ಚೋರ ಜೇಡದ ವಿಚಾರ!

© G. BARRANTES, L. SEGURA-HERNÁNDEZ AND D. SOLANO-BRENES_ANIMAL BEHAVIOUR 2023
ಮನುಷ್ಯ ಯಾವುದಾದರು ರೀತಿಯಲ್ಲಿ ತೃಪ್ತಿಪಡಬಹುದು, ಎಂದಾದರೆ ಅದು “ಆಹಾರ”ದಲ್ಲಿ ಮಾತ್ರ. ಹೌದು ಹಸಿದಾಗ ರುಚಿಯು ಪ್ರಾಮುಖ್ಯ ಹೀನದಂತೆ ಇರುತ್ತದೆ. ಅದೇ ಸ್ವಲ್ಪ ಹೊಟ್ಟೆ ತುಂಬಿದ್ದರೆ, ರುಚಿಯಾಗಿದೆಯಾ? ಎಂಬ ಪ್ರಶ್ನೆಗಳ ಮೂಲಕ ಆಹಾರದ ರುಚಿಯ ಪ್ರಾಮುಖ್ಯತೆ ಬದಲಾಗುತ್ತದೆ. ಅದೇ.. ಒಮ್ಮೆ ಹೊಟ್ಟೆ ತುಂಬಿತೆಂದರೆ ಅದೆಂಥಾ ರುಚಿಯ ನಳಪಾಕವಾದರೂ ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಮೃಷ್ಟಾನ್ನ ಭೋಜನದ ಮುಂದೆ ಕೂರಿಸಿದರೂ ಕೈ ಮತ್ತು ಬಾಯಿ ಸಂವಹಿಸುವುದಿಲ್ಲ. ಉಚಿತವಾಗಿ ಅಥವಾ ವಾಸ್ತವದಲ್ಲಿ ಉಚಿತವಾಗಿ ಸಿಗುತ್ತಿರುವ ನೀರು, ಗಾಳಿಯನ್ನು ಬಿಟ್ಟರೆ ಮನುಷ್ಯ ಅಥವಾ ಯಾವುದೇ ಜೀವಿಯಾದರೂ ಈ ಜೀವ ಗ್ರಹದಲ್ಲಿ ಬದುಕಲು ಶ್ರಮ ಪಡಬೇಕಾದದ್ದು ‘ಆಹಾರಕ್ಕಾಗಿ’ ಮಾತ್ರ. ಪ್ರತಿಯೊಂದು ಜೀವಿಯೂ ಆಹಾರಕ್ಕಾಗಿ ಇನ್ನೊಂದರ ಮೇಲೆ ಅವಲಂಬಿಸಿರಲೇ ಬೇಕು. ಆ ಅವಲಂಬನೆ ಸಸ್ಯಾಹಾರಿಗಳಿಗೆ ಸಸ್ಯಗಳ ಮೇಲೆ ಇರುತ್ತದೆ, ಮಾಂಸಾಹಾರಿಗಳಿಗೆ ಇನ್ನೊಂದು ಪ್ರಾಣಿಯ ಮೇಲಿರುತ್ತದೆ. ಬಹುಪಾಲು ಜೀವಿಗಳು ತಮ್ಮ ಆಹಾರವನ್ನಾಗಿ ಬೇರೆ ಪ್ರಭೇದದ ಜೀವಿಗಳ ಮೇಲೆ ಅವಲಂಬಿಸಿರುತ್ತವೆ. ಆದರೆ ಕೆಲವೊಮ್ಮೆ ಅಥವಾ ಕೆಲವು ಪ್ರಭೇದದ ಜೀವಿಗಳು ಮಾತ್ರ ತಮ್ಮ ಪ್ರಭೇದದ ಜೀವಿಗಳನ್ನೇ ಆಹಾರವನ್ನಾಗಿ ಸೇವಿಸುತ್ತವೆ. ಇದನ್ನು ಸ್ವಜಾತಿ ಭಕ್ಷಣೆ ಮತ್ತು ಅವುಗಳನ್ನು ಸ್ವಜಾತಿ ಭಕ್ಷಕಗಳೆನ್ನುತ್ತಾರೆ. ಉದಾಹರಣೆಗೆ; ಸಾಮಾನ್ಯವಾಗಿ ಹಾವುಗಳ ಆಹಾರ ಇಲಿಯೋ, ಕಪ್ಪೆಯೋ ಆಗಿರುತ್ತದೆ, ಅಥವಾ ಇನ್ಯಾವುದೋ ಜೀವಿ ಇರಬಹುದು. ಆದರೆ ಕಾಳಿಂಗ ಸರ್ಪಕ್ಕೆ ಕೆಲವೊಮ್ಮೆ ಆಹಾರ ಇನ್ನೊಂದು ಕಾಳಿಂಗ ಸರ್ಪವೇ ಆಗಿರುತ್ತದೆ. ಇದನ್ನೇ ಸ್ವಜಾತಿ ಭಕ್ಷಣೆ (cannibalism) ಎನ್ನುತ್ತಾರೆ. ಈ ರೀತಿಯ ಸ್ವಜಾತಿ ಭಕ್ಷಣೆ ಬಗ್ಗೆ ಸುಮಾರು ಜೀವಿಗಳಲ್ಲಿ ಕೇಳಿರಬಹುದಾದರೂ ಜೇಡಗಳಲ್ಲಿ ಇವು ಕೊಂಚ ವಿಶೇಷವೆಂದೇ ಹೇಳಬಹುದು. ಏಕೆಂದರೆ ರಾತ್ರಿಯೆಲ್ಲಾ ಬಲೆ ಹೆಣೆದು, ತಾಳ್ಮೆಯಿಂದ ಕಾದು ಕುಳಿತು ಆಹಾರ ಕೀಟ ಬಂದು ಬಲೆಯೊಳಗೆ ಸಿಲುಕಿದ ನಂತರ ಹೋಗಿ ತಿನ್ನುತ್ತದೆ. ಆದರೆ ಪೈರೇಟ್ ಅಥವಾ ಚೋರ ಜೇಡಗಳು ಎಂದು ಕರೆಯಲ್ಪಡುವ ಕುಟುಂಬಕ್ಕೆ ಸೇರಿದ ಜೇಡಗಳು ಮಾತ್ರ ತನ್ನ ಬೇಟೆಗೆ ಜೇಡರಬಲೆಗಳನ್ನು ಹೇಣೆಯದೇ ತಂತ್ರ-ಕುತಂತ್ರಗಳಿಂದ ಕೂಡಿದ ಆಲೋಚನೆಗಳನ್ನು ಹೆಣೆಯುತ್ತವೆ…

ಅದು ಹೇಗೆ? ಅದೇ ಹೇಳಲು ಬಂದೆ, ಸ್ವಜಾತಿ ಭಕ್ಷಕ ಜೇಡಗಳು ಬೇರೆ ಜೇಡಗಳ ಬಲೆಗೆ ಹೋಗಿ ಹೇಗೆ ಆ ಬಲೆಯನ್ನು ಅಲುಗಾಡಿಸುತ್ತವೆ ಎಂದರೆ, ಬಲೆ ಮಾಲಿಕ ಜೇಡ ಯಾವುದೋ ಆಹಾರ ಕೀಟ ಮನೆ ಬಾಗಿಲು ತಟ್ಟುತ್ತಿದೆ ಎಂದು ಭಾವಿಸಿ ಅಲ್ಲಿಗೆ ಧಾವಿಸುತ್ತದೆ. ಆಗ ಈ ಚೋರ ಜೇಡ ಅದನ್ನೇ ಕಬಳಿಸಿಬಿಡುತ್ತದೆ. ಅಷ್ಟೇ ಅಲ್ಲ. ಕೆಲವೊಮ್ಮೆ ಈ ಚೋರ ಜೇಡಗಳು ಬೇರೆ ಜೇಡಗಳ ಬಲೆಯ ಮೇಲೆ ನಿಂತು ಸಂಗಾತಿಯನ್ನು ಸೆಳೆಯುವಾಗ ಮಾಡುವ ನೃತ್ಯವನ್ನೇ ಅಣುಕಿಸುತ್ತವೆ. ಬಂದಿರುವುದು ನಿಜವಾದ ಸಂಗಾತಿ ಜೇಡವಿರಬಹುದು ಎಂದು ಹತ್ತಿರ ಹೋಗುವ ಬಲೆಯ ಮಾಲಿಕ ಜೇಡವು ಈ ಜೇಡಗಳಿಗೆ ಆಹಾರವಾಗುತ್ತವೆ. ಇಂತಹುದೊಂದು ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಳುವುದೇ ಅಚ್ಚರಿಯೆನಿಸುತ್ತದೆ. ಇಂತಹುದರಲ್ಲಿ ಜಿ.ಸಿಕಿರ್ರೆಸ್(G.siquirres) ಎಂಬ ಪ್ರಭೇದದ ಜೇಡ ಬೇರೆ ಸ್ವಜಾತಿ ಭಕ್ಷಕ ಜೇಡಗಳಂತೆ ಆಹಾರ ಜೇಡದ ಬಲೆಗೆ ಹೋಗದೇ ಜೇಡಗಳೇ ತನ್ನ ಬಲೆಗೆ ಬಂದು ಬೀಳುವ ಹಾಗೆ ಮಾಡುತ್ತವೆ. ಇದಲ್ಲವೇ ಗಮ್ಮತ್ತು!


ಆರ್ಬ್ ವೀವರ್(orb weaver) ಎಂಬ ಪ್ರಭೇದದ ಜೇಡಗಳು ಬಲೆ ಹೆಣೆಯುವ ಬಗೆ ವಿಶೇಷ. ಏಕೆಂದರೆ ಬೇರೆ ಬಹುತೇಕ ಜೇಡಗಳಂತೆ ಈ ಜೇಡಗಳು ಒಂದು ಮರದ ಕೊಂಬೆಯ ತುದಿಯಲ್ಲಿ ಕುಳಿತು ಮೊದಲು ಒಂದೇ ಒಂದು ಬಲೆಯ ಎಳೆಯನ್ನು ತನ್ನಿಂದ ಬೇರ್ಪಡಿಸದೇ ಸ್ವತಂತ್ರವಾಗಿ ಗಾಳಿಗೆ ಬಿಡುತ್ತದೆ. ಗಾಳಿಯಲ್ಲಿ ತೇಲುತ್ತಾ ಬೆಳೆಯುತ್ತಾ ಹೋಗುವ ಆ ಎಳೆ ಯಾವಾಗ ಬೇರೊಂದು ಮರದ ರೆಂಬೆಯನ್ನು ತಾಗುತ್ತದೋ ಆಗ ಅಂಟಿಕೊಳ್ಳುತ್ತದೆ. ತದನಂತರ ಆ ಎಳೆಯನ್ನೇ ಅಡಿಪಾಯವನ್ನಾಗಿಸಿಕೊಂಡು ಈ ಜೇಡಗಳು ತಮ್ಮ ಬಲೆಯನ್ನು ಕಟ್ಟುತ್ತವೆ. ಇದನ್ನರಿತ ಜಿ.ಸಿಕಿರ್ರೆಸ್ (G.siquirres) ಜೇಡಗಳು ತಾವೂ ಒಂದು ಮರದ ಕೊಂಬೆಯ ತುದಿಯಲ್ಲಿ ಕುಳಿತು ಅದೇ ರೀತಿ ಕತ್ತರಿಸದ ನಿರಂತರ ಸ್ವತಂತ್ರ ಜೇಡರ ಬಲೆಯ ಒಂದು ಎಳೆಯನ್ನು ಬಿಟ್ಟಿರುತ್ತದೆ. ಯಾವಾಗ ಅದು ಈ ಆರ್ಬ್ ವೀವರ್(orb weaver) ಎಳೆಗೆ ತಾಗುತ್ತದೋ ಆಗ ಸಾಮಾನ್ಯವಾಗಿ ಅಂಟಿಕೊಳ್ಳುತ್ತದೆ. ಈ ಕುತಂತ್ರ ಅರಿಯದ ಆರ್ಬ್ ವೀವರ್(orb weaver) ಜೇಡ ತನ್ನ ಎಳೆಯು ಇನ್ನೊಂದು ಮರದ ಕೊಂಬೆಗೆ ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿ, ಆ ಎಳೆಯನ್ನು ಭದ್ರಪಡಿಸಲು ತನ್ನ ಎಳೆಯ ಮೇಲೆ ಪ್ರಯಾಣ ಪ್ರಾರಂಭಿಸುತ್ತದೆ. ಇನ್ನೊಂದು ಕೊನೆಯಲ್ಲಿ ಅಡಗಿ ಕುಳಿತಿರುವ ಈ ಚೋರ ಜಿ.ಸಿಕಿರ್ರೆಸ್(G.siquirres) ಜೇಡ ಸೀದಾ ತನ್ನ ಬೇಟೆ ಜೇಡವಾದ ಆರ್ಬ್ ವೀವರ್(orb weaver) ಜೇಡದ ಕಡೆಗೆ ಧಾವಿಸುತ್ತದೆ. “ಮೊದಲಿಗೆ ಇದು ಎರಡು ಜೇಡಗಳ ನಡುವಿನ ಸಂಘರ್ಷ ಎಂದು ನಾನು ತಿಳಿದಿದ್ದೆ. ಆದರೆ ಕೊನೆಗೆ ಚೋರ ಜೇಡ ಇನ್ನೊಂದನ್ನು ತಿಂದೇ ಬಿಡ್ತು”. ಎನ್ನುತ್ತಾರೆ ಇಂತಹುದೊಂದು ಅಚ್ಚರಿ ಹಾಗೂ ಅಪರೂಪದ ದೃಶ್ಯವನ್ನು ಕಂಡ ಜೇಡಗಳ ಸಂಶೋಧನಾ ವಿಜ್ಞಾನಿಗಳ ತಂಡ. ಈ ದೃಶ್ಯ ಬಲು ಅಪರೂಪ ಏಕೆಂದರೆ, ಜಿ.ಸಿಕಿರ್ರೆಸ್(G.siquirres) ಜೇಡಗಳನ್ನು ಜೀವಂತವಾಗಿ ಕಂಡವರೇ ಇಲ್ಲ. ಹೌದು 1994ರಲ್ಲಿ ದೊರೆತ ಸತ್ತ ಜೇಡದಿಂದಲೇ ಈ ಜೇಡ ಪರಿಚಯವಾಗಿದ್ದು. ಅದಾದ ನಂತರ ಇದನ್ನು ಹೀಗೆ ಈ ಸಂದರ್ಭದಲ್ಲಿ ಕಂಡದ್ದು ಅದೃಷ್ಟವೇ ಸರಿ.
ವಿಜ್ಞಾನಿಗಳೆಂದರೆ ಕೇವಲ ಪ್ರಯೋಗಾಲಯಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಅವಿರತವಾಗಿ ಇಲ್ಲದ್ದನ್ನು ಹುಡುಕುವ-ಸೃಷ್ಟಿಸುವ ಹುಚ್ಚರಂತೆ ಊಹಿಸಿಕೊಳ್ಳುವ ನಾವು ಅರಿಯಬೇಕಾದದ್ದು ಇದು. ಆಸಕ್ತಿಯನ್ನೇ ಇಂಧನವಾಗಿಸಿಕೊಂಡು ಹೊಸತನ್ನು ಹುಡುಕುವ ಹಂಬಲದ ಜೊತೆ ನಮ್ಮದೇ ಹಿತ್ತಲಿನಿಂದ ಹಿಡಿದು ಖಂಡಗಳನ್ನು ದಾಟಿ ಹೋಗಿ ಹೊರಗಿನ ಪ್ರಪಂಚದಲ್ಲಿ ಈಗಾಗಲೇ ಇರುವ ಅಚ್ಚರಿಗಳನ್ನು ಗಮನಿಸಿ ಅನುಭವಿಸಲು ತಯಾರಿರುವ ಹಾಗೂ ಈಗಾಗಲೇ ಇಳಿದಿರುವ ಎಲ್ಲರೂ ವಿಜ್ಞಾನಿಗಳೇ!
ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ., ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.