ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

ಕಿತ್ತಳೆ ಬಾಲ ಚಿಟ್ಟೆ                                                                 ©  ಹರಿಹರನ್ ಐ. ಎಸ್.

ಈ ಚಿಟ್ಟೆಗಳು ಭಾರತದೆಲ್ಲೆಡೆ ತೇವಾಂಶವುಳ್ಳ ಅರಣ್ಯ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ನೀಲಿ ಚಿಟ್ಟೆಗಳ ಪ್ರಭೇದಕ್ಕೆ ಜಾತಿಗೆ ಸೇರುವ ಇವುಗಳು ಲೈಕೆನಿಡೆ (Lycaenidae) ಕುಟುಂಬಕ್ಕೆ ಸೇರುತ್ತವೆ. ಇವುಗಳನ್ನು ವೈಜ್ಞಾನಿಕವಾಗಿ ಲೋಕುರಾ ಅಟಿಮ್ನಸ್ (Loxura atymnus) ಎಂದು ಕರೆಯಲಾಗುತ್ತದೆ. ಪ್ರಕಾಶಮಾನವಾದ ಕಿತ್ತಳೆ-ಹಳದಿ ಬಣ್ಣದಿಂದ ಇವುಗಳನ್ನು ಗುರುತಿಸಬಹುದಾಗಿದೆ. ಈ ಪ್ರಭೇದದ ಚಿಟ್ಟೆಗಳು, ರೆಕ್ಕೆಗಳ ಬದಿಗಳಲ್ಲಿ ಕಪ್ಪು ಮತ್ತು ಕೆಳಭಾಗದಲ್ಲಿ ತೆಳು ಹಳದಿ ಮಿಶ್ರಿತ ಕೆಂಪು ಕಿತ್ತಳೆ ಅಂಚನ್ನು ಹೊಂದಿರುತ್ತವೆ. ರೆಕ್ಕೆಯ ಹಿಂಭಾಗದ ತುದಿಯು ಬಿಳಿಯ ಬಣ್ಣದ್ದಾಗಿರುತ್ತದೆ. ನೇರಳೆ ಗೆಣಸು ಹಾಗೂ ಗೋರಂಟಿ ಗಿಡಗಳು ಇವುಗಳ ಆತಿಥೇಯ ಸಸ್ಯಗಳಾಗಿವೆ.

                                     ವಿಸ್ಮಯ ಚಿಟ್ಟೆ                                                                    © ಹರಿಹರನ್ ಐ. ಎಸ್.                                       

ಭಾರತದ ಪಶ್ಚಿಮ ಘಟ್ಟಗಳು, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಿಗೆ ಸ್ಥಳೀಯವಾಗಿರುವ ಈ ಚಿಟ್ಟೆಯು, ಹೆಚ್ಚು ಮಳೆಯಾಗುವ ಕಾಡುಗಳಲ್ಲಿ, ಕುರುಚಲು ಕಾಡುಗಳಲ್ಲಿ ಕಾಣಸಿಗುತ್ತದೆ. ಲೈಕೆನಿಡೆ (Lycaenidae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ರತಿಂದಾ ಅಮೋರ್ (Rathinda amor) ಎಂದು ಕರೆಯಲಾಗುತ್ತದೆ. ಚಿಟ್ಟೆಯ ಮೇಲ್ಭಾಗವು ಕಡು ಕಂದು ಬಣ್ಣವಿದ್ದು, ಕೆಳಭಾಗವು ಬಿಳಿ ಮತ್ತು ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ. ಇದು ಹೆಚ್ಚು ಎತ್ತರಕ್ಕೆ ಹೋಗದೆ, ನೆಲದ ಸಮೀಪದಲ್ಲೇ ಹಾರಾಡುವುದನ್ನು ಕಾಣಬಹುದು. ನೆಲಕ್ಕೆ ಇಳಿಯುವಾಗ ತನ್ನ ಬಾಲವನ್ನು ಅತ್ತಿತ್ತ ತಿರುಗಿಸುತ್ತದೆ. ಆದ ಕಾರಣ ಇದರ ತಲೆಯ ತುದಿಯು ಯಾವ ಕಡೆ ಇದೆ ಎಂಬುದನ್ನು ತಿಳಿಯದ ಪರಭಕ್ಷಕಗಳು ಗೊಂದಲಕ್ಕೊಳಗಾಗುತ್ತವೆ.  ಮಾವಿನ ಮರ, ಮಿರ್ಟೇಸಿ, ರೂಬಿಯೇಸಿ (Rubiaceae), ಯುಫೋರ್ಬಿಯೇಸಿ (Euphorbiaceae) ಕುಟುಂಬಕ್ಕೆ ಸೇರುವ ಗಿಡಗಳು ಇವುಗಳ ಆತಿಥೇಯ ಸಸ್ಯಗಳಾಗಿವೆ.

                        ಬೂದಿ ಹೂ ಚಿಟ್ಟೆ                                                                     © ಹರಿಹರನ್ ಐ. ಎಸ್.

ದಕ್ಷಿಣ ಏಷ್ಯಾದ ತೋಟಗಳಲ್ಲಿ ಹಾಗೂ ಉದ್ಯಾನವನಗಳಲ್ಲಿ ಕಂಡುಬರುವ ಈ ಚಿಟ್ಟೆಯು ಜುನೋನಿಯಾ (Junonia) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜುನೋನಿಯಾ ಅಟ್ಲೈಟ್ಸ್ (Junonia atlites) ಎಂದು ಕರೆಯಲಾಗುತ್ತದೆ. ಚಿಟ್ಟೆಯ ಮೇಲ್ಭಾಗವು ತೆಳು ಬೂದು ಬಣ್ಣವಿದ್ದು, ಕಡು ಕಂದು ಬಣ್ಣದ ರೇಖೆಗಳನ್ನು ಹೊಂದಿರುತ್ತದೆ. ಕಪ್ಪು ಮತ್ತು ಕಿತ್ತಳೆ ಮಿಶ್ರಿತ ಕಣ್ಣಿನಾಕಾರದ ಚುಕ್ಕೆಗಳನ್ನು ರೆಕ್ಕೆಗಳ ಮೇಲೆ ಕಾಣಬಹುದಾಗಿದೆ. ಅಮರಗಂಧಿ ಗಿಡ (Limnophila villosa) ಹಾಗೂ ಅಕಾಂಥೇಸಿ (Acanthaceae), ಅಮರಂತೇಸಿ (Amaranthaceae) ಕುಟುಂಬಕ್ಕೆ ಸೇರುವ ಗಿಡಗಳು ಇವುಗಳ ಆತಿಥೇಯ ಸಸ್ಯಗಳಾಗಿವೆ.

               ಭಾರತೀಯ ಜಿಗಿ ಚಿಟ್ಟೆ                                                                        © ಹರಿಹರನ್ ಐ. ಎಸ್.                                                 

ಇದು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ವಿವಿಧ ಭಾಗಗಳಲ್ಲಿ ಕಂಡುಬರುವ ಚಿಕ್ಕ ಚಿಟ್ಟೆಯಾಗಿದೆ. ಹೆಸ್ಪೆರಿಡೆ (Hesperiidae) ಕುಟುಂಬಕ್ಕೆ ಸೇರುವ ಈ ಚಿಟ್ಟೆಯನ್ನು ವೈಜ್ಞಾನಿಕವಾಗಿ ಸ್ಪೈಲಿಯಾ ಗಾಲ್ಬಾ (Spialia galba) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ಕಪ್ಪು ಬಣ್ಣವಿದ್ದು, ಬಿಳಿ ಚುಕ್ಕೆಗಳನ್ನು ಹೊಂದಿರುತ್ತದೆ. ರೆಕ್ಕೆಯ ಕೆಳಭಾಗವು ಹಸಿರು ಮಿಶ್ರಿತ ಕಂದು ಮತ್ತು ಬಿಳಿ ಚುಕ್ಕೆಗಳನ್ನು ಹೊಂದಿರುತ್ತದೆ. ಇದು ಬಿಸಿಲಿನಲ್ಲಿ ನೆಲಕ್ಕೆ ಸಮೀಪವಾಗಿ ಹಾರಾಡುತ್ತದೆ ಹಾಗೂ ಸಾಮಾನ್ಯವಾಗಿ ರೆಕ್ಕೆಗಳನ್ನು ಮಡಚಿ ವಿಶ್ರಮಿಸುವುದನ್ನು ಕಾಣಬಹುದಾಗಿದೆ. ಅಟ್ಟಿಗೆ ಗಿಡ (Tridax procumbens), ಡಿಕ್ಪ್ಲಿಟೆರಾ ಅಥವಾ ಬಿಡೆನ್ಸ್ ಜಾತಿಯ ಗಿಡಗಳ ಸಣ್ಣ ಹೂವುಗಳಿಗೆ ಮಕರಂದಕ್ಕಾಗಿ ಭೇಟಿ ನೀಡುತ್ತದೆ (Dicplitera or Bidens). ಫ್ಯಾಬೇಸಿ (Fabaceae) ಹಾಗೂ ಮಾಲ್ವೇಸೀ (Malvaceae) ಕುಟುಂಬಕ್ಕೆ ಸೇರುವ ಸೋಯಾಬೀನ್, ದಾಸವಾಳದಂತಹ ಗಿಡಗಳು ಇವುಗಳ ಆತಿಥೇಯ ಸಸ್ಯಗಳಾಗಿವೆ.  

ಚಿತ್ರಗಳು : ಹರಿಹರನ್ ಐ. ಎಸ್.
        ಲೇಖನ : ದೀಪ್ತಿ ಎನ್.

Print Friendly, PDF & Email
Spread the love
error: Content is protected.