ಹೂ ಅರಳಿ

ಹೂ ಅರಳಿ

ನಸುಕಿನೊಳಗರಳಿಹುದು ಚೆಂಗುಲಾಬಿಯ ಹೂವು
ಮುಸುಕು ಕತ್ತಲು ಸರಿಸಿ ಕಂಪನೆರಚಿ
ತುಸುಮೆಲ್ಲನೆಲ್ಲರನು ಸೆಳೆಯುತಲಿ ಕರೆದಿಹುದು
ಹಸಿರೆಲೆಯ ನಡುನಡುವೆ ಕೆಂಪನೆರಚಿ

ದಿನಪನುದಯಕೆ ನಿಂತು ಸ್ವಾಗತವ ತಾ ಕೋರಿ
ಬನದೊಳಗೆ ಚೆಲುವಿಳಿಸಿ ನಗುವ ಸೂಸಿ
ದನಿಯಾಗಿ ಕವಿಮನಕೆ ಕವಿತೆಯೊಳಗಡೆ ಕುಳಿತು
ತಣಿಸುತ್ತಲೋದುಗರ ಹೃದಯ ಸೇರಿ

ಕಾದಿಹುದು ಬರಲೆಂದು ಭೃಂಗದೊಲವನು ಬಯಸಿ
ಹೂ ದುಂಬಿ ಝೇಂಕರಿಸಿ ಸುಧೆಯ ಹೀರಿ
ಕಾದು ಕುಳಿತಿಹುದಲ್ಲ ಹೆಣ್ಣ ಬಯಕೆಯ ಕಂಡು
ಹಾದಿಯಲಿ ಬರುವವಳ ಚೆಲುವನೆಣಿಸಿ

ಬೆಳಗು ಬೈಗಿನಲೆಲ್ಲ ಹೊಳೆಸಿ ಜಗವನ್ನೆಲ್ಲ
ಮುಳುಗಿದರು ಸಾರ್ಥಕವೆ ಹುಟ್ಟು ಸಾವು
ಅಳಿದರೆಂದಿಗು ಹೂವು ಹರಡಿಹುದು ಕಂಪನ್ನು
ತಿಳಿಸಿಹುದು ಜೀವನದ ಸತ್ಯವನ್ನು.

       – ಚನ್ನಕೇಶವ ಜಿ ಲಾಳನಕಟ್ಟೆ
                             ತುಮಕೂರು ಜಿಲ್ಲೆ


Print Friendly, PDF & Email
Spread the love
error: Content is protected.