ಪ್ರಕೃತಿ ಬಿಂಬ
ಮಕ್ಮಲ್ ನೆತ್ತಿಯ ಮರಗುಬ್ಬಿ © ವಿನೀತ್ ಕರ್ಥ
ದಕ್ಷಿಣ ಏಷ್ಯಾದ ನೇಪಾಳ, ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ, ದಕ್ಷಿಣ ಚೀನಾ ಮತ್ತು ಇಂಡೋನೇಷ್ಯಾದ ಕಾಡುಗಳಲ್ಲಿ ಕಂಡುಬರುವ ಈ ಪುಟ್ಟ ಹಕ್ಕಿಯು ಸಿಟ್ಟಿಡೇ (Sittidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಸಿಟ್ಟಾ ಫ್ರಂಟಾಲಿಸ್ (Sitta frontalis) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ನೇರಳೆ ಮತ್ತು ನೀಲಿ ಬಣ್ಣದಲ್ಲಿದ್ದು, ಬಿಳಿ ಬಣ್ಣದ ಕತ್ತು, ಹಳದಿ ಕಣ್ಣುಗಳು, ಕೆಂಪು ಕೊಕ್ಕು ಮತ್ತು ತೆಳುವಾದ ಕಂದು ಬಣ್ಣದ ಕೆಳಭಾಗವನ್ನು ಹೊಂದಿರುತ್ತದೆ. ಮರದ ಪೊಟರೆಗಳಲ್ಲಿ ಅಥವಾ ಬಿರುಕುಗಳಲ್ಲಿ ಹುಲ್ಲು, ಪಾಚಿ ಮತ್ತು ಗರಿಗಳಿಂದ ಗೂಡನ್ನು ಕಟ್ಟಿ, ಬಿಳಿಯ ಬಣ್ಣದ ಕೆಂಪು ಚುಕ್ಕೆಗಳಿರುವ 3-6 ಮೊಟ್ಟೆಗಳನ್ನು ಇಡುತ್ತದೆ. ಉತ್ತರ ಭಾರತದಲ್ಲಿ ಸಂತಾನೋತ್ಪತ್ತಿಯು ಬೇಸಿಗೆಯಲ್ಲಿ ನಡೆದರೆ, ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಏಪ್ರಿಲ್ ನಿಂದ ಜೂನ್ ಹಾಗೂ ಜನವರಿಯಿಂದ ಮೇ ವರೆಗೆ ನಡೆಯುತ್ತದೆ. ಹಲವಾರು ಕೀಟಗಳು ಮತ್ತು ಜೇಡಗಳು ಇವುಗಳ ಆಹಾರವಾಗಿವೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಮ್ಯಾನ್ಮಾರ್, ಬಾಂಗ್ಲಾದೇಶ ಪ್ರದೇಶಗಳ ವಿವಿಧ ಜಲಮೂಲಗಳಿರುವೆಡೆ ಕಂಡುಬರುವ ಈ ಹಕ್ಕಿಯು ಪೊಡಿಸಿಪಿಡಿಡೆ (Podicipedidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಟಾಕಿಬ್ಯಾಪ್ಟಸ್ ರುಫಿಕೋಲಿಸ್ (Tachybaptus ruficollis) ಎಂದು ಕರೆಯಲಾಗುತ್ತದೆ. ದೇಹವು ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿದ್ದು, ಮೊನಚಾದ ಕೊಕ್ಕು ಹಾಗೂ ಕಿರಿದಾದ ರೆಕ್ಕೆಗಳನ್ನು ಹೊಂದಿದೆ. ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ ಕೆರೆಗಳ ಜೋಂಡು, ತೇಲುವ ಕಸಕಡ್ಡಿಗಳ ಮೇಲೆ ಗೂಡು ಕಟ್ಟುತ್ತದೆ. ಸಣ್ಣಪುಟ್ಟ ಮೀನು, ಜಲಚರಗಳನ್ನು ತಿನ್ನುತ್ತದೆ. ನೀರಿನಲ್ಲಿ ಮುಳುಗೇಳುವುದು, ಈಜಾಡುವುದು ಇದರ ವಿಶೇಷತೆಯಾಗಿದೆ.
ದಕ್ಷಿಣ ಏಷ್ಯಾದ ವಿವಿಧ ಪ್ರದೇಶಗಳಲ್ಲಿನ ಹರಿಯುವ ನದಿ ಮತ್ತು ಸರೋವರಗಳ ದಡದ ಕಲ್ಲು ಅಥವಾ ಮರಳಿನ ಮೇಲೆ ಕಂಡುಬರುವ ದೊಡ್ಡ ಬಂಡೆಗೊರವ ಹಕ್ಕಿಯು ಬರ್ಹಿನಿಡೆ (Burhinidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಎಸಾಕಸ್ ರಿಕರ್ವಿರೋಸ್ಟ್ರಿಸ್ (Esacus recurvirostris) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು, ಕೆಳಭಾಗವು ಬಿಳಿಯ ಬಣ್ಣದ್ದಾಗಿದೆ. ಮುಖದ ಮೇಲೆ ಕಪ್ಪು ಮತ್ತು ಬಿಳಿ ಬಣ್ಣದ ಪಟ್ಟೆಗಳಿದ್ದು, ಹಳದಿ ತಳದ ಕಪ್ಪು ಕೊಕ್ಕನ್ನು ಹೊಂದಿದೆ. ಪ್ರಕಾಶಮಾನವಾದ ಹಳದಿ ಬಣ್ಣದ ಕಣ್ಣುಗಳು ಮತ್ತು ತೆಳುವಾದ ಹಸಿರು ಮಿಶ್ರಿತ ಹಳದಿ ಬಣ್ಣದ ಕಾಲುಗಳನ್ನು ಹೊಂದಿದೆ. ಹಾರುವಾಗ ಮೇಲಿನ ರೆಕ್ಕೆಗಳಲ್ಲಿನ ಕಪ್ಪು ಮತ್ತು ಬಿಳಿಯ ಬಣ್ಣವು ಸ್ಪಷ್ಟವಾಗಿ ಗೋಚರಿಸುತ್ತದೆ. ಹುಲ್ಲು ಮತ್ತು ಕಲ್ಲುಗಳಿರುವ ತೆರೆದ ಪ್ರದೇಶಗಳಲ್ಲಿ ಕೇವಲ ಒಂದು ಅಥವಾ ಎರಡು ಮೊಟ್ಟೆಗಳನ್ನು ಇಡುತ್ತದೆ. ಏಡಿಗಳು, ದೊಡ್ಡ ಕೀಟಗಳು ಮತ್ತು ಇತರ ಪ್ರಾಣಿಗಳ ಬೇಟೆಗಳು ಇವುಗಳ ಆಹಾರವಾಗಿವೆ.
ಚಿತ್ರ : ವಿನೀತ್ ಕರ್ಥ
ಲೇಖನ: ದೀಪ್ತಿ ಎನ್.