ಲಕ್ಕವಳ್ಳಿ
© ಡಾ. ದೀಪಕ್ ಭ.
ಎಂದೋ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡಕ್ಕೆ ಅನುವಾದಿಸಿರುವ ಕೆನೆತ್ ಆಂಡರ್ಸನ್ ರ ಬೇಟೆಯ ಕತೆಗಳನ್ನು ಓದುವಾಗ ‘ಲಕ್ಕವಳ್ಳಿಯ ಹೆಬ್ಬುಲಿ’ ಎಂಬ ಕತೆಯನ್ನು ಸಹ ಓದಿದ್ದೆ. ಅವರ ಅನುಭವದ ಎಲ್ಲಾ ಕಥೆಗಳಂತೆ ಆ ಕಥೆಯೂ ಕೂಡ ತುಂಬಾ ರೋಚಕವಾಗಿತ್ತು. ಕರ್ನಾಟಕದಲ್ಲಿನ ಆ ಜಾಗವನ್ನು ಒಮ್ಮೆ ನೋಡಲೇಬೇಕೆಂದು ಆಗ ಅಂದುಕೊಂಡದ್ದು ಸುಳ್ಳಲ್ಲ. ಆದರೆ ಕಾಲ ಕಳೆದಂತೆ ಅದು ಮರೆತೇ ಹೋಗಿತ್ತು.
ಹಿಂದಿನ ವರ್ಷ, ಜನವರಿ ತಿಂಗಳಲ್ಲಿ ಕೆಲಸದ ನಿಮಿತ್ತ ತರೀಕೆರೆಗೆ ಹೋಗಬೇಕಿತ್ತು. ನನ್ನ ಆಪ್ತಮಿತ್ರನೊಬ್ಬ ಸಹ ಬೆಂಗಳೂರಿನಿಂದ ತರೀಕೆರೆಗೆ ಬರುವವನಿದ್ದ. ಹೊರಡುವ ಹಿಂದಿನ ದಿನದ ರಾತ್ರಿ ಅವನಿಗೆ ಕರೆಮಾಡಿದಾಗ, “ಕ್ಯಾಮೆರಾ ಇಟ್ಕೊಳ್ರಿ, ನಾನು ಬೈನಾಕ್ಯುಲರ್ ತರ್ತೀನಿ ಬೆಳಿಗ್ಗೆ ಭದ್ರಾ ಕಾಡಿಗೆ ಹೋಗೋಣ” ಎಂದ. ಭದ್ರಾ ಕಾಡು ಎಂದೊಡನೆ ನನಗೆ ಮೊದಲು ನೆನಪಿಗೆ ಬಂದದ್ದೇ ಲಕ್ಕವಳ್ಳಿ ಹಾಗು ಲಕ್ಕವಳ್ಳಿಯ ಹೆಬ್ಬುಲಿಯ ಕಥೆ. ಈ ಭದ್ರಾ ಕಾಡಿನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಹಾಗೆ ಸುಮ್ಮನೆ ಗೂಗಲ್ ಮಾಡಿದೆ.
ಜಾಗರ ಕಣಿವೆ ಎಂದು 1951ರಲ್ಲಿ ಕರೆಸಿಕೊಂಡ ಈ ಕಾಡು, ಸುತ್ತಮುತ್ತಲು ಹೆಚ್ಚು ವಿಭಿನ್ನ ಜೀವ ವೈಶಿಷ್ಟ್ಯವನ್ನು ಒಳಗೊಂಡಿರುವ ಕಾರಣ ತನ್ನ ವಿಸ್ತೀರ್ಣವನ್ನು ಹೆಚ್ಚಿಸಿಕೊಂಡು 1974ರಲ್ಲಿ ಭದ್ರಾ ಅರಣ್ಯವಾಯಿತು. ಮುಳ್ಳಯ್ಯನಗಿರಿ, ಹೆಬ್ಬೆಗಿರಿ, ಗಂಗೆಗಿರಿ, ಬಾಬಾ ಬುಡನಗಿರಿ ಬೆಟ್ಟಗಳ ಇಳಿಜಾರಿನಲ್ಲಿರುವ ಭದ್ರಾಕಾಡನ್ನು 1998ರಲ್ಲಿ ಹುಲಿ ಅಭಯಾರಣ್ಯ ಎಂದು ಘೋಷಿಸಲಾಯಿತು. ಸ್ವತಂತ್ರ ಪೂರ್ವ ಭಾರತದಲ್ಲಿ ಹುಲಿಗಳಿದ್ದ ಈ ತಾಣವು ಬ್ರಿಟೀಷರ ಆರ್ಭಟಕ್ಕೆ ನಲುಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು, ಸರ್ಕಾರದ ಪ್ರಯತ್ನಗಳ ಫಲವಾಗಿ ಮತ್ತೆ ಹುಲಿಗಳ ತಾಣವಾಗಿ ಪರಿವರ್ತನೆಯಾಗಿರುವುದು ಈ ನೆಲದ ಪುಣ್ಯವೇ ಸರಿ. ಇಲ್ಲಿನ ಅಭಯಾರಣ್ಯದೊಳಗಿದ್ದ 26 ಹಳ್ಳಿಗಳನ್ನು ಸ್ಥಳಾಂತರಿಸಿರುವುದು ದೇಶದಲ್ಲೇ ಮೊದಲು ಹಾಗೂ ಪ್ರಕೃತಿ ರಕ್ಷಣೆಗೆ ಕೆಲಸ ಮಾಡುತ್ತಿರುವ ಅರಣ್ಯ ಇಲಾಖೆಯ ಕಾರ್ಯಕ್ಕೆ ಹಿಡಿದ ಕನ್ನಡಿ.
ಇಷ್ಟೆಲ್ಲಾ ಮಾಹಿತಿ ತಿಳಿದುಕೊಂಡ ಮೇಲೆ ಆ ಕಾಡಿನ ಮೇಲಿನ ಕುತೂಹಲ ಇನ್ನೂ ಹೆಚ್ಚಾಯಿತು. ಆ ಕಾಡು ಹೇಗಿರಬಹುದು? ತನ್ನ ಸ್ವಂತತೆಯನ್ನು ಉಳಿಸಿಕೊಂಡಿದೆಯೇ? ಬ್ರಿಟೀಷರ ನೆಡುತೋಪಾಗಿ ಪರಿವರ್ತನೆಗೊಂಡಿದೆಯೇ? ಎಂದೆಲ್ಲಾ ಆಲೋಚನೆಗಳು ಬರತೊಡಗಿದವು. ಅದಕ್ಕೆ ತೆರೆ ಬಿದ್ದದ್ದು ತರೀಕೆರೆಯಲ್ಲಿ ನಮ್ಮೆಲ್ಲಾ ಕೆಲಸಗಳನ್ನು ಮುಗಿಸಿ ಮಾರನೆಯ ದಿನ ಅಲ್ಲಿನ ಸಫಾರಿಗೆ ಹೊರಟಾಗ. ಬೆಳಿಗ್ಗೆ 5.30ಕ್ಕೆ ಎದ್ದು ಹಲ್ಲನ್ನೂ ಸಹ ಉಜ್ಜದೆ 6 ಗಂಟೆಗೆಲ್ಲಾ ಲಕ್ಕವಳ್ಳಿಯಲ್ಲಿದ್ದ ಅರಣ್ಯ ಇಲಾಖೆಯ ಸಫಾರಿ ಆರಂಭದ ಸ್ಥಳವನ್ನು ತಲುಪಿದೆವು. ಇನ್ನೂ ಕತ್ತಲು ಹಾಗೆಯೇ ಇತ್ತು, ಸ್ವಲ್ಪ ಚಳಿಯೂ ಇತ್ತು. ನಮ್ಮಂತೆಯೇ ಸಫಾರಿಗಾಗಿ ಉಡುಪಿಯಿಂದ ಬಂದಿದ್ದ ಒಬ್ಬರನ್ನು ಅಲ್ಲಿ ಭೇಟಿಯಾದೆವು. ಸುತ್ತಲೂ ಕಣ್ಣಾಯಿಸಿದೆವು, ಅರಣ್ಯ ಇಲಾಖೆಯವರು ಯಾರು ಕಾಣಲಿಲ್ಲ. 6.25ರ ಸುಮಾರಿಗೆ ಅಲ್ಲೇ ಇದ್ದ ಕಾವಲು ಸ್ಥಳದಿಂದ ಬಂದ ಅರಣ್ಯ ಇಲಾಖೆಯವರು “ಎಷ್ಟು ಜನರಿದ್ದೀರ?” ಎಂದರು. ಅಷ್ಟರಲ್ಲಿ ಸಫಾರಿಗೆ ಇನ್ನಿಬ್ಬರು ಬಂದಿದ್ದರು. ಅರಣ್ಯ ಇಲಾಖೆಯವರೇ ಮಾತು ಮುಂದುವರಿಸುತ್ತಾ “ಐದು ಜನ ಇದೀರ, ಒಂದು ಜೀಪ್ ಹೊರಟ್ರೆ ಕನಿಷ್ಠ3500ರೂ ಆಗುತ್ತೆ, ತಾಳಿ ಚಾಲಕ ಬರಲಿ, ಇನ್ನೂ ಚಳಿನೇ ಬಿಟ್ಟಿಲ್ಲ ಶಿವರಾತ್ರಿ ಕಳೆದ್ರೂ…” ಅಂತ ಅವರೂ ಸಹ ನಮ್ಮೊಡನೆ ಮಾತಿಗೆ ನಿಂತರು. ಸ್ವಲ್ಪ ಸಮಯದ ತರುವಾಯ ಚಾಲಕನು ಸಹ ಬಂದನು. ಬಂದವನೇ ನಮ್ಮನ್ನು ಎಣಿಸಿ “ಐದು ಜನರಿದ್ದೀರ, ಈಗಲೇ ಹೊರಡಬೇಕು ಎಂದಾದರೆ ಒಬ್ಬೊಬ್ಬರಿಗೆ 700 ರೂಗಳು ಆಗುತ್ತದೆ, ಇಲ್ಲವಾದಲ್ಲಿ ಇನ್ನೂ ಸ್ವಲ್ಪ ಕಾಯ್ದು ನೋಡೋಣ” ಎಂದನು. ಆದಷ್ಟು ಬೇಗ ಸಫಾರಿಗೆ ಹೋದರೆ ಒಳಿತು ಎಂದು ತಿಳಿದಿದ್ದ ನಾವು “ತಲಾ 700 ರೂ ಕೊಡಲು ತಯಾರಿದ್ದೇವೆ ಎಂದೆವು.” ತಕ್ಷಣವೇ ಜೀಪನ್ನು ತಂದ ಚಾಲಕನು ಎಲ್ಲರನ್ನು ಜೀಪಿನಲ್ಲಿ ಕರೆದುಕೊಂಡು ಒಂದೆರಡು ಅಡಿಕೆ ತೋಟಗಳನ್ನು ದಾಟಿ ಕಾಡಿನ ಒಳ ಹೊಕ್ಕನು.
ಕಾಡಿನಲ್ಲೆಲ್ಲಾ ಉದುರಿದೆಲೆಗಳು. ಸ್ವಲ್ಪ ಕಾಡಿನ ಒಳ ಹೋದ ನಂತರ ಈ ಕಾಡಿನಲ್ಲಿ ಮರಗಳ ದಟ್ಟಣೆ ಹೆಚ್ಚಿದೆ ಎನಿಸಿತು. ಬಲಕ್ಕೆ ತಿರುಗಿದ ಜೀಪ್ ಭದ್ರಾ ಅಣೆಕಟ್ಟೆಯ ಹಿನ್ನೀರಿನತ್ತ ಸಾಗಿ ಅಲ್ಲೇನೂ ಕಾಣದ ಕಾರಣ ಮತ್ತೆ ಹಿಂತಿರುಗಿತು. ನದಿ ರೀವಾ (ರಿವರ್ ಟರ್ನ್) ಹಕ್ಕಿಗಳನ್ನು ಕಂಡು ನಾನು ರಿವರ್ ಟರ್ನ್, ರಿವರ್ ಟರ್ನ್ . . . ಎನ್ನುತ್ತಿದ್ದರೂ ಲೆಕ್ಕಿಸದ ಚಾಲಕ ಗಾಡಿ ನಿಲ್ಲಿಸದೆ ಮುಂದೆ ಸಾಗಿದ.
ಸುಮಾರು ಅರ್ಧಗಂಟೆ ಕಳೆದರೂ ಯಾವ ದೊಡ್ಡ ಪ್ರಾಣಿಗಳ ದರ್ಶನವಾಗಲೇ ಇಲ್ಲ. ನನಗೆ ಸಣ್ಣ ತೂಕಡಿಕೆ ಆರಂಭವಾಯಿತು. ನಾನು ಪಕ್ಕದಲ್ಲಿದ್ದ ನನ್ನ ಸ್ನೇಹಿತನಿಗೆ “ಎಲ್ಲಿ ಒಂದು ಸಣ್ಣ ಪ್ರಾಣಿಯೂ ಇಲ್ಲ” ಎಂದೆ. ಅವನು “ಎಲ್ಲಾ ಒಳಗೆ ಹೊಗಿರುತ್ತೆ” ಎಂದ. ತೂಕಡಿಸುತ್ತಿದ್ದ ನನಗೆ, ನನ್ನ ಬಾಯಿಯಿಂದ ವಾಸನೆ ಬರುತ್ತಿದೆ ಎನಿಸಿತು. ಹಲ್ಲುಜ್ಜದೇ ಬಂದಿದ್ದ ನನಗೆ ನಾಚಿಕೆ ಎನಿಸಿತು. ಹೀಗೆನಿಸಿದ ಒಂದೆರಡು ನಿಮಿಷಕ್ಕೆ ಆನೆ ಲದ್ದಿ ಕಂಡಿತು, ಇನ್ನೂ ಹಸಿಯಾಗಿದ್ದ ಅದನ್ನು ಕಂಡು ಆನೆ ಸಿಗಬಹುದೇನೋ ಎಂದುಕೊಂಡೆವು. ಕೆಲವು ನಿಮಿಷ ಕಳೆಯುವಷ್ಟರಲ್ಲೇ ನಮ್ಮ ಊಹೆಯಂತೆ ಆನೆಯ ಹಿಂಡೊಂದು ನಮ್ಮ ಬಲಕ್ಕೆ ಕಂಡಿತು. ಬಲು ಸಮೀಪದಲ್ಲಿದ್ದ ಆನೆಗಳು ನಮ್ಮನ್ನು ಕಂಡು ಒಳ ಹೋದವು, ಒಂದು ಹೆಣ್ಣಾನೆ ಮರದ ತೊಗಟೆಯನ್ನು ಸುಲಿದು ತಿನ್ನುತ್ತಿತ್ತು; ಸ್ವಲ್ಪ ಒಳಗಡೆ ದೊಡ್ಡ ಗಂಡಾನೆಯು ಮರವನ್ನು ಬುಡಮೇಲು ಮಾಡುತ್ತಿತ್ತು. ಇದನ್ನೆಲ್ಲಾ ಕೆಲಹೊತ್ತು ನೋಡಿದ ಮೇಲೆ ಅಲ್ಲಿಂದ ಮುಂದುವರೆದೆವು. ಮುಂದೆ ಹೋದಾಗ ಸಫಾರಿ ರಸ್ತೆಗೆ ಆನೆ ಮರ ಉರುಳಿಸಿ, ಅದರ ತೊಗಟೆಯನ್ನು ಎಳೆದು ತಿಂದಿತ್ತು. ಡ್ರೈವರ್ ಕೆಳಗಿಳಿದು ಒಂದು ಕೊಂಬೆಯನ್ನು ಪಕ್ಕಕ್ಕೆ ಸರಿಸಿ ಜೀಪ್ ಸಾಗುವಷ್ಟು ದಾರಿ ಮಾಡಿದ, ಆಗ ಮರವನ್ನು ದಾಟಿ ಮುನ್ನಡೆದೆವು. ಸ್ವಲ್ಪ ಸಮಯದಲ್ಲಿಯೇ ಒಂದು ಕಾಟಿ ನಮಗೆದುರಾಯಿತು. ಗಾಳಿಯಲ್ಲಿ ವಾಸನೆ ಹಿಡಿಯುತ್ತ ಅದು ನಮ್ಮ ಜೀಪಿನ ಎಡ ಭಾಗದಿಂದ ಬಲಗಡೆಗೆ ಸಾಗಿತು. ಅದರ ಮೈ ಕಟ್ಟನ್ನು ನೋಡುವುದೇ ಮಹದಾನಂದ!
ಕಳೆದ ವರ್ಷ ಮಾಕುಟ್ಟ ಕಾಡಿಗೆ ಹೋಗಿದ್ದಾಗ, ಒಂದು ಕಪ್ಪನೆಯ ಬಣ್ಣದ ಮರವನ್ನು ಬೂದು ಬಣ್ಣದ ಬೀಳಲುಗಳು ಅಪ್ಪಿಕೊಂಡಿರುವುದನ್ನು ಕಂಡು, ನಾನು ಜೊತೆಯಲ್ಲಿದ್ದ ಇನ್ನೊಬ್ಬ ಗೆಳೆಯನನ್ನು ಏನದು? ಎಂದು ಕೇಳಲು, ಅವನು “ಫಿಗ್ ಪ್ರಭೇದದ ಒಂದು ಮರವು ಮತ್ತೊಂದು ಪ್ರಭೇದದ ಯಾವುದೋ ಮರವನ್ನು ತಬ್ಬುತ್ತಾ ಬೆಳೆಯುತ್ತಿದೆ. ಹಕ್ಕಿ ಹಾಕುವ ಹಿಕ್ಕೆಯಲ್ಲಿ ಈ ಫಿಗ್ ಪ್ರಭೇದದ ಮರದ ಬೀಜವಿರುತ್ತದೆ. ಯಾವುದಾದರೂ ಮರದ ಮೇಲೆ ಕುಳಿತಾಗ ಹಕ್ಕಿಗಳು ಹಿಕ್ಕೆ ಹಾಕಿದರೆ ಆ ಮರದ ಮೇಲೆಯೇ ನಿಧಾನಕ್ಕೆ ಮೊಳಕೆಯೊಡೆಯಲು ಶುರುಮಾಡುತ್ತದೆ. ನಂತರ ಒಂದು ಸಣ್ಣ ಬೀಳಲು ಬೇರನ್ನು ಕೆಳಗಡೆ ಇಳಿ ಬಿಡುತ್ತದೆ. ಆ ಬಳ್ಳಿ ನೆಲಕ್ಕೆ ತಾಕೀತು ಎಂದಾಕ್ಷಣ ಎಲ್ಲಾ ರೆಂಬೆ ಕೊಂಬೆಗಳಿಗೆ, ಕಾಂಡಕ್ಕೆ ಬೇಕಾದ ಲವಣಾಂಶಗಳನ್ನು ನೆಲದಿಂದ ಎಳೆದು ತಲುಪಿಸುತ್ತದೆ. ಇದರ ಕಾಂಡವು ಅಷ್ಟು ಗಟ್ಟಿ ಇರದ ಕಾರಣ ಹಲವಾರು ವರ್ಷ ಜೊತೆಯಲ್ಲಿದ್ದ ಮರವನ್ನೇ ತಬ್ಬಿ ಬೆಳೆಯುತ್ತದೆ. ಬೇರು, ಕಾಂಡ, ರೆಂಬೆ ಕೊಂಬೆಗಳು, ಎಲೆಗಳು ಎಲ್ಲವೂ ಬೆಳೆದ ನಂತರ ಆಸರೆಯಾಗಿದ್ದ ಮರವನ್ನು ಗಟ್ಟಿಯಾಗಿ ತಬ್ಬುತ್ತಾ, ಅದು ಮತ್ತಷ್ಟು ದಪ್ಪವಾಗದಂತೆ ತಡೆಯುತ್ತದೆ. ದಪ್ಪವಾಗಲಾರದ ಅದು ನಿಧಾನವಾಗಿ ಉಸಿರು ಕಟ್ಟಿ ಸಾಯುತ್ತದೆ. ಅಷ್ಟರಲ್ಲಿ ಬಲಿಷ್ಠವಾದ ಈ ಫಿಗ್ ಮರವು ಸ್ವತಂತ್ರವಾಗಿ ಬೆಳೆಯುತ್ತದೆ. ಈ ಪ್ರಕ್ರಿಯೆ ನಡೆಯಲು ಹಲವಾರು ವರ್ಷಗಳು ಬೇಕಾಗುತ್ತದೆ” ಎಂದು ವಿವರಿಸಿದ್ದರು. ಮರಗಳ ನಡುವಿನ ಈ ಹೋರಾಟದ ವಿಷಯವನ್ನು ಕೇಳಿ ಚಕಿತನಾಗಿದ್ದೆ. ಒಂದು ಮರ ಬಾಳಿ ಬದುಕಬೇಕಾದರೆ ಈ ಪರಿಸರದಲ್ಲಿ ಎಂತಹ ಹೋರಾಟ ನಡೆಸಬೇಕಾಗುತ್ತದೆ ಅಲ್ಲವೇ? ಒಂದು ಕ್ಷಣ ಸಹಾಯ ಮಾಡಿದ ಮರವನ್ನೇ ಕೊಲೆ ಮಾಡಿದ ಹಾಗೆ ಎನಿಸುತ್ತದೆ ಆದರೆ ಆ ಫಿಗ್ ಮರ ಬದುಕಬೇಕೆಂದರೆ ಈ ಕೆಲಸ ಅನಿವಾರ್ಯವಲ್ಲವೇ? ಇದು ಪ್ರಕೃತಿಯ ಹೋರಾಟ, ನಮ್ಮ ತರ್ಕದಲ್ಲಿ ಯಾವುದೇ ತೀರ್ಮಾನಕ್ಕೆ ಬರವುದು ಸ್ವಲ್ಪ ಕಷ್ಟದ ಸಂಗತಿ.
ಈ ವಿಷಯವನ್ನು ಈಗ ಹೇಳಲು ಕಾರಣ ನಮ್ಮ ಸಫಾರಿಯಲ್ಲಿಯೂ ಸಹ ಇದೇ ಪ್ರಭೇದದ ಫಿಗ್ ಮರ ಮತ್ತು ಅದಕ್ಕೆ ಆಶ್ರಯ ನೀಡಿದ್ದ ಮತ್ತೊಂದು ಮರವು ನೆಲಕ್ಕೆ ಉರುಳಿರುವುದನ್ನು ಕಂಡು. ಈ ಚಿತ್ರಣ ನಮ್ಮ ಜೊತೆಯಲ್ಲಿದ್ದ ಯಾರ ಗಮನವನ್ನು ಸೆಳೆಯಿತೋ ನನಗೆ ತಿಳಿಯದು ಆದರೆ ಈ ಮರಗಳ ಸಂಬಂಧ ತಿಳಿದಿದ್ದ ನನ್ನ ಗಮನವನ್ನಂತೂ ಸೆಳೆಯಲು ಸೋಲಲಿಲ್ಲ. ಅದನ್ನೇ ಇನ್ನೂ ಸೂಕ್ಷ್ಮವಾಗಿ ಗಮನಿಸಿದ ನನಗೆ ಇದು ಯಾವುದೋ ಆನೆಯ ಕೆಲಸ ಎಂದೆನಿಸಿತು. ಹಾಗೆ ಮುಂದೆ ಸಾಗುತ್ತ ಈ ರೀತಿಯ ಹಲವಾರು ಗಿಡಗಳನ್ನು ನೋಡಿದೆನು.
ಸ್ವಲ್ಪ ದೂರ ಸಾಗುತ್ತಲೇ ಸಫಾರಿ ರಸ್ತೆಯ ಬಲಗಡೆಗೆ ಒಂದು ಕಡವೆಯನ್ನು ಕಂಡೆವು; ಅದು ನಮ್ಮನ್ನು ಕಂಡು ಓಡಲಾರಂಭಿಸಿತು. ನಾವು ಅದನ್ನು ನೋಡಲಿ ಎಂದು ಚಾಲಕ ಅದರ ಹಿಂದೆ ಬಿದ್ದ. ಅದು ಸ್ವಲ್ಪ ದೂರ ಓಡುವುದು ಮತ್ತೆ ನಮ್ಮತ್ತ ತಿರುಗುವುದು ಮಾಡಿತು. ಆಗ ಚಾಲಕ ‘ಫೋಟೋ ತಕ್ಕೊಳಿ, ಅದು ರಸ್ತೆ ದಾಟುತ್ತೆ’ ಎಂದು ಹೇಳಿದ, ಅದು ಕಾಡಿನೊಳಗೆ ಓಡದೆ ಯಾಕೆ ನಮ್ಮ ಜೀಪಿನೊಡನೆಯೇ ಓಡುತ್ತಿದೆ ಎಂದು ಆಗ ನನಗೆ ಅರ್ಥವಾಯಿತು. ನಂತರ ಕಾಡಿನೊಳಗೆ ಬ್ರಿಟೀಷರ ಕಾಲದ ಸುಖಾಲಹಟ್ಟಿ ವಿಶ್ರಾಂತಿ ಗೃಹಕ್ಕೆ ಬಂದೆವು. ಅಲ್ಲಿಂದ ನಮ್ಮ ವಾಪಾಸು ಪ್ರಯಾಣ ಆರಂಭವಾಯಿತು.
ಸ್ವಲ್ಪ ದೂರ ಸಾಗುವಷ್ಟರಲ್ಲೇ ಎರಡು ಮುಂಗುಸಿಗಳು ಕಂಡವು; ಕ್ಯಾಮೆರದಲ್ಲಿ ಅವುಗಳನ್ನು ಸೆರೆ ಹಿಡಿಯಲಾಗಲಿಲ್ಲ. ಮರದ ಮೇಲೆ ಒಂದು ಬ್ರೌನ್ ಶ್ರೈಕ್ ವಾಹನದ ಗಲಾಟೆಯನ್ನು ಸಹ ಲೆಕ್ಕಿಸದೆ ವಿಶ್ರಮಿಸುತ್ತಿತ್ತು. ಎರಡು ಪೈಡ್ ಮಂಗಟ್ಟೆ ಇವೆ ನೋಡಿ ಎಂದು ಚಾಲಕ ಜೀಪನ್ನು ನಿಲ್ಲಿಸುವಷ್ಟರಲ್ಲೇ ಅವು ಅಲ್ಲಿಂದ ಕಾಲ್ಕಿತ್ತಿದ್ದವು. ಎಂದೂ ಅವುಗಳನ್ನು ನೇರವಾಗಿ ನೋಡದ ನನಗೆ ಬೇಸರವಾಯಿತು. ಆದರೆ ಆ ಬೇಸರ ಹೆಚ್ಚು ಸಮಯ ಉಳಿಯಲಿಲ್ಲ. ಒಂದು ಅತ್ಯಾಕರ್ಷಕ ಬಣ್ಣದ ಕಾಡುಕೋಳಿಯನ್ನು, ರಸ್ತೆ ಬದಿಯಲ್ಲೇ ಮೇಯುತ್ತಾ ನಿಂತಿದ್ದ ಕಾಟಿಯನ್ನು ನೋಡಿ ಮತ್ತೆ ಮನಸ್ಸು ಉಲ್ಲಾಸಗೊಂಡಿತು.
ಈಗ ನಮ್ಮ ಜೀಪನ್ನು ಮೊದಲು ಬಂದಿದ್ದ ಭದ್ರಾ ಹಿನ್ನೀರನ ಬಳಿ ನಿಲ್ಲಿಸಿ ಫೋಟೋ ತಕ್ಕೊಳಿ ಎಂದರು. ಅಲ್ಲಿ ನದಿ ರೀವಾ (ರಿವರ್ ಟರ್ನ್) ಗಳು ತುಂಬಾ ಇದ್ದವು. ಅವುಗಳಿಂದಲೇ ಜಂಗಲ್ ಲಾಡ್ಜಸ್ ರವರು ಅವರ ಪ್ರಕೃತಿ ಶಿಬಿರಕ್ಕೆ ‘ರಿವರ್ ಟರ್ನ್ ರೆಸಾರ್ಟ್’ ಎಂದು ಆ ಘಟಕಕ್ಕೆ ಹೆಸರಿಟ್ಟಿರೋದಲ್ವೆ? ಎಂದು ಯೋಚಿಸುತ್ತಾ ಮುಂದೆ ಸಾಗಿದೆವು.
ಕೆಂದಳಿಲು, ಸಿಂಹಬಾಲದ ಸಿಂಗಳೀಕಗಳ ಗುಂಪು, ಗೂಬೆ, ಸರ್ಪೆಂಟ್ ಈಗಲ್ ಕಂಡವು. ಏನು ಗಂಭೀರತೆ ಈ ವನ್ಯಜೀವಿಗಳಲ್ಲಿ, ಯಾವ ತಂಟೆ ತಕರಾರೂ ಮಾಡದೆ ತಮಗೆ ಬದುಕಲು ಬೇಕಾದುದನ್ನು ಮಾತ್ರ ಪಡೆದುಕೊಂಡು ತಮ್ಮ ಪಾಡಿಗೆ ತಾವು ಬದುಕುತ್ತಿವೆ ಅಲ್ಲವೇ? ಎಂದು ಖುಷಿಯಾಯಿತು. ಅಲ್ಲಿಗೆ ನಮ್ಮ ಜೀಪ್ ಸಫಾರಿ ಕೊನೆಗೊಂಡಿತು. ಕಾಡಿನ ಬಗ್ಗೆ ಸಂಶಯಪಟ್ಟ ನನಗೆ ಜೊತೆಗೊಯ್ಯಲು ಸಾಕಷ್ಟು ನೆನಪುಗಳನ್ನು ಲಕ್ಕವಳ್ಳಿ ಕಾಡು ನೀಡಿತು.
ಲೇಖನ: ಡಾ. ದೀಪಕ್ ಭ.
ಮೈಸೂರು ಜಿಲ್ಲೆ
ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ