ಸೊಳ್ಳೆ ಕಾಲ(ಟ)

ಸೊಳ್ಳೆ ಕಾಲ(ಟ)

© ಗಿರೀಶ್ ಗೌಡ

ಮಳೆಗಾಲ ಶುರುವಾಯಿತೆಂದರೆ ಕೀಟಗಳಿಗೆ ಪರ್ವಕಾಲ ಎಂದೇ ಹೇಳಬೇಕು. ಅದರಲ್ಲೂ ಸೊಳ್ಳೆಗಳಿಗೆ ಮಹಾಮೇಳವಾಗಿ ಪರಿಣಮಿಸುತ್ತದೆ. ಈ ಅಂಕಣದ ಹಿಂದಿನ ನನ್ನ ಎಲ್ಲಾ ಲೇಖನಗಳಿಗೆ ಸ್ಫೂರ್ತಿ ನನ್ನ ಮಗ ಎಂಬುದು ನಿಮಗೆಲ್ಲ ತಿಳಿದಿರುವ ವಿಚಾರವೆ. ಆದರೆ ಈ ಸಲದ ಲೇಖನದಲ್ಲಿ ಒಂದು ಸಣ್ಣ ಬದಲಾವಣೆ. ಈ ಸಲದ ನನ್ನ ಲೇಖನದ ಸ್ಪೂರ್ತಿ ಅವರ ಅಪ್ಪ. ಇಡೀ ಜೀವನ ತನಗೆ ಸೊಳ್ಳೆ ಕಚ್ಚುವುದೇ ಇಲ್ಲವೆಂದು ಹೇಳುತ್ತಾ ಬಂದಿದ್ದ ನಮ್ಮ ಯಜಮಾನರು ಈ ಸಲದ ಮಳೆಗಾಲ ಶುರುವಾಗುತ್ತಿದ್ದಂತೆಯೇ ಜ್ವರ ಎಂದು ಮಲಗಿದರು. ಕ್ರಮೇಣ ಜಾಯಿಂಟ್ ಪೈನ್ ಸಹ ಎಂದರು. ರಕ್ತ ಪರೀಕ್ಷೆ ಮಾಡಿಸಿದಾಗ ಡೆಂಗ್ಯೂ ಜ್ವರ ಎಂದು ಖಾತ್ರಿಯಾಯಿತು. ಮನೆಮಂದಿಯೆಲ್ಲ ತುಂಬಾ ಆತಂಕಕ್ಕೊಳಗಾದರು. ನನಗೂ ಕೂಡ ಅಲ್ಪ ಸ್ವಲ್ಪ ಭಯವಾದರೂ ಕಳೆದ ವರ್ಷವೇ ನನಗೆ ಡೆಂಗ್ಯೂ ಬಂದು ವಾಸಿಯಾಗಿದ್ದರಿಂದ ಈ ಅನುಭವದಲ್ಲಿ ಸೀನಿಯರ್ ಆಗಿದ್ದ ನಾನು, ಎಲ್ಲರಿಗೂ ಸಮಾಧಾನ ಹೇಳುತ್ತಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ ತನಗೆ ಸೊಳ್ಳೆಗಳು ಕಚ್ಚುವುದೇ ಇಲ್ಲ ಎಂದು ಹೇಳುತ್ತಿದ್ದ ಆಸಾಮಿ ಈಗ ತುಂಬಾ ಹತಾಶರಾಗಿ ನನ್ನ ಕಡೆ ನೋಡುತ್ತಿದ್ದರು.! ಡೆಂಗ್ಯೂ ಸೊಳ್ಳೆ ಕಚ್ಚಿದ ಫಲವೇ ಎಂದು ಮನೆಯವರೆಲ್ಲರಿಗೂ ಸ್ಪಷ್ಟವಾಗಿ ಅರಿವಾಗಿತ್ತು. ಇಷ್ಟೆಲ್ಲಾ ಅವಘಡಗಳು ಸಂಘಟಿಸಿದ ಮೇಲೂ ನಾನು ಸೊಳ್ಳೆ ಎಂಬ ಈ ಅದ್ಬುತ ಜೀವಿಯ ಬಗ್ಗೆ ಬರೆಯದಿದ್ದರೆ ಅನ್ಯಾಯವಾದೀತು ಎಂದು ಈ ತಿಂಗಳ ಲೇಖನವನ್ನು ಅದಕ್ಕಾಗಿಯೇ ಮೀಸಲಿಟ್ಟಿದ್ದೇನೆ.

© ದೀಕ್ಷಿತ್ ಕುಮಾರ್ ಪಿ.

ಸೊಳ್ಳೆ ಎಂದ ಕೂಡಲೇ ಹೆಚ್ಚಿನ ಜನರ ಮನಸ್ಸಿನಲ್ಲಿ ಸಾಮಾನ್ಯವಾಗಿ ಋಣಾತ್ಮಕ ಭಾವನೆಗಳೇ ಬರುತ್ತವೆ ಹೊರತು, ಒಳ್ಳೆಯ ಭಾವನೆಗಳು ಬರುವುದು ತುಂಬಾ ವಿರಳ. ಆದರೆ ಸೊಳ್ಳೆ ಆಹಾರ ಸರಪಳಿಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುವ ಇವು ಬಹಳಷ್ಟು ಜೀವಿಗಳ ಮುಖ್ಯ ಆಹಾರವಾಗಿವೆ. ಅದು ಕಪ್ಪೆಗಳಾಗಿರಬಹುದು, ಪಕ್ಷಿಗಳಾಗಿರಬಹುದು, ಗಾಳಿಯಲ್ಲಿಯೇ ಸೊಳ್ಳೆಗಳ ಬೇಟೆಯಾಡಿ ಅಲ್ಲಿಯೇ  ಅವುಗಳನ್ನು ಕಬಳಿಸುವ ಡ್ರ್ಯಾಗನ್ ಫ್ಲೈ ಗಳಾಗಿರಬಹುದು ಎಲ್ಲಕ್ಕೂ ಸೊಳ್ಳೆಗಳು ಅಚ್ಚುಮೆಚ್ಚು! ಇಷ್ಟೆಲ್ಲಾ ಪ್ರಾಣಿಗಳಿಂದ ತಿನ್ನಲ್ಪಟ್ಟರೂ, ಸೊಳ್ಳೆಗಳು ಮನುಷ್ಯನಿಗೆ ಪಿಡುಗಾಗಿಯೇ ಪರಿಣಮಿಸಿವೆ. ಇದಕ್ಕೆ ಕಾರಣ ತಿಳಿಯಬೇಕೆಂದರೆ ಸೊಳ್ಳೆಗಳ ಜೀವನ ಚಕ್ರದ ಬಗ್ಗೆ ತಿಳಿದುಕೊಳ್ಳಬೇಕು. ಗಂಡು ಮತ್ತು ಹೆಣ್ಣು ಸೊಳ್ಳೆಗಳ ಮಿಲನದ ನಂತರ ಹೆಣ್ಣು ಸೊಳ್ಳೆ ಮೊಟ್ಟೆಗಳನ್ನಿಡುತ್ತದೆ. ವಿಶೇಷವೆಂದರೆ ಈ ಹೆಣ್ಣು ಸೊಳ್ಳೆಗೆ ಪ್ರಾಣಿಗಳ ರಕ್ತ ಬೇಕಾಗುವುದೇ ಈ ಸಮಯದಲ್ಲಿ! ಅಂದರೆ, ಮೊಟ್ಟೆ ಉತ್ಪಾದಿಸಲು ಹೆಣ್ಣು ಸೊಳ್ಳೆಗೆ ಹೆಚ್ಚಿನ ಪ್ರೋಟೀನ್ ಬೇಕಾಗುತ್ತದೆ. ಆಗ ಈ ಸೊಳ್ಳೆಗಳು ಪ್ರಾಣಿ ಅಥವಾ ಮನುಷ್ಯರಿಗೆ ಚುಚ್ಚಿ ರಕ್ತ ಹೀರುತ್ತವೆ. ಗಂಡು ಸೊಳ್ಳೆ ಬರಿ ಸಸ್ಯಗಳ ರಸ ಮತ್ತು ಹೂವಿನ ಮಕರಂದದಲ್ಲಿಯೇ ಸಂತೃಪ್ತಿ ಕಾಣುತ್ತದೆ. ಹೆಣ್ಣು ಸೊಳ್ಳೆಯ ಈ ಮೊಟ್ಟೆಗಳ ಕ್ಲಸ್ಟರ್ ಗಳಿಗೆ ಮುಖ್ಯವಾಗಿ ನೀರು  ಬೇಕು. ಒಂದು ಚಮಚದಷ್ಟು ನಿಂತ ನೀರಾದರೂ ಸಾಕು, ಸೊಳ್ಳೆಗಳು ಬಹು ಆರೋಗ್ಯದಿಂದ ಬೆಳೆಯುತ್ತವೆ.

© ಅಭಿಷೇಕ್ ಜಯರಾಂ

ಮಿಲನದ ನಂತರ ಮೂರು ದಿನಗಳ ಕಾಲ ಪ್ರಾಣಿ ಮತ್ತು ಮನುಷ್ಯರ ರಕ್ತ ಹೀರುತ್ತವೆ. ನಂತರದ ಎರಡು ದಿನಗಳಲ್ಲಿ ನೀರಿನಲ್ಲಿ ಮೊಟ್ಟೆಯನ್ನಿಡುತ್ತವೆ. ಮುಂದಿನ ಎರಡು ದಿನಗಳಲ್ಲಿ ಲಾರ್ವ ಹೊರಬರುತ್ತವೆ. ಈ ಲಾರ್ವಗಳು ಸಣ್ಣ ಕಡ್ಡಿ ಚೂರಿನಂತೆ ಕಂಡು ಬರುತ್ತವೆ. ಇವುಗಳ ಚಲನೆ ನೋಡುವುದೇ ಒಂದು ಹಬ್ಬ. ವಿಚಿತ್ರವಾಗಿ ಕೆಳಕ್ಕು ಮೇಲಕ್ಕೂ ಬಳಕುತ್ತಾ ಈಜಾಡುತ್ತವೆ. ನೀರಿನಲ್ಲಿರುವುದರಿಂದ ಮೀನಿನಂತೆ ಈಜಾಡಬಹುದು ಎಂದು ನೀವು ಕಲ್ಪಿಸಿಕೊಂಡರೆ, ಇದು ಖಂಡಿತವಾಗಿ ನಿಮ್ಮ ನಿರೀಕ್ಷೆಯನ್ನು ಸುಳ್ಳು ಮಾಡುತ್ತದೆ. ನೀರು, ಗಾಳಿಯಿಂದ ಅಥವಾ  ಬೇರಾವುದೋ ಕಾರಣದಿಂದ ಕದಡಿದಾಗ ಈ ಲಾರ್ವಗಳು ಕೂಡ ಅದಕ್ಕೆ ತಕ್ಕಂತೆಯೇ ಈಜಾಡುತ್ತವೆ. ಇದನ್ನು ಕಂಡರೆ ಯಾವುದೊ ಕಸ ತೇಲಾಡುತ್ತೀರಬಹುದು ಎಂದೇ ಭಾಸವಾಗುತ್ತದೆ. ನಾನು ಮತ್ತು ನನ್ನ ಮಕ್ಕಳಿಬ್ಬರೂ ಸುಮಾರು ಹೊತ್ತು ಕೂತು ಇವುಗಳ ಚಲನೆಯನ್ನು ಗಮನಿಸಿದ್ದೇವೆ. ಒಮ್ಮೆ ಮನೆಯಲ್ಲಿ ಪೂಜೆ ಮಾಡುವ ತೆಂಗಿನಕಾಯಿಗಳು ಮೊಳೆತಿದ್ದವು ಎಂದು ಅವುಗಳನ್ನು ಒಂದು ವಿಸ್ತಾರವಾದ ಬುಟ್ಟಿಯಲ್ಲಿ ನೀರು ಹಾಕಿ ಬೇರು ಮುಳುಗುವಂತೆ, ನಮ್ಮ ಕೈತೋಟದಲ್ಲಿ ಇಟ್ಟಿದ್ದೆವು. ಇದೊಂದು ಪ್ರಶಸ್ತವಾದ ಸೊಳ್ಳೆಗಳ ಹೆರಿಗೆ ಆಸ್ಪತ್ರೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ! ತೆಂಗಿನ ಕಾಯಿಗಳ ಬೇರುಗಳ ಅಡಿಯಲ್ಲಿ ಕದ್ದು ಮುಚ್ಚಿ ಆಟವಾಡುತ್ತಿದ್ದ ಲಾರ್ವಾಗಳು ಹೊರ ಬಂದ ಕೂಡಲೇ ನನ್ನ ಮಕ್ಕಳು ಕಡ್ಡಿಯಿಂದ ನೀರನ್ನು ಅಲುಗಾಡಿಸುತ್ತಿದ್ದರು. ಆಗ ಲಾರ್ವಗಳು ಎಸ್ ಆಕಾರದಲ್ಲಿ ಮತ್ತೆ ಅತ್ತಿಂದಿತ್ತ ಚಲಿಸುತ್ತ ಎಲ್ಲೋ ಮಾಯವಾಗಿಬಿಡುತ್ತಿದ್ದವು. ಕೆಲ ಬಾರಿ ನನಗೆ ಅವುಗಳ ಹೊರ ಚರ್ಮ ಕೂಡ ಕಾಣಸಿಕ್ಕಿದೆ. ಪೊರೆ ಕಳಚುವಿಕೆ ಆದ ಮೇಲೆ (ಹಾವಿನ ಪೊರೆ ಕಾಣಸಿಗುವುದಿಲ್ಲವೇ? ಅದೇ ತರಹ) ಈ ಲಾರ್ವಾಗಳ ಬರಿ ಚರ್ಮ ಅಷ್ಟೇ ತೇಲಾಡುವುದನ್ನು ಸಹ ನೋಡಿದ್ದೇನೆ. ಇವು ಒಟ್ಟು ನಾಲ್ಕು ಬಾರಿ moulting ಗೆ ಒಳಪಡುತ್ತವೆ. ಈ ಅವಧಿಯಲ್ಲಿ ಕೂಡ ಇವು ಅನೇಕ ಮೀನುಗಳಿಗೆ ಹಾಗು ಇನ್ನಿತರ ಲಾರ್ವಾಗಳಿಗೆ ಆಹಾರವಾಗುತ್ತವೆ.  moulting ಪ್ರಕ್ರಿಯೆ ಮುಗಿದ ಮೇಲೆ ಕೋಶಾವಸ್ಥೆಗೆ ಜಾರುತ್ತವೆ. ಕೋಶಾವಸ್ಥೆಯಿಂದ ಹೊರಬರಲು ಎರಡು ದಿನಗಳಿಂದ ಒಂದು ವಾರದವರೆಗೂ ಸಮಯ ತಗಲುತ್ತದೆ. ವಯಸ್ಕ ಸೊಳ್ಳೆಗಳು ಹೊರ ಬಂದ ಮೇಲೆ ಹೂವಿನ ಮಕರಂದ ಮತ್ತು ಹಣ್ಣಿನ ರಸದ ಮೇಲೆ ಅವಲಂಬಿತವಾದರೆ, ಹೆಣ್ಣು ಸೊಳ್ಳೆಗಳಿಗೆ ಮಾತ್ರ  ಮೊಟ್ಟೆ ಉತ್ಪಾದಿಸಲು  ಪ್ರಾಣಿಗಳ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಒಂದು ಸಲ ಮಿಲನ ಪ್ರಕ್ರಿಯೆ ಮುಗಿದ ಮೇಲೆ ಗಂಡು ಸೊಳ್ಳೆ ಬದುಕಿಗೆ ಅಂತ್ಯ ಹೇಳಿಬಿಡುತ್ತದೆ. ಹೀಗಾಗಿ ಇದರ ಆಯುಷ್ಯ 3 ರಿಂದ 5 ದಿನ ಮಾತ್ರ. ಆದರೆ ಹೆಣ್ಣು ಸೊಳ್ಳೆಯ ಸರಾಸರಿ ಜೀವಿತಾವಧಿ ಆರು ವಾರಗಳು!

© ಗಿರೀಶ್ ಗೌಡ

ಅಂದ ಹಾಗೆ ನಮ್ಮ ದೇಶದಲ್ಲಿ ಒಂದಕ್ಕಿಂತ ಒಂದು ಚಂದದ ಹೆಸರುಳ್ಳ ಸೊಳ್ಳೆಗಳಿವೆ ಎಂದು ಗೊತ್ತೇ?  Yellow fever mosquito – Aedes aegypti, Asian tiger mosquito – Aedes albopictus, Anopheles mosquitoes – Anopheles, Southern house mosquito – Culex quinquefasciatus, The eastern saltmarsh mosquito – Aedes sollicitans ಇವುಗಳು ಹೆಸರಿಗೆ ತಕ್ಕಂತೆ ವಿವಿಧ ರೀತಿಯ ರೋಗಗಳಾದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾಗಳನ್ನು ಹರಡಿದರೂ ಅವುಗಳು ಮಾಡುವುದು ತಮ್ಮ ಮಕ್ಕಳಿಗಾಗಿ ಎಂದು ಮುಗ್ಧವಾಗಿ ಯೋಚನೆ ಮಾಡುವುದಕ್ಕೆ ಮನಸ್ಸು ಹಿಂಜರಿಯುತ್ತದೆ. ಸೊಳ್ಳೆಗಳನ್ನು ನಾಶ ಮಾಡಲು ದೊಡ್ಡ ದೊಡ್ಡ ಕೀಟನಾಶಕ ಕಂಪನಿಗಳ ಬಗೆಬಗೆಯ ಉತ್ಪನ್ನಗಳು ಸಿಕ್ಕರೂ ಅವುಗಳನ್ನು ಸೊಳ್ಳೆ ಬ್ಯಾಟ್ ನಿಂದ ಹಿಡಿದು ಚಟಪಟ ಅನ್ನಿಸಿದಾಗ ಮಾತ್ರ ಎಷ್ಟೋ ಮಂದಿಗೆ ಸಮಾಧಾನ ಅಲ್ಲವೇ? ಆದರೆ ನೈಸರ್ಗಿಕವಾಗಿ ಕೂಡ ಇವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಅದರಲ್ಲಿ ಬಹು ಮುಖ್ಯವಾದುದು ನೀರು ನಿಲ್ಲದೆ ಇರೋ ತರಹ ನೋಡಿಕೊಳ್ಳುವುದು. ನಾನು ಗಮನಿಸಿದ ಪ್ರಕಾರ, ಬೆಂಗಳೂರಿನಲ್ಲಿರುವ ಕೆರೆಯ ಸುತ್ತಮುತ್ತ ಡ್ರ್ಯಾಗನ್ ಫ್ಲೈ ಗಳು ಇರುವುದರಿಂದ ಸೊಳ್ಳೆಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಬಹುದು. ಅದೇ ಕೆರೆಯ ಇನ್ನೊಂದು ಪಕ್ಕದಲ್ಲಿ ಯಾವುದೋ ಕಾರಣದಿಂದ ಡ್ರ್ಯಾಗನ್ ಫ್ಲೈ ಇಲ್ಲದೆ ಇದ್ದುದರಿಂದ ಸಿಕ್ಕಾಪಟ್ಟೆ ಸೊಳ್ಳೆಗಳಿದ್ದಿದು ಕೂಡ ಗಮನಾರ್ಹ.

© ಸುನೀಲ್ ಕುಂಬಾರ್

ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ

ಬೆಂಗಳೂರು ನಗರ ಜಿಲ್ಲೆ

Spread the love
error: Content is protected.