ಪ್ರಕೃತಿ ಬಿಂಬ
ಬಿಳಿ ಹುಬ್ಬಿನ ಪಿಕಳಾರ © ರಘು ಕುಮಾರ್ ಸಿ.
ಭಾರತ, ಸಿಲೋನ್, ಬಾಂಗ್ಲಾದೇಶ, ಬರ್ಮಾ ದೇಶಗಳಲ್ಲಿನ ಪರ್ಣಪಾತಿ ಮತ್ತು ಕುರುಚಲು ಕಾಡುಗಳಲ್ಲಿ ಕಾಣಸಿಗುವ ಈ ತೆಳು ಹಳದಿ ಮಿಶ್ರಿತ ಹಸಿರು ಬಣ್ಣದ, ಮೈನಾ ಗಾತ್ರದ ಬಿಳಿ ಹುಬ್ಬಿನ ಪಿಕಳಾರ ಹಕ್ಕಿಯು ಪಿಕ್ನೋನೋಟಿಡೇ (Pycnonotidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಪಿಕ್ನೋನೋಟಸ್ ಲ್ಯುಟಿಯೋಲಸ್ (pycnonotus luteolus) ಎಂದು ಕರೆಯಲಾಗುತ್ತದೆ. ಹಳದಿ ಮಿಶ್ರಿತ ಬೂದು ಬಣ್ಣದ ಮೇಲ್ಭಾಗ ಮತ್ತು ಬಿಳಿಯ ಕೆಳಭಾಗವನ್ನು ಹೊಂದಿದ್ದು, ಹೊಟ್ಟೆ ಮತ್ತು ಎದೆ ತೆಳು ಹಳದಿ ಬಣ್ಣದಲ್ಲಿರುತ್ತದೆ ಹಾಗೂ ಹುಬ್ಬಿನ ಮೇಲೆ ಬಿಳಿ ಪಟ್ಟೆ ಇರುತ್ತದೆ. ಸಾಮಾನ್ಯವಾಗಿ ಮೌನವಾಗಿರುವ ಹಕ್ಕಿಯಾದರೂ ಗುಂಪಿನಲ್ಲಿದ್ದಾಗ ನಿರಂತರವಾಗಿ ಕೂಗುತ್ತಾ ಸಂಭಾಷಿಸುತ್ತದೆ. ಕಳಿತ ಹಣ್ಣುಗಳು, ಕೀಟಗಳು ಮತ್ತು ಹೂವಿನ ಮಕರಂದ ಇದರ ಆಹಾರವಾಗಿವೆ. ಇವುಗಳು ಪೊದೆಗಳ ನಾರಿನಿಂದ ನೇಯ್ದ ಗೂಡನ್ನು ಮಾಡುತ್ತವೆ.
ಏಷ್ಯಾ ಖಂಡದ ಉಷ್ಣವಲಯಗಳ ಕಾಡಿನ ಪ್ರದೇಶಗಳು, ಪೊದೆಗಳು, ತೆರೆದ ಪ್ರದೇಶಗಳು ಮತ್ತು ಕೃಷಿಭೂಮಿಯಲ್ಲಿ ಕಂಡುಬರುವ ಕೆಮ್ಮೀಸೆ ಪಿಕಳಾರ ಪಕ್ಷಿಯು ಪೈಕ್ನೋನೋಟಿಡೇ (Pycnonotidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಪಿಕ್ನೋನೋಟಸ್ ಜೋಕೋಸಸ್ (Pycnonotus jocosus) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ಕಂದು ಬಣ್ಣದಲ್ಲಿದ್ದು, ಕೆಳಭಾಗವು ಬಿಳಿಯ ಬಣ್ಣದ್ದಾಗಿದೆ. ತಲೆಯ ಮೇಲೆ ಚೂಪಾದ ಕಪ್ಪು ಜುಟ್ಟನ್ನು ಹೊಂದಿದ್ದು, ಕೆನ್ನೆಯ ಮೇಲೆ ಮೀಸೆಯಂತೆ ಕೆಂಪು ಬಣ್ಣವನ್ನು ಹೊಂದಿರುತ್ತದೆ ಮತ್ತು ಬಾಲದ ಕೆಳಗಿರುವ ಭಾಗವು ಸಹ ಕೆಂಪಾಗಿರುತ್ತದೆ. ಇವು ವಿವಿಧ ರೀತಿಯ ಹಣ್ಣುಗಳನ್ನು ಆಹಾರವಾಗಿ ಸೇವಿಸಿ, ಅವುಗಳ ಬೀಜ ಪ್ರಸರಣದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
ದಕ್ಷಿಣ ಭಾರತದ ಗುಡ್ಡಗಾಡು ಪ್ರದೇಶದ ಕಾಡುಗಳಿಗೆ ಸ್ಥಳೀಯವಾಗಿರುವ ಹಳದಿ ಕೊರಳಿನ ಪಿಕಳಾರ ಹಕ್ಕಿಯು ಪೈಕ್ನೋನೋಟಿಡೇ (Pycnonotidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಪಿಕ್ನೋನೋಟಸ್ ಕ್ಸಾಂಥೋಲೆಮಸ್ (Pycnonotus xantholaemus) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ಬೂದು ಬಣ್ಣವಿದ್ದು, ತಲೆ ಮತ್ತು ಬಾಲದ ಕೆಳಭಾಗ ಹಾಗೂ ಬಾಲದ ತುದಿಗಳು ಹಳದಿ ಬಣ್ಣದ್ದಾಗಿರುತ್ತವೆ. ದೇಹದ ಕೆಳಭಾಗವು ಬೂದು ಮಿಶ್ರಿತ ಬಿಳಿಯ ಬಣ್ಣದ್ದಾಗಿದೆ. ನಾಚಿಕೆ ಸ್ವಭಾವದ ಈ ಹಕ್ಕಿಯು ಜೋರಾದ ಕೂಗನ್ನು ಮಾಡುತ್ತದೆ. ವಿವಿಧ ಬಗೆಯ ಕೀಟಗಳು ಮತ್ತು ಹಣ್ಣುಗಳನ್ನು ಆಹಾರವಾಗಿ ಸೇವಿಸುತ್ತದೆ.
ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕುರುಚಲು ಹಾಗೂ ತೆರೆದ ಕಾಡು, ಬಯಲು ಮತ್ತು ಕೃಷಿ ಭೂಮಿಗಳಲ್ಲಿ, ನಗರಗಳಲ್ಲಿ ಕಂಡುಬರುವ ಕೆಂಪು ಕಿಬ್ಬೊಟ್ಟೆಯ ಪಿಕಳಾರ ಹಕ್ಕಿಯು ಪೈಕ್ನೋನೋಟಿಡೇ (Pycnonotidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಪಿಕ್ನೋನೋಟಸ್ ಕೆಫೆರ್ (Pycnonotus cafer) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ಕಡುಗಂದು ಬಣ್ಣವಿದ್ದು, ಕಪ್ಪಾದ ತಲೆಯ ಮೇಲೆ ಚೂಪಾದ ಚಿಕ್ಕ ಕಪ್ಪು ಜುಟ್ಟನ್ನು ಹೊಂದಿದೆ. ಕೆಳಗಿನ ಭಾಗವು ಬಿಳಿಯ ಬಣ್ಣದ್ದಾಗಿದೆ ಹಾಗೂ ಕಪ್ಪಾದ ಬಾಲದ ಕೆಳಗೆ, ಕಿಬ್ಬೊಟ್ಟೆಯು ಕೆಂಪಾಗಿರುತ್ತದೆ. ವಿವಿಧ ಸನ್ನಿವೇಶಗಳಲ್ಲಿ ಬಗೆಬಗೆಯ ಕರೆಗಳನ್ನು ಮಾಡುತ್ತದೆ. ಹಣ್ಣುಗಳು, ಕೀಟಗಳು, ಹೂಗಳ ದಳಗಳು ಹಾಗೂ ಮಕರಂದವನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ.
ಚಿತ್ರಗಳು : ರಘು ಕುಮಾರ್ ಸಿ
ಲೇಖನ : ದೀಪ್ತಿ ಎನ್.