ನಿರೀಕ್ಷೆ

ನಾನೊಂದು ಬೀಜ ರೈತ ಹೊತ್ತು ಬಿತ್ತ ನೆಲದಲಿ;
ಮಣ್ಣಲಿ ಮಣ್ಣಾಗಿ ಮುಳುಗಿದರೂ
ಅವನಾರೋ ಮೇಘರಾಯನ ಸಹವಾಸದಿ
ಟಿಸಿಲೊಡೆದು ಹೊಸ ಬದುಕ ಕಾಣುವಾಸೆ.
ಕಂಡ ಕನಸು ನನಸಾಗಲು ಬೇಕಿದೆ ಪರಿಶ್ರಮ
ಏನಾದರೇನು? ಪೊರೆ ಕಳಚಿ; ಹೊಸ ಜಗವ ನೋಡುವಾಸೆ
ಒಂದೆಲೆ, ಎರಡೆಲೆ, ನಾಲ್ಕೆಲೆಗಳೆಂದು ದ್ವಿಗುಣಿಸಿ
ಗಟ್ಟಿಗೊಳಿಸಿಕೊಳ್ಳುವೆ ನನ್ನಿರುವ.
ಗೆದ್ದು ಬೀಗಬೇಕೆಂಬ ಹಂಬಲವಲ್ಲ
ಗೆದ್ದೇ ಗೆಲ್ಲುವೆನೆಂಬ ನಂಬಿಕೆ ಅಚಲ
ಹರಿತ್ತಿನೊಟ್ಟಿಗೆ ಬೆಸೆದ ಬದುಕ ಪೂರ್ಣ ಜೀವಿಸುವಾಸೆ
ಗಾಳಿ, ಬೆಳಕ, ನೀರನೂಡಿದ ಇಳೆಗೆ ಏನಾದರೂ ನೀಡುವಾಸೆ
ಏನ ನೀಡಲಿ?
ಗಾಳಿಯೂಡುವೆ, ನೆರಳನೀವೆ, ಹೂವನೀವೆ, ಕಾಯನೀವೆ, ಹಣ್ಣನೀವೆ
ಜನ್ಮವಿತ್ತವರಿಗೆ, ಸಹಕಾರವಿತ್ತವರಿಗೆ ಏನಿತ್ತರೂ ಕಡಿಮೆಯೇ?
ಆದರೂ ಕೊಡುವುದರಲ್ಲೇನೋ ಸಾರ್ಥಕವಿದೆ.
ಕೊಟ್ಟು ಪಡೆವ, ಪಡೆದು ಕೊಡುವ ಭಾವವಿದೆ.
ಮತ್ತೆ ಮತ್ತೆ ಬಿತ್ತುವ ಬಿತ್ತವಾಗಿ
ಹೊಸ ಜಗದ ನೇಮದ ಅಸ್ಮಿತೆಯ ಕಾಪಿಟ್ಟುಕೊಳ್ಳುವ ನಿರೀಕ್ಷೆಯಿದೆ.
– ಕಲ್ಪನ ಎಂ.
ತುಮಕೂರು ಜಿಲ್ಲೆ

ತುಮಕೂರಿನ ಚಿಕ್ಕನಾಯಕನಹಳ್ಳಿಯ ಬಸವಾಪಟ್ಟಣ ನನ್ನೂರು. ತಂದೆ ಮೂಡಲಗಿರಿಯಪ್ಪ, ತಾಯಿ ನೇತ್ರಾವತಿ ಜೊತೆಗೆ ನನ್ನ ಬಾಲ್ಯವನ್ನು ಚೆಂದಗಾಣಿಸಿದ ಸಹೋದರಿಯರಿಬ್ಬರು. ಅಕ್ಕ ರೋಹಿಣಿ, ತಂಗಿ ಅನುಪಮ. ಇದಿಷ್ಟು ನನ್ನ ಪರಿವಾರ. ಇತ್ತೀಚೆಗೆ ಅದು ವಿಸ್ತರಿಸಿದೆ.
ಓದಿದ್ದು ಬೆಳೆದದ್ದೆಲ್ಲಾ ಬೆಂಗಳೂರಿನಲ್ಲೇ. ಆದರೂ ನನ್ನ ಮನ ಸೆಳೆದದ್ದು ಮಾತ್ರ ನನ್ನ ಹುಟ್ಟೂರಿಗೆ. ಮಳೆಗಾಲದಲ್ಲಿ ಕೊಡೆ ಹಿಡಿದು ನಡೆಯುವುದು, ಇಷ್ಟದ ಹಾಡನ್ನು ಗುನುಗುನಿಸುವುದು, ಮಕ್ಕಳ ಸೈನ್ಯದ ಜೊತೆಗೆ ತೋಟವನ್ನೆಲ್ಲ ಸುತ್ತಿ ಬಂದು ಅಮ್ಮನ ಕೈಯಲ್ಲಿ ಬೈಗುಳ ಕೇಳುವುದು ನನ್ನಿಷ್ಟದ ಹವ್ಯಾಸಗಳು. ಜೊತೆಗೆ ಒಂದಷ್ಟು ಓದುವ, ಮನಸಿಗೆ ತೋಚಿದ್ದನ್ನ ಗೀಚುವ ಗೀಳೂ ಇದೆ ಅನ್ನಿ. ಆಗಾಗ ಸಣ್ಣ ನಾಟಕ ಬರೆದು ನಿರ್ದೇಶನವನ್ನೂ ಮಾಡಿದ್ದಿದೆ.
ಪ್ರಸ್ತುತ ಶ್ರೀ ಸಾರದಾದೇವಿ ವಿದ್ಯಾಕೇಂದ್ರ ಶಿವನಹಳ್ಳಿ, ಬೆಂಗಳೂರು ಇಲ್ಲಿ ಪ್ರೌಢಶಾಲಾ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇಷ್ಟರಲ್ಲಿ ಅಜಯ್ ಕುಮಾರ್ ಅನ್ನುವವರೊಂದಿಗೆ ನನ್ನ ಮದುವೆಯೂ ಆಯಿತು. ಇದೀಗ ಮುಖ್ಯ ವಿಷಯಕ್ಕೆ ಬರುತ್ತೇನೆ. ನನಗೆ ಬರೆಯುವ ಗೀಳು ಅದೇಗೆ ಬಂತೋ ಗೊತ್ತಿಲ್ಲ. ಆದರೆ ನಾನು ಪ್ರೌಢಶಾಲೆಯಲ್ಲಿದ್ದಾಗ, ನನ್ನ ವಿಜ್ಞಾನ ಶಿಕ್ಷಕಿ ಪಿ. ವಿ ಲಲಿತಾರ ಒತ್ತಾಯಕ್ಕೆ ಬರೆದ ಪದ್ಯ ಜಿಲ್ಲಾಮಟ್ಟದಲ್ಲಿ ಸದ್ದು ಮಾಡಿದ್ದು ನಾನೊಬ್ಬಳು ಹವ್ಯಾಸೀ ಬರಹಗಾರಳನ್ನಾಗಿ ಮಾಡಿತೇ? ಗೊತ್ತಿಲ್ಲ. ಆದರೆ ನನ್ನೊಳಗಿನ ಅದೆಷ್ಟೋ ವಿಚಾರಗಳಿಗೆ ಅಕ್ಷರರೂಪ ಕೊಟ್ಟದ್ದಕ್ಕೆ ಮಾತ್ರ ನಿಮ್ಮ ಮುಂದೆ ಹೀಗೆ ನಿಂತಿದ್ದೇನೆ ಅನ್ನುವುದು ಮಾತ್ರ ಸತ್ಯ. ಅದಕ್ಕೆ ಸ್ಫೂರ್ತಿ ಕೊಟ್ಟ ಅದೆಷ್ಟೋ ಹಿರಿಯ ಶಿಕ್ಷಕರು, ಅದರಲ್ಲೂ ನನ್ನದೇ ಆದ ಬರವಣಿಗೆ ಶೈಲಿ ರೂಪಿಸಿಕೊಳ್ಳುವಲ್ಲಿ ಬೆಂಬಲವಾಗಿದ್ದ ಕುಮಾರಸ್ವಾಮಿ ಸರ್ ಅವರನ್ನು ನೆನಪಿಸಿಕೊಳ್ಳಲೇಬೇಕು.