ಮಂಗಳದ ಮಾಯೆಯಲಿ…

ಮಂಗಳದ ಮಾಯೆಯಲಿ…

‘ಚಂದಿರನೇತಕೆ ಇಣುಕುವನಮ್ಮ ಮೋಡದ ಮರೆಯಿಂದ…’ ಎಂಬ ಚಂದಿರನ ಕುರಿತು ಬರೆದ ಕವನಗಳನ್ನು ಕೇಳುತ್ತಾ ಬಂದ ಬಾಲ್ಯ ನಮ್ಮದು. ಈಗ ಚಂದಿರನ ಮೇಲೆಯೇ ಉಪಗ್ರಹಗಳನ್ನು ಕಳಿಸುವ ಕಾಲಕ್ಕೆ ಬಂದಿದ್ದೇವೆ. ಮುಂದೊಂದು ದಿನ ಚಂದಿರನ ಮೇಲೆಯೇ ಕುಳಿತು ಕವನ ರಚಿಸುವ ದಿನಗಳು ಬರುವುದರಲ್ಲಿ ಸಂದೇಹವಿಲ್ಲ ಎಂಬುದನ್ನು ನಮ್ಮ ‘ಚಂದ್ರಯಾನ-3’ರ ಯಶಸ್ಸಿನಿಂದ ಹೆಮ್ಮೆಯ ಧ್ವನಿಯಲ್ಲಿಯೇ ಹೇಳಬಹುದು. ಈ ಯಶಸ್ಸು ತೀರಾ ಹೊಸತು. ಅನ್ಯ ಗ್ರಹಕ್ಕೆ ಉಪಗ್ರಹ ಕಳಿಸುವ ಪ್ರಯತ್ನ ಮಾಡಿ ಮೊದಲ ಬಾರಿಗೇ ಯಶಸ್ಸು ಕಂಡಿರುವ ಗರಿ ನಮ್ಮ ಭಾರತಕ್ಕಿದೆ. ಹೌದು, ‘ಮಂಗಳಯಾನ’. ನಮ್ಮ ನೆರೆ ಗ್ರಹ ಹಾಗೂ ಸೂರ್ಯನಿಂದ ನಾಲ್ಕನೇ ಗ್ರಹವಾದ ಮಂಗಳ ಗ್ರಹಕ್ಕೆ 2013ರಲ್ಲಿ ನಾವು ಕಳುಹಿಸಿದ ‘ಮಾರ್ಸ್ ಆರ್ಬಿಟರ್ ಮಿಷನ್ 1’ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದೆ. ಹೀಗೆ ಮಂಗಳದ ಅಂಗಳಕ್ಕೆ ಉಪಗ್ರಹ ಕಳಿಸಿ ಯಶಸ್ವಿಯಾದ ನಾಲ್ಕೇ ನಾಲ್ಕು ಬಾಹ್ಯಾಕಾಶ ಸಂಸ್ಥೆಗಳಲ್ಲಿ ನಮ್ಮ ISRO (Indian Space Research Organisation) ಕೂಡಾ ಒಂದು. ಚೀನಾದಂತಹ ಕೆಲವು ದೇಶಗಳು ಮಂಗಳದ ಅಂಗಳಕ್ಕೇ ಉಪಗ್ರಹಗಳನ್ನು ಇಳಿಸಿ ಗ್ರಹದ ಅಧ್ಯಯನ ಮಾಡುವಲ್ಲಿ ಈಗಾಗಲೇ ತೊಡಗಿದ್ದಾರೆ. ಅದರ ಅಂಗವಾಗಿ ಅವರು ಮಂಗಳ ಗ್ರಹದ ಮೇಲೆ ಇಳಿದು ಅಧ್ಯಯನ ಮಾಡಲೆಂದೇ ‘ಝುರಾಂಗ್’ ಎಂಬ ರೋವರ್ ಅನ್ನು 2021ರಲ್ಲಿ ಕಳುಹಿಸಿದ್ದರು. ಅದು ಅಲ್ಲಿ 9 ತಿಂಗಳುಗಳ ಕಾಲ ತನ್ನ ಕೆಲಸ ಮಾಡಿ ಕೊನೆಯುಸಿರೆಳೆಯಿತು. ಅಷ್ಟರಲ್ಲಿ ಅದು ನೀಡಿದ ಮಾಹಿತಿಯ ಪ್ರಕಾರ ಮಂಗಳದಲ್ಲಿ ಇತ್ತೀಚೆಗೆ ‘ಉಪ್ಪು ನೀರು ಹರಿದಿದೆ’ ಎಂದು ತಿಳಿಸಿತು.

ಚೀನಾದ ಮೊದಲ ಮಂಗಳದ ರೋವರ್ ‘ಝುರಾಂಗ್’ ಮೇ 2021ರಂದು ‘ಯುತೋಪಿಯಾ ಪ್ಲಾನೀಶಿಯಾ’ ಎಂಬ ಜಾಗದಲ್ಲಿ ಮಂಗಳ ಗ್ರಹದ ಮೇಲೆ ಇಳಿಯಿತು. ಸತತ 9 ತಿಂಗಳುಗಳ ಕಾಲ ತನ್ನ ಕಾರ್ಯವನ್ನು ನಿರ್ವಹಿಸುತ್ತಾ ಕೆಲವು ಫೋಟೋಗಳನ್ನೂ ಹಾಗೂ ಮಂಗಳದ ಮೇಲ್ಮೈ ನ ರಾಸಾಯನಿಕ ಸಂಯೋಜನೆಯನ್ನು ಪರೀಕ್ಷಿಸಿತು. ಆ ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತಿತ್ತು. ಈ ಯೋಜನೆಯ ಭಾಗವಾಗಿದ್ದ ವಿಜ್ಞಾನಿ ‘ಕಿನ್’ ಮತ್ತು ತಂಡ ರೋವರ್ ಕಳುಹಿಸಿದ ಫೋಟೋಗಳನ್ನು ಕಂಡು ಚಕಿತರಾದರು. ಕಾರಣ, ರೋವರ್ ಕಳುಹಿಸಿದ್ದ ಫೋಟೋದಲ್ಲಿ ನೀರು ಹರಿದಿರಬಹುದಾದ ಕುರುಹುಗಳು ಕಾಣುತ್ತಿದ್ದವು. ಅಲ್ಲಿನ ಕಲ್ಲು, ಮಣ್ಣು ಮತ್ತು ಹಳ್ಳದ ಆಳ ಅಗಲಗಳನ್ನು ಪರೀಕ್ಷಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. ಇವರಿಗೆ ದೊರೆತ ಇವೆಲ್ಲಾ ಮಾಹಿತಿಗಳನ್ನು ಕಲೆ ಹಾಕಿದರೆ, ಈ ಹಳ್ಳಗಳಲ್ಲಿ ನೀರು ಹರಿದಿತ್ತು ಎಂದು ಬಹುಪಾಲು ಖಾತ್ರಿಯಾಯ್ತು. ಗಾಳಿ ಬೀಸುವಿಕೆಯಿಂದಲೂ ಹೀಗೆ ಆಗುವ ಸಾಧ್ಯತೆಗಳಿದ್ದರೂ ಇಷ್ಟು ವಿಶಾಲವಾಗಿ, ಇಷ್ಟು ಅಗಲದಲ್ಲಿ ಆಗಲು ಸಾಧ್ಯವಿಲ್ಲ. ಇದು ನೀರು ಹರಿಯುವಿಕೆಯಿಂದ ಮಾತ್ರ ಆಗಲು ಸಾಧ್ಯ ಎಂದು ಕೊನೆಗೆ ತೀರ್ಮಾನಕ್ಕೆ ಬಂದರು.

© CNSA_GRAS
© pikist

ಆದರೆ ಮಂಗಳ ಗ್ರಹದಲ್ಲಿ ಈ ಹಿಂದೆ ಅಂದರೆ ಕೋಟ್ಯಾಂತರ ವರ್ಷಗಳ ಹಿಂದೆ ನೀರಿರಬಹುದಾದ ಸಾಧ್ಯತೆಗಳನ್ನು ಕಂಡುಹಿಡಿದಿದ್ದಾರೆ. ಧೃವಗಳಲ್ಲಿ ನೀರು ಘನ ರೂಪದಲ್ಲಿರುವ ಬಗ್ಗೆಯೂ ಮಾಹಿತಿ ಇದೆ. ಹಾಗಾದರೆ ಇದರಲ್ಲೇನು ವಿಶೇಷ? ವಿಶೇಷತೆ ಇದೆ. ಅಮೆರಿಕ ದೇಶದ ನಾಸಾ (NASA)ದಲ್ಲಿ ಇದರ ಬಗ್ಗೆ ಮಾಹಿತಿ ಇತ್ತಾದರೂ ಆ ಮಾಹಿತಿ ಹೇಳುತ್ತಿದ್ದುದು ಇಂತಹ ವಿದ್ಯಮಾನ ನಡೆದದ್ದು ಕೋಟ್ಯಾಂತರ ವರ್ಷಗಳ ಹಿಂದೆ ಎಂದು.  ಆದರೆ ಇಲ್ಲಿ ಕಂಡುಹಿಡಿದು ಹೇಳುತ್ತಿರುವುದು, ಮಂಗಳ ಗ್ರಹದ ಸಮಭಾಜಕದಲ್ಲಿ ದೊರೆತ ಈ ಮಾಹಿತಿಗಳ ಪ್ರಕಾರ ಉಪ್ಪು ನೀರು ಹರಿದಿರುವುದು ಕೇವಲ 14,000 ದಿಂದ 400,000 ವರ್ಷಗಳ ಹಿಂದೆಯಷ್ಟೇ. ಈ ಹಿಂದೆ ಊಹಿಸಿದ ಹಾಗೆ ಕೋಟಿ ಕೋಟಿ ವರ್ಷಗಳ ಹಿಂದೆ ಅಲ್ಲ! ಎನ್ನುವುದೇ ಕೆಲ ವಿಜ್ಞಾನಿಗಳಿಗೆ ಸಂತಸದ ವಿಷಯ. ಏಕೆ ಗೊತ್ತೇ? ಇಷ್ಟು ಇತ್ತೀಚೆಗೆ ನೀರು ಹರಿದಿರುವ ಹಾಗೆ ಇದ್ದರೆ ಮಂಗಳದ ಸಮಭಾಜಕ ಪ್ರದೇಶದಲ್ಲಿ ಇರುವ ವಾತಾವರಣದ ಸ್ಥಿತಿ, ಉಷ್ಣಾಂಶ ಇತ್ಯಾದಿಗಳು ಜೀವಿಯೊಂದು ಜೀವಿಸಲಿಕ್ಕೂ ಅನುಕೂಲವಾಗಿರಬಹುದು ಅಥವಾ ಮುಂದೆ ಆಗುವ ಸಾಧ್ಯತೆಗಳಿರಬಹುದು ಎಂದು ಝುರಾಂಗ್ ರೋವರ್ ಕಳುಹಿಸಿದ ಮಾಹಿತಿಯಿಂದ ತಿಳಿಯುತ್ತದೆ.

ಮಂಗಳದ ಅಂಗಳಕ್ಕೆ ಹೋಗುವ, ಅಲ್ಲಿ ಮುಂದೊಂದು ದಿನ ಬದುಕು ಕಟ್ಟುವ ತವಕದಲ್ಲಿರುವ ಎಲ್ಲಾ ಉತ್ಸಾಹಿಗಳಿಗೆ ಇದೊಂದು ದೊಡ್ಡ ಹಾಗೂ ಖುಷಿಯ ವಿಷಯ. ಈ ನಿಟ್ಟಿನಲ್ಲಿ ಆಗುತ್ತಿರುವ ನಮ್ಮ ವೈಜ್ಞಾನಿಕ ಅಭಿವೃದ್ಧಿ ಹಾಗೂ ಬೆಳವಣಿಗೆ ಇದಕ್ಕೆ ಪೂರಕವಾಗಿ ಕೈಜೋಡಿಸುತ್ತಿರುವುದು ಸಂತೋಷವನ್ನು ಇಮ್ಮಡಿಸುತ್ತದೆ. ಆದರೆ ಮಂಗಳದ ಮಾಯೆಯಲಿ ಬಿದ್ದು, ಈಗಾಗಲೇ ಎಲ್ಲಾ ಸಮತೋಲನದಲ್ಲಿ ಇರುವ ಅಥವಾ ಇದ್ದ ಮಾತೃಭೂಮಿಯನ್ನು ಹದಗೆಡಿಸಿ ಈಗ ಇನ್ನೊಂದು ಗ್ರಹದತ್ತ ವಾಸಿಸಲು ಮುಖಮಾಡುವ ಉದ್ದೇಶದ ಪ್ರಯತ್ನಗಳ ಹರಸಾಹಸಗಳನ್ನು ಕಂಡು-ಕೇಳಿದಾಗ ಮಾತ್ರ ಮುಖದಲ್ಲಿ ಮುಗುಳ್ನಗು ಮಂದವಾಗಿ ಮೂಡುತ್ತದೆ…!

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ., ಬೆಂಗಳೂರು ನಗರ ಜಿಲ್ಲೆ

Print Friendly, PDF & Email
Spread the love
error: Content is protected.