿನ ಮೇಲೆ ಬಿಳಿ ಪಟ್ಟೆ ಇರುತ್ತದೆ. ಸಾಮಾನ್ಯವಾಗಿ ಮೌನಿಯಾದ ಹಕ್ಕಿಯಾದರೂ ಗುಂಪಿನಲ್ಲಿದ್ದಾಗ ನಿರಂತರವಾಗಿ ಕೂಗುತ್ತಾ ಸಂಭಾಷಿಸುತ್ತದೆ. ಕಳಿತ ಹಣ್ಣುಗಳು, ಕೀಟಗಳು ಮತ್ತು ಹೂವಿನ ಮಕರಂದ ಇದರ ಆಹಾರವಾಗಿವೆ. ಇವುಗಳು ಪೊದೆಗಳಲ್ಲಿ ನಾರಿನಿಂದ ನೆಯ್ದ ಗೂಡನ್ನು ಮಾಡಿ ಎರಡು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ.

  ಸಣ್ಣ ಕುಟ್ರ                                                                                                                                      ©  ಅರವಿಂದ ಕೂಡ್ಲ

ದಕ್ಷಿಣ ಭಾರತದ ನಿತ್ಯ ಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ ಕಾಡುಗಳು, ತೋಟ ಮತ್ತು ಉದ್ಯಾನವನಗಳಲ್ಲಿ ಕಾಣಸಿಗುವ ಈ ಕುಟ್ರು ಹಕ್ಕಿಯು ಮೆಗಾಲೈಮಿಡೆ (Megalaimidae) ಕುಟುಂಬಕ್ಕೆ ಸೇರುತ್ತದೆ. ಇದರ ವೈಜ್ಞಾನಿಕ ಹೆಸರು ಸೈಲೋಪೋಗಾನ್ ವಿರಿಡಿಸ್ (Psilopogon viridis) ಎಂಬುದಾಗಿದೆ. ತಲೆ ಮತ್ತು ಕತ್ತು ತಿಳಿ ಕಂದು ಬಣ್ಣದ್ದಾಗಿದ್ದು, ಎದೆ ಮೇಲೆ ಬಿಳಿ ಗೆರೆಗಳು ಇರುತ್ತವೆ. ಕೆನ್ನೆ ಹಾಗೂ ಗದ್ದ ಬಿಳಿಯಾಗಿದ್ದು, ಹಸಿರು ರೆಕ್ಕೆ ಹಾಗೂ ಮೋಟು ಬಾಲವಿರುತ್ತದೆ ಮತ್ತು ಕೇಸರಿ ಕೊಕ್ಕಿನ ಸುತ್ತ ಮೀಸೆಯನ್ನು ಹೊಂದಿರುತ್ತದೆ. ಇವುಗಳು ಹಣ್ಣುಗಳನ್ನು ತಮ್ಮ ಆಹಾರವಾಗಿ ಸೇವಿಸಿ, ಬೀಜ ಪ್ರಸರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.   ಸಾಮಾನ್ಯವಾಗಿ ಹಳೆಯ ಮರದ ಕೊಂಬೆಗಳಲ್ಲಿ ಸುಮಾರು 20 ದಿನಗಳವರೆಗೆ ರಂಧ್ರಗಳನ್ನು ಕೊರೆದು ಗೂಡನ್ನು ಮಾಡಿ ಮೂರು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ.

ಸಣ್ಣ ಕಳ್ಳಿಪೀರ                                                                               ©  ಅರವಿಂದ ಕೂಡ್ಲ

ಏಷ್ಯಾ ಖಂಡದ ವಿವಿಧ ಪ್ರದೇಶಗಳಲ್ಲಿನ ಶುಷ್ಕ ಮತ್ತು ಅರೆ-ಶುಷ್ಕ ಆವಾಸಸ್ಥಾನಗಳು, ತೆರೆದ ಕಾಡುಗಳು, ಕೃಷಿಭೂಮಿಗಳು ಮತ್ತು ಮರಳಿನ ದಂಡೆಗಳಲ್ಲಿ ಕಾಣಸಿಗುವ ಸಣ್ಣ ಕಳ್ಳಿಪೀರ ಹಕ್ಕಿಯು ಮೆರೋಪಿಡೆ (Meropidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಮೆರೋಪ್ಸ್ ಓರಿಯೆಂಟಲಿಸ್ (Merops orientalis) ಎಂದು ಕರೆಯಲಾಗುತ್ತದೆ. ದೇಹವು ಹಸಿರು ಬಣ್ಣದಲ್ಲಿದ್ದು, ಕಣ್ಣು ಮತ್ತು ನೀಲಿ ಬಣ್ಣದ ಗಂಟಲಿನ ಮೇಲೆ ಕಪ್ಪು ಪಟ್ಟಿಯನ್ನು ಹೊಂದಿರುತ್ತದೆ. ತಲೆಯ ಮೇಲ್ಭಾಗ ಮತ್ತು ಕತ್ತಿನ ಹಿಂಭಾಗವು ಕಂದು ಬಣ್ಣವನ್ನು ಹೊಂದಿರುತ್ತವೆ. ಹಾರುವಾಗ ರೆಕ್ಕೆಯ ಕೆಳಗಿನ ಕಪ್ಪು ಅಂಚಿನಿಂದ ಕೂಡಿರುವ ಕಂದು ಬಣ್ಣವು ಪ್ರಧಾನವಾಗಿ ಕಾಣುತ್ತದೆ. ಇವುಗಳು ಜೇನುನೊಣ, ಕಣಜಗಳು ಮತ್ತು ಇರುವೆಗಳಂತಹ ವಿವಿಧ ಕೀಟಗಳನ್ನು ತಿನ್ನುತ್ತವೆ. ಮರಳಿನ ದಂಡೆಯಲ್ಲಿ ಸುರಂಗದಂತಹ ಗೂಡುಗಳನ್ನು ಮಾಡಿ 3-5 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ.

ಕೆಂದಲೆ ಕಳ್ಳಿಪೀರ                                                                                                   ©  ಅರವಿಂದ ಕೂಡ್ಲ

ಭಾರತೀಯ ಉಪಖಂಡ ಮತ್ತು ಅದರ ಸುತ್ತಮುತ್ತಲಿನ ತೆರೆದ ಪ್ರದೇಶಗಳಲ್ಲಿನ ಮರಗಳು, ಕಾಡಿನ ಅಂಚುಗಳು ಮತ್ತು ನದಿ ತೀರ, ರಸ್ತೆಬದಿ ಮತ್ತು ಕೆಲವೊಮ್ಮೆ ತೋಟಗಳಲ್ಲಿ ಕಂಡುಬರುವ ಈ ಕೆಂದಲೆ ಕಳ್ಳಿಪೀರ ಹಕ್ಕಿಯು ಮೆರೋಪಿಡೆ (Meropidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ (Merops leschenaulti) ಎಂದು ಕರೆಯಲಾಗುತ್ತದೆ. ದೇಹವು ಪ್ರಕಾಶಮಾನವಾದ ಹಸಿರು ಬಣ್ಣದಲ್ಲಿದ್ದು, ಕೆಳ ಹೊಟ್ಟೆ ಮತ್ತು ಹಿಂಭಾಗದ ಮೇಲೆ ನೀಲಿ ಬಣ್ಣವನ್ನು ಹೊಂದಿರುತ್ತದೆ. ಹಳದಿ ಬಣ್ಣದ ಮುಖ ಮತ್ತು ಗಂಟಲನ್ನು ಹೊಂದಿದ್ದು, ಕಣ್ಣಿನ ಬಳಿ ಕಪ್ಪು ಬಣ್ಣದ ಪಟ್ಟಿಯಿರುತ್ತದೆ. ತಲೆ ಮತ್ತು ಕುತ್ತಿಗೆಯು ಪ್ರಧಾನವಾಗಿ ಕಾಣುವ ಕೆಂಪು ಮಿಶ್ರಿತ ಕಂದು ಬಣ್ಣದ್ದಾಗಿವೆ. ಇವುಗಳು ಜೇನುನೊಣ, ಕಣಜಗಳು ಮತ್ತು ಇರುವೆಗಳಂತಹ ವಿವಿಧ ಕೀಟಗಳನ್ನು ತಿನ್ನುತ್ತವೆ. ಸಾಮಾನ್ಯವಾಗಿ ಮರಳಿನ ದಂಡೆಯಲ್ಲಿ ಸಣ್ಣ ಸುರಂಗಗಳಂತಹ ಗೂಡುಗಳನ್ನು ಮಾಡಿ 5-6 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ.

ಚಿತ್ರ : ಅರವಿಂದ ಕೂಡ್ಲ
ಲೇಖನ: ದೀಪ್ತಿ ಎನ್.

Spread the love
error: Content is protected.