ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

                                                   ನದಿ ರೀವ                                                    ©  ರೆಜಿನಾಲ್ಡ್ ವಾಲ್ಡರ್

ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ನದಿಗಳು ಹಾಗೂ ಸಿಹಿನೀರಿನ ಸರೋವರಗಳಲ್ಲಿ ಕಾಣಿಸಿಗುವ ಈ ನದಿ ರೀವಗಳು ಲಾರಿಡೆ (Laridae) ಕುಟುಂಬಕ್ಕೆ ಸೇರುತ್ತವೆ. ಇದನ್ನು ವೈಜ್ಞಾನಿಕವಾಗಿ ಸ್ಟರ್ನಾ ಔರಾಂಟಿಯಾ (Sterna aurantia) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ಬೂದು ಬಣ್ಣದ್ದಾಗಿದ್ದು, ತಲೆಯ ಮೇಲೆ ಟೊಪ್ಪಿ ಧರಿಸಿರುವಂತೆ ಕಾಣುವ ಕಪ್ಪು ಬಣ್ಣ, ಹಳದಿ ಕೊಕ್ಕು ಹಾಗೂ ಉದ್ದವಾದ ಮೊನಚಾದ ರೆಕ್ಕೆಗಳನ್ನು ಹೊಂದಿದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಹೊಳೆಯುವ ಕಪ್ಪು ತಲೆ ಮತ್ತು ಕುತ್ತಿಗೆಯನ್ನು ಹೊಂದಿರುತ್ತದೆ. ತಮ್ಮ ಹೆಚ್ಚಿನ ಸಮಯವನ್ನು ಮೀನು ಹಿಡಿಯುವುದರಲ್ಲಿ ಕಳೆಯುತ್ತಾ, ಮರಳು ದ್ವೀಪಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಮೀನು, ಕೀಟಗಳು ಮತ್ತು ಇತರೆ ಕಠಿಣಚರ್ಮಿಗಳು ಇವುಗಳ ಆಹಾರವಾಗಿವೆ. ಅಣೆಕಟ್ಟುಗಳ ನಿರ್ಮಾಣ ಮತ್ತು ಇತರೆ ಮಾನವನ ಚಟುವಟಿಕೆಗಳು ಇವುಗಳ ಸಂತಾನೋತ್ಪತ್ತಿಗೆ ಮಾರಕವಾಗಿವೆ.

ಹೆಜ್ಜಾರ್ಲೆ                                                                                                ©  ರೆಜಿನಾಲ್ಡ್ ವಾಲ್ಡರ್

ದಕ್ಷಿಣ ಏಷ್ಯಾದ ವಿವಿಧ ಪ್ರದೇಶಗಳ ಕಡಲ ತೀರಗಳಲ್ಲಿ ಹಾಗೂ ದೊಡ್ಡ ಸರೋವರಗಳಲ್ಲಿ ಕಂಡುಬರುವ ಈ ಹಕ್ಕಿಯು ಪೆಲೆಕಾನಿಡೇ (Pelecanidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಪೆಲೆಕಾನಸ್ ಫಿಲಿಪೆನ್ಸಿಸ್ (Pelecanus philippensis) ಎಂದು ಕರೆಯಲಾಗುತ್ತದೆ. ದೇಹವು ಬಿಳಿಯ ಬಣ್ಣದ್ದಾಗಿದ್ದು, ಕುತ್ತಿಗೆಯ ಹಿಂಭಾಗ ಮತ್ತು ತಲೆಯ ಮೇಲಿನ ಜುಟ್ಟು ಬೂದು ಬಣ್ಣದಲ್ಲಿರುತ್ತವೆ. ಕೊಕ್ಕಿನ ಚೀಲವು ಗುಲಾಬಿ ಅಥವಾ ನೇರಳೆ ಬಣ್ಣವಿದ್ದು, ದೊಡ್ಡ ಚುಕ್ಕೆಗಳನ್ನು ಹೊಂದಿರುತ್ತದೆ. ಕೊಕ್ಕಿನ ತುದಿಯು ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿರುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಕೊಕ್ಕಿನ ಚೀಲವು ಗಾಢವಾದ ಗುಲಾಬಿ ಬಣ್ಣದಲ್ಲಿರುತ್ತದೆ. ಗುಂಪುಗಳಲ್ಲಿ ವಾಸಿಸುತ್ತಾ, ಮೀನುಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ.

                              
ಕರಿ ಕೆಂಬರಲು                                                                     ©  ರೆಜಿನಾಲ್ಡ್ ವಾಲ್ಡರ್

ಭಾರತೀಯ ಉಪಖಂಡದ ಬಯಲು ಪ್ರದೇಶಗಳು, ತೋಟಗಳು ಹಾಗೂ ನಗರಗಳಲ್ಲಿ ಕಂಡುಬರುವ ಈ ಹಕ್ಕಿಯು ಥ್ರೆಸ್ಕಿಯೊರ್ನಿಥಿಡೆ (Threskiornithidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಸ್ಯೂಡಿಬಿಸ್ ಪ್ಯಾಪಿಲೋಸಾ (Pseudibis papillosa) ಎಂದು ಕರೆಯಲಾಗುತ್ತದೆ. ಮಧ್ಯಮ ಗಾತ್ರದಲ್ಲಿರುವ ಈ ಹಕ್ಕಿಯ ದೇಹವು ನೀಲಿ ಹಸಿರು ಮಿಶ್ರಿತ ಹೊಳಪನ್ನು ಹೊಂದಿರುತ್ತದೆ. ತಲೆಯ ಮೇಲೆ ಹಾಗೂ ಕುತ್ತಿಗೆಯ ಹಿಂಭಾಗದಲ್ಲಿ ಕೆಂಪು ಬಣ್ಣವನ್ನು ಹೊಂದಿರುತ್ತದೆ. ರೆಕ್ಕೆಯ ಭುಜದ ಹತ್ತಿರ ಬಿಳಿ ತೇಪೆಯನ್ನು ಹೊಂದಿರುತ್ತದೆ. ಕೊಕ್ಕು ಉದ್ದವಾಗಿದ್ದು ಕೆಳಗೆ ಬಾಗಿದಂತಿರುತ್ತದೆ. ಇವು ಗುಂಪುಗಳಲ್ಲಿ ವಾಸಿಸುತ್ತವೆ. ಸೀಗಡಿಗಳು, ಏಡಿಗಳು, ಕೀಟಗಳು, ಚೇಳುಗಳು, ಕಪ್ಪೆ ಮತ್ತು ಧಾನ್ಯಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ.

    ಬಾಯ್ಕಳಕ ಕೊಕ್ಕರೆ                                                                                                  ©  ರೆಜಿನಾಲ್ಡ್ ವಾಲ್ಡರ್

ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಜವುಗು ಪ್ರದೇಶಗಳು, ಪ್ರವಾಹಕ್ಕೆ ಒಳಗಾದ ಕೃಷಿ ಕ್ಷೇತ್ರಗಳು ಮತ್ತು ಸರೋವರಗಳಲ್ಲಿ ಕಂಡುಬರುವ ಈ ಹಕ್ಕಿಯು ಸಿಕೋನಿಡೆ (Ciconiidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಅನಾಸ್ಟೊಮಸ್ ಆಸಿಟಾನ್ಸ್ (Anastomus oscitans) ಎಂದು ಕರೆಯಲಾಗುತ್ತದೆ. ಬೂದು ಅಥವಾ ಬಿಳಿ ಬಣ್ಣದ ದೇಹವನ್ನು ಹೊಂದಿದ್ದು, ಕಪ್ಪು ಬಣ್ಣದ ಬಾಲ ಮತ್ತು ಗುಲಾಬಿ ಬಣ್ಣದ ಕಾಲನ್ನು ಹೊಂದಿರುತ್ತದೆ. ಬೂದು ಮತ್ತು ಹಳದಿ ಮಿಶ್ರಿತ ಕೊಕ್ಕಿನ ಮೇಲ್ಭಾಗ ಮತ್ತು ಕೆಳಭಾಗದ ಮಧ್ಯೆ ಇರುವ ಅಂತರವು ಮೃದ್ವಂಗಿಗಳ ಚಿಪ್ಪನ್ನು (shell) ಬಿಡಿಸಲು ಉಪಯೋಗಿಸುತ್ತವೆ. ನೀರಿನ ಹಾವುಗಳು, ಕಪ್ಪೆಗಳು ಮತ್ತು ದೊಡ್ಡ ಕೀಟಗಳನ್ನೂ ಸಹ ಆಹಾರವಾಗಿ ಸೇವಿಸುತ್ತವೆ. ಮರಗಳ ಮೇಲೆ ಗುಂಪುಗಳಲ್ಲಿ ವಾಸಿಸುತ್ತವೆ.

ಚಿತ್ರಗಳು : ರೆಜಿನಾಲ್ಡ್ ವಾಲ್ಡರ್
        ಲೇಖನ : ದೀಪ್ತಿ ಎನ್.

Spread the love
error: Content is protected.