ಪ್ರಕೃತಿ ಬಿಂಬ
ಹಾವಕ್ಕಿ © ದೀಪಕ್ ಎಲ್. ಎಂ.
ಉಷ್ಣವಲಯದ ಸರೋವರ ಮತ್ತು ತೊರೆಗಳಲ್ಲಿ ಕಂಡುಬರುವ ನೀರಿನ ಪಕ್ಷಿಯಾದ ಹಾವಕ್ಕಿಯು ಅನ್ಹಿಂಗಿಡೆ (Anhingidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಅನ್ಹಿಂಗಾ ಮೆಲನೋಗಾಸ್ಟರ್ (Anhinga melanogaster) ಎಂದು ಕರೆಯಲಾಗುತ್ತದೆ. ತಲೆ ಮತ್ತು ಕುತ್ತಿಗೆಯು ಕಂದು ಬಣ್ಣದ್ದಾಗಿದ್ದು, ಬಿಳಿ ಗೆರೆಗಳುಳ್ಳ ಕಪ್ಪಾದ ರೆಕ್ಕೆಗಳನ್ನು ಹೊಂದಿದೆ. ಈಜುವಾಗ ದೇಹವು ನೀರಿನಲ್ಲಿ ಮುಳುಗಿದ್ದು, ತೆಳ್ಳಗಿನ ಕುತ್ತಿಗೆ ಮಾತ್ರ ನೀರಿನ ಮೇಲೆ ಗೋಚರಿಸುತ್ತದೆ. ಸಾಮಾನ್ಯವಾಗಿ ಬಂಡೆ ಅಥವಾ ಮರದ ಕೊಂಬೆಗಳ ಮೇಲೆ ರೆಕ್ಕೆಗಳನ್ನು ತೆರೆದು ಕುಳಿತಿರುತ್ತದೆ. ನೀರಿನಡಿಯಲ್ಲಿ ಇರುವ ಮರಗಳ ಕೊಂಬೆಗಳ ಮೇಲೆ ಗೂಡನ್ನು ಕಟ್ಟಿ ನೀಲಿ-ಹಸಿರು ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. ಇದರ ಉದ್ದವಾದ ಮತ್ತು ತೆಳ್ಳಗಿನ ಕುತ್ತಿಗೆಯಿಂದ ನೀರಿನೊಳಗಿನ ಮೀನನ್ನು ಈಟಿ, ಮೇಲಕ್ಕೆ ಗಾಳಿಯಲ್ಲಿ ಎಸೆದು ನಂತರ ನುಂಗುವುದು ಇದರ ವಿಶೇಷತೆಯಾಗಿದೆ.
ಭಾರತ, ಬಾಂಗ್ಲಾದೇಶ, ಬರ್ಮಾ, ಪಾಕಿಸ್ತಾನ, ಸಿಲೋನ್ ದೇಶಗಳ ಕೆರೆ, ಹೊಳೆ, ಗದ್ದೆ, ಸಮುದ್ರದ ಹಿನ್ನೀರುಗಳಲ್ಲಿ ಕಂಡುಬರುವ ಈ ಹಕ್ಕಿಯು ಅಲ್ಸೆಡಿನಿಡೆ (Alcedinidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಸೆರಿಲ್ ರೂಡಿಸ್ (Ceryle rudis) ಎಂದು ಕರೆಯಲಾಗುತ್ತದೆ. ಹೆಸರೇ ಸೂಚಿಸುವಂತೆ ಇದು ಕಪ್ಪು ಮತ್ತು ಬಿಳಿ ಪುಕ್ಕಗಳನ್ನು ಹೊಂದಿದ್ದು, ಕಪ್ಪು ಬಣ್ಣದ ಉದ್ದವಾದ ಮತ್ತು ಕಠಾರಿಯಂತೆ ಕಾಣುವ ಕೊಕ್ಕನ್ನು ಹೊಂದಿದೆ. ಗಾಢ ಕಂದು ಬಣ್ಣದ ಕಣ್ಣುಗಳು ಹಾಗೂ ಕಪ್ಪಾದ ಪಾದಗಳು ಮತ್ತು ಕಾಲುಗಳನ್ನು ಹೊಂದಿದೆ. ಮರಗಳ ಕೊಂಬೆಗಳ ಮೇಲೆ ಕುಳಿತು ಆಗಾಗ ಬಾಲ ಮತ್ತು ತಲೆಯನ್ನು ಮೇಲೆ ಕೆಳಗೆ ಆಡಿಸುತ್ತದೆ. ಇವು ಸಾಮಾನ್ಯವಾಗಿ ಜೋಡಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತವೆ. ದಂಡೆಯ ಮೃದುವಾದ ಭೂಮಿಯಲ್ಲಿ, ನೀರಿನ ಸಮೀಪವಿರುವ ನೆಲದಲ್ಲಿ ಗೂಡಿನ ರಂಧ್ರವನ್ನು ಮಾಡುತ್ತವೆ. ಮೊಟ್ಟೆ ಇಟ್ಟ ಸಮಯದಲ್ಲಿ ಗಂಡು ಹಕ್ಕಿ ಹೆಣ್ಣಿಗೆ ಆಹಾರವನ್ನು ನೀಡಿ, ಮರಿಗಳನ್ನು ಸಾಕಲು ಸಹಾಯ ಮಾಡುತ್ತದೆ. ಆಕಾಶದಲ್ಲಿ ಹಾರುತ್ತಲೇ ನೀರಿನಲ್ಲಿರುವ ಮೀನುಗಳೆಡೆ ಗುರಿಯಿಟ್ಟು ಹಿಡಿದು, ಬಂಡೆಗಳ ಮೇಲೆ ಚಚ್ಚಿ ಕೊಂದು ತಿನ್ನುತ್ತವೆ.
ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಸಿಲೋನ್, ಬರ್ಮಾ ದೇಶಗಳಲ್ಲಿನ ಹಳ್ಳ, ಕೆರೆಗಳ ಪಕ್ಕದಲ್ಲಿ ಒಂಟಿಯಾಗಿ ಕಾಣಸಿಗುವ ಈ ನೀಲಿ ಮಿಂಚುಳ್ಳಿ ಅಲ್ಸೆಡಿನಿಡೆ (Alcedinidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಅಲ್ಸೆಡೊ ಅಥಿಸ್ (Alcedo atthis) ಎಂದು ಕರೆಯಲಾಗುತ್ತದೆ. ಪಕ್ಷಿಯ ಮೇಲ್ಭಾಗವು ನೀಲಿ ಬಣ್ಣವಿದ್ದು, ತಳಭಾಗವು ಕಿತ್ತಳೆ-ಕೆಂಪು ಬಣ್ಣದ್ದಾಗಿರುತ್ತದೆ. ಕೆನ್ನೆ ಮತ್ತು ಕುತ್ತಿಗೆಯ ಬದಿಗಳಲ್ಲಿ ಬಿಳಿ ಬಣ್ಣವನ್ನು ಹೊಂದಿದ್ದು, ಉದ್ದವಾದ ಮತ್ತು ಚೂಪಾದ ಕಪ್ಪು ಕೊಕ್ಕನ್ನು ಹೊಂದಿರುತ್ತದೆ. ಕಾಲುಗಳು ಹೊಳೆಯುವ ಕೆಂಪು ಬಣ್ಣದ್ದಾಗಿರುತ್ತವೆ. ಹೊಳೆ, ಹಳ್ಳಗಳ ಕಡಿದಾದ ದಂಡೆಗಳಲ್ಲಿ ನೆಲಕ್ಕೆ ಸಮಾನಾಂತರವಾಗಿ ಪೊಟರೆ ಕೊರೆದು ಗೂಡು ಮಾಡುತ್ತವೆ. ನೀರಿನ ಮತ್ತು ನೆಲದ ಮೇಲೆ ತುಂಬಾ ಕೆಳಮಟ್ಟದಲ್ಲಿ ಹಾರುತ್ತಾ ನಿಂತು ಮೀನಿಗೆ ಗುರಿ ಇಡುತ್ತದೆ ಹಾಗೂ ಸಾಧಾರಣವಾಗಿ ಕುಳಿತಲ್ಲಿಂದಲೇ ಕೊಕ್ಕು ಕೆಳಗೆ ಮಾಡಿಕೊಂಡು ದಿಡೀರನೆ ನೀರಿಗೆ ಎರಗಿ ಮೀನು ಹಿಡಿಯುವುದನ್ನು ಹೆಚ್ಚಾಗಿ ಕಾಣಬಹುದಾಗಿದೆ. ಹಿಡಿದ ಮೀನನ್ನು ಕುಳಿತ ಕೊಂಬೆ ಅಥವಾ ಬಂಡೆಗೆ ಚಚ್ಚಿ ಕೊಂದು ತಿನ್ನುತ್ತದೆ.
ಯೂರೋಪ್ ಮತ್ತು ಪಶ್ಚಿಮ ಏಷ್ಯಾದ ಜೌಗು ಪ್ರದೇಶಗಳಲ್ಲಿ ಕಂಡುಬರುವ ಈ ನೀರಿನ ಪಕ್ಷಿಯು ರಾಲಿಡೇ (Rallidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಪೋರ್ಜಾನಾ ಪೊರ್ಜಾನಾ (Porzana porzana) ಎಂದು ಕರೆಯಲಾಗುತ್ತದೆ. ದೇಹವು ಕಂದು ಬಣ್ಣದ್ದಾಗಿದ್ದು, ಬಿಳಿ ಚುಕ್ಕೆಗಳನ್ನು ಹೊಂದಿರುತ್ತದೆ. ಸಣ್ಣ ಬಾಲ, ಹಳದಿ ಬಣ್ಣದ ನೇರವಾದ ಕೊಕ್ಕು ಹಾಗೂ ಹಸಿರು ಬಣ್ಣದ ಕಾಲುಗಳನ್ನು ಹೊಂದಿದೆ. ಚಳಿಗಾಲದಲ್ಲಿ ಆಫ್ರಿಕಾ ಮತ್ತು ಪಾಕಿಸ್ತಾನದ ಕಡೆ ವಲಸೆ ಹೋಗುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಇವುಗಳ ಗೂಡುಗಳಿರುವ ಜಾಗದೆಡೆ ಹಗಲು ರಾತ್ರಿ ಜೋರಾದ ಕರೆಯನ್ನು ಕೇಳಬಹುದಾಗಿದೆ. ತನ್ನ ಕೊಕ್ಕಿನಿಂದ ನೀರಿನಲ್ಲಿ ಕೀಟ ಮತ್ತು ಇತರೆ ಜಲಚರಗಳನ್ನು ಹೆಕ್ಕಿ ತಿನ್ನುತ್ತದೆ.
ಚಿತ್ರಗಳು : ದೀಪಕ್ ಎಲ್. ಎಂ.
ಲೇಖನ : ದೀಪ್ತಿ ಎನ್.