ದೊಡ್ಡ ಕಣ್ಣಿನ ಸಂಗಾತಿ!

© ಗುರು ಪ್ರಸಾದ್ ಕೆ. ಆರ್.
ಈ ಅಂಕಣದಲ್ಲಿ ಎಂಥೆಂತಾ ವಿಚಿತ್ರ ಕೀಟಗಳ ಬಗ್ಗೆ ಬರೆದಿಲ್ಲ ನಾನು? ಆದರೆ ತೀರಾ ನಮ್ಮ ಜೊತೆ, ನಮ್ಮದೇ ಕುಟುಂಬದ ಸದಸ್ಯರ ತರಹ ಬಾಳುವ ನೊಣದ ಬಗ್ಗೆ ಬರೆಯಬೇಕೆಂದುಕೊಂಡಿರಲಿಲ್ಲ. ಸಂಪಾದಕರು ಇದರ ಬಗ್ಗೆ ಕೇಳಿದಾಗ, ಹೌದಲ್ಲವೇ? ಎಂದೆನಿಸಿದ್ದು ಸುಳ್ಳಲ್ಲ. ಹಾಗನಿಸಿದ್ದೇ ತಡ ನೊಣವನ್ನು ಗಮನಿಸಬೇಕೆಂದು ಹುಡುಕತೊಡಗಿದೆ. ಆದರೆ ನಾವೇನನ್ನಾದರೂ ಹುಡುಕಲು ಶುರು ಮಾಡಿದಾಗಲೇ ಅದರ ಮಹತ್ವ ಅರಿವಿಗೆ ಬರುವುದು. ಅಲ್ಲಿಯ ತನಕ ತನ್ನಿಷ್ಟಕ್ಕೆ ತಾನು ಇರುತ್ತಿದ್ದ ನೊಣಕ್ಕೂ ಕೂಡ ನನ್ನ ಹುಡುಕುವಿಕೆ ಅರಿವಾದಂತೆ ಇನ್ನಷ್ಟು ನನ್ನ ಕಣ್ಣಿನಿಂದ ತಪ್ಪಿಸಿಕೊಳ್ಳಲಾರಂಭಿಸಿತು. ಆಗ ನೆನಪಾಗಿದ್ದು ನನ್ನ ಹಳೆಯ ಕ್ಯಾಮೆರಾ. ಸುಮಾರು ವರ್ಷಗಳ ಹಿಂದೆ ಫೋಟೋಗ್ರಫಿಯ ಹುಚ್ಚು ಇದ್ದಾಗ ಕೆಲ ಮ್ಯಾಕ್ರೋ ಫೋಟೋ ತೆಗೆದಿದ್ದೆ. ಅದರಲ್ಲಿ ನೊಣ ಕೂಡ ಇತ್ತು. ಆ ಫೋಟೋ ತೆಗೆದು ಸ್ವಲ್ಪ ಜೂಮ್ ಮಾಡಿ ನೋಡಿದಾಗ ನೊಣದ ಸುಂದರ ಹೊಳೆಯುವ ಕಮಲಾಕ್ಷಿಗಳು ಕಂಡವು. ಇವು ಬರೀ ಗಾತ್ರದಲ್ಲಿ ಅಷ್ಟೇ ದೊಡ್ಡದಾಗಿರದೆ ತನ್ನ ಸುತ್ತಲಿನ ಎಲ್ಲ ದಿಕ್ಕುಗಳನ್ನೂ ನೋಡುವ ಅತ್ಯಂತ ಸಾಮರ್ಥ್ಯವುಳ್ಳ ಕಣ್ಣುಗಳು. ತನ್ನ ಸುತ್ತಲಿನ 360 ಡಿಗ್ರಿಯಲ್ಲಿನ ಪೂರ್ತಿ ವಾತಾವರಣವನ್ನು ನೋಡಬಲ್ಲ ಕಣ್ಣುಗಳು. ಅದಕ್ಕೆ ನಾನು ಯಾವಾಗ ಸೊಳ್ಳೆ ಹಿಡಿಯುವ ಬ್ಯಾಟು ತೆಗೆದುಕೊಂಡು ಎಷ್ಟೇ ಮುಂಜಾಗೃತೆಯಿಂದ ಸದ್ದು ಮಾಡದೇ, ಅಲುಗಾಡದೆ ಅದನ್ನು ಹಿಡಿಯಲು ಹೋದರೂ ಅದು ಬ್ಯಾಟು ಎತ್ತುವ ಮೊದಲೇ ಸುಳಿವು ಕೂಡ ನೀಡದೆ ಹಾರಿ ಹೋಗಿರುತ್ತಿತ್ತು. ನನ್ನ ಪುಟಾಣಿ ಮಗ ನೊಣ ಹಿಡಿಯುವ ಪ್ರಯತ್ನವನ್ನು ನೋಡಿ ಖುಷಿಪಡುತ್ತಿದ್ದೆ. ಆದರೆ ನನ್ನ ಸೊಳ್ಳೆ ಹಿಡಿಯುವ ಬ್ಯಾಟ್ ಗೂ ಕೂಡ ಸಿಗದೇ ಹೋದಾಗ ಆದ ತಳಮಳ ಅಷ್ಟಿಷ್ಟಲ್ಲ. ಅದು ಸಿಗುತ್ತಿರಲಿಲ್ಲ, ನಾನು ನನ್ನ ಪ್ರಯತ್ನ ಬಿಡುತ್ತಿರಲಿಲ್ಲ. ಅದಕ್ಕೇ ಏನೋ ಬಹುಷಃ ಮಾಡಲಾಗದ ಕಾರ್ಯವನ್ನು ಮಾಡಲು ಯತ್ನಿಸುತ್ತಿರುವಾಗ ‘ನೊಣ ಹಿಡಿಯುವ ಪ್ರಯತ್ನ’ ಎಂದು ಲೋಕರೂಢಿಯಾಗಿ ಸಂಭೋದಿಸುವುದು.

ಮಸ್ಕಾ ಡೊಮೆಸ್ಟಿಕಾ (Musca domestica) ಹೆಸರಿನ ಈ ನೊಣದ ಇನ್ನೊಂದು ವಿಶೇಷ ಮತ್ತು ಮಜವಾದ ಸಂಗತಿ ಏನೆಂದರೆ ಇದರ ಬಾಯಲ್ಲಿ ಹಲ್ಲುಗಳೇ ಇಲ್ಲ! ಅದಕ್ಕೇ ಇದು ಯಾವಾಗಲೂ ದ್ರವ ಪದಾರ್ಥದ ಸುತ್ತ ಹೆಚ್ಚು ಸುಳಿದಾಡುತ್ತಿರುತ್ತದೆ. ಬಾಯಲ್ಲಿರುವ ತನ್ನ ನಳಿಕೆಯಂತಿರುವ ನಾಲಿಗೆಯಿಂದ ದ್ರವಪದಾರ್ಥವನ್ನು ಹೀರಿ ಕುಡಿಯುತ್ತದೆ. ಮತ್ತೊಂದು ವಿಶೇಷತೆ ಎಂದರೆ, ನೊಣ ಯಾವಾಗಲೂ ಅತ್ತಿಂದಿತ್ತ ಓಡಾಡುತ್ತಿರುವುದನ್ನು ನೀವು ಗಮನಿಸಿರಬೇಕಲ್ಲವೇ? ಅದರ ಚಂಚಲ ಸ್ವಭಾವದಿಂದ ಅದು ಹಾಗೆ ಓಡಾಡುತ್ತದೆ ಎಂದು ತಿಳಿದಿದ್ದ ನನಗೆ, ನಿಜವಾದ ಕಾರಣ ತಿಳಿದಾಗ ನೊಣದ ಬಗ್ಗೆ ಪಾಪವೆನಿಸಿತ್ತು. ನಮಗೆ ನಾಲಿಗೆಯಲ್ಲಿ ರುಚಿಗ್ರಂಥಿಗಳಿರುವಂತೆ ನೊಣಕ್ಕೆ ಅದರ ಪಾದಗಳಲ್ಲಿವೆ ಅಂತೆ! ಹೀಗಾಗಿ ಅದು ಯಾವುದೇ ಆಹಾರ ಪದಾರ್ಥದ ರುಚಿ ನೋಡಬೇಕೆಂದರೆ ಅದರ ಮೇಲೆಲ್ಲ ಅಡ್ಡಾಡಲೇಬೇಕು. ಅಡ್ಡಾಡಿ ಎಲ್ಲಿ ಹೆಚ್ಚು ರುಚಿ ಇದೆ ಅಲ್ಲಿ ತನ್ನ ಆಹಾರವನ್ನು ಸ್ವೀಕರಿಸುತ್ತದೆ! ಒಂದು ವೇಳೆ ನಮಗೆ ಏನಾದರೂ ಹೀಗೆ ಕಾಲಿನಲ್ಲಿ ರುಚಿ ಗ್ರಂಥಿಗಳಿದ್ದದ್ದರೆ ಎಂದು ಯೋಚಿಸಿದಾಗ ಭಯವಾಗುತ್ತದೆ! ಬಹುಷಃ ಚಪ್ಪಲಿ ಕಂಪೆನಿಗಳೆಲ್ಲ ಮುಚ್ಚಿ ಹೋಗಿರುತ್ತಿದ್ದವೋ ಏನೋ? ಅಥವಾ ಮತ್ತಿನ್ಯಾವ ತಂತ್ರಜ್ಞಾನವು ಉಗಮವಾಗುತ್ತಿತ್ತೋ?

ನೊಣ ಮಾಡುವ ಅನಾಹುತಕಾರಿ ಕೆಲಸದ ಕಡೆ ಕಣ್ಣಾಯಿಸಿದರೆ ಇದು ಹತ್ತಾರು ರೋಗಾಣುಗಳನ್ನು ಹೊತ್ತು ತರುತ್ತದೆ! ಹಾಗಾದರೆ ಇದು ಖಳನಾಯಕನಾಗಬೇಕಲ್ಲವೇ? ಇಲ್ಲ! ಏಕೆಂದರೆ ಇದು ಆಹಾರ ಸರಪಣಿಯಲ್ಲಿ ತನ್ನ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಕೊಳೆಯುತ್ತಿರುವ ಜೀವಿ ಅಥವಾ ವಸ್ತುವನ್ನು ಇನ್ನೂ ವೇಗವಾಗಿ ಕೊಳೆಯಲು ಸಹಕರಿಸುತ್ತದೆ. ಇದರರ್ಥ, ಕೊಳೆಯುತ್ತಿರುವ ಜೀವಿಯಲ್ಲಿಯೇ ತನ್ನ ಸಂತತಿ ಬೆಳೆಸುತ್ತ ಅದರ ಕಾರ್ಯವನ್ನು ಕ್ಯಾಟಲಿಸ್ಟ್ ತರಹ ಇಮ್ಮಡಿಗೊಳಿಸುತ್ತದೆ. ಹೀಗಾಗಿ ನಿಸರ್ಗದ ನಿಯಮದಂತೆ ಸತ್ತ ಜೀವಿಗಳು ಮತ್ತೆ ಮಣ್ಣಿನಲ್ಲಿ ಸೇರಿಹೋಗುತ್ತವೆ. ಹೆಣ್ಣು ನೊಣ ಒಂದು ಸಲಕ್ಕೆ ಸುಮಾರು 100 ರಿಂದ 200 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು ಒಂದು ದಿನದಲ್ಲಿಯೇ ಲಾರ್ವಾಗಳಾಗಿ ಹೊರಬರುತ್ತವೆ. ಮೂರು ಹಂತದಲ್ಲಿ ಈ ಲಾರ್ವಾಗಳು ಪರಿವರ್ತನೆ (3 instar) ಹೊಂದುತ್ತವೆ ಮತ್ತು ಕೊನೆಗೆ ಕೋಶಾವಸ್ಥೆಗೆ ಜಾರಿ ಅಲ್ಲಿಂದ ವಯಸ್ಕ ನೊಣಗಳಾಗಿ ಹೊರಬರುತ್ತವೆ. ಈ ಎಲ್ಲ ಹಂತಗಳು ಕೇವಲ 10 ರಿಂದ 15 ದಿನಗಳಲ್ಲಿ ಪೂರ್ಣಗೊಳ್ಳುವುದರಿಂದ, ನೊಣಗಳ ಸಂಖ್ಯೆಗೆ ಧಕ್ಕೆ ಬರುವ ಸಂಭವವೇ ಇಲ್ಲ. ಸದಾ ಗಲೀಜಿನ ಸುತ್ತ ಇರುವುದರಿಂದ ಇವುಗಳ ಸಂಖ್ಯೆ ಏರಿಕೆಯಾಗುತ್ತಲೇ ಹೋಗುತ್ತದೆ. ಒಂದು ಅಂದಾಜಿನ ಪ್ರಕಾರ, ನೊಣಗಳಿಗೆ ಬೇಕಾದಂತಹ ಪರಿಸರ ವ್ಯವಸ್ಥೆ ಇದ್ದರೆ ಕೇವಲ ಒಂದು ಜೋಡಿ ನೊಣವು ಬರೀ ಐದು ತಿಂಗಳಲ್ಲಿ ಲಕ್ಷಗಟ್ಟಲೆ ನೊಣಗಳನ್ನು ಉತ್ಪಾದಿಸಿ ಇಡೀ ಭೂಮಿ ಮುಚ್ಚಿ ಹೋಗುವಂತಹ ಪರಿಸ್ಥಿತಿ ಬರಬಹುದು! ಇಷ್ಟೆಲ್ಲಾ ವಿಚಿತ್ರ ಸಂಗತಿಗಳಿದ್ದರೂ ಇವು ಮನುಷ್ಯನ ಅತಿ ಪ್ರಾಚೀನ ಸಂಗಾತಿಗಳು. ಮನುಷ್ಯ ವಲಸೆ ಹೋದಲ್ಲೆಲ್ಲಾ ನೊಣಗಳು ಸಾಗುತ್ತ ಈಗ ಇವು ಕೂಡ ಮನುಷ್ಯನಂತೆ ಸರ್ವನ್ತರ್ಯಾಮಿಗಳಾಗಿವೆ. ಅಂದ ಹಾಗೆ ನೀವು ಸುದೀಪ್ ಅಭಿನಯದ ‘ಈಗ’ ಸಿನಿಮಾ ನೋಡಿರಬೇಕಲ್ಲವೇ? ಅದರಲ್ಲಿ ನೊಣದ ಚಲನವಲನಗಳನ್ನು ಅತ್ಯಂತ ಅದ್ಧೂರಿಯಾಗಿ ತೋರಿಸಿದ್ದಾರೆ. ಬಹುಷಃ ಸಿನಿಮಾದ ನಿರ್ದೇಶಕರು ಸುಮಾರು ವರ್ಷಗಳ ಕಾಲ ನೊಣವನ್ನು ಅಭ್ಯಸಿಸಿರಬೇಕಲ್ಲವೇ?

ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ
ಬೆಂಗಳೂರು ನಗರ ಜಿಲ್ಲೆ