ಪ್ರಕೃತಿ ಬಿಂಬ

ಚಿರತೆ ಚಿಟ್ಟೆ ©ಹರಿಹರನ್ ಐ. ಎಸ್.
ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮ್ಯಾನ್ಮಾರ್ ನ ಬೆಟ್ಟಗಳು ಮತ್ತು ಬಯಲು ಪ್ರದೇಶಗಳಲ್ಲಿ ಕಂಡುಬರುವ ಈ ಚಿಟ್ಟೆಯು, ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಫಲಂತ ಫಲಾಂತ (Phalanta phalantha) ಎಂದು ಕರೆಯಲಾಗುತ್ತದೆ. ರೆಕ್ಕೆಯು ಕಂದು ಬಣ್ಣವಿದ್ದು, ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಶುಷ್ಕ-ಋತುವಿನಲ್ಲಿ ನೇರಳೆ ಹೊಳಪನ್ನು ರೆಕ್ಕೆಯ ಕೆಳಭಾಗದಲ್ಲಿ ಕಾಣಬಹುದಾಗಿದೆ. ಬಿಸಿಲನ್ನು ಪ್ರೀತಿಸುವ ಇವುಗಳು ತಮ್ಮ ರೆಕ್ಕೆಗಳನ್ನು ಬಿಸಿಲಿಗೆ ತೆರೆದು ಕೂರುವುದನ್ನು ಕಾಣಬಹುದು. ಅಕಾಂಥೇಸಿ, ಕಾಂಪೋಸಿಟೇ, ಫ್ಲಾಕೋರ್ಟಿಯೇಸಿ, ಪ್ರಿಮುಲೇಸಿ, ಸ್ಯಾಲಿಕೇಸಿ, ರೂಬಿಯೇಸಿ, ವಯೋಲೇಸಿ ಕುಟುಂಬಕ್ಕೆ ಸೇರುವ ಸಸ್ಯಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ಭಾರತದಾದ್ಯಂತ ಹಾಗೂ ಶ್ರೀಲಂಕಾ, ಮ್ಯಾನ್ಮಾರ್, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯದಲ್ಲಿ ಈ ಚಿಟ್ಟೆಗಳನ್ನು ಕಾಣಬಹುದಾಗಿದೆ. ಕುರುಚಲು ಕಾಡು, ಪಾಳುಭೂಮಿ, ಎಲೆಯುದುರುವ ಕಾಡು, ಭಾರೀ ಮಳೆಯಾಗುವ ಪ್ರದೇಶ, ಬೆಟ್ಟದ ಇಳಿಜಾರುಗಳಲ್ಲಿ ಕಂಡುಬರುವ ಇವುಗಳು, ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತವೆ. ಇದನ್ನು ವೈಜ್ಞಾನಿಕವಾಗಿ ಡ್ಯಾನಸ್ ಜೆನುಟಿಯಾ (Danaus genutia) ಎಂದು ಕರೆಯಲಾಗುತ್ತದೆ. ರೆಕ್ಕೆಯ ಮೇಲ್ಭಾಗವು ಕಿತ್ತಳೆ ಬಣ್ಣದಲ್ಲಿದ್ದು, ಬಿಳಿ ಹಾಗೂ ಕಪ್ಪು ಬಣ್ಣದ ಅಂಚುಗಳನ್ನು ಹೊಂದಿರುತ್ತದೆ. ಕೆಳಭಾಗವು ತೆಳು ಕಿತ್ತಳೆ ಬಣ್ಣದ್ದಾಗಿರುತ್ತದೆ. ಅಸ್ಕ್ಲೆಪಿಯಾಡೇಸಿ (Asclepiadaceae) ಕುಟುಂಬಕ್ಕೆ ಸೇರುವ ಗಿಡಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ಬಯಲು ಪ್ರದೇಶ ಹಾಗೂ ಗುಡ್ಡಗಾಡುಗಳಲ್ಲಿ ಕಾಣಸಿಗುವ ಮಧ್ಯಮ ಗಾತ್ರದ ಈ ಚಿಟ್ಟೆಯು ಪಿಯರಿಡೆ (Pieridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಬೆಲೆನೋಯಿಸ್ ಅರೋಟಾ (Belenois aurota) ಎಂದು ಕರೆಯಲಾಗುತ್ತದೆ. ಎರಡೂ ರೆಕ್ಕೆಗಳ ಅಂಚು ಕಪ್ಪು ಬಣ್ಣದಲ್ಲಿದ್ದು, ಗಂಡು ಚಿಟ್ಟೆಯಲ್ಲಿ ಮಾತ್ರ ಚದುರಿದ ಬಿಳಿ ತೇಪೆಗಳಿರುತ್ತವೆ. ಮುಂದಿನ ರೆಕ್ಕೆಗಳ ತಳಭಾಗವು ಬಿಳಿಯಾಗಿದ್ದು, ಆರ್ದ್ರ ಋತುವಿನಲ್ಲಿ ಮಾತ್ರ ಕೆನೆ ಬಣ್ಣಕ್ಕೆ ತಿರುಗುತ್ತವೆ. ಹಿಂಬದಿಯ ರೆಕ್ಕೆಗಳ ಕೆಳಭಾಗವು ಆರ್ದ್ರ ಋತುವಿನಲ್ಲಿ ಆಳವಾದ ಕಿತ್ತಳೆ ಬಣ್ಣವಿದ್ದು, ಶುಷ್ಕ ಋತುವಿನಲ್ಲಿ ತೆಳು ಹಳದಿಯಾಗಿರುತ್ತವೆ. ಕ್ಯಾಪರೇಸಿಯ (Capparaceae) ಕುಟುಂಬಕ್ಕೆ ಸೇರುವ ಗಿಡಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ಭಾರತದೆಲ್ಲೆಡೆ ಹಾಗೂ ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾದವರೆಗೆ ವ್ಯಾಪಕವಾಗಿ ತೇವಾಂಶವಿರುವ ಕಾಡುಗಳ ತಪ್ಪಲಿನಲ್ಲಿ, ಪೊದೆಗಳಲ್ಲಿ ಮತ್ತು ಕೆಲವೊಮ್ಮೆ ಕೃಷಿ ಭೂಮಿಯಲ್ಲಿ ಈ ಚಿಟ್ಟೆಯು ಕಂಡುಬರುತ್ತದೆ. ಹೆಸ್ಪೆರಿಡೆ (Hesperiidae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ಟ್ಯಾಗಿಡೆಸ್ ಜಪೆಟಸ್ (Tagiades japetus) ಎಂದು ಕರೆಯಲಾಗುತ್ತದೆ. ರೆಕ್ಕೆಗಳು ಗಾಢ ಕಂದು ಬಣ್ಣದಲ್ಲಿದ್ದು, ಮುಂಭಾಗದಲ್ಲಿ ಸಣ್ಣ ಬಿಳಿಯ ಚುಕ್ಕೆಗಳನ್ನು ಹೊಂದಿರುತ್ತವೆ. ಬಿಸಿಲಿನ ತಾಣಗಳಲ್ಲಿ ರೆಕ್ಕೆಗಳನ್ನು ಚಪ್ಪಟೆಯಾಗಿ ತೆರೆದುಕೊಂಡು ಕೂರುವುದನ್ನು ಕಾಣಬಹುದು. ಡಯೋಸ್ಕೋರಿಯೇಸಿ (Dioscoreaceae) ಕುಟುಂಬಕ್ಕೆ ಸೇರುವ ಗಿಡಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.
ಚಿತ್ರಗಳು : ಹರಿಹರನ್ ಐ. ಎಸ್.
ಲೇಖನ : ದೀಪ್ತಿ ಎನ್.