ಜೇನು ಪ್ರಪಂಚ: ಭಾಗ ೩
© ಅಭಿಷೇಕ್ ಎ.
ಕಳೆದ ಸಂಚಿಕೆಯಿಂದ…
ಮೂರನೇ ದಿನ
ಇಂದು ನನಗೆ ಪ್ರಪ್ರಥಮಬಾರಿಗೆ ಮಕರಂದ ಸಂಗ್ರಹಿಸುವ ಕಾರ್ಯ, ನನ್ನ ಹಿರಿಯ ಸಹೋದರಿ ತನ್ನ ನೃತ್ಯದ ಮೂಲಕ ದಕ್ಷಿಣ ಭಾಗದ ಹತ್ತಿರದಲ್ಲಿ ಮಕರಂದ ಸಂಗ್ರಹಿಸಲು ಸೂಚನೆಕೊಟ್ಟಳು (ಹೇಗೆ ಸೂಚನೆ ಕೊಟ್ಟಳು, ನನಗೆ ಹೇಗೆ ಅರ್ಥವಾಯಿತು ಎಂದು ಮುಂದಿನ ಸಂಚಿಕೆಯೊಂದರಲ್ಲಿ ಹೇಳುತ್ತೇನೆ) ಅದರಂತೆ ನಾನು ದಕ್ಷಿಣ ದಿಕ್ಕಿಗೆ ಹೊರಟಾಗ ನನಗೆ ಸಿಕ್ಕಿದ್ದು ಬೇಲಿ ಗಿಡಗಳ ಗುಂಪು, ಇದು ನನ್ನ ಮೊದಲ ಅನುಭವವಾಗಿದ್ದರಿಂದ ನಾನು ಹೂವಿನ ಮೇಲೆ ಕೂತಾಗ ಕೆಳಗೆ ಬಿದ್ದೆನೆಂಬ ಅನುಭವ, ಹೂವಿನ ಮೇಲೆ ಕೂತು ಹೂವಿನೊಳಗೆ ನಾಲಿಗೆಯನ್ನು ಚಾಚಿದಾಗ ನನಗೆ ಯಾವುದೇ ಮಕರಂದ ಸಿಗಲಿಲ್ಲ, ಇದೇ ರೀತಿ ನಾನು ಹತ್ತಾರು ಹೂಗಳಿಗೆ ಭೇಟಿಕೊಟ್ಟರೂ ನಿರಾಸೆಯೇ. ಯಾವ ಹೂವಿನಲ್ಲಿ ಮಕರಂದವಿದೆ? ಯಾವುದರಲ್ಲಿ ಇಲ್ಲ? ಎಂಬುವುದನ್ನ ತಿಳಿಯದೆ ಚಡಪಡಿಸಿದೆ. ಆಗ ಸಮಾಧಾನವಾಗಿ ಎಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಾನು ಗಮನಿಸಿದ್ದು ನಾನು ಭೇಟಿ ನೀಡಿದ ಹೂಗಳ ಬಣ್ಣದಲ್ಲಿ ವ್ಯತ್ಯಾಸವಿದ್ದದ್ದು ಮತ್ತು ಕೇವಲ ಕೆಲ ಬಣ್ಣದ ಹೂಗಳ ಬಳಿ ಮಾತ್ರ ಈಗಾಗಲೆ ನನ್ನ ಪ್ರಭೇದದವರು ಬಂದು ಹೋದ ಹೆಜ್ಜೆ ಗುರುತುಗಳನ್ನು ನೋಡಿ ನನಗೆ ತಿಳಿದಿದ್ದು. ಬೇಲಿ ಗಿಡಗಳ ಹೂಗಳಲ್ಲಿ ಮಕರಂದವಿರುವ ಮತ್ತು ಮಕರಂದ ಇಲ್ಲದ ಹೂಗಳಲ್ಲಿ ಬಣ್ಣದ ವ್ಯತ್ಯಾಸವಿದ್ದು, ಅಂದರೆ ಆ ಬಣ್ಣದ ಹೂಗಳಿಗೆ ಭೇಟಿ ನೀಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ ಮತ್ತು ಯಾವ ಹೂಗಳ ಬಳಿ ನನ್ನ ಪ್ರಭೇದದವರ ಹೆಜ್ಜೆ ಗುರುತು ಇದೆಯೋ ಆ ಹೂಗಳಲ್ಲಿ ಈಗಾಗಲೇ ಮಕರಂದ ಸಂಗ್ರಹಿಸಲಾಗಿದೆ ಎಂದರ್ಥ. ನಂತರ ನಾನು ಕೇವಲ ಒಂದು ಬಣ್ಣದ ಹೂಗಳಿಗೆ ಯಾವುದೇ ಹೆಜ್ಜೆ ಗುರುತು ಇಲ್ಲದವುಗಳ ಬಳಿ ಹೋದಾಗ ನನಗೆ ಆಶ್ಚರ್ಯ! ಆ ಹೂವಿನಲ್ಲಿ ಮಕರಂದವಿತ್ತ! ಇದು ನನ್ನ ನಾಲಿಗೆಯಿಂದ ಮೊದಲ ಬಾರಿ ಮಕರಂದ ಹೀರುತ್ತಿರುವ ಅನುಭವ, ನಾನು ಈಗಾಗಲೇ ಸಂಪುಷ್ಟವಾದ ತುಪ್ಪವನ್ನು ತಿಂದಿದ್ದೇನೆ. ಆದರೂ ಈ ಅನುಭವ ವರ್ಣಿಸಲಾಗದು. ನನ್ನ ನಾಲಿಗೆಯ ತುದಿಯು ಸ್ಪಂಜಿನಂತಿದ್ದು ಇದರ ಮೂಲಕ ನಾನು ಮಕರಂದ ಹೀರಿ ನನ್ನ ಹೊಟ್ಟೆಯಲ್ಲಿ ಮಕರಂದ ಸಂಗ್ರಹಿಸಲೆಂದೇ ಇರುವ ಪ್ರತ್ಯೇಕ ಕೋಣೆಯಲ್ಲಿ ಸಂಗ್ರಹಿಸಲಾರಂಭಿಸಿದೆ. ಇದೇ ರೀತಿ ಇಂತಹದೇ ನೂರಾರು ಹೂಗಳಿಗೆ ಭೇಟಿ ಕೊಟ್ಟು ಮಕರಂದ ಸಂಗ್ರಹಿಸತೊಡಗಿದೆ. ನಾನು ಸಂಗ್ರಹಿಸಿದ ಮಕರಂದವನ್ನು ನನ್ನ ಮನೆಯ ಕಿರಿಯ ಸಹೋದರಿಯರಿಗೆ ವರ್ಗಾಯಿಸಿ ನಾನು ಮತ್ತೆ ಸಂಗ್ರಹಣಾ ಕಾರ್ಯದಲ್ಲಿ ಮಗ್ನಳಾದೆ. ಸುಮಾರು 10 ಗಂಟೆಯ ಸಮಯದಲ್ಲಿ ಮಕರಂದ ಸ್ರವಿಸುವಿಕೆ ಕುಂಠಿತಗೊಂಡಿದ್ದರಿಂದ ನಾನು ಮನೆಗೆ ಹಿಂದಿರುಗಿ ಇತರೆ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡೆ.
ದಿನ 3 ಮತ್ತು ನಂತರದ ದಿನಗಳು
ಮುಂಜಾನೆಯ ಸಮಯ ನನ್ನ ಹಿರಿಯ ಸಹೋದರಿಯು ತನ್ನ ನೃತ್ಯದ ಮೂಲಕ ದಕ್ಷಿಣ ದಿಕ್ಕಿಗೆ ಸುಮಾರು 200-250 ಮೀಟರ್ ದೂರದಲ್ಲಿ ಹೇರಳವಾದ ಮಕರಂದ ಮತ್ತು ಪರಾಗರೇಣುಗಳಿವೆಯೆಂದು ತಿಳಿಸಿದಳು. ನಾನು ನನ್ನ ಸಹೋದರಿಯರೊಡನೆ ಅವಳು ತಿಳಿಸಿದ ದಿಕ್ಕಿನತ್ತ ಹೊರಟೆವು. ಅವಳು ತಿಳಿಸಿದ ಜಾಗದಲ್ಲಿ ಸೂರ್ಯಕಾಂತಿಯ ಬೆಳೆ ಇದ್ದು ಸಾಕಷ್ಟು ಹೂಗಳಿದ್ದವು.
ಹೆಣ್ಣು ಹೂಗಳಲ್ಲಿ ಇನ್ನು ಮಕರಂದ ಸ್ರವಿಸಿರಲಿಲ್ಲ, ಆದರೆ ಗಂಡು ಹೂಗಳು ಯಥೇಚ್ಛವಾದ ಪರಾಗರೇಣುಗಳನ್ನು ಉತ್ಪತ್ತಿಸಿದ್ದವು, ನನ್ನ ಹಿಂಬದಿಯ ಕಾಲುಗಳು ಪರಾಗರೇಣುಗಳನ್ನು ಸಂಗ್ರಹಿಸಲೆಂದೇ ಮಾರ್ಪಾಟಾದ ಪರಾಗರೇಣು ಬುಟ್ಟಿಯಲ್ಲಿ ಸಂಗ್ರಹಿಸತೊಡಗಿದೆ. ಜೊತೆಗೆ ನನ್ನ ದೇಹ ಪೂರ್ತಿ ಸಣ್ಣ-ಸಣ್ಣ ರೋಮಗಳಿಂದ ಆವೃತವಾಗಿದ್ದು ಇಡೀ ದೇಹ ಪರಾಗರೇಣುಮಯವಾಗಿತ್ತು. ನಾನು ಪರಾಗರೇಣುಗಳನ್ನು ಮೂರುಬಾರಿ ಒಯ್ಯುವಷ್ಟರಲ್ಲಿ ಸೂರ್ಯಕಾಂತಿಯ ಹೆಣ್ಣು ಹೂಗಳು ಮಕರಂದವನ್ನು ಸ್ರವಿಸಲು ಪ್ರಾರಂಭಿಸಿದವು, ನಾನು ಪರಾಗರೇಣುಗಳನ್ನು ಕಾಲಿನಲ್ಲಿ ಮತ್ತು ಮಕರಂದವನ್ನು ನಾಲಿಗೆಯ ಮೂಲಕ ಒಟ್ಟಿಗೆ ಸಂಗ್ರಹಿಸತೊಡಗಿದೆ. ಆಗ ನನ್ನ ಕಾಲಿಗೆ ಅಂಟಿದ, ದೇಹದ ಮೇಲಿರುವ ಪರಾಗರೇಣುಗಳು ಸೂರ್ಯಕಾಂತಿಯ ಶಲಾಕೆಗೆ ಅಂಟಿಕೊಂಡಿದ್ದವು, ಇಲ್ಲಿ ನಿಮಗೊಂದು ಮುಖ್ಯವಾದ ವಿಷಯ ಹೇಳಲೇಬೇಕು. ನನ್ನ-ನನ್ನವರ ಒಂದು ಹವ್ಯಾಸವೆಂದರೆ ನಾವು ಮಕರಂದ ಮತ್ತು ಪರಾಗರೇಣುಗಳನ್ನು ಸಂಗ್ರಹಿಸಲು ಒಂದು ಪ್ರಭೇದದ ಸಸ್ಯಗಳಿಗೆ ಭೇಟಿಕೊಟ್ಟಾಗ, ಆ ಪ್ರಭೇದದ ಸಸ್ಯಗಳಲ್ಲಿ ಪೂರ್ತಿಯಾಗಿ ಸಂಗ್ರಹಿಸುವವರೆಗೂ ನಾವು ಬೇರೆ ಪ್ರಭೇದದ ಸಸ್ಯಗಳಿಗೆ ಭೇಟಿ ಕೊಡುವುದಿಲ್ಲ, ಈ ನಮ್ಮ ಹವ್ಯಾಸ ನಮಗೆ ತಿಳಿದಿಲ್ಲದಂತೆಯೇ ಸಸ್ಯ ಪ್ರಭೇದದ ಪರಾಗಸ್ಪರ್ಶದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿರುತ್ತೇವೆ. ಇಲ್ಲಿ ಗಿಡಗಳು ನಮಗೆ ಮಕರಂದ ಮತ್ತು ಪರಾಗರೇಣುಗಳನ್ನು ಉಡುಗೊರೆಯಾಗಿ ನೀಡಿದರೆ ನಾವು ಅದಕ್ಕೆ ಪ್ರತಿಯಾಗಿ ಅವುಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತೇವೆ.
ನಾನು ಮಕರಂದ ಸಂಗ್ರಹಿಸಿ ಪರಾಗರೇಣುಗಳನ್ನು ವರ್ಗಾಯಿಸಿ ನಂತರ ನಾನು, ನನ್ನ ಸಂಗ್ರಹಣಾಕಾರ್ಯದಲ್ಲಿ ಮಗ್ನಳಾದೆ. ಈ ಆಹಾರ ಸಂಗ್ರಹಣೆ ಕಾರ್ಯ ಹೂವು ಮಕರಂದ ಮತ್ತು ಪರಾಗರೇಣುಗಳನ್ನು ಸ್ರವಿಸುವುದನ್ನು ನಿಲ್ಲಿಸುವವರೆಗೂ ಅಥವಾ ಬಿಸಿಲೇರುವವರೆಗೂ ಮುಂದುವರೆಯುತ್ತದೆ. ಮತ್ತೆ ಸಂಜೆ ಯಥಾವತ್ತಾಗಿ ನಮ್ಮ ಸಂಗ್ರಹಣಾಕಾರ್ಯದಲ್ಲಿ ತೊಡಗುತ್ತೇವೆ. ಕೆಲವೊಮ್ಮೆ ನಮ್ಮ ಕೆಲಸ ಕಾರ್ಯಗಳು ವಾತಾವರಣವನ್ನು ಅವಲಂಬಿಸಿದ್ದು ಮಳೆ, ಗಾಳಿ, ಹೆಚ್ಚು ಬಿಸಿಲಿನ ಸಮಯದಲ್ಲಿ ನಮ್ಮ ಕಾರ್ಯಗಳನ್ನು ಸುಸೂತ್ರವಾಗಿ ಮಾಡಲಾಗುವುದಿಲ್ಲ. ಜೊತೆಗೆ ಮೋಡಮುಚ್ಚಿದ ವಾತಾವರಣದ ಸಮಯದಲ್ಲಿ ಹೂ ಅರಳುವುದಿಲ್ಲ, ಒಂದು ವೇಳೆ ಅರಳಿದರೂ ಮಕರಂದ ಸ್ರವಿಸುವಿಕೆ ಮತ್ತು ಪರಾಗರೇಣುಗಳು ಉತ್ಪತ್ತಿ ಕುಂಠಿತವಾಗಿರುತ್ತದೆ. ಈ ಸೂರ್ಯಕಾಂತಿಯಲ್ಲಿನ ಸಂಗ್ರಹಣಾಕಾರ್ಯ ಕೆಲದಿನಗಳವರೆಗೆ ಸುಸೂತ್ರವಾಗಿ ಸಾಗುತ್ತಿತ್ತು, ದಿನಕಳೆದಂತೆ ಮಕರಂದ ಮತ್ತು ಪರಾಗರೇಣುಗಳ ಉತ್ಪಾದನೆ ಕುಂಠಿತಗೊಂಡಿದ್ದರಿಂದ ನಾನು, ನನ್ನ ಸಂಗ್ರಹಣಾ ಕಾರ್ಯವನ್ನು ಉತ್ತರ ದಿಕ್ಕಿನ ಹತ್ತಿ ಬೆಳೆಗೆ ವರ್ಗಾಯಿಸಬೇಕಾಯಿತು, ಇದೇ ನನ್ನ-ನನ್ನ ಕುಟುಂಬದ ಮಾರಣಹೋಮಕ್ಕೆ ನಾಂದಿಯಾಗುತ್ತದೆಂದು ಕಲ್ಪಿಸಿಕೊಂಡಿರಲಿಲ್ಲ.
ಮುಂದುವರೆಯುವುದು…
ಲೇಖನ: ಹರೀಶ ಎ. ಎಸ್. ಜಿಕೆವಿಕೆ, ಬೆಂಗಳೂರು ನಗರ ಜಿಲ್ಲೆ