ಪ್ರಕೃತಿ ಬಿಂಬ
ಸಣ್ಣ ಬೆಳ್ಳಕ್ಕಿ © ತೇಜಸ್ವಿ ಬ ಕಿರಣಗಿ
ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಯುರೋಪ್‌ನ ಉಷ್ಣವಲಯದ ವಿವಿಧ ಭಾಗಗಳ ಜೌಗು ಪ್ರದೇಶಗಳಲ್ಲಿ ಕಾಣಸಿಗುವ ಈ ಸಣ್ಣ ಬೆಳ್ಳಕ್ಕಿಯು ಅರ್ಥಿಡೆ (Ardeidae) ಕುಟುಂಬಕ್ಕೆ ಸೇರಿದೆ. ಇದನ್ನು ವೈಜ್ಞಾನಿಕವಾಗಿ ಎಗ್ರೆಟ್ಟಾ ಗಾರ್ಜೆಟ್ಟಾ (Egretta garzetta) ಎಂದು ಕರೆಯಲಾಗುತ್ತದೆ. ಮೈಬಣ್ಣವು ಬಿಳಿಯಾಗಿದ್ದು, ಸಣ್ಣದಾದ ಕಪ್ಪು ಕೊಕ್ಕು, ನೀಲಿ-ಬೂದು ಗರಿಗಳು, ಉದ್ದವಾದ ಕಪ್ಪು ಕಾಲುಗಳು ಮತ್ತು ಹಳದಿ ಪಾದವನ್ನು ಹೊಂದಿದೆ. ಗುಂಪುಗಳಲ್ಲಿ ವಾಸಿಸುತ್ತಾ ಮೀನು, ಸಣ್ಣ ಸಣ್ಣ ಸರೀಸೃಪಗಳು, ಸಸ್ತನಿಗಳು, ಪಕ್ಷಿಗಳು, ಮೃದ್ವಂಗಿಗಳು, ಕೀಟಗಳು, ಜೇಡಗಳು ಮತ್ತು ಹುಳುಗಳನ್ನು ಆಹಾರವಾಗಿ ಸೇವಿಸುತ್ತವೆ. ಗೂಡುಗಳನ್ನು ಸಾಮಾನ್ಯವಾಗಿ ಮರಗಳಲ್ಲಿ, ಪೊದೆಗಳಲ್ಲಿ ಅಥವಾ ಬಿದಿರಿನ ಪೊದೆಗಳಲ್ಲಿ ಕಟ್ಟಿ, ಮೂರರಿಂದ ನಾಲ್ಕು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ.
ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ ತೋಟ, ಅರಣ್ಯ ಪ್ರದೇಶ ಹಾಗೂ ಮ್ಯಾಂಗ್ರೋವ್ ಗಳಲ್ಲಿ ಕಂಡು ಬರುವ ಈ ಬೆಳ್ಗಣ್ಣ ಹಕ್ಕಿಯು ಜೋಸ್ಟೆರೋಪಿಡೆ (Zosteropidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜೋಸ್ಟೆರೋಪ್ಸ್ ಪಾಲ್ಪೆಬ್ರೋಸಸ್ (Zosterops palpebrosus) ಎಂದು ಕರೆಯಲಾಗುತ್ತದೆ. ದೇಹವು ಹಳದಿ ಮಿಶ್ರಿತ ಹಸಿರು ಬಣ್ಣವಿದ್ದು, ಕಣ್ಣ ಸುತ್ತಲೂ ಉಂಗುರಾಕಾರದಲ್ಲಿ ಬಿಳಿಯ ಬಣ್ಣವಿರುತ್ತದೆ. ಹೊಟ್ಟೆಯ ಭಾಗವು ಬೂದು ಮಿಶ್ರಿತ ಬಿಳಿ ಬಣ್ಣವಿರುತ್ತದೆ. ಸಾಮಾನ್ಯವಾಗಿ ಮರಗಳ ಮೇಲೆ ಗುಂಪುಗಳಲ್ಲಿ ಕಾಣಿಸುತ್ತವೆ. ಜೇಡರ ಬಲೆ, ಗಿಡಗಳ ನಾರುಗಳನ್ನು ಉಪಯೋಗಿಸಿ ಕೇವಲ ನಾಲ್ಕು ದಿನಗಳಲ್ಲಿ ಗೂಡನ್ನು ಕಟ್ಟಿ ಎರಡು ತೆಳು ನೀಲಿ ಬಣ್ಣದ ಮೊಟ್ಟೆಗಳನ್ನು ಇಡುತ್ತವೆ. ಹತ್ತು ದಿನಗಳ ನಂತರ ಮೊಟ್ಟೆಯೊಡೆದು ಮರಿ ಹಕ್ಕಿಗಳು ಆಚೆ ಬರುತ್ತವೆ. ಇವು ವಿವಿಧ ರೀತಿಯ ಕೀಟಗಳನ್ನು ಸೇವಿಸುತ್ತವೆ. ಕೆಲವು ಪ್ರಭೇದಗಳು ಮಕರಂದ ಮತ್ತು ಹಣ್ಣುಗಳನ್ನೂ ಸಹ ತಮ್ಮ ಆಹಾರವಾಗಿ ಸೇವಿಸುವುದುಂಟು.
ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಕಾಡು, ಹುಲ್ಲುಗಾವಲು, ತೋಟಗಳಲ್ಲಿ ಮತ್ತು ಜನವಸತಿಗಳ ಸಮೀಪದಲ್ಲಿ ವ್ಯಾಪಕವಾಗಿ ಕಂಡುಬರುವ ಕೆಂಬೂತವು ಕುಕುಲಿಡೇ (Cuculidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಸೆಂಟ್ರೊಪಸ್ ಸಿನೆನ್ಸಿಸ್ (Centropus sinensis) ಎಂದು ಕರೆಯಲಾಗುತ್ತದೆ. ಉದ್ದನೆಯ ಬಾಲ, ಕಂದು ಬಣ್ಣದ ರೆಕ್ಕೆಗಳು ಹಾಗೂ ಕೆಂಪು ಬಣ್ಣದ ಕಣ್ಣನ್ನು ಹೊಂದಿರುತ್ತದೆ. ಒಂಟಿಯಾಗಿ ಅಥವಾ ಜೋಡಿಗಳಲ್ಲಿ ಎತ್ತರಕ್ಕೆ ಹಾರದೆ, ನೆಲದಮೇಲೆ ಪೊದೆಗಳಡಿಯಲ್ಲಿ ನುಸಿದಾಡುತ್ತಿರುತ್ತವೆ. ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ ಮುಳ್ಳಿನ ಮರಗಳಲ್ಲಿ ಸಾಕಷ್ಟು ಎತ್ತರದಲ್ಲಿ ಕಡ್ಡಿಗಳನ್ನು ಒಟ್ಟುಗೂಡಿಸಿ ಗಂಡು ಮತ್ತು ಹೆಣ್ಣು ಹಕ್ಕಿಗಳು ಎರಡೂ ಸೇರಿ ಪೊದೆಗಳಲ್ಲಿ ಗೂಡನ್ನು ಕಟ್ಟುತ್ತವೆ. ಹೆಣ್ಣು ಪಕ್ಷಿಯು ಬಿಳಿ ಅಥವಾ ತೆಳು ಹಳದಿ ಬಣ್ಣದ 2 ರಿಂದ 4 ಮೊಟ್ಟೆಗಳನ್ನು ಇಡುತ್ತದೆ. ಮರಿಗಳು 15-16 ದಿನಗಳು ಕಾವು ದೊರೆತ ನಂತರ ಹೊರಬರುತ್ತವೆ. ಹಾವಿನ ಮರಿ, ಹಲ್ಲಿ, ಹಕ್ಕಿಯ ಮರಿ, ಮೊಟ್ಟೆ ಇದರ ಆಹಾರವಾಗಿದೆ.
ವಿಶ್ವದ ವಿವಿಧ ಪ್ರದೇಶಗಳ ಪಟ್ಟಣಗಳಲ್ಲಿನ ಕಟ್ಟಡಗಳಲ್ಲಿ, ಉದ್ಯಾನವನಗಳಲ್ಲಿ, ಕೃಷಿ ಭೂಮಿಯಲ್ಲಿ ಕಂಡುಬರುವ ಈ ಹಕ್ಕಿಯು ಕೊಲಂಬಿಡೆ (Columbidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಕೊಲಂಬಾ ಲಿವಿಯಾ (Columba livia) ಎಂದು ಕರೆಯಲಾಗುತ್ತದೆ. ನೀಲಿ ಮಿಶ್ರಿತ ಬೂದು ಬಣ್ಣದ ಮೈಬಣ್ಣವನ್ನು ಹೊಂದಿದ್ದು, ಕುತ್ತಿಗೆ ಮತ್ತು ರೆಕ್ಕೆಗಳ ಉದ್ದಕ್ಕೂ ಹಳದಿ, ಹಸಿರು, ಕೆಂಪು ಮತ್ತು ನೇರಳೆ ಬಣ್ಣಗಳ ಹೊಳೆಯುವ ವರ್ಣವೈವಿಧ್ಯತೆಯನ್ನು ಕಾಣಬಹುದು. ಪಾರಿವಾಳಗಳು ಸಣ್ಣ ಕೊಂಬೆಗಳು, ಹುಲ್ಲು, ಎಲೆ, ಬೇರುಗಳಿಂದ ತಮ್ಮ ಗೂಡುಗಳನ್ನು ನಿರ್ಮಿಸಿ ಎರಡು ಬಿಳಿ ಮೊಟ್ಟೆಗಳನ್ನು ಇಟ್ಟು, 17-18 ದಿನಗಳ ಕಾಲ ಕಾವು ಕೊಟ್ಟು ಮರಿ ಮಾಡಿಸುತ್ತವೆ. ಪಾರಿವಾಳಗಳ ಆಹಾರವು ಹೆಚ್ಚಾಗಿ ಧಾನ್ಯಗಳು ಮತ್ತು ಸಣ್ಣ ಬೀಜಗಳಿಂದ ಕೂಡಿರುತ್ತದೆ. ಪಾರಿವಾಳಗಳು ತಮ್ಮ ಗೂಡಿಗೆ ಹಿಂತಿರುಗುವ ಪ್ರತಿಭೆಯ ಕಾರಣದಿಂದ, ಹಲವು ಶತಮಾನಗಳಿಂದ ಸಂದೇಶ ಸಾಗಿಸಲು ಬಳಸಲ್ಪಟ್ಟಿವೆ.
ಚಿತ್ರ – ಲೇಖನ: ತೇಜಸ್ವಿ ಬ ಕಿರಣಗಿ
ಬಿಜಾಪುರ ಜಿಲ್ಲೆ