ಜಿಮ್ ಕಾರ್ಬೆಟ್ ಕಾಡಿನ ರೋಚಕ ಅನುಭವದ ಕಥನ ಭಾಗ ೧
© ಗುರು ಪ್ರಸಾದ್ ಕೆ. ಆರ್.
ಜಿಮ್ ಕಾರ್ಬೆಟ್- ಹುಲಿಗಳ ಕಾಡು, ದಟ್ಟಾರಣ್ಯ. ಅತಿ ಹೆಚ್ಚು ಸಂಖ್ಯೆಯಲ್ಲಿ ಹುಲಿಗಳು ಇರುವುದು ಈ ಕಾಡಿನಲ್ಲೇ. ಇದರ ಬಗ್ಗೆ “ಜಿಮ್ ಕಾರ್ಬೆಟ್” ರವರೇ ಬರೆದಿರುವ ಹಲವು ಪುಸ್ತಕಗಳನ್ನು ಹಾಗು ಅವರ ಕೆಲವು ಕಥೆಗಳನ್ನು ಅಷ್ಟೇ ಅದ್ಭುತವಾಗಿ ಅನುವಾದ ಮಾಡಿರುವ ನಮ್ಮ ನೆಚ್ಚಿನ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸರ್ ರವರ ಪುಸ್ತಕಗಳನ್ನು ಓದಿ ಒಂದು ತರಹದ ನಿಗೂಢ ವಿಸ್ಮಯ ಮತ್ತು ರೋಚಕ ಅರಣ್ಯ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಾಗಿತ್ತು. ಹಿಮಾಲಯದ ತಪ್ಪಲಿನ ವಿಶಾಲ ಜಾಗದಲ್ಲಿ ನೈನಿತಾಲ್, ಭೀಮತಾಲ್ ಮುಂತಾದ ಹಲವು ಬೆಟ್ಟಗಳಿಂದ ಆವೃತವಾದ ದಂಡಕಾರಣ್ಯವದು. ನಮ್ಮ ಭಾರತದ ಮೊಟ್ಟ ಮೊದಲ ರಾಷ್ಟ್ರೀಯ ಉದ್ಯಾನವನವೂ ಹೌದು. ಜಿಮ್ ಕಾರ್ಬೆಟ್ ಕಾಡು ಸುಮಾರು 1318. 54 ಚದರ ಕಿಲೋ ಮೀಟರ್ ನಷ್ಟು ವಿಸ್ತಾರವಾಗಿದೆ.
ಈ ಕಾಡಿಗೆ ಹೋಗಿ ಸಫಾರಿ ಮಾಡಲು ಹಲವಾರು ಬಾರಿ ಪ್ರಯತ್ನಿಸಿ ವಿಫಲನಾಗಿದ್ದೆ. ಕಳೆದ ಜೂನ್ ತಿಂಗಳಿನಲ್ಲಿ ಈ ನನ್ನ ಬಹು ದಿನದ ಕನಸು ಅಚಾನಕ್ ಆಗಿ ನನಸಾಯಿತು, ಅದು ನನಸಾದದ್ದು ಅರಣ್ಯ ಇಲಾಖೆಯವರು ಆಯೋಜಿಸಿದ್ದ ಪಕ್ಷಿ ಗಣತಿಯಲ್ಲಿ. ಕರ್ನಾಟಕದ ನಾಗರಹೊಳೆ, ತಮಿಳುನಾಡಿನ ಹೊಸೂರು, ಸೇಲಂ ಮತ್ತು ಕೇರಳದ ಕಾಡುಗಳಲ್ಲಿನ ಪಕ್ಷಿ ಗಣತಿಯಲ್ಲಿ ಭಾಗವಹಿಸಿ ಅದರ ಸವಿಯನ್ನು ಆಸ್ವಾಧಿಸಿದ್ದ ನನಗೆ, ಈ ಜಿಮ್ ಕಾರ್ಬೆಟ್ ಅವಕಾಶವು ಕುತೂಹಲವನ್ನು ಮೂಡಿಸಿತ್ತು. ಬಹಳ ಕಡಿಮೆ ಕಾಲಾವಧಿಯಲ್ಲಿ ಹೊರಡಬೇಕಿದ್ದ ಕಾರಣ, ಆ ಸಮಯದಲ್ಲೇ ಹೇಗೋ ಮಾಡಿ ಆಫೀಸಿನಲ್ಲಿ ನಾಲ್ಕು ದಿನದ ರಜೆ ಗಿಟ್ಟಿಸಿ ಹೊರಡಲು ಸನ್ನದ್ಧನಾದೆ. ಜೂನ್ ಇಪ್ಪತ್ತನೇ ತಾರೀಖಿನ ಬೆಳಗ್ಗೆ ನಾವು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಮುಖ್ಯ ಕಛೇರಿಯಿರುವ ರಾಮನಗರ್ ನಲ್ಲಿ ವರದಿ ಮಾಡಿಕೊಳ್ಳಬೇಕಿತ್ತು. ಆ ಕಾಡಿನ ವಾತಾವರಣದ ಬಗ್ಗೆ ನನಗೆ ಸ್ವಲ್ಪ ಅರಿವಿದ್ದ ಕಾರಣ, ಬೇಕಿದ್ದ ಬಟ್ಟೆ-ಬರೆ, ಸ್ಲೀಪಿಂಗ್ ಬ್ಯಾಗ್, ಕ್ಯಾಮೆರಾ, ಬೈನಾಕ್ಯುಲರ್ ಎಲ್ಲವನ್ನು ತಯಾರಿ ಮಾಡಿಕೊಂಡು, ಜೂನ್ 19ನೇ ತಾರೀಖು ಸಂಜೆ ಬೆಂಗಳೂರಿನಿಂದ ದೆಲ್ಲಿಗೆ ಹೊರಡುವ ವಿಮಾನ ಹತ್ತಿದೆನು. ನನ್ನ ಜೊತೆ ಬೆಂಗಳೂರಿನ ಮಧುಸೂದನ್, ಸುಧಾಕರ್ ಜೊತೆಯಾದರು. ಮಧ್ಯರಾತ್ರಿ ಹೊತ್ತಿಗೆ ದೆಲ್ಲಿ ತಲುಪಿ ಅಲ್ಲಿಂದ ಮೊದಲೇ ಬುಕ್ ಮಾಡಿದ್ದ ಕಾರ್ ನಲ್ಲಿ ಉತ್ತರಾಖಂಡ್ ನ ರಾಮನಗರ್ ಕಡೆ ಹೊರಟೆವು. ರಾಮನಗರ್ ತಲುಪುವ ಹೊತ್ತಿಗೆ ಬೆಳಗ್ಗೆ ಆರು ಘಂಟೆ ಆಗಿತ್ತು. ಮುಖ್ಯ ಕಛೇರಿಯ ಪಕ್ಕದಲ್ಲೇ ಇರುವ ಹೋಟೆಲಿನ ಒಂದು ಸಣ್ಣ ಕೊಠಡಿಯನ್ನು ಬುಕ್ ಮಾಡಿ ಶುಚಿಯಾಗಿ, ನಿರ್ದೇಶಕರ ಕಛೇರಿಗೆ ಹೋಗಿ ವರದಿ ಮಾಡಿಕೊಂಡೆವು. ನಮಗಿಂತ ಮುಂಚೆಯೇ ಬೆಂಗಳೂರಿನಿಂದ ಬಂದಿದ್ದ ಮುನೇಶ್ ಗೌಡ ರವರೂ ಸಹ ನಮ್ಮ ಜೊತೆಯಾದರು. ಬೆಂಗಳೂರಿನಿಂದ ನಾವು ಒಟ್ಟು ನಾಲ್ಕು ಜನರಾದೆವು
ಭಾರತದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಪಕ್ಷಿ ವೀಕ್ಷಕರನ್ನು, ನ್ಯಾಚುರಲಿಸ್ಟ್ ರನ್ನು ಪರಿಚಯ ಮಾಡಿಕೊಂಡು ನಮಗೆ ಪಕ್ಷಿ ಗಣತಿಗೆಂದು ಕಾಡಿನ ಯಾವ ಪ್ರದೇಶವನ್ನು ನಿಯೋಜಿಸುತ್ತಾರೋ ಎಂಬ ಕುತೂಹಲದಿಂದ ಕಾಯುತ್ತಾ ಕುಳಿತಿದ್ದೆವು. ನಾವು ಮೊದಲೇ ಎಣಿಸಿದಂತೆ ಬೆಂಗಳೂರಿನ ನಾಲ್ವರನ್ನು ಬೇರೆ ಬೇರೆ ತಂಡಗಳಿಗೆ ನಿಯೋಜಿಸಲಾಗಿತ್ತು. ಮುನೇಶ್ ಗೌಡ ರವರ ತಂಡದಲ್ಲಿ ಬರಬೇಕಿದ್ದ ಒಬ್ಬರು ಗೈರಾಗಿದ್ದ ಕಾರಣ ನಾನು ಅಧಿಕಾರಿಗಳನ್ನು ವಿನಂತಿಸಿಕೊಂಡು ಅವರ ತಂಡವನ್ನು ಸೇರಿಕೊಂಡೆ.
ಜಿಮ್ ಕಾರ್ಬೆಟ್ ಹುಲಿ ಅಭಯಾರಣ್ಯದ ನಿರ್ದೇಶಕರಾದ ಡಾ. ಧೀರಜ್ ಪಾಂಡೆ ರವರು ನಮ್ಮನ್ನೆಲ್ಲಾ ಉದ್ದೇಶಿಸಿ ಮಾತನಾಡಿ ಜಿಮ್ ಕಾರ್ಬೆಟ್ ಅರಣ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ಒದಗಿಸಿದರು. ಉಳಿದ ಅರಣ್ಯ ಅಧಿಕಾರಿಗಳು ಕಾಡಿನ ಭೂಗೋಳದ ಬಗ್ಗೆ, ಅಲ್ಲಿ ವಾಸಿಸುವ ಪ್ರಾಣಿಗಳ ಬಗ್ಗೆ, ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ಹುಲಿ, ಆನೆಗಳ ಬಗ್ಗೆ ಕೆಲವು ಸೂಚನೆಗಳನ್ನು ನೀಡಿದರು. ನಮ್ಮ ಸುರಕ್ಷತೆಯೇ ಅವರ ಮೊದಲ ಆದ್ಯತೆ ಎಂಬುದು ಅವರ ಮಾತಿನಲ್ಲಿ ತಿಳಿದು ಧೈರ್ಯ ಬಂದಿತು. ಇಡೀ ಭಾರತದಲ್ಲಿ ಅತಿ ಹೆಚ್ಚು ಹುಲಿ ಮತ್ತು ಆನೆ ಇರುವ ಪ್ರದೇಶದಲ್ಲಿ ನಾವು ಕಾಲ್ನಡಿಗೆಯಲ್ಲಿಯೇ ಪಕ್ಷಿ ಗಣತಿ ಮಾಡಬೇಕಿತ್ತು. ಇಂತಹ ದಟ್ಟ ಕಾಡಿನಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂದು ತಿಳಿದಿದ್ದ ಅಧಿಕಾರಿಗಳು ತುಂಬಾ ಜಾಗರೂಕತೆಯಿಂದ ಇರಲು ಪದೇ ಪದೇ ಹೇಳುತ್ತಿದ್ದರು. ಇನ್ನು ಈ ಪಕ್ಷಿ ಗಣತಿ ನಡೆಯುವ ವಿಧಾನ, ಸ್ವಯಂ ಸೇವಕರಾಗಿ ಬಂದಿರುವ ನಮ್ಮ ಕರ್ತವ್ಯ, ನಮಗೆಲ್ಲಾ ತಂಗಲು ಮಾಡಿದ್ದ ವ್ಯವಸ್ಥೆ, ಊಟ ಉಪಚಾರಗಳ ಬಗ್ಗೆ ಎಲ್ಲವನ್ನೂ ಸವಿವರವಾಗಿ ನಮಗೆ ತಿಳಿಸುವಷ್ಟರಲ್ಲಿ ಸಮಯ ಮಧ್ಯಾಹ್ನ ಎರಡು ಘಂಟೆ ಆಗಿತ್ತು. ಎಲ್ಲರೂ ಮಧ್ಯಾಹ್ನದ ಊಟಕ್ಕೆ ಎಂದು ನೀಡಿದ ಊಟದ ಪ್ಯಾಕ್ ಗಳನ್ನು ತೆಗೆದುಕೊಂಡು, ತಮ್ಮ ತಮ್ಮ ಸ್ನೇಹಿತರನ್ನು ಬೀಳ್ಕೊಂಡು ಆಯೋಜಿಸಿದ್ದ ತಮ್ಮ ವಾಹನಗಳ ಕಡೆ ನಡೆದರು. ನಾನು ಸಹ ಬೆಂಗಳೂರಿನ ಸ್ನೇಹಿತರನ್ನು ಬೀಳ್ಕೊಂಡು ನಮಗಾಗಿ ಕಾಯುತ್ತಲಿದ್ದ ತೆರೆದ ಜೀಪ್ ಕಡೆ ಹೊರಟೆ. ನಮ್ಮ ಜೊತೆ ಇನ್ನು ಎರಡು ಬೇರೆ ಸ್ಥಳದ ತಂಡಗಳು ಜೊತೆಯಾದವು. ಅದರಲ್ಲಿನ ಒಂದಿಬ್ಬರು ಉತ್ತರಾಖಂಡ್ ರಾಜ್ಯದವರೂ ಇದ್ದರು.
ಎಲ್ಲರೂ ಜೀಪ್ ಹತ್ತಿರುವುದನ್ನು ಖಾತ್ರಿಪಡಿಸಿಕೊಂಡ ಡ್ರೈವರ್ ರೋಮಾಂಚಿತ ಪ್ರಯಾಣವನ್ನು ಅಂತೂ ಶುರುಮಾಡಿದರು. ರಾಮನಗರ್ ಮುಖ್ಯ ಅರಣ್ಯ ಕಛೇರಿಯಿಂದ ನಮಗೆ ನಿಯೋಜನೆಗೊಂಡಿದ್ದ ಸ್ಥಳ ಸುಮಾರು 130 ಕಿಲೋ ಮೀಟರ್ ದೂರವಿತ್ತು. ಆ ಸ್ಥಳಕ್ಕೆ ತಲುಪುವ ರಸ್ತೆಯ ಬಹುಪಾಲು ಕಾಡಿನ ಒಳಭಾಗದಲ್ಲಿಯೇ ಹಾದುಹೋಗುತ್ತಿದ್ದ ಕಾರಣ, ಆ ಕಾಡಿನ ವೈಭೋಗಕ್ಕೆ ಎದೆ ಬಡಿತ ಹೆಚ್ಚಾಗುತ್ತಿತ್ತು. ಈಶಾನ್ಯ ಭಾರತ ಮತ್ತು ಈ ವಲಯದಲ್ಲಿ ಸಿಗುವ ಪಕ್ಷಿ ವೈವಿಧ್ಯತೆಯೇ ತುಂಬಾ ವಿಭಿನ್ನ. ಇಲ್ಲಿ ಕಾಣಸಿಗುವ ಪಕ್ಷಿಗಳೆಲ್ಲವೂ ನಮಗೆ ಹೊಸದು. ಇದರ ಬಗ್ಗೆ ತಿಳಿದುಕೊಳ್ಳಲು ಕಣ್ಣಾರೆ ನೋಡಲು ನನ್ನ ಮನಸ್ಸು ಹಾತೊರೆಯುತ್ತಿತ್ತು. ನಮ್ಮ ಜೀಪ್ ನಲ್ಲಿಯೇ ಇದ್ದ ಉತ್ತರಾಖಂಡ್ ನವರು ಈ ದಾರಿಗಳಲ್ಲಿ ಸಾಮಾನ್ಯವಾಗಿ ಹುಲಿ, ಆನೆ ಮುಂತಾದ ಕಾಡು ಪ್ರಾಣಿಗಳು ಕಾಣಸಿಗುತ್ತವೆ ಸುತ್ತ ಗಮನಿಸುತ್ತಿರಿ ಎಂದೊಡನೆಯೇ ನಾನು ಬ್ಯಾಗಿನ ಒಳಗೆ ಇಟ್ಟಿದ್ದ ಕ್ಯಾಮೆರಾವನ್ನು ತೆಗೆದು ಕೈನಲ್ಲಿ ಹಿಡಿದುಕೊಂಡೆ; ಯಾವುದಾದರೂ ಪ್ರಾಣಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ.
ಒಂದರ ಹಿಂದೆ ಒಂದರಂತೆ ಮೂರು ಜೀಪುಗಳು ಕಾಡಿನ ದಾರಿಯನ್ನು ಸೀಳುತ್ತ, ಧೂಳೆಬ್ಬಿಸುತ್ತ ಬರೋ… ಎಂದು ಹೊರಟವು. ರಸ್ತೆಯಲ್ಲಿ ಎದುರಾಗುತ್ತಿದ್ದ ಪ್ರತೀ ಚೆಕ್ ಪೋಸ್ಟ್ ನಲ್ಲಿ ನಮ್ಮ ಜೀಪಿನ ಮಾಹಿತಿಯನ್ನು ನಮೂದಿಸುತ್ತಾ, ಸುಂದರ ಕಾಡಿನ ಪರಿಸರವನ್ನು ಆಸ್ವಾದಿಸುತ್ತಾ ಆಸ್ವಾಧಿಸುತ್ತಾ ತೆರೆದ ಜೀಪ್ ನಲ್ಲಿನ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಹಲವಾರು ಪಕ್ಷಿಗಳು ನಮ್ಮ ಕಣ್ಣಿನ ಮುಂದೆಯೇ ಹಾರುತ್ತಿದ್ದುದರಿಂದ ನಮ್ಮ ಕೆಲಸವನ್ನು ನಾವು ಶುರುಮಾಡಿದ್ದೆವು. ಕೆಲವರು ಆ ಪಕ್ಷಿಗಳನ್ನು ದಾಖಲಿಸಿಕೊಳ್ಳುತ್ತಿದ್ದರೆ, ನಾನು ಕ್ಯಾಮೆರಾದಲ್ಲಿ ಅವುಗಳನ್ನು ಸೆರೆಹಿಡಿಯಲು ಯತ್ನಿಸುತ್ತಿದ್ದೆ. ವಿಶಾಲ ಹುಲ್ಲುಗಾವಲು, ಹಳ್ಳ ಕೊಳ್ಳಗಳಿಂದ ಕೂಡಿದ ರಸ್ತೆ, ರಸ್ತೆಗೆ ಅಡ್ಡಲಾಗಿಯೇ ಹರಿಯುವ ನದಿ, ತೊರೆಗಳನ್ನು ದಾಟಿ ನಮ್ಮ ಜೀಪು ಮುನ್ನುಗ್ಗುತ್ತಿತ್ತು. ದಾರಿಯಲ್ಲಿ ಸಿಗುವ ಕೆಲವು ಫಾರೆಸ್ಟ್ ಪಾಯಿಂಟ್ ಗಳಲ್ಲಿಯೇ ಇಳಿಸಬೇಕಾದ ಸಹ ಪಯಣಿಗರನ್ನು ಇಳಿಸಿ ನಮ್ಮ ಜೀಪು ಮುಂದೆ ಸಾಗಿತು. ರಸ್ತೆಯ ಪಕ್ಕದಲ್ಲಿಯೇ ಓಡುವ ಜಿಂಕೆ, ಕಡವೆ, ಸಾರಂಗ, ದೂರದಲ್ಲೆಲೋ ನವಿಲಿನ ಕೂಗು, ಜೀಪಿನ ಶಬ್ಧವನ್ನೂ ಸಹ ಮೀರಿಸುವ ಪಕ್ಷಿಗಳ ಚಿಲಿಪಿಲಿ ಕಲರವ ಎಲ್ಲವನ್ನು ಸವಿಯುತ್ತ ಮುನ್ನಡೆದೆವು. ಕ್ರಮಿಸಬೇಕಿದ್ದ ದಾರಿಯು ಇನ್ನು ಬಹಳಷ್ಟು ದೂರವಿದ್ದ ಕಾರಣ ಮಧ್ಯ ದಾರಿಯಲ್ಲಿ ಸಿಕ್ಕ ಒಂದು ಚೆಕ್ ಪೋಸ್ಟ್ ನಲ್ಲಿ ಎಲ್ಲ ಜೀಪುಗಳನ್ನು ನಿಲ್ಲಿಸಿ ಊಟ ಮಾಡಲು ನಿರ್ದೇಶಿಸಿದರು. ಎಲ್ಲರು ತಮಗೆ ಕೊಟ್ಟಿದ್ದ ಊಟದ ಪ್ಯಾಕ್ ಗಳನ್ನು ತಿಂದು ನೀರು ಕುಡಿದ ನಂತರ ಮತ್ತೆ ನಮ್ಮ ಪ್ರಯಾಣ ಮುಂದುವರೆಯಿತು. ಕಾಡಿನ ಕಚ್ಚಾ ರಸ್ತೆ, ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದ ಜೀಪುಗಳ ಸಾಲು ಧೂಳಿನ ಮೋಡವನ್ನೇ ಸೃಷ್ಟಿಸಿತ್ತು. ಧೂಳು ನಮ್ಮ ಮೈ ಕೈ ಮುಖ ಎಲ್ಲ ಕಡೆಯು ಆವರಿಸಿತ್ತು. ಸದ್ಯ ನನ್ನ ಕ್ಯಾಮೆರಾಗೆ ಡಸ್ಟ್ ಪ್ರೂಫ್ ಹೊದಿಸಿದ್ದೆ; ಬಚಾವಾಗಿತ್ತು.
ಸೂರ್ಯ ರಶ್ಮಿಯು ನುಸುಳಲಾಗದ ದಟ್ಟ ಕಾಡು, ವಿಶಾಲವಾದ ದೊಡ್ಡ ಹುಲ್ಲು ಗಾವಲು, ಧೋ… ಎಂದು ಹರಿಯುವ ದೊಡ್ಡ ಹಳ್ಳ, ಕಡಿದಾದ ಬೆಟ್ಟ-ಗುಡ್ಡಗಳ ಸಾಲು, ಮುಂದೆ ಸಾಗಿದಂತೆಲ್ಲಾ ಜಿಮ್ ಕಾರ್ಬೆಟ್ ಕಾಡು ತನ್ನ ಸೌಂದರ್ಯವನ್ನು ನಿಧಾನವಾಗಿ ತೆರೆದಿಡುತ್ತಿತ್ತು. ಈ ಆನಂದವನದಲ್ಲಿ ಸಮಯ ಸಂಜೆ ಐದಾದದ್ದೇ ತಿಳಿಯಲಿಲ್ಲ. ಇದ್ದಕ್ಕಿದ್ದಂತೆ ಆವರಿಸಿದ ಕತ್ತಲಿಗೆ ಕಾರಣ ತಿಳಿಯಲು ಕತ್ತೆತ್ತಿ ನೋಡಿದೆ, ಕಪ್ಪನೆ ಮೋಡ ನಿಧಾನವಾಗಿ ಸುತ್ತುವರಿಯುತ್ತಿತ್ತು! ನಾವು ಸಾಗುತ್ತಿದ್ದುದು ತೆರೆದ ಜೀಪ್ ನಲ್ಲಿ. ಪಕ್ಕದಲ್ಲೇ ಇದ್ದವರನ್ನು ಕೇಳಿದೆ ‘ಇನ್ನು ಎಷ್ಟು ದೂರವೆಂದು’ ಅವರು ಇನ್ನು ಬಹಳಷ್ಟು ದೂರವಿದೆ ಎಂದರು. ಮಳೆ ಬಂದರೆ ನನ್ನ ಕ್ಯಾಮೆರಾದ ಗತಿ ಏನು? ಎಂದು ಯೋಚಿಸುವಷ್ಟರಲ್ಲೇ ವರುಣನು ತನ್ನ ಕೆಲಸವನ್ನು ಶುರುಮಾಡಿಯೇ ಬಿಟ್ಟ. ಅದೂ ಸಹ ತುಂಬಾ ರಭಸವಾಗಿ!
ನಾನು, ನನ್ನ ಕ್ಯಾಮೆರಾ ಏನು ಮಾಡುವುದಪ್ಪಾ ಎಂದು ಹತಾಶನಾದೆ. ತಕ್ಷಣವೇ ಗಾಡಿಯನ್ನು ನಿಲ್ಲಿಸಿದ ನಮ್ಮ ಜೀಪ್ ನ ಚಾಲಕ ಜೀಪ್ನಲ್ಲಿಯೇ ಇದ್ದ ಟಾರ್ಪಲ್ ಅನ್ನು ಜೀಪಿಗೆ ಮುಚ್ಚಿ ನಮ್ಮನ್ನೆಲ್ಲಾ ವರುಣನಿಂದ ರಕ್ಷಿಸಿದ; ಕ್ಯಾಮೆರವನ್ನೂ ಸಹ! ಈ ನೆಮ್ಮದಿ ನನಗೆ ಬಹಳ ಹೊತ್ತು ಉಳಿಯಲಿಲ್ಲ. ಅಲ್ಲಿಯ ಮಳೆಯ ರಭಸ ಹೆಚ್ಚು. ನಾ ಎಣಿಸಿದ್ದೆ, ಸ್ವಲ್ಪ ಹೊತ್ತಿನಲ್ಲೇ ಮಳೆ ನಿಲ್ಲುತ್ತದೆ ಕ್ಯಾಮೆರಾಗೆ ಯಾವುದೇ ತೊಂದರೆ ಇಲ್ಲವೆಂದು, ಆದರೆ ಮಳೆಯ ಆರ್ಭಟ ಹೆಚ್ಚುತ್ತಲೇ ಇತ್ತು. ಸ್ವಲ್ಪ ಸಮಯದಲ್ಲಿಯೇ ಜೀಪಿನ ಟಾರ್ಪಲ್ ಹೊದಿಕೆಯಿಂದ ನೀರು ತೊಟ್ಟಿಕ್ಕತೊಡಗಿತು. ನನ್ನ ಕ್ಯಾಮೆರಾವನ್ನು ನಾನು ವಾಟರ್ ಪ್ರೂಫ್ ಹೊದಿಕೆಯಿಂದ ರಕ್ಷಿಸಿದ್ದೆನಾದರೂ ಏನೋ ಒಂದು ರೀತಿಯ ಭಯ; ಅಷ್ಟು ಪ್ರಮಾಣದ ಮಳೆ. ಮುಂದೆ ಸಿಕ್ಕ ಒಂದು ಫಾರೆಸ್ಟ್ ಚೆಕ್ ಪಾಯಿಂಟ್ ನಲ್ಲಿ ಮತ್ತೊಂದು ತಂಡದವರನ್ನು ಇಳಿಸಿ, ಮುಖ್ಯ ರಸ್ತೆಯನ್ನು ಬಂದು ತಲುಪಿದೆವು!
ಆಗ ನಡೆದ ಒಂದು ಅದ್ಭುತ ಘಟನೆಗೆ ನಾವು ಸಾಕ್ಷಿಯಾದೆವು! ನಮ್ಮ ಜೀಪ್ ನಲ್ಲಿ ಮುಂದೆ ಕುಳಿತಿದ್ದ ಇಬ್ಬರು ‘ಅಲ್ಲಿ ನೋಡಿ … ಅಲ್ಲಿ . . . ಅಲ್ಲಿ . . . ‘ಎನ್ನುತ್ತ ಒಮ್ಮೆಲೇ ಕೂಗಿಕೊಂಡರು ಅಷ್ಟೇ, ಅಂತಹ ವಾಹನ ನಿಬಿಡ ರಸ್ತೆಯಲ್ಲಿ ಒಂದು ಚಿರತೆಯು ಚಂಗೆಂದು ರೋಡಿನ ಮಧ್ಯದಿಂದ ಹಾರಿ ಇನ್ನೊಂದು ಕಡೆ ಹೋಯಿತು. ನಾವು ಜೀಪನ್ನು ನಿಲ್ಲಿಸಿ ಜೋರಾಗಿ ಸುರಿಯುತ್ತಿದ್ದ ಮಳೆಯನ್ನೂ ಸಹ ಲೆಕ್ಕಿಸದೇ ಇಳಿದು ನೋಡಿದೆವು. ಅದು ಯಾವ ಮಾಯದಲ್ಲಿ ಎಲ್ಲಿ ಕಣ್ಮರೆಯಾಯಿತೋ ತಿಳಿಯಲಿಲ್ಲ. ಅಬ್ಭಾ! ಅಂತ ಮಳೆಯಲ್ಲೂ ಮೈ ಬಿಸಿಯಾಗುವಂತಹ ರೋಮಾಂಚನದ ಅನುಭವವದು!
ಚಿರತೆಯು ಕಾಣದೆ ಮತ್ತೆ ಬಂದು ಜೀಪಿನಲ್ಲಿ ಕುಳಿತೆವು. ಸ್ವಲ್ಪ ದೂರ ಸಾಗುವುದರೊಳಗೆ ಮಳೆ ಸಂಪೂರ್ಣವಾಗಿ ನಿಂತು ಹೋಯ್ತು. ಜೀಪಿಗೆ ಹೊದಿಸಿದ್ದ ಟಾರ್ಪಲ್ ತೆಗೆದು, ಸುತ್ತಲಿನ ಆ ತಂಪಾದ ಪರಿಸರವನ್ನು ನೋಡುತ್ತಾ ಮೋಡಗಳ ಮಧ್ಯೆ ಇಣುಕುತ್ತಿದ್ದ ಸೂರ್ಯಾಸ್ತವನ್ನು ವೀಕ್ಷಿಸುತ್ತಾ ಕ್ಯಾಂಪ್ ನ ನಿರೀಕ್ಷೆಯಲ್ಲಿ ಕುಳಿತೆವು.
ಸಂಜೆ 7 ಘಂಟೆ, ಇನ್ನು ಸ್ವಲ್ಪ ಬೆಳಕಿತ್ತು. ಸುಂದರ ಪ್ರಶಾಂತ ಬೆಟ್ಟ ಗುಡ್ಡಗಳ ಸಾಲು, ಪಕ್ಕದಲ್ಲಿ ದೊಡ್ಡದಾದ ಕಣಿವೆ, ಕೆಳಗೆ ಹರಿಯುತ್ತಿದ್ದ ನೀರಿನ ಭೋರ್ಗರೆತದ ಸದ್ದು ಎಲ್ಲವೂ ಯಾವುದೋ ಸಿನಿಮಾದಲ್ಲಿ ಕಂಡಂತೆ ಭಾಸವಾಗುತ್ತಿತ್ತು. ಅಂತೂ 7.30ರ ಹೊತ್ತಿಗೆ ನಾವು ತಂಗಬೇಕಿದ್ದ ಕ್ಯಾಂಪ್ ನ ಸಣ್ಣ ದೀಪ ಕಾಣಿಸಿತು. ಕಾಡಿನ ಮಧ್ಯೆ ಒಂದು ಪುಟ್ಟ ಗುಡ್ಡದ ಮೇಲೆ ನಮ್ಮ ಕ್ಯಾಂಪ್ ಇತ್ತು. ಅಲ್ಲಿಗೆ ಹೋಗಲು ಒಂದು ಝರಿಯನ್ನು ದಾಟಬೇಕಿತ್ತು. ಆ ಪರಿಸರವನ್ನು ನೋಡಿ ನನ್ನ ಮನಸ್ಸು ಪುಳಕಿತಗೊಂಡಿತು. ನಮ್ಮ ಜೀಪು ಸಣ್ಣಗೆ ಹರಿಯುತ್ತಿದ್ದ ಝರಿಯನ್ನು ದಾಟಿ ಪುಟ್ಟ ಗುಡ್ಡ ಏರಿ ನಮ್ಮ ಕ್ಯಾಂಪ್ ನ ಬಳಿ ಬಂದು ನಿಂತಿತು. ದೊಡ್ಡದಾದ ಹಳೇ ಕಾಲದ ಬಂಗಲೆಯದು. ಸುತ್ತಲೂ ಕಾಡು, ಮಧ್ಯ ಈ ಕ್ಯಾಂಪ್, ಕ್ಯಾಂಪ್ನ ಸುತ್ತ ಸೋಲಾರ್ ತಂತಿ ಬೇಲಿ, ಆ ಮಬ್ಬು ಬೆಳಕಿನಲ್ಲೇ ಕಂಡ ಕ್ಯಾಂಪ್ ನಮಗೆ ಸ್ವರ್ಗದಂತೆ ಭಾಸವಾಯಿತು. ನಮ್ಮ ಬಿಡಾರವನ್ನು ಕಂಡು ಸಂತಸಗೊಂಡ ಎಲ್ಲರು ತಮ್
ಸಂಜೆ 7 ಘಂಟೆ, ಇನ್ನು ಸ್ವಲ್ಪ ಬೆಳಕಿತ್ತು. ಸುಂದರ ಪ್ರಶಾಂತ ಬೆಟ್ಟ ಗುಡ್ಡಗಳ ಸಾಲು, ಪಕ್ಕದಲ್ಲಿ ದೊಡ್ಡದಾದ ಕಣಿವೆ, ಕೆಳಗೆ ಹರಿಯುತ್ತಿದ್ದ ನೀರಿನ ಭೋರ್ಗರೆತದ ಸದ್ದು ಎಲ್ಲವೂ ಯಾವುದೋ ಸಿನಿಮಾದಲ್ಲಿ ಕಂಡಂತೆ ಭಾಸವಾಗುತ್ತಿತ್ತು. ಅಂತೂ 7.30ರ ಹೊತ್ತಿಗೆ ನಾವು ತಂಗಬೇಕಿದ್ದ ಕ್ಯಾಂಪ್ ನ ಸಣ್ಣ ದೀಪ ಕಾಣಿಸಿತು. ಕಾಡಿನ ಮಧ್ಯೆ ಒಂದು ಪುಟ್ಟ ಗುಡ್ಡದ ಮೇಲೆ ನಮ್ಮ ಕ್ಯಾಂಪ್ ಇತ್ತು. ಅಲ್ಲಿಗೆ ಹೋಗಲು ಒಂದು ಝರಿಯನ್ನು ದಾಟಬೇಕಿತ್ತು. ಆ ಪರಿಸರವನ್ನು ನೋಡಿ ನನ್ನ ಮನಸ್ಸು ಪುಳಕಿತಗೊಂಡಿತು. ನಮ್ಮ ಜೀಪು ಸಣ್ಣಗೆ ಹರಿಯುತ್ತಿದ್ದ ಝರಿಯನ್ನು ದಾಟಿ ಪುಟ್ಟ ಗುಡ್ಡ ಏರಿ ನಮ್ಮ ಕ್ಯಾಂಪ್ ನ ಬಳಿ ಬಂದು ನಿಂತಿತು. ದೊಡ್ಡದಾದ ಹಳೇ ಕಾಲದ ಬಂಗಲೆಯದು. ಸುತ್ತಲೂ ಕಾಡು, ಮಧ್ಯ ಈ ಕ್ಯಾಂಪ್, ಕ್ಯಾಂಪ್ನ ಸುತ್ತ ಸೋಲಾರ್ ತಂತಿ ಬೇಲಿ, ಆ ಮಬ್ಬು ಬೆಳಕಿನಲ್ಲೇ ಕಂಡ ಕ್ಯಾಂಪ್ ನಮಗೆ ಸ್ವರ್ಗದಂತೆ ಭಾಸವಾಯಿತು. ನಮ್ಮ ಬಿಡಾರವನ್ನು ಕಂಡು ಸಂತಸಗೊಂಡ ಎಲ್ಲರು ತಮ್ ತಮ್ಮ ಬ್ಯಾಗ್ ಗಳನ್ನು ಇಡಲು ಆ ಬಂಗಲೆಯ ಒಳಹೊಕ್ಕೆವು. ಕಾಡಿನಲ್ಲಿನ ಪಯಣ, ವಿಧ ವಿಧವಾದ ಪ್ರಾಣಿಗಳ ದರ್ಶನ, ಹಲವಾರು ಪಕ್ಷಿಗಳ ಇಂಚರ, ರಮ್ಯ ರಮಣೀಯ ಕಾಡು ಎಲ್ಲವೂ ಜಿಮ್ ಕಾರ್ಬೆಟ್ ಎನ್ನುವ ದಟ್ಟ ಅರಣ್ಯದ ಬಗ್ಗೆ ನನಗೆ ಇದ್ದ ಕುತೂಹಲಕ್ಕೆ ದೊಡ್ಡ ಮುನ್ನುಡಿ ಬರೆದಿದ್ದವು.
ಮುಂದುವರೆಯುವುದು ………
ಲೇಖನ: ಗುರು ಪ್ರಸಾದ್ ಕೆ. ಆರ್.
ಬೆಂಗಳೂರು ಜಿಲ್ಲೆ