ಪ್ರಕೃತಿ ಬಿಂಬ

ಹಳದಿ ಚಿಟ್ಟೆ © ಡಾ. ಅಶ್ವಥ ಕೆ. ಎನ್.
ಏಷ್ಯಾ, ಆಸ್ಟ್ರೇಲಿಯಾ ಮತ್ತು ಆಫ್ರಿಕಾ ಖಂಡಗಳ ವಿವಿಧ ಪ್ರದೇಶಗಳ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ಎಲೆ ಉದುರುವ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಈ ಹಳದಿ ಚಿಟ್ಟೆಯು ಪಿಯರಿಡೇ (Pieridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಯುರೆಮಾ ಹೆಕಾಬೆ (Eurema hecabe) ಎಂದು ಕರೆಯಲಾಗುತ್ತದೆ. ಗಾತ್ರದಲ್ಲಿ 40-50 ಮಿ. ಮೀಟರ್ ಇರುವ ಈ ಚಿಟ್ಟೆಯ ರೆಕ್ಕೆಗಳು ಹಳದಿ ಬಣ್ಣವಿದ್ದು, ಮೇಲಿನ ರೆಕ್ಕೆಗಳಲ್ಲಿ ಕಡುಗಂದು ಬಣ್ಣದ ಅಂಚು ಹಾಗೂ ಹಿಂಭಾಗದಲ್ಲಿ ಕಪ್ಪು ಮಚ್ಚೆಗಳನ್ನು ಹೊಂದಿರುತ್ತವೆ. ಪೊದೆಗಳಲ್ಲಿ, ಹೂ-ಗಿಡ ಮತ್ತು ಆಹಾರ ಸಸ್ಯಗಳ ಬಳಿ ನೆಲಕ್ಕೆ ಸಮೀಪವಾಗಿ ಹೆಚ್ಚಾಗಿ ಕಾಣಿಸುತ್ತವೆ ಮತ್ತು ಗುಂಪುಗಳಲ್ಲಿ ತೇವಾಂಶವಿರುವ ಮಣ್ಣಿನ ಮೇಲೆ ಕುಳಿತು ಖನಿಜಗಳನ್ನು ಹೀರಿಕೊಳ್ಳುತ್ತವೆ. ಫ್ಯಾಬೇಸಿ (Fabaceae) ಕುಟುಂಬದ ಅಗಸೆ ಮರ, ಕಕ್ಕೆ ಗಿಡ, ಕೆಂಪು ತುರಾಯಿ ಮರ, ಮೈಮೊಸೇಸಿ (Mimosaceae) ಕುಟುಂಬದ ಮುಟ್ಟಿದರೆ ಮುನಿ ಗಿಡ ಮುಂತಾದವು ಇವುಗಳ ಆತಿಥೇಯ ಸಸ್ಯಗಳಾಗಿವೆ.

ದಕ್ಷಿಣ ಏಷ್ಯಾದ ಕಾಡುಗಳಲ್ಲಿ ಕಂಡುಬರುವ ಈ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ವಿಂದುಲಾ ಡೆಜೋನ್ (Vindula dejone) ಎಂದು ಕರೆಯಲಾಗುತ್ತದೆ. ಗಾತ್ರದಲ್ಲಿ 60-80 ಮಿ. ಮೀಟರ್ ಇರುವ ಗಂಡು ಮತ್ತು ಹೆಣ್ಣು ಚಿಟ್ಟೆಗಳು ವಿಭಿನ್ನ ಬಣ್ಣಗಳಲ್ಲಿರುತ್ತವೆ. ಗಂಡು ಚಿಟ್ಟೆಯು ಕಿತ್ತಳೆ ಮಿಶ್ರಿತ ಕಂದು ಬಣ್ಣದಲ್ಲಿದ್ದರೆ, ಹೆಣ್ಣು ತಿಳಿ ಹಸಿರು ಮಿಶ್ರಿತ ಬೂದು ಬಣ್ಣದಲ್ಲಿರುತ್ತದೆ. ಹಿಂಭಾಗದ ರೆಕ್ಕೆಯ ಮೇಲೆ ಸಣ್ಣ ಬಾಲವನ್ನು ಹೊಂದಿರುತ್ತದೆ. ಗಂಡು ಚಿಟ್ಟೆಗಳು ಸಾಮಾನ್ಯವಾಗಿ ಕೊಳೆಯುವ ಸಾವಯವ ವಸ್ತುಗಳು, ಸತ್ತ ಮಾಂಸ ಮತ್ತು ಮೂತ್ರದಿಂದ ಕೂಡಿದ ಹೊಳೆಗಳ ದಡಗಳಲ್ಲಿ, ಕೆಸರು ಗದ್ದೆಗಳಲ್ಲಿ ಹೆಚ್ಚಾಗಿ ಕಾಣಬಹುದು. ಬಿಸಿಲಿಗೆ ರೆಕ್ಕೆಗಳನ್ನು ತೆರೆದು ಕೂರುತ್ತದೆ. ಪ್ಯಾಸಿಫ್ಲೋರೇಸಿ (Passifloraceae) ಕುಟುಂಬದ ಕಾಡು ತೊಂಡೆ ಬಳ್ಳಿಯು ಇದರ ಆತಿಥೇಯ ಸಸ್ಯವಾಗಿದೆ.

ಆಗ್ನೇಯ ಏಷ್ಯಾ ಮತ್ತು ಉತ್ತರ ಆಸ್ಟ್ರೇಲಿಯಾದ ವಿವಿಧ ಪ್ರದೇಶಗಳಲ್ಲಿನ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಈ ಕಪಿಲ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಅಕ್ರೇಯಾ ಟೆರ್ಪ್ಸಿಕೋರ್ (Acraea terpsicore) ಎಂದು ಕರೆಯಲಾಗುತ್ತದೆ. ಗಾತ್ರದಲ್ಲಿ 50-65 ಮಿ. ಮೀಟರ್ ಇರುವ ಇವುಗಳ ರೆಕ್ಕೆಗಳು ಕಿತ್ತಳೆ ಬಣ್ಣವಿದ್ದು, ಅಲ್ಲಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಕೆಳಗಿನ ರೆಕ್ಕೆಯ ಹಿಂಭಾಗದ ಅಂಚಿನಲ್ಲಿ ಕಪ್ಪು ವರ್ತುಲವಿರುವ ಬಿಳಿ ಮಚ್ಚೆಗಳಿರುತ್ತವೆ. ಹೂಗಳ ಮೇಲೆ ಹೆಚ್ಚಾಗಿ ಕಾಣಸಿಗುವ ಇವುಗಳು ಪರಭಕ್ಷಕರಿಗೆ ವಿಷಕಾರಿಯಾಗಿವೆ. ಪಾಸಿಫ್ಲೋರೇಸಿ (Passifloraceae) ಕುಟುಂಬದ ಜ್ಯೂಸ್ ಹಣ್ಣಿನ (passion fruit) ಪ್ರಭೇದದ ವಿವಿಧ ಸಸ್ಯಗಳು ಇವುಗಳ ಆತಿಥೇಯ ಸಸ್ಯಗಳಾಗಿವೆ.

ಚಿತ್ರ : ಡಾ. ಅಶ್ವಥ ಕೆ. ಎನ್.
ಲೇಖನ: ದೀಪ್ತಿ ಎನ್.