ಪಾತರಗಿತ್ತಿಯ ಪರ್ಣ ಪರಿಣಾಮ…

ಪಾತರಗಿತ್ತಿಯ ಪರ್ಣ ಪರಿಣಾಮ…

©JHVEPHOTO_ISTOCK_GETTY IMAGES PLUS

ಮನ್ಸೂರ್ ಸಾಹೇಬರು ಹಾರೋಹಳ್ಳಿ ವಲಯದ ವಲಯ ಅರಣ್ಯಾಧಿಕಾರಿಯಾಗಿದ್ದಾಗ ಅಂದರೆ ಕೆಲವು ವರ್ಷಗಳ ಹಿಂದೆ ಒಂದು ಪ್ರಾಜೆಕ್ಟ್ ಸಲುವಾಗಿ ಕಾಡಿನೊಳಕ್ಕೆ ಹೋಗಿದ್ದೆವು. ಬೇಸಿಗೆಯ ಸಮಯದಲ್ಲಿ ಕಾಡಿನೊಳಗಿದ್ದ ಸಣ್ಣ ಸಣ್ಣ ಕೆರೆ-ಕುಂಟೆಗಳ ಸ್ಥಿತಿಗತಿ ಗಮನಿಸಿಕೊಂಡು ಬರಬೇಕಿತ್ತು. ಕಾಡಿನೊಳಕ್ಕೆ ಹೋಗುವ ಅವಕಾಶ ಸಿಕ್ಕಿದ್ದೇ ತಡ, ಬಿಸಿಲು-ಬೇಗೆ ಎಲ್ಲವನ್ನೂ ಮರೆತು ಕಾಡಿನ ಕಡೆ ನಡೆದಿದ್ದೆವು.  ನಿರ್ಜನ ಕಾಡಿನಲ್ಲಿ ಅಲೆದಾಡುವಾಗ ಅಕಸ್ಮಾತ್ ಆಗಿ ಸಿಗುವ ಪ್ರಾಣಿಗಳ ಚಹರೆಗಳನ್ನು ಹುಡುಕುವ ಕಾರ್ಯಾಚರಣೆ ನಡೆದಿತ್ತು. ಆದರೆ ನಮ್ಮಷ್ಟೇ ಆಸಕ್ತಿ ನಮ್ಮನ್ನು ನೋಡಲು ಪ್ರಾಣಿಗಳಿಗೆ ಇರಬೇಕಲ್ಲಾ? ಯಾವೂ ಕಾಣಲಿಲ್ಲ. ಬಿಸಿಲಿನ ಬೇಗೆಯೆಂಬ ಪ್ರಸಾದವನ್ನು ಸೇವಿಸಿ ಕೆರೆ-ಕುಂಟೆಗಳು ಬತ್ತಿ ಹೋಗಿದ್ದವು.  ಅದಕ್ಕೇ ಇರಬೇಕು ಅಂದು ಯಾವ ಪ್ರಾಣಿಯೂ ನಮ್ಮ ಕಣ್ ತುಂಬಲಿಲ್ಲ. ಕೊನೆಗೆ ಒಂದೇ ಒಂದು ಕೆರೆಯ ಬಳಿ ಹೋಗಬೇಕಿತ್ತು. ಅಲ್ಲಿಯಾದರೂ ಯಾವುದಾದರೂ ಪ್ರಾಣಿ ಸಿಗಬಹುದೇನೋ ಎಂಬ ಆಸೆಯಿಂದ ಹೊರೆಟೆವು. ಒಣಗಿದ ಲಂಟಾನಾ ಗಿಡಗಳು ನಮ್ಮನ್ನು ಕೆರೆಯ ದ್ವಾರದಲ್ಲೇ ತಡೆದು ನಿಲ್ಲಿಸಿದವು. ಆದರೂ ಧೃತಿಗೆಡದ ನಾವು ಆ ಲಂಟಾನಾ ಪೊದೆಯನ್ನು ಲೆಕ್ಕಿಸದೆ ಅವುಗಳ ಮಧ್ಯದಲ್ಲಿಯೇ ದಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದೆವು. ಹೀಗೆ ಹೋಗುವಾಗ ಬಲಗಣ್ಣಿನ ದೃಷ್ಟಿಯ ಅಂಚಿನಲ್ಲಿ ಯಾವುದೋ ಜೀವಿಯು ಚಲಿಸಿದಂತಾಯ್ತು. ನಿಖರವಾಗಿ ಕಾಣದ ಕಾರಣ ನಾನೂ ಹೆಚ್ಚಾಗಿ ಗಮನ ಕೊಡಲಿಲ್ಲ. ಹಾಗೆ ಮುಂದೆ ಸಾಗುತ್ತಿದ್ದೆ. ಆದರೆ ತಲೆಯಲ್ಲಿ ಎಲ್ಲೋ ಅದು ಚಿಟ್ಟೆ ಇರಬೇಕೆಂಬ ಕಲ್ಪನೆ ಮೂಡುತ್ತಿತ್ತು. ಅದರ ಬಣ್ಣ ಮಾತ್ರ ಚಿಟ್ಟೆಯಲ್ಲಿ ನಾನೆಂದೂ ನೋಡಿರದ ಹಸಿರು-ನೀಲಿ ಮಿಶ್ರಿತ ಕೊಂಚ ಹೊಳೆಯುವ ಬಣ್ಣವೆಂದು ಅನಿಸುತ್ತಿತ್ತು. ಆ ಮೋಹಕ ಬಣ್ಣಗಳ ಸಮಾಗಮವಾದ ಚಿಟ್ಟೆಯನ್ನು ಇದುವರೆಗೆ ನೋಡಿರದ ಕಾರಣ, ಅದು ಬೇರೆ ಏನೋ ಇರಬೇಕೆಂದುಕೊಂಡೆ. ಅದನ್ನು ನಿರ್ಲಕ್ಷಿಸಿ ಮುಂದೆ ಸಾಗಿದೆ. ಮನಸ್ಸು ಒಪ್ಪಲಿಲ್ಲ, ಅದೇನಿರಬಹುದು? ಎಂಬ ಪ್ರಶ್ನೆ ಕಾಟ ಕೊಡುತ್ತಲೇ ಇತ್ತು. ಈ ಆಲೋಚನೆಗಳಿಂದ ಹೊರಬರುತ್ತಿರುವಾಗಲೇ ಅದೇ ಜೀವಿ ನಾಟ್ಯ ಮಯೂರಿ ಕುಪ್ಪಳಿಸುವಂತೆ ನನ್ನ ಮುಂದೆ ಹಾರಿತು. ರೆಕ್ಕೆಗಳಿಂದ ಪ್ರತಿಫಲನವಾದ ಬಿಸಿಲಿನ ಕಿರಣಗಳು ನನ್ನ ಕಣ್ಣಿನ ಮೇಲೆ ಬಿದ್ದುದ್ದೇ ತಡ ಆ ಸುಂದರ ಚಿಟ್ಟೆಯ ಸೌಂದರ್ಯಕ್ಕೆ ನಾ ಮನಸೋತೆ! ಗಾಳಿಯಲ್ಲಿ ಕುಣಿಯುವ ನವಿಲಿನಂತೇ ಅಂದು ಅದು ಕಂಡಿತ್ತು.

© DAVIS ET AL_PLOS ONE 2023 (CC BY 4.0)_ ADAPTED BY L. STEENBLIK HWANG

ಗಾಳಿಯಲ್ಲಿ ಬಿಡಿಸಿದ ಚಿತ್ತಾರದಂತೆ ಹಾರುವ ಚಿಟ್ಟೆಗಳನ್ನು ಕಂಡವರಿಗೆ, ಚಿಟ್ಟೆಗಳಿಗೂ ಬಣ್ಣಗಳಿಗೂ ಇರುವ ಅವಿನಾಭಾವ ಸಂಬಂಧದ ಅರಿವಾಗುತ್ತದೆ. ಕಣ್ ಸೆಳೆಯುವ ಆ ಬಣ್ಣಗಳು ಕೇವಲ ಸಿಂಗಾರಕ್ಕೆ ಇವೆಯೆಂದು ತಪ್ಪು ತಿಳಿಯಬೇಡಿ. ಏಕೆಂದರೆ ಅದೇ ಬಣ್ಣಗಳು ತನ್ನನ್ನು ತಾನು ಬೇರೆ ಭಕ್ಷಕಗಳಿಂದ ರಕ್ಷಿಸಿಕೊಳ್ಳುವಲ್ಲಿಯೂ ಸಹ ಉಪಯೋಗವಾಗುತ್ತವೆ ಎಂಬುದು ವೈಜ್ಞಾನಿಕ ವಾಸ್ತವ. ಇದು ಇಲ್ಲಿಯವರೆಗೆ ನಮಗೆ ತಿಳಿದಿದ್ದ ವಿಚಾರ. ಚಿಟ್ಟೆಗಳ ಮೇಲೆ ಇರುವ ಇದೇ ಬಣ್ಣಗಳು ಕೆಲವು ಚಿಟ್ಟೆಗಳ ವಲಸೆಗೆ ಸಹಕಾರಿಯಾಗಿವೆ ಎಂದರೆ ನೀವು ನಂಬಲೇಬೇಕು. ಏಕೆಂದರೆ ಈಗ ಹೇಳಲು ಹೊರಟಿರುವ ಸಂಶೋಧನೆ ಅದನ್ನೇ ಹೇಳುತ್ತದೆ.

 ‘ಮೊನಾರ್ಕ್ ಚಿಟ್ಟೆಗಳು’ ನೋಡಲು ಸುಂದರ ಮತ್ತು ಉತ್ತರ ಅಮೇರಿಕಾದಲ್ಲಿ ಸುಪ್ರಸಿದ್ಧ. ಅಷ್ಟೇ ಅಲ್ಲ ಒಂದು ಹುರುಳಿ ಕಾಳಿಗಿಂತ ಕಡಿಮೆ ತೂಗುವ ಈ ಚಿಟ್ಟೆಗಳು 4,000 ಕಿ. ಮೀ. ದೂರಕ್ಕೆ ವಲಸೆ ಹೋಗುವಷ್ಟು ಕೂಡ ಸಮರ್ಥವಾಗಿವೆ. ಈ ಹಿಂದೆ ಹೇಳಿದಂತೆ ಮೊನಾರ್ಕ್ ಚಿಟ್ಟೆಯ ಕೇಸರಿ ಬಣ್ಣವು ಭಕ್ಷಕಗಳಿಂದ ತನ್ನನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಆದರೆ ಅದೇ ಬಣ್ಣಗಳು ಅವುಗಳು ಸಾಗುವ ಸಾವಿರಾರು ಕಿಲೋ ಮೀಟರ್ ದೂರದ ವಲಸೆಯಲ್ಲಿ ಸಹಾಯ ಮಾಡುತ್ತವೆಯೇ? ಎಂದು ಜಾರ್ಜಿಯಾ ವಿಶ್ವವಿದ್ಯಾಲಯದ ವಿಜ್ಞಾನಿ ಡೇವಿಸ್ ರನ್ನು ಬಿಟ್ಟು ಬೇರೆ ಯಾರೂ ಇದುವರೆಗೆ ಊಹಿಸಿರಲಿಲ್ಲ ಎಂದು ಕಾಣುತ್ತದೆ. ಅವರ ಈ ಸಂಶೋಧನೆ ಪ್ರಕಾರ, ಕೆನೆಡಾ ಮತ್ತು ಯು. ಎಸ್. ನಲ್ಲಿ ಸಂತಾನೋತ್ಪತ್ತಿ ಮಾಡಿ ಚಳಿಗಾಲವನ್ನು ಕಳೆಯಲು ಕ್ಯಾಲಿಫೊರ್ನಿಯಾ ಮತ್ತು ಮೆಕ್ಸಿಕೋಗೆ ವಲಸೆ ಬರುತ್ತವಂತೆ. ಆಗಲೇ ಅವರು ಇವುಗಳ ವಲಸೆಯ ಪ್ರಾರಂಭ ಮತ್ತು ಅಂತ್ಯದಲ್ಲಿ ಚಿಟ್ಟೆಗಳ ರೆಕ್ಕೆಯ ಮೇಲಿನ ಬಣ್ಣಗಳನ್ನು ಗಮನಿಸಿಕೊಂಡರು.

ಚಿಟ್ಟೆ ರೆಕ್ಕೆಯ ಮೇಲಿರುವ ಕಪ್ಪು ಬಣ್ಣಗಳು ಇವುಗಳ ವಲಸೆಗೆ ಸಹಾಯಕಾರಿ ಆಗಿರಬೇಕೆಂದು ಊಹಿಸಿದರು. ಏಕೆಂದರೆ ಈ ಹಿಂದೆಯ ಸಂಶೋಧನೆಗಳು ಹೇಳುತ್ತವೆ, ಪಕ್ಷಿಗಳ ರೆಕ್ಕೆಯ ಮೇಲಿರುವ ಕಪ್ಪು ಬಣ್ಣಗಳು ಹೆಚ್ಚು ಸೂರ್ಯನ ಶಾಖವನ್ನು ಹೀರಿಕೊಳ್ಳುವುದರಿಂದ ರೆಕ್ಕೆಯ ಮೇಲಿನ ಗಾಳಿ ಬಿಸಿಯಾಗಿ ಪಕ್ಷಿಗಳು ಹಾರಲು ಗಾಳಿಯನ್ನು ಹಗುರವಾಗಿಸುತ್ತವೆ ಎಂದು. ಅದೇ ವೈಜ್ಞಾನಿಕ ಕಾರಣವನ್ನು ಇಲ್ಲಿ ಪ್ರಯೋಗಿಸಿದರು. ಆದರೆ ಅವರ ಲೆಕ್ಕಾಚಾರ ತಪ್ಪಾಗಿತ್ತು. ಯಾವ ಚಿಟ್ಟೆಯ ರೆಕ್ಕೆಯಲ್ಲಿ ಕಡಿಮೆ ಕಪ್ಪು ಬಣ್ಣವಿತ್ತೋ ಅವುಗಳೇ ಹೆಚ್ಚು ವಲಸೆಯನ್ನು ಕೈಗೊಂಡಿದ್ದವು. ಇದನ್ನು ತಿಳಿಯಲು ವಲಸೆ ಹೋಗುವ ಮೊನಾರ್ಕ್ ಚಿಟ್ಟೆಗಳ ರೆಕ್ಕೆಯ ಮೇಲಿನ ಬಣ್ಣಗಳು ಹಾಗೂ ವಲಸೆ ಹೋಗದ ಮೊನಾರ್ಕ್ ಚಿಟ್ಟೆಗಳ ರೆಕ್ಕೆಯ ಬಣ್ಣಗಳನ್ನು ಹೋಲಿಸಿ ನೋಡಿದರು. ಆಗ ತಿಳಿದದ್ದು, ಯಾವ ಚಿಟ್ಟೆಯ ರೆಕ್ಕೆಯಲ್ಲಿ ಹೆಚ್ಚು ಬಿಳಿ ಬಣ್ಣದ ಮಚ್ಚೆಗಳು ಇದ್ದವೋ ಅವುಗಳೇ ಹೆಚ್ಚು ವಲಸೆ ಹೋಗಿದ್ದವು ಎಂದು.

ಈ ಬಿಳಿ ಬಣ್ಣ ಹೇಗೆ ಚಿಟ್ಟೆಗಳ ವಲಸೆಗೆ ಸಹಕಾರಿಯಾಗಿರಬಹುದು ಎಂಬುದು ನಿಖರವಾಗಿ ಇನ್ನೂ ತಿಳಿಯದು. ಆದರೆ ಡೇವಿಸ್ ಹೇಳುವ ಹಾಗೆ ಒಂದು ವೈಜ್ಞಾನಿಕ ಊಹೆ ಮಾಡುವುದಾದರೆ, ಬಿಳಿ ಬಣ್ಣ ಕಡಿಮೆ ಬೆಳಕನ್ನು ಹೀರಿಕೊಂಡು, ಪಕ್ಕದಲ್ಲಿನ ಕಪ್ಪು ಬಣ್ಣ ಹೆಚ್ಚು ಬೆಳಕನ್ನು ಹೀರಿಕೊಳ್ಳುವುದರಿಂದ ರೆಕ್ಕೆಯ ಮೇಲಿನ ಗಾಳಿಯಲ್ಲಿ ಕಡಿಮೆ ಮತ್ತು ಹೆಚ್ಚು ಒತ್ತಡದ ಪ್ರದೇಶಗಳು ಸಣ್ಣ ಸುರುಳಿ ಉಂಟು ಮಾಡಿ ಚಿಟ್ಟೆಗಳು ತೇಲಲು ಸಹಾಯ ಮಾಡಬಹುದು. ಆದರೆ ಇದು ಹೇಳಿದ ಹಾಗೆ ವೈಜ್ಞಾನಿಕ ಊಹೆಯಷ್ಟೇ. ಇದನ್ನು ಸಾಬೀತುಪಡಿಸುವ ಪುರಾವೆಗಳು ಹೆಚ್ಚಿನ ಸಂಶೋಧನೆಯಿಂದಲೇ ಬರಬೇಕು. ಅದೇ ಆದರೆ, ಈ ವಿದ್ಯಮಾನವನ್ನು ಬಳಸಿಕೊಂಡು ಕೇವಲ ವಿವಿಧ ಬಣ್ಣಗಳನ್ನು ಹಚ್ಚುವ ಮೂಲಕ ‘ಡ್ರೋನ್’ಗಳಂತಹ ಉಪಕರಣಗಳ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಎಂಬುದು ವಿಜ್ಞಾನಿಗಳ ಆಶಯ.

ಬಣ್ಣ ಬದಲಿಸುವ ಬದುಕುಗಳ ಮಧ್ಯದಲ್ಲಿ ಬದುಕು ಬದಲಿಸುವ ಬಣ್ಣಗಳ ಇಂತಹ ಸಂಶೋಧನಾ ವಿಚಾರ ನಮ್ಮನ್ನು ನಾವು ಸಂಶೋಧಿಸಿಕೊಳ್ಳುವಲ್ಲಿ ನೆರವಾಗಬಹುದೇನೋ… ನೋಡಿ!

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ., ಬೆಂಗಳೂರು ನಗರ ಜಿಲ್ಲೆ

Spread the love
error: Content is protected.