ಪಕ್ಷಿಯಲ್ಲ, ಹಾರುವ ಏಕೈಕ ಸಸ್ತನಿ!

ಪಕ್ಷಿಯಲ್ಲ, ಹಾರುವ ಏಕೈಕ ಸಸ್ತನಿ!

© ಶ್ರದ್ಧಾ ಕುಮಾರಿ ಕೆ

ಹಾರುವ ಬಾವಲಿಯನ್ನು ನೋಡಿ ಪಕ್ಷಿಯೆಂದೇ ಭ್ರಮಿಸುವವರೇ ಹೆಚ್ಚು. ಆದರೆ ಬಾವಲಿಯು, ಪಕ್ಷಿ ಮಾತ್ರವಲ್ಲದೆ ಇತರೆ ಪ್ರಾಣಿ ಸಂಕುಲಕ್ಕಿಂತಲೂ ತುಂಬಾ ವಿಭಿನ್ನವಾದ ಗುಣಗಳನ್ನು ಹೊಂದಿದೆ. ಬಾವಲಿಯು ಹಾರುವ ಸಸ್ತನಿಯಾಗಿದ್ದು, ಇದು ಸಸ್ತನಿಗಳ ‘ಕೈರೋಪ್ಟೆರಾ’ (Chiroptera) ಎನ್ನುವ ಗುಂಪಿಗೆ ಸೇರಿದೆ [ಪಕ್ಷಿಗಳು ಏವ್ಸ್ (Aves) ಗುಂಪಿಗೆ ಸೇರಿವೆ]. ‘ಕೈರೋ’ (Chiro) ಎಂದರೆ ಕೈಗಳು ಮತ್ತು ‘ಪ್ಟೆರಾ’ (Ptera) ಎಂದರೆ ರೆಕ್ಕೆ ಎಂದರ್ಥ. ಅಂದರೆ ಕೈಗಳಲ್ಲಿ ರೆಕ್ಕೆಗಳನ್ನು ಹೊಂದಿರುವವು ಎಂದು. ಬಾವಲಿಯ ರೆಕ್ಕೆಯು ಪಕ್ಷಿಗಳ ರೆಕ್ಕೆಗಳಂತೆ ಪುಕ್ಕಗಳಿಂದ ಮಾಡಲ್ಪಟ್ಟಿರದೆ, ಚರ್ಮದಿಂದ ಕೂಡಿದೆ.

ಬಾವಲಿಗಳು ಹೆಚ್ಚಾಗಿ ದೊಡ್ಡ ಗುಂಪುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಗುಂಪಿನಲ್ಲಿರುವ ಬಾವಲಿಗಳ ಸಂಖ್ಯೆಯು ಬೆರಳೆಣಿಕೆಯಿಂದ ಕೋಟಿಯವರೆಗೂ ಇರುತ್ತದೆ. ಜಗತ್ತಿನ ಅತೀ ದೊಡ್ಡ ಬಾವಲಿಗಳ ಗುಂಪು ಇರುವುದು ಅಮೆರಿಕದ ‘ಬ್ರಾಕನ್ ಗುಹೆ’ಯಲ್ಲಿ. ಇಲ್ಲಿ 20 ಮಿಲಿಯನ್ ಮೆಕ್ಸಿಕನ್ ಬಿಡಿ ಬಾಲದ ಬಾವಲಿಗಳು ವಾಸವಾಗಿವೆ.

ಪ್ರಪಂಚದಲ್ಲಿ ಸುಮಾರು 1400 ಬಾವಲಿಗಳ ಪ್ರಭೇದಗಳಿದ್ದು, ಭಾರತದಲ್ಲಿ ಸುಮಾರು 131 ಪ್ರಭೇದಗಳಿವೆ. ಹಾಗಾದರೆ ಬೇರೆ ಸಸ್ತನಿಗಳು ಹಾರುವುದಿಲ್ಲವೇ?

ಹಾರುವ ಅಳಿಲು: ಹೌದು, ಇದಕ್ಕೆ ‘ಹಾರುವ’ ಎಂಬ ನಾಮಧೇಯ ಬಂದಿರುವುದೇ ಇದು ಹಾರುವ ಕಾರಣಕ್ಕೆ. ಆದರೆ ಇದು ನಿಜವಾಗಿಯೂ ಪಕ್ಷಿ, ಕೀಟಗಳಂತೆ ಅಥವಾ ನಮ್ಮ ಬಾವಲಿಗಳಂತೆ ರೆಕ್ಕೆ ಬಡಿಯುತ್ತಾ ದೂರಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿಲ್ಲ. ಬದಲಾಗಿ ಇವು ಒಂದು ಮರದಿಂದ ಪಕ್ಕದಲ್ಲಿನ ಇನ್ನೊಂದು ಮರಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿವೆ. ಅಸಲಿಗೆ ಇವು ಹಾರುವುದನ್ನು ‘ಜಿಗಿಯುವುದು’ ಅಥವಾ ‘ತೇಲಿ ಹೋಗುವುದು’ ಎನ್ನಬಹುದೇನೋ! (ಆಂಗ್ಲದಲ್ಲಿ ಇದಕ್ಕೆ ಗ್ಲೈಡಿಂಗ್ (gliding) ಎನ್ನುತ್ತಾರೆ). ಅಂದರೆ ಬಾವಲಿಗಳು ನಿಜವಾದ ಹಾರುವ ಶಕ್ತಿಯನ್ನು ಹೊಂದಿರುವ ಏಕೈಕ ಸಸ್ತನಿ.

‘ಹಣ್ಣು ತಿಂದರೆ ಸಾಯುವುದು!’

© ರಾಜೇಶ್ ಪುಟ್ಟಸ್ವಾಮಯ್ಯ; ಚಿತ್ರ 1_ ಭಾರತದ ಹಣ್ಣು-ತಿನ್ನುವ ಬಾವಲಿ

ನಾವು ಎಷ್ಟೋ ಬಾರಿ ಪುಟ್ಟ ಬಾವಲಿಗಳಿಗೆ ಸಹಾಯ ಮಾಡಲು ಹೋಗಿ ಅವುಗಳನ್ನು ಸಾಯಿಸಿರುವ ಉದಾಹರಣೆಗಳೇ ಬೇಕಾದಷ್ಟಿವೆ. ಈ ಪುಟ್ಟ ಬಾವಲಿಗಳನ್ನು ಮರಿಗಳೆಂದು ಭಾವಿಸಿ, ಅವುಗಳು ಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಅವುಗಳಿಗೆ ಸಹಾಯ ಆಗಲೆಂದು ನೀರು ಕುಡಿಸಿ ಹಣ್ಣು ತಿನ್ನಿಸುವುದೇ ಹೆಚ್ಚು!    ಆದರೆ ಸಾಮಾನ್ಯವಾಗಿ ಇವುಗಳು ಹಣ್ಣು ತಿನ್ನುವ ಬಾವಲಿಗಳಾಗಿರುವುದಿಲ್ಲ ಹೊರತಾಗಿ, ಇವುಗಳು ಕೀಟಗಳನ್ನು ತಿನ್ನುವ ಪ್ರಭೇದಗಳು. ಆಹಾರ ವೈವಿಧ್ಯತೆ ಪ್ರಾಣಿಸಂಕುಲದಲ್ಲಿ ಅತ್ಯಂತ ಕುತೂಹಲಕಾರಿಯಾದ ವಿಷಯ. ಸಾಮಾನ್ಯವಾಗಿ ಕಂಡುಬರುವ ‘ಭಾರತದ ಹಣ್ಣು ತಿನ್ನುವ ಬಾವಲಿ’ (ಚಿತ್ರ 1) (ಇಂಡಿಯನ್ ಫ್ಲೈಯಿಂಗ್ ಫಾಕ್ಸ್) ಮತ್ತು ಸಣ್ಣ ಮೂತಿಯ ಹಣ್ಣು ತಿನ್ನುವ ಬಾವಲಿ (ಶಾರ್ಟ್-ನೊಸೆಡ್ ಫ್ರೂಟ್ ಬ್ಯಾಟ್) ಹಣ್ಣು, ಚಿಗುರೆಲೆ, ಹೂವು ಹಾಗೂ ಮಕರಂದವನ್ನು ಸಹ ಸೇವಿಸುತ್ತವೆ. ಹಣ್ಣು ತಿನ್ನುವ ಬಾವಲಿಗಳ ಆಹಾರದಲ್ಲಿ – ಪಪ್ಪಾಯಿ, ಗಸಗಸೆ ಮರ (ಸಿಂಗಾಪುರ್ ಚೆರ್ರೀ), ಬಾಳೆಹಣ್ಣು ಮುಂತಾದವುಗಳು ಸೇರಿವೆ. ಉಳಿದಂತೆ ಶೇಕಡಾ 70 ರಷ್ಟು ಬಾವಲಿಗಳು ಕೀಟಾಹಾರಿ ಬಾವಲಿಗಳು – ಪತಂಗ, ಚಿಟ್ಟೆ, ಮಿಡತೆ, ನೊಣ, ಸೊಳ್ಳೆಗಳು ಹಾಗೂ ಜೇಡಗಳನ್ನು ಸಹ ತಿನ್ನುತ್ತವೆ. ಬಾವಲಿಗಳು ತಮ್ಮ ಬೇಟೆಗಳನ್ನು ಹಿಡಿಯಲು ವಿಶೇಷ ಕೌಶಲಗಳನ್ನು ಹೊಂದಿವೆ. ಹಲವು ಬಾವಲಿಗಳು ಹಾರುತ್ತಲೇ ಕೀಟಗಳನ್ನು ಹಿಡಿಯುತ್ತವೆ; ಕೀಟಗಳನ್ನು ಹಿಡಿಯಲು ಅವುಗಳು ತಮ್ಮ ರೆಕ್ಕೆಯನ್ನು ಸಹ ಉಪಯೋಗಿಸುತ್ತವೆ. ಪ್ರಪಂಚದಲ್ಲಿ ಕೇವಲ 3 ಪ್ರಭೇದಗಳು ಮಾತ್ರ ರಕ್ತ ಹೀರುವ ವ್ಯಾಂಪೈರ್ ಬ್ಯಾಟ್ (Vampire bat) ಬಾವಲಿಗಳಾಗಿವೆ ಹಾಗೂ ಇವುಗಳು ಕೇವಲ ಮಧ್ಯ ಹಾಗೂ ದಕ್ಷಿಣ ಅಮರಿಕಾದಲ್ಲಿ ಮಾತ್ರ ಕಂಡುಬರುತ್ತವೆ.

ಪುಟ್ಟ ಮರಿಗಳನ್ನು ಮನೆಯ ಮಾಡಿನ ಸಂದಿಗಳಲ್ಲಿ  ಕಂಡಿದ್ದೇನೆ’

ಇದೊಂದು ಸಾಮಾನ್ಯ ಮಾತು – ಮುಷ್ಟಿ ಗಾತ್ರಕ್ಕಿಂತಲೂ ಸಣ್ಣಗಿರುವ ಬಾವಲಿಗಳು, ಮರದಲ್ಲಿ ನೇತಾಡಿಕೊಂಡು ಇರುವ ಬಾವಲಿಗಳ (ಭಾರತದ ಹಣ್ಣು-ತಿನ್ನುವ ಬಾವಲಿ) ಮರಿಗಳು, ದಾರಿ ತಪ್ಪಿ ನಮ್ಮ ಮನೆಗೆ ಬಂದಿವೆ ಎನ್ನುವ ಜನರ ಪಟ್ಟಿಯಲ್ಲಿ ನಾನು ಸಹ ಹಿಂದೊಮ್ಮೆ ಸೇರಿದ್ದೆ. ಸಾಮಾನ್ಯವಾಗಿ ಇವುಗಳು ‘ಸಂಜೆ ಬಾವಲಿಗಳು’ ಗುಂಪಿಗೆ ಸೇರಿವೆ. ವಯಸ್ಕ ಬಾವಲಿಗಳ  ಗಾತ್ರವು  ಸಹ ನಮ್ಮ ಮುಷ್ಟಿ ಗಾತ್ರದ ನಾಲ್ಕನೇ ಒಂದರಷ್ಟಿರುತ್ತವೆ. ಸಾಮಾನ್ಯವಾಗಿ ಮರಗಳಲ್ಲಿ ನೇತಾಡಿಗೊಂಡು ಕಾಣುವ ದೊಡ್ಡ ಗಾತ್ರದ ಬಾವಲಿಗಳನ್ನು ‘ಭಾರತದ ಹಣ್ಣು-ತಿನ್ನುವ ಬಾವಲಿ’ ಎಂದು ಕರೆಯುತ್ತೇವೆ. ಇವುಗಳು ನೀಲಗಿರಿ, ಅಶ್ವತ್ಥ, ಆಲ, ಹುಣಸೆ ಮತ್ತು ಇತರೆ ದೊಡ್ಡ ಗಾತ್ರದ ಮರಗಳಲ್ಲಿ ಕಾಣಸಿಗುತ್ತವೆ.

ಬಾವಲಿಗಳ ಬಾಯಿ, ಮೂಗು ಮತ್ತು ಕಿವಿಗಳು ಕಣ್ಣಿನಂತೆ ವರ್ತಿಸುತ್ತವೆ!

© ಶ್ರದ್ಧಾ ಕುಮಾರಿ ಕೆ

ಕೀಟಗಳನ್ನು ತಿನ್ನುವ ಬಾವಲಿಗಳು ವಸ್ತುಗಳ ಆಕಾರ, ಗಾತ್ರ, ದೂರ ಮುಂತಾದವುಗಳನ್ನು ತಿಳಿಯಲು ತಮ್ಮ ಬಾಯಿ, ಮೂಗು ಮತ್ತು ಕಿವಿಗಳನ್ನು ಬಳಸುತ್ತವೆ. ಧ್ವನಿ ತರಂಗಗಳನ್ನು ತಮ್ಮ ಧ್ವನಿ ಪೆಟ್ಟಿಗೆಯಿಂದ ಅಥವಾ ಬಾಯಿಯಿಂದ ಹೊರಡಿಸಿ, ಬಾಯಿ ಮತ್ತು ಮೂಗುಗಳ ಮುಖಾಂತರ ಹೊರಸೂಸುತ್ತವೆ. ಹೊರಹೊಮ್ಮಿದ ಸ್ವರ ತರಂಗಗಳು ಮುಂದೆ ಇರುವಂತಹ ವಸ್ತುವಿನ ಮೇಲ್ಮೈಗೆ ತಾಗಿ ಪ್ರತಿಫಲಿಸುತ್ತವೆ. ಪ್ರತಿಫಲಿಸಿದ ಈ ತರಂಗಗಳನ್ನು ಬಾವಲಿಗಳು ತಮ್ಮ ಕಿವಿಯಿಂದ ಗ್ರಹಿಸುತ್ತವೆ. ಬಾವಲಿಗಳು ಹೊರಡಿಸುವ ಈ ಸ್ವರತರಂಗಗಳು ಮಾನವನ ಕಿವಿಗೆ ಕೇಳಿಸುವುದಿಲ್ಲ, ಏಕೆಂದರೆ ಅವು ಶ್ರವಣಾತೀತ ತರಂಗಗಳು (Ultrasonic waves). ಈ ಪ್ರಕ್ರಿಯೆಯಿಂದ ಬಾವಲಿಗಳು ತಮ್ಮ ಎದುರಿರುವ ಯಾವುದೇ ವಸ್ತು, ಗಿಡ–ಮರ ಅಥವಾ ಕೀಟಗಳನ್ನು ಗ್ರಹಿಸುವಂತಹ ಸಾಮರ್ಥ್ಯವನ್ನು ಹೊಂದಿವೆ. ತಮ್ಮ ಆಹಾರ ಕೀಟಗಳು ಎಷ್ಟು ದೂರ ಇವೆ, ಯಾವ ದಿಕ್ಕಿನಲ್ಲಿವೆ ಎಂಬ ಎಲ್ಲ ಮಾಹಿತಿಗಳನ್ನು ಬಾವಲಿಗಳು ಈ ‘ಶಬ್ದ ಪ್ರತಿಫಲನ’ (echolocation) ಗ್ರಹಿಕೆಯಿಂದ ತಿಳಿಯುತ್ತದೆ. ಬಾವಲಿಗಳು ಹೊರಡಿಸುವ ಈ ಶ್ರವಣಾತೀತ ಒಂದೊಂದು ಪ್ರಭೇದಕ್ಕೂ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಇದರಿಂದ ಬಾವಲಿಗಳ ಪ್ರಭೇದಗಳನ್ನು ಕೂಡ ಗುರುತಿಸಬಹುದು.

ನಿಶಾಚರಿ ಆಗಿರುವುದರ ಲಾಭಗಳು

ಬಾವಲಿಗಳು ಹಗಲಿನಲ್ಲಿ ನಿದ್ರಿಸುತ್ತವೆ ಹಾಗೂ ರಾತ್ರಿ ಹೊತ್ತು ತನ್ನ ವಾಸಸ್ಥಾನವನ್ನು ಬಿಟ್ಟು ಹಾರುತ್ತಾ ಆಹಾರವನ್ನು ಹುಡುಕುತ್ತವೆ. ಹೀಗೆ ಮಾಡುವುದರಿಂದ ಅವುಗಳಿಗೆ ಹಲವು ಲಾಭಗಳಿವೆ. ಬಾವಲಿಗಳ ರೆಕ್ಕೆಗಳು ಚರ್ಮದಿಂದ ಮಾಡಲ್ಪಟ್ಟಿರುವುದರಿಂದ ಹಾಗೂ ಪೂರ್ಣ ದೇಹ ರೋಮಾಮೃತವಾಗಿರುವುದರಿಂದ ದೇಹದ ನೀರಿನಾಂಶವು ಸೂರ್ಯನ ಶಾಖಕ್ಕೆ ಅತಿಬೇಗ ಆವಿಯಾಗುತ್ತದೆ. ಬಾವಲಿಗಳು ರಾತ್ರಿ ಹೊತ್ತು ಹಾರುವುದರಿಂದ ಅವುಗಳು ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳುತ್ತವೆ. ನಿಶಾಚರ ಜೀವನವು ಇವುಗಳಿಗೆ ತಮ್ಮ ಭಕ್ಷಕ ಜೀವಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಹಕಾರಿಯಾಗುತ್ತವೆ. ಇದಲ್ಲದೆ ಬಾವಲಿಗಳ ಆಹಾರ ಜೀವಿಗಳಾದ ಕೀಟಗಳು ರಾತ್ರಿಯ ಹೊತ್ತು ಹೇರಳವಾಗಿ ಸಿಗುತ್ತವೆ.

ಹೆಣ್ಣು ಬಾವಲಿಗಳ ವಿಶೇಷ ಸಾಮರ್ಥ್ಯಗಳು

© ಶ್ರದ್ಧಾ ಕುಮಾರಿ ಕೆ; ಚಿತ್ರ 2: ದುರ್ಗಾದಾಸನ ಎಲೆಮೂತಿಯ ಬಾವಲಿ – ಒಂದುವಾರದ ಮರಿ ಮತ್ತು ತಾಯಿ: ಮುಖ್ಯವಾಗಿ ಗಮನಿಸಬೇಕಾದ 2 ಅಂಶಗಳು – 1) ತಾಯಿ ಮತ್ತು ಮರಿಯ ದೇಹದ ಗಾತ್ರ, 2) ಮರಿಬಾವಲಿಯು ತಾಯಿಗೆ ವಿರುದ್ಧ ದಿಕ್ಕಿನಲ್ಲಿ ಅಪ್ಪಿಕೊಂಡಿರುವುದು

ಬಾವಲಿಯು ತನ್ನ ಮಗುವಿಗೆ ಜನ್ಮ ನೀಡುವಾಗ ಆ ಮರಿಯು ತಾಯಿಯ ಮೂರನೇ ಒಂದರಷ್ಟು ತೂಗುತ್ತದೆ. ಅಂದರೆ ಮಾನವನಲ್ಲಿ 60 ಕೆಜಿ ತೂಗುವ ಹೆಣ್ಣು ಮಗಳು 20 ಕೆಜಿ ತೂಗುವ ಮಗುವಿಗೆ ಜನ್ಮ ನೀಡುವಂತೆ! ಬಾವಲಿಯು ತಲೆಕೆಳಗಾಗಿ ನೇತಾಡಿಕೊಂಡೇ ಮರಿಗೆ ಜನ್ಮ ನೀಡುತ್ತದೆ ಹಾಗೂ ಮರಿಯು ತಲೆ ಕೆಳಗಾಗಿ ಬೀಳದಂತೆ ಹಿಡಿದುಕೊಳ್ಳುತ್ತದೆ. ತಾಯಿ ಮತ್ತು ಮರಿ ಬಾವಲಿಗಳನ್ನು ನೀವು ಗಮನಿಸಿರಬಹುದು; ತಾಯಿ ಬಾವಲಿಯು ತಲೆಕೆಳಗಾಗಿ ನೇತಾಡಿಕೊಂಡಿದ್ದರೆ, ಮರಿಬಾವಲಿಯು ತಾಯಿಗೆ ವಿರುದ್ಧ ದಿಕ್ಕಿನಲ್ಲಿ ತಾಯಿಯನ್ನು ಅಪ್ಪಿಕೊಂಡಿರುತ್ತದೆ (ಚಿತ್ರ 2). ಅಂದರೆ ಮರಿ ಬಾವಲಿಯು ತಾಯಿಯ ತಲೆಯ ದಿಕ್ಕಿನಲ್ಲಿ ತನ್ನ ಕಾಲನ್ನು ನೀಡಿಕೊಂಡಿರುತ್ತದೆ. ಇದು ಯಾಕೆಂದರೆ, ಕೆಲವು ಹೆಣ್ಣು ಬಾವಲಿಗಳಲ್ಲಿ ಜನನಾಂಗದ ಹತ್ತಿರ ಸಹ ಸ್ತನಗಳಿರುತ್ತವೆ. ಇವುಗಳನ್ನು ‘ಪ್ಯೂಬಿಕ್ ಟೀಟ್’ ಎನ್ನುತ್ತಾರೆ. ಈ ಪ್ಯೂಬಿಕ್ ಟೀಟ್ ಗಳು ಮರಿಬಾವಲಿಗಳಿಗೆ ಹಾಲುಣಿಸಲು ಸಹಕಾರಿಯಾಗಿವೆ.

ಜಗತ್ತಿನ ಅತೀ ವೇಗದ ಸಸ್ತನಿ ಬಾವಲಿ!

ಜಗತ್ತಿನ ಅತ್ಯಂತ ವೇಗದ ಸಸ್ತನಿ ಚಿರತೆಯಲ್ಲ, ಹಾರುವ ಬಾವಲಿ. ಚಿರತೆ ಒಂದು ಘಂಟೆಗೆ 75 ಮೈಲಿ ವೇಗದಲ್ಲಿ ಓಡಿದರೆ, ‘ಮೆಕ್ಸಿಕೋದ ಬಿಡಿ ಬಾಲದ ಬಾವಲಿ’ ಗಳು ಘಂಟೆಗೆ 100 ಮೈಲಿ ವೇಗದಲ್ಲಿ ಹಾರಬಲ್ಲವು. ಇವು ಅತೀ ವೇಗವಾಗಿ ಹಾರುವುದರ ಜೊತೆಗೆ ಅತೀ ಎತ್ತರದಲ್ಲಿಯೂ ಹಾರುತ್ತವೆ! ಇವು ಸುಮಾರು 10,800 ಅಡಿ ಎತ್ತರದಲ್ಲಿಯೂ ಹಾರಬಲ್ಲವು. ಭಾರತದಲ್ಲಿ ಈ ಪ್ರಭೇದಗಳ ಬಾವಲಿಗಳು ಕಂಡುಬರುವುದಿಲ್ಲ. ಆದರೆ ಅವುಗಳ ಜಾತಿಯ ಬೇರೆ ಪ್ರಭೇದಗಳ ಬಾವಲಿಗಳು ಇವೆ. ಕರ್ನಾಟಕ ಮತ್ತು ಭಾರತದ ಇತರ ಭಾಗಗಳಲ್ಲಿ ಈ ಪ್ರಭೇದದ ಬಾವಲಿಗೆ ಹತ್ತಿರದ ಸಂಬಂಧ ಹೊಂದಿರುವ ಬೇರೆ ಬೇರೆ ಪ್ರಭೇದಗಳು ಕಂಡು ಬರುತ್ತವೆ.

ಈ ಬಾವಲಿಗಳು ಅಮೆರಿಕದ ಹಲವು ಭಾಗಗಳಲ್ಲಿ ಕಂಡುಬರುತ್ತವೆ. ಇವುಗಳು ಹೆಚ್ಚಾಗಿ ಗುಹೆಗಳಲ್ಲಿ ಕಂಡುಬರುತ್ತವೆಯಾದರೂ, ಕಟ್ಟಡಗಳ ಸಂದಿಯಲ್ಲೂ ವಾಸಿಸುತ್ತವೆ. ಇವುಗಳು ಕೀಟಾಹಾರಿಗಳು: ಪತಂಗಗಳು, ಜೀರುಂಡೆಗಳು, ಮಳೆ ಚಿಟ್ಟೆಗಳು ಮತ್ತು ಇರುವೆಗಳು ಇವುಗಳ ಪ್ರಮುಖ ಆಹಾರ. ಈ ಬಾವಲಿಗಳನ್ನು ಭಕ್ಷಿಸುವ ಪ್ರಾಣಿಗಳೆಂದರೆ – ಕೆಲವು ಬಗೆಯ ನಿಶಾಚರಿ ಸಸ್ತನಿಗಳು (ಒಪ್ಪೋಸಮ್, ಸ್ಕಂಕ್, ರಕೂನ್), ಕೆಲವು ಹಾವುಗಳು, ಹದ್ದು ಮತ್ತು ಗೂಬೆಗಳು. ಈ ಬಾವಲಿಯ ಸಂರಕ್ಷಣೆಗೆ ‘ಬ್ಯಾಟ್ ಕನ್ಸರ್ವೇಷನ್ ಇಂಟರ್ ನ್ಯಾಷನಲ್’ ಎಂಬ ಸಂಸ್ಥೆಯು ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ.

ಬಾವಲಿಗಳ ಜೀವಿತಾವಧಿ

ಸಾಮಾನ್ಯವಾಗಿ ಪ್ರಾಣಿ ಸಂಕುಲದಲ್ಲಿ ದೊಡ್ಡ ಗಾತ್ರದವು ಹೆಚ್ಚು ಆಯಸ್ಸು ಮತ್ತು ಸಣ್ಣ ಗಾತ್ರದವು  ಕಡಿಮೆ ಆಯಸ್ಸನ್ನು ಹೊಂದಿರುತ್ತವೆ. ಆದರೆ ಬಾವಲಿಗಳು ಗಾತ್ರದಲ್ಲಿ ಚಿಕ್ಕದಾದರೂ ಸಹ ಹೆಚ್ಚು ಕಾಲ ಬದುಕುತ್ತವೆ. ಕೆಲವೇ ಕೆಲವು ಗ್ರಾಂ ತೂಗುವ ಬಾವಲಿಗಳು ವರ್ಷಾನುಗಟ್ಟಲೆ ಜೀವಿಸುತ್ತವೆ. ‘ಬ್ರಾಂಡಿಟ್ಸ್ ಮಯೋಟಿಸ್ (Brandt’s myotis)’ಎಂಬ ಬಾವಲಿಯು 43 ವರ್ಷ ಬದುಕಿದ್ದು, ಅತೀ ಹೆಚ್ಚು ವರ್ಷ ಬದುಕಿರುವ ಬಾವಲಿ ಎಂದು ದಾಖಲೆಯಾಗಿದೆ. ಈ ಬಾವಲಿಯನ್ನು ವಿಜ್ಞಾನಿಗಳು ಸಂಶೋಧನೆಯ ಸಮಯದಲ್ಲಿ ಅಂದರೆ 1962 ರಲ್ಲಿ ನೋಡಿ ಗುರುತು (ಟ್ಯಾಗ್) ಮಾಡಿದ್ದರು ಹಾಗೂ 2001 ಮತ್ತು 2003 ರಲ್ಲಿ ಇದನ್ನು ಮರುಪತ್ತೆ ಮಾಡಿ ಇದರ ವಯಸ್ಸನ್ನು ಖಾತ್ರಿಪಡಿಸಿಕೊಂಡರು.

ಬಾವಲಿಗಳಿಂದ  ಮಾನವನಿಗೆ ತೊಂದರೆಯಿದೆಯೇ?

ಬಾವಲಿಯು ಒಂದು ವಿಶೇಷ ಕುತೂಹಲಕಾರಿ ಹಾಗೂ ಉಪಕಾರಿ ಪ್ರಾಣಿ. ತುಂಬಾ ಜನರು ಬಾವಲಿಗಳೆಂದರೆ ಮೂಗು ಮುರಿಯುವುದೇ ಹೆಚ್ಚು. ಆದರೆ ನಾವು ಅವುಗಳನ್ನು ಇಷ್ಟಪಡಲಿ, ಇಷ್ಟಪಡದೇ ಇರಲಿ, ಅವುಗಳಿಂದ ನಮಗೆ ಹಲವು ಉಪಯೋಗಗಳಿವೆ. ಬಾವಲಿಗಳು ತಮ್ಮ ಜೀವನಶೈಲಿಯಿಂದ ನಮಗೆ ಹಲವಾರು ಉಪಯೋಗಗಳನ್ನು ಮಾಡುತ್ತವೆ. ಶೇಕಡಾ 70ಕ್ಕಿಂತಲೂ ಹೆಚ್ಚು ಬಾವಲಿಗಳು ಕೀಟಾಹಾರಿಗಳಾಗಿದ್ದು ಬೆಳೆಗೆ ಉಪದ್ರವಿಯಾಗಿರುವ ಹಲವು ಬಗೆಯ ಕೀಟಗಳನ್ನು ತಿನ್ನುವ ಮೂಲಕ ಬೆಳೆಗಳನ್ನು ಸಂರಕ್ಷಿಸುತ್ತವೆ. ಮಲೇರಿಯಾ, ಡೆಂಗ್ಯೂಗಳನ್ನು ತರುವಂತಹ ಸಾವಿರಾರು ಸೊಳ್ಳೆಗಳನ್ನು ತಿನ್ನುವ ಮೂಲಕ ರೋಗ ನಿಯಂತ್ರಣದಲ್ಲಿ ಸಹಕರಿಸುತ್ತವೆ. ಮಕರಂದ ಹೀರುವ ಬಾವಲಿಗಳು ಚಿಟ್ಟೆ ಮತ್ತು ದುಂಬಿಗಳಂತೆ ಪರಾಗಸ್ಪರ್ಶದಲ್ಲಿ ಭಾಗವಹಿಸಿ ಸಂತಾನೋತ್ಪತ್ತಿ ಕ್ರಿಯೆಗೆ ಸಹಾಯ ಮಾಡುತ್ತವೆ. ಬಾವಲಿಗಳು ಇಲ್ಲವಾದರೆ, ಬಾವಲಿಗಳು ಅವಲಂಬಿತವಾಗಿರುವ ಗಿಡಗಳು ನಶಿಸಿ ಹೋಗುತ್ತವೆ. ಇನ್ನು ಹಣ್ಣು ತಿನ್ನುವ ಬಾವಲಿಗಳು ಬೀಜ ಪ್ರಸರಣದಲ್ಲಿ ಸಹಕರಿಸುತ್ತವೆ.  ಇಷ್ಟಲ್ಲದೆ, ಎಲ್ಲಾ ಬಾವಲಿಗಳ ಹಿಕ್ಕೆಯು ಗಿಡಗಳಿಗೆ ಒಳ್ಳೆಯ ಗೊಬ್ಬರವೂ ಹೌದು. ಆದರೆ ಇದರ ಬಗ್ಗೆ ಜನರಿಗೆ ಅಪನಂಬಿಕೆಯೇ ಹೆಚ್ಚು. ಬಾವಲಿ ಕಂಡರೆ ಕೆಟ್ಟದಾಗುತ್ತದೆ, ಬಾವಲಿ ನಮ್ಮ ಸುತ್ತ ಮುತ್ತ ಇದ್ದ ಮಾತ್ರಕ್ಕೆ ಅದರಿಂದ ನಮಗೆ ತೊಂದರೆಯಾಗುತ್ತವೆ, ಅವುಗಳು ಬಂದು ಕಣ್ಣನ್ನು ಕುಕ್ಕುತ್ತವೆ, ತಲೆಯ ಮೇಲೆ ಬಂದು ಕುಳಿತುಬಿಡುತ್ತವೆ, ತಲೆ ಕೂದಲಿನಲ್ಲಿ ಗೂಡು ಕಟ್ಟುತ್ತವೆ, ಬಾವಲಿ ನಮ್ಮ ರಕ್ತ ಹೀರುತ್ತವೆ, ಬಾವಲಿಯಿಂದಲೇ ಕೊರೋನಾ ಬಂದಿದೆ ಇತ್ಯಾದಿ. ಹೀಗೆ ಪಟ್ಟಿ ಮಾಡಿದಷ್ಟು ಬಾವಲಿಗಳ ಮೇಲಿನ ದೂರುಗಳು  ಬೆಳೆಯುತ್ತದೆ. ಆದರೆ ಇಂತಹ ಮಾತು, ಅಲ್ಲಲ್ಲ ‘ಗಾಳಿ ಮಾತು’ ಎಷ್ಟರ ಮಟ್ಟಿಗೆ ಸತ್ಯ? ತಿಳಿಯುವ: ಎಲ್ಲಕ್ಕಿಂತ ಮುಖ್ಯವಾಗಿ ಬಾವಲಿಗಳನ್ನು ಅವುಗಳ ಪಾಡಿಗೆ ಬಿಟ್ಟು, ಅವುಗಳಿಗೆ ನಾವು ತೊಂದರೆಯನ್ನು ಮಾಡದೆ ಇದ್ದರೆ ಬಹುಪಾಲು ಸಮಸ್ಯೆಗಳು ಬರುವುದಿಲ್ಲ. ಉಳಿದಂತೆ, ಬಾವಲಿಗಳು ಯಾರ ಕಣ್ಣನ್ನು ಕುಕ್ಕುವುದಿಲ್ಲ, ಯಾರ ತಲೆಯಲ್ಲಿ ಗೂಡನ್ನೂ ಕಟ್ಟುವುದಿಲ್ಲ. ಬದಲಾಗಿ ಬಾವಲಿ ಮತ್ತು ಮನುಷ್ಯರ ಸಂಪರ್ಕವು ಬಹಳ ವಿರಳ. ಬಾವಲಿಗಳು ಆಕಸ್ಮಿಕವಾಗಿ ಮನೆಯ ಒಳಗೆ ಬಂದರೆ ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಟ್ಟು ಅದಕ್ಕೆ ಹೊರಗೆ ಹೋಗಲು ಅನುವು ಮಾಡಿಕೊಟ್ಟರೆ ಸಾಕು, ಅದು ಸುರಕ್ಷಿತವಾಗಿ ತನ್ನ ಪಾಡಿಗೆ ತಾನು ಹೊರಹೋಗುತ್ತದೆ. ಮನೆಯ ಮಾಡಿನ ಸಂದಿಯಲ್ಲಿ, ಅಟ್ಟದಲ್ಲಿ ಅಥವಾ ಮನೆಯ ಹೊರಗೆ ಮರಗಳಲ್ಲಿ ಬಾವಲಿಗಳು ವಾಸಿಸುವುದರಿಂದ ಮಾನವನಿಗೆ ಅಂತಹ ವಿಪರೀತ ತೊಂದರೆಗಳೇನು ಉಂಟಾಗುವುದಿಲ್ಲ. ಆದರೆ, ಅವುಗಳು ತಿಂದು ಬಿಟ್ಟ ಹಣ್ಣನ್ನು ಸೇವಿಸುವುದು ಅಥವಾ ಅವುಗಳನ್ನು ಹಿಡಿಯುವುದು, ಅವುಗಳಿಂದ ಕಚ್ಚಿಸಿಕೊಳ್ಳುವುದು ಮಾಡುವುದರಿಂದ ಕೆಲವು ಕಾಯಿಲೆಗಳು ಬರುವ ಸಾಧ್ಯತೆಗಳಿರುತ್ತದೆ. ಹಾಗೆಯೇ ಬಾವಲಿಗಳಿಂದಲೇ ಕೊರೋನಾ ಬಂದಿರುವುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಬಾವಲಿಗಳನ್ನು ಸಾಯಿಸುವುದರಿಂದ ಕೊರೋನಾ ಅಥವಾ ಇನ್ನಾವುದೇ ಕಾಯಿಲೆಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಬಾವಲಿ ಮಾತ್ರವಲ್ಲ ಎಲ್ಲಾ ಪ್ರಾಣಿ ಸಂಕುಲಗಳಿಂದಲೂ, ಹಲವು ಬಾರಿ ನಮ್ಮಿಂದ ಅವುಗಳಿಗೆ ತೊಂದರೆಯಾದರೆ ಮಾತ್ರ ಅವುಗಳಿಂದ ನಮಗೆ ಆಪತ್ತಾಗುತ್ತದೆ. ಹಾಗೂ ಈಗಾಗಲೇ ನಾವು ತಿಳಿದುಕೊಂಡಂತೆ, ಬಾವಲಿಗಳಿಂದ ನಮಗೆ ಹಲವಾರು ಪ್ರಯೋಜನಗಳಿವೆ, ಆದುದರಿಂದ ಅವುಗಳ ಸಂತತಿಯನ್ನು ಉಳಿಸಿಕೊಳ್ಳುವಲ್ಲಿ ಎಲ್ಲರೂ ಕೈ ಜೋಡಿಸಬೇಕಾಗಿದೆ.

ಭಾರತದ ಅಳಿವಿನಂಚಿನಲ್ಲಿರುವ ಬಾವಲಿಗಳು

1. “ಕೋಲಾರದ ಎಲೆ ಮೂತಿಯ ಬಾವಲಿ”

© ಶ್ರದ್ಧಾ ಕುಮಾರಿ ಕೆ; ಚಿತ್ರ 3_ ಕೋಲಾರದ ಎಲೆ-ಮೂತಿಯ ಬಾವಲಿ

ಕೋಲಾರದ ಎಲೆ ಮೂತಿಯ ಬಾವಲಿ (Leaf-nosed bat) (ಚಿತ್ರ 3)ಇಡೀ ಜಗತ್ತಿನಲ್ಲಿ ಕಂಡುಬರುವುದು ಒಂದೇ ಒಂದು ಜಾಗದಲ್ಲಿ – ಅದು ನಮ್ಮ ಕರ್ನಾಟಕದ ‘ಕೋಲಾರ ಜಿಲ್ಲೆಯ ಹನುಮನಹಳ್ಳಿ’ ಎಂಬ ಒಂದು ಹಳ್ಳಿಯಲ್ಲಿ (ಚಿತ್ರ 6). ಈ ಬಾವಲಿಯು ಒಂದು ಕಿರಿದಾದ ಅಂತರ್ಗತದ ಗುಹೆಯಲ್ಲಿ ವಾಸಿಸುತ್ತದೆ. ಇವುಗಳು ವಾಸಿಸುವ ಗುಹೆಯಲ್ಲಿ ಬೇರೆ ಪ್ರಭೇದಗಳ ಕೆಲವು ಬಾವಲಿಗಳು ಸಹ ವಾಸಿಸುತ್ತವೆ. ಈ ಗುಹೆಯು ವಿಶಾಲವಾಗಿ ಹರಡಿಕೊಂಡ ಕಲ್ಲುಬಂಡೆಯ ಒಂದು ಬದಿಯಲ್ಲಿ ನಿರ್ಮಿತವಾಗಿದೆ. ಈ ಕಲ್ಲುಬಂಡೆಯ ಸುತ್ತಮುತ್ತಲಿನ ಪರಿಸರವು ಮುಖ್ಯವಾಗಿ ಕೃಷಿಭೂಮಿಯನ್ನು ಹೊಂದಿದೆ.

© ಶ್ರದ್ಧಾ ಕುಮಾರಿ ಕೆ; ಚಿತ್ರ 6: ಭಾರತದ ಅಳಿವಿನಂಚಿನಲ್ಲಿರುವ ಬಾವಲಿಗಳ ವಾಸಸ್ಥಾನ ತೋರಿಸುವ ನಕ್ಷೆ

ಮುಷ್ಟಿ ಗಾತ್ರಕ್ಕಿಂತಲೂ ಚಿಕ್ಕದಾಗಿರುವ ಈ ಬಾವಲಿಯು ವಿವಿಧ ರೀತಿಯ ಸೊಳ್ಳೆಗಳು, ಜೀರುಂಡೆಗಳು, ಪತಂಗಗಳು, ಜೇನುಹುಳುಗಳಂತ ಕೀಟಗಳನ್ನು ತಿನ್ನುತ್ತದೆ. ಹನುಮನಹಳ್ಳಿಯಲ್ಲಿ ಇವುಗಳ ಸಂತತಿಗೆ ಅಲ್ಲಿನ ಕಲ್ಲು ಗಣಿಗಾರಿಕೆಯು ತೊಂದರೆಯನ್ನುಂಟು ಮಾಡಿದೆ. ಈಗ ಅಲ್ಲಿ ನಡೆಯುವ ಗಣಿಗಾರಿಕೆಯನ್ನು ಸರ್ಕಾರವು ನಿಷೇಧಿಸಿದೆ ಹಾಗೂ ಆ ಸ್ಥಳವನ್ನು ‘ಕೋಲಾರದ ಎಲೆ ಮೂತಿಯ ಬಾವಲಿಯ ಸಂರಕ್ಷಣಾ ಮೀಸಲು’ ಯೆಂದು  ಘೋಷಿಸಿದೆ. ಬಾವಲಿಗಳಿಗೆ ಜನರಿಂದ ತೊಂದರೆಯಾಗದಂತೆ ಕಾಪಾಡಲು ಅಲ್ಲಿ ಜನರ ಓಡಾಟವನ್ನು ನಿಷೇಧಗೊಳಿಸಲಾಗಿದೆ ಹಾಗೂ ಇದು ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಣ್ಗಾವಲಿನಲ್ಲಿದೆ. ಮೊದಲು ಈ ಬಾವಲಿಗಳು, ಹನುಮನಹಳ್ಳಿ ಸಮೀಪದ ‘ತಿರಹಳ್ಳಿ’ ಯಲ್ಲಿಯೂ ಸಹ ಕಂಡುಬರುತ್ತಿದ್ದವು. ಆದರೆ ಮಾನವನ ಚಟುವಟಿಕೆಗಳಿಂದಾಗಿ ಈಗ ಅವುಗಳು ಅಲ್ಲಿ ನಶಿಸಿವೆ. ‘ವನ್ಯಜೀವಿ ಸಂರಕ್ಷಣಾ ಕಾಯ್ದೆ’ಯಲ್ಲಿ ಇವುಗಳ ಸಂರಕ್ಷಣೆಗೆ ವಿಶೇಷ ಪ್ರಾಮುಖ್ಯತೆಯನ್ನು  ಕೊಡಲಾಗಿದೆ ಎನ್ನುವುದು ಗಮನಾರ್ಹ. ಹೆಚ್ಚಿನ ಮಾಹಿತಿಗಾಗಿ ಈ ಕ್ಷೇತ್ರದಲ್ಲಿ ‘ಬ್ಯಾಟ್ ಕನ್ಸರ್ವೇಷನ್ ಇಂಡಿಯಾ  ಟ್ರಸ್ಟ್  (BCIT)’ ಸಂಶೋಧನೆಯನ್ನು ನಡೆಸುತ್ತಿದೆ.

2. “ದುರ್ಗಾದಾಸನ / ಖಜುರಿಯಾನ ಎಲೆಮೂತಿಯ ಬಾವಲಿ”

© ರಾಜೇಶ್ ಪುಟ್ಟಸ್ವಾಮಯ್ಯ; ಚಿತ್ರ 4_ ದುರ್ಗಾದಾಸನ _ ಖಜುರಿಯಾನ ಎಲೆಮೂತಿಯ ಬಾವಲಿ

ಪ್ರಪಂಚದಲ್ಲಿ ದುರ್ಗಾದಾಸನ/ಖಜುರಿಯಾನ ಎಲೆಮೂತಿಯ ಬಾವಲಿ Khajuria’s leaf-nosed bat)  (ಚಿತ್ರ 4) ಕಂಡುಬರುವುದು ಎರಡು ಜಾಗಗಳಲ್ಲಿ ಮಾತ್ರ: ಒಂದು ಕೋಲಾರದ ಎಲೆಮೂತಿಯ ಬಾವಲಿ ಇರುವಲ್ಲಿ – ಅಂದರೆ ಹನುಮನಹಳ್ಳಿಯಲ್ಲಿ. ಮತ್ತೊಂದು – ಮಧ್ಯಪ್ರದೇಶದ ‘ಜಬಲ್ ಪುರ’ ಎಂಬಲ್ಲಿ (ಚಿತ್ರ 6). ಇವುಗಳು ಸಹ ಜೀರುಂಡೆಗಳು, ಪತಂಗಗಳು ಮತ್ತು ಸೊಳ್ಳೆಗಳನ್ನು ತಿನ್ನುತ್ತವೆ. ಸರ್ಕಾರವು ಇವುಗಳಿಗೆ ವನ್ಯಜೀವಿ ಕಾಯ್ದೆಯಡಿ ರಕ್ಷಣೆಯನ್ನು ನೀಡಿದೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯು ಸಂಶೋಧನಾ ಹಾದಿಯಲ್ಲಿದೆ. ಈ ಬಾವಲಿಗಳ ಕುರಿತಾಗಿಯೂ ಹೆಚ್ಚಿನ ಮಾಹಿತಿಗಾಗಿ ‘ಬ್ಯಾಟ್ ಕನ್ಸರ್ವೇಷನ್ ಇಂಡಿಯಾ  ಟ್ರಸ್ಟ್  (BCIT)’  ಸಂಸ್ಥೆಯು ಸಂಶೋಧನೆಯನ್ನು ನಡೆಸುತ್ತಿದೆ.

3.“ಸಲೀಂ ಅಲಿ ಬಾವಲಿ”

© ನಿತಿನ್ ದಿವಾಕರ್; ಚಿತ್ರ 5_ ಸಲೀಂ ಅಲಿ ಬಾವಲಿ

ಸಲೀಂ ಅಲಿ ಬಾವಲಿಯು (Salim Ali’s fruit bat) (ಚಿತ್ರ 5) ದಕ್ಷಿಣ ಭಾರತದ ಪಶ್ಚಿಮಘಟ್ಟಗಳ ಕೆಲವೇ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ (ಚಿತ್ರ 6). ಅದರಲ್ಲಿ ಪ್ರಮುಖವಾಗಿ ತಮಿಳುನಾಡಿನ ಮೇಘಮಲೈ, ಕಾಲಕ್ಕಾಡ್ – ಮುಂದಮಲೈ ಹುಲಿಧಾಮ, ಕೋರ್ಟಾಲ್ಲಂ ಪರ್ವತಗಳು, ಮಂಕುಲಂ ಅರಣ್ಯ ಮತ್ತು ಅಣ್ಣಾಮಲೈ ಪರ್ವತಗಳಲ್ಲಿ; ಕೇರಳದ ಪೆರಿಯಾರ್ ವನ್ಯಜೀವಿಧಾಮದಲ್ಲಿ ಕಾಣಸಿಗುತ್ತವೆ. ಇವುಗಳ ಒಟ್ಟು ಸಂತತಿಯು ಇರುವುದು ಸುಮಾರು ಒಂದು ಸಾವಿರದಷ್ಟು ಮಾತ್ರ. ಇವುಗಳ ದೊಡ್ಡ ಗುಂಪು ಇರುವುದು ಅಗಸ್ತ್ಯಮಲೈಯಲ್ಲಿ ಮತ್ತು ಆ ಗುಂಪಿನ ಸಂಖ್ಯೆ ಅಂದಾಜು 475.

ಈ ಬಾವಲಿಗಳೂ ಸಹ ಗುಹೆಯಲ್ಲಿ ವಾಸಿಸುತ್ತವೆ. ಇವುಗಳು ವಿವಿಧ ಪ್ರಭೇದದ ಹಣ್ಣುಗಳನ್ನು ತಿನ್ನುತ್ತವೆ. ಮರಗಳನ್ನು ಕಡಿಯುವುದು, ಗುಹೆಗಳಿಗೆ ತೊಂದರೆ ಮಾಡುವುದು ಮುಂತಾದ ಚಟುವಟಿಕೆಗಳಿಂದ ಇವುಗಳ ಸಂತತಿಗೆ ಹಾನಿಯಾಗುತ್ತದೆ. ಇವುಗಳಿಗೂ ಸಹ ಸರ್ಕಾರವು ವನ್ಯಜೀವಿ ಕಾಯ್ದೆಯಡಿ ವಿಶೇಷ ಮಹತ್ವವನ್ನು ಕೊಟ್ಟು ಸಂರಕ್ಷಿಸುವಲ್ಲಿ ಕಾರ್ಯನಿರ್ವಹಿಸಿದೆ.

ಬಾವಲಿಗಳ ಸಂರಕ್ಷಣೆಯಲ್ಲಿ ನಮ್ಮ ಪಾತ್ರ

© Vzzz

ಬಾವಲಿಗಳನ್ನು ಸಂರಕ್ಷಿಸಲು ಇರುವ ಸುಲಭ ವಿಧಾನವೆಂದರೆ ‘ಬಾವಲಿ ಸ್ನೇಹಿ ಪರಿಸರ’ವನ್ನು ಸೃಷ್ಟಿಸುವುದು. ಅಂದರೆ ಅವುಗಳ ವಾಸಸ್ಥಾನ ಮತ್ತು ಆಹಾರ ಸಂಪನ್ಮೂಲಗಳನ್ನು ರಕ್ಷಿಸುವುದು. ಅಂದರೆ ಬಾವಲಿ ವಾಸಿಸುವಂತಹ ದೊಡ್ಡ ಮರಗಳನ್ನು, ಗುಹೆಗಳನ್ನು ರಕ್ಷಿಸುವುದು; ಹಳೆಯ ಕಟ್ಟಡಗಳಲ್ಲಿರುವ ಬಾವಲಿಗಳಿಗೆ ತೊಂದರೆ ಮಾಡದೇ ಇರುವುದು, ಹಣ್ಣು ಬಿಡುವಂತಹ ಮತ್ತು ಕೀಟಗಳನ್ನು ಆಕರ್ಷಿಸುವಂತಹ ಮರಗಳನ್ನು ನೆಡುವುದು ಮತ್ತು ರಕ್ಷಿಸುವುದು ಮಾಡಬೇಕು.  ಈಗಾಗಲೇ ನಾವು ತಿಳಿದುಕೊಂಡಂತೆ, ಬಾವಲಿಗಳಿಂದ ನಮಗೆ ಹಲವಾರು ಪ್ರಯೋಜನಗಳಿವೆ, ಆದ್ದರಿಂದ ಅವುಗಳ ಸಂತತಿಯನ್ನು ಉಳಿಸಿಕೊಳ್ಳುವಲ್ಲಿ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ.

ಲೇಖನ: ಶ್ರದ್ಧಾ ಕುಮಾರಿ ಕೆ
       ದಕ್ಷಿಣ ಕನ್ನಡ ಜಿಲ್ಲೆ

Print Friendly, PDF & Email
Spread the love
error: Content is protected.