ವಾತಾನುಕೂಲಿತದ ಹುಳುಗಳು

ವಾತಾನುಕೂಲಿತದ ಹುಳುಗಳು

© ಅಭಿಷೇಕ್ ಎಸ್. ಆರ್.

ಕಳೆದೆರಡು ಸಂಚಿಕೆಗಳಲ್ಲಿ ಹೇಳಿದ ಹಾಗೆ ಮಣ್ಣಿನ ಗೂಡನ್ನು ಕಟ್ಟುವ ಕೀಟಗಳ ಬಗ್ಗೆ ಹೇಳುತ್ತಿರುವಾಗ ನನ್ನ ಮಗ ‘ಗೊರ್ಲಿ’ಗಳನ್ನೂ ನೆನಪಿಸಿದ. ಅವೂ ಕೂಡ ಮಣ್ಣಿನ ಗೂಡು ಕಟ್ಟುತ್ತವೆಯಲ್ಲವೇ? ಎಂದು ಕೇಳುತ್ತ ನನಗೆ ಈ ಸಂಚಿಕೆಯ ವಿಷಯವನ್ನು ಕೂಡ ನೀಡಿದ!  ಆಡುಭಾಷೆಯಲ್ಲಿ ಇವಕ್ಕೆ ಗೊರ್ಲಿ, ವರಲಿ ಅಂತ ಹೇಳಿದರೂ ‘ಗೆದ್ದಲು ಹುಳು’ ಇವುಗಳ ಅಧಿಕೃತ ಹೆಸರು. ಆದರೆ ಇವನು ಅವುಗಳ ಗೂಡನ್ನು ಯಾವಾಗ ನೋಡಿದ ಎಂಬ ಸಂದೇಹ ಮೂಡಿತು. ಬೆಂಗಳೂರಿನ ನಮ್ಮನೆಯ ಸುತ್ತಮುತ್ತ ಗೂಡಿರುವುದು ಅಸಾಧ್ಯದ ಮಾತು. ಉದ್ಯಾನವನದಲ್ಲಿ ಬಿಲ ತೋಡುವ ಜೇಡ ಕಂಡು ಬರುವುದೇ ಅಸಾಧ್ಯವಾಗಿದ್ದಾಗ ಇನ್ನು ಗೆದ್ದಲು ಹುಳುಗಳ ಹುತ್ತ ಅಂತೂ ದೂರದ ಮಾತು. ಊರಿನಲ್ಲಿ ಕೂಡ ಅಪರೂಪ. ಹೀಗೆ ಇಡೀ ದಿನ ಯೋಚಿಸುವ ಬದಲು ಅವನನ್ನು ಕರೆದು ಕೇಳಬೇಕೆಂಬ ಹಂಬಲ ಹೆಚ್ಚಾಯಿತು. ಅವನನ್ನು ಕೇಳಿದಾಗ ತಿಳಿದ ಉತ್ತರವೇನೆಂದರೆ ’ಅಜ್ಜಿ ಮನೆಯ ಮುಂದೆ ಒಣಗಿದ ಮಲ್ಲಿಗೆ ಬಳ್ಳಿಯ ಕಾಂಡದ ಮೇಲೆ ಅವು ಮನೆ ಮಾಡಿಕೊಂಡಿವೆ. ಮಣ್ಣನ್ನು ಸ್ವಲ್ಪ ಮೇಲಕ್ಕೆ ತಂದು ಪೈಪ್ ತರಹ ಮನೆ ಮಾಡಿ, ಅದರ ಒಳಗೆ ಇವೆ!’ ಎಂದನು. ಅವನ ಉತ್ತರ ಬಲು ಮಜವೆನಿಸಿತು. ಅವನಿಗೆ ತಿಳಿ ಹೇಳಲು ಅದೇ ಮಲ್ಲಿಗೆ ಬಳ್ಳಿಗೆ ಬಂದೆವು. ಹುಳುಗಳು ಬಳ್ಳಿಯ ದಪ್ಪನೆಯ ಕಾಂಡದ ತೊಗಟೆಯನ್ನು ತಿಂದು ಹಾಕಿದ್ದಲ್ಲದೆ ಅದರ ಕೆಳಗೆ ಬಿದ್ದಿದ್ದ ಒಣ ಎಲೆಗಳ ರಾಶಿಯನ್ನು ಕೂಡ ತಿಂದಿದ್ದವು. ಹುಳುಗಳನ್ನು ತೋರಿಸಲು ಗೂಡಿನ ಮೇಲ್ಭಾಗವನ್ನು ಕಡ್ಡಿಯಿಂದ ಮುಟ್ಟಿದಾಗ ಮಣ್ಣು ಪಟ ಪಟನೆ ಕೆಳಕ್ಕೆ ಬಿದ್ದಿತು ಮತ್ತು ಅದರ ಹಿಂಭಾಗದಲ್ಲಿರುವ ಹುಳುಗಳು ಅಲ್ಲಿಂದ ಓಡತೊಡಗಿದವು. ಇದು ತುಂಬಾ ಮೋಜು ಅನಿಸಿರಬೇಕು ನನ್ನ ಮಗನಿಗೆ. ನಾನು ಹುಳುಗಳ ಬಗ್ಗೆ ಹೇಳತೊಡಗಿದರೆ ಇವನು ಇದ್ದ ಮಣ್ಣನ್ನೆಲ್ಲ ಕಡ್ಡಿಯಿಂದ ಕೆಡವಿ ಆ ಒಣಗಿದ ಮಣ್ಣನ್ನು ತನ್ನ ಕಾಲಿನಿಂದ ತುಳಿಯುತ್ತ ವಿಚಿತ್ರ ಖುಷಿ ಪಡುತ್ತಿದ್ದ. ಯಾವಾಗಲೂ ಏನೋ ಮಾಡಲು ಹೋಗಿ ಇನ್ನೊಂದೇನೋ ಆಗುತ್ತದಲ್ಲ? ಅರ್ಧ ಗಂಟೆ ಅವನಿಗೆ ತಿಳಿಸಿ ಹೇಳಿ ಅಲ್ಲಿಂದ ಕರೆದುಕೊಂಡು ಬರುವಷ್ಟರಲ್ಲಿ ನನಗೆ ಜಗತ್ತಿನ ಎಲ್ಲಾ ಕಿಂಡರ್ ಗಾರ್ಡನ್ ಶಿಕ್ಷಕರ ಮೇಲೆ ಅಗಾಧ ಪ್ರೀತಿ, ಗೌರವ, ಕರುಣೆ, ಭಕ್ತಿ ಉಕ್ಕಿ ಬಂದಿತು!

© ಅಭಿಷೇಕ್ ಎಸ್. ಆರ್.

ಸುಸ್ತಾಗಿ ಬಂದು ನೀರು ಕುಡಿಯುತ್ತಿರುವಾಗ ಮತ್ತೆ ಅವನೇ ಪ್ರಶ್ನೆ ಕೇಳಿದ ‘ಗೊರ್ಲಿಗಳ್ಯಾಕೆ ಹಾಗೆ ಓಡುತ್ತಿದ್ದವು? ಎಲ್ಲಿಗೆ ಹೋಗುತ್ತಿದ್ದವು?’ ಇತ್ಯಾದಿ ಇತ್ಯಾದಿ… ಇದು ಹುಳುಗಳ ಬಗ್ಗೆ ಹೇಳಲು ಸುಸಂಧರ್ಭ ಎಂದು ಹೇಳತೊಡಗಿದೆ, “ಅವುಗಳಿಗೆ ಬಿಸಿಲಿನ ಶಾಖ ತಡೆದುಕೊಳ್ಳಲು ಆಗುವುದಿಲ್ಲ. ಏಕೆಂದರೆ ಅವುಗಳ ಮೈ ಮೇಲೆ ಬೇರೆ ಕೀಟಗಳಂತೆ ಕವಚವಿಲ್ಲ. ಅದಕ್ಕಾಗಿಯೇ ಹೀಗೆ ಮಣ್ಣಿನ ಕೊಳವೆಗಳ ರೀತಿ ಮೇಲ್ಮೈಯನ್ನು ರಚಿಸಿಕೊಂಡು ಅದರ ಮುಖಾಂತರ ಓಡಾಡುತ್ತವೆ. ಒಂದು ಗೂಡಿನಲ್ಲಿ ಒಂದು ರಾಜ, ರಾಣಿ, ಕೆಲಸಗಾರ ಗೆದ್ದಲುಗಳು ಮತ್ತು ಸೈನಿಕ ಗೆದ್ದಲುಗಳಿರುತ್ತವೆ. ರಾಜ ಯಾವಾಗಲೂ ರಾಣಿಯ ಸುತ್ತ ಇರುತ್ತದೆ ಮತ್ತು ರಾಣಿಯು ಮೊಟ್ಟೆಗಳನ್ನಿಡುತ್ತದೆ. ಕೆಲಸಗಾರ ಗೆದ್ದಲುಗಳು ಮೊಟ್ಟೆಗಳ, ಲಾರ್ವಗಳ ಆರೈಕೆಯನ್ನು ಮಾಡುತ್ತವೆ. ಸೈನಿಕ ಗೆದ್ದಲು ಹುಳುಗಳು ಬೇಟೆಗಾರರಿಂದ ಗೂಡನ್ನು ರಕ್ಷಣೆ ಮಾಡುತ್ತವೆ. ಕೆಲಸಗಾರ ಮತ್ತು ಸೈನಿಕ ಗೆದ್ದಲುಗಳ ಜೀವಿತಾವಧಿ 10 ರಿಂದ 14 ತಿಂಗಳವರೆಗೆ ಇರುತ್ತದೆ. ಆದರೆ, ಸಂತಾನೋತ್ಪತ್ತಿ ವಯಸ್ಕ ಗೆದ್ದಲುಗಳು ನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ, ವಿಶೇಷವಾಗಿ ಸಂತಾನೋತ್ಪತ್ತಿ ಮಾಡುವ ರಾಣಿ ಗೆದ್ದಲುಗಳು 25 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಲ್ಲವು. ದೈಹಿಕ ರಚನೆಯಲ್ಲಿ ಕೂಡ ಇವುಗಳು ಬೇರೆ ಬೇರೆಯಾಗಿರುತ್ತವೆ. ರಾಣಿಯ ದೇಹ ಬೃಹತ್ತಾಗಿದ್ದು, ಮೊಟ್ಟೆ ಇಡುವುದೊಂದೇ ಕೆಲಸ. ರಾಣಿಗೆ ತೆವಳಲು ಕೂಡ ಆಗುವುದಿಲ್ಲ! ಹೀಗಾಗಿ ರಾಣಿಯನ್ನು ಶುಚಿ ಮಾಡುವುದರಿಂದ ಅದಕ್ಕೆ ತಿನ್ನಿಸುವುದು ಕೂಡ ಕೆಲಸಗಾರ ಗೆದ್ದಲು ಹುಳುಗಳೇ.

© ಅಭಿಷೇಕ್ ಎಸ್. ಆರ್.

ತಮ್ಮ ಗೂಡನ್ನು ಶುರು ಮಾಡುವಾಗ ರಾಣಿಯು 12 ಮೊಟ್ಟೆಗಳನ್ನು ಇಡುತ್ತದೆ ಆದರೆ ಕಾಲೋನಿಯ ಹುಳುಗಳ ಸಂಖ್ಯೆ ಹೆಚ್ಚಾದಂತೆ ಮೊಟ್ಟೆಗಳ ಸಂಖ್ಯೆಯೂ ಹೆಚ್ಚುತ್ತದೆ. ಲಕ್ಷಗಟ್ಟಲೆ ಹುಳುಗಳಿರುವ ಗೂಡಿನಲ್ಲಿ ರಾಣಿಯು ದಿನಕ್ಕೆ 30,000 ಮೊಟ್ಟೆಗಳನ್ನಿಡುತ್ತದೆ. ಸೈನಿಕ ಗೆದ್ದಲು ಹುಳುವಿನ ದೈಹಿಕ ರಚನೆಯಲ್ಲಿ ಮುಖ್ಯವಾದ ಅಂಶವೆಂದರೆ ದೊಡ್ಡ ತಲೆ ಮತ್ತು ಬಾಯಿಯಲ್ಲಿರುವ ಮ್ಯಾಂಡಿಬಲ್ಸ್. ಕೆಲ ಪ್ರಭೇದದ ಇರುವೆಗಳು ಗೆದ್ದಲು ಹುಳುವಿನ ಗೂಡಿನ ಮೇಲೆ ಆಕ್ರಮಣ ಮಾಡುತ್ತವೆ, ಆಗ ಈ ಸೈನಿಕರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಗೂಡನ್ನು ರಕ್ಷಿಸುತ್ತವೆ.  ಇರುವೆಗಳು ಕೂಡ ಎಷ್ಟು ಚಾಣಾಕ್ಷವೆಂದರೆ ಅವು ಇಡೀ ಗೂಡನ್ನು ನಿರ್ನಾಮ ಮಾಡದೇ ಸ್ವಲ್ಪ ಹುಳುಗಳನ್ನು ಮಾತ್ರ ಭಕ್ಷಣೆಗೆಂದು ಒಯ್ಯುತ್ತವೆ. ಏಕೆಂದರೆ ಗೆದ್ದಲು ಮತ್ತೆ ಬೆಳೆದು ಮತ್ತೆ ಇರುವೆಗಳಿಗೆ ಆಹಾರ ಬೇಕೆನಿಸಿದಾಗ ಇವುಗಳ ಗೂಡಿನ ಮೇಲೆ ಆಕ್ರಮಣ ಮಾಡಲು! ಬಹುಶಃ ಮನುಷ್ಯ ಇವುಗಳಿಂದ ನೋಡಿ ಕಲಿಯಬೇಕು” ನಾನಿನ್ನೂ ಏನೋ ಹೇಳುವವಳಿದ್ದೇ.

© ಅಭಿಷೇಕ್ ಎಸ್. ಆರ್.

ಅಷ್ಟರಲ್ಲಿ ಮಗ, “ಹಂಗಾದ್ರೆ ಅಲ್ಲಿ ಕಾಡಲ್ಲಿ ಪೂರ್ಣಚಂದ್ರ ತೇಜಸ್ವಿ ಮನೆ ಹತ್ತಿರ ದೊಡ್ಡದಾದ ಹುತ್ತ ನೋಡಿದ್ವಲ್ಲ? ಅದು ಇದೆ ಹುಳುಗಳು ಕಟ್ಟಿದ್ದು ಅಂತ ಹೇಳಿದ್ದಿ?” ಅಂತ ಕೇಳಿದ. ನನಗೆ ಆಗ ನೆನಪಾಯಿತು, ಕೆಲ ದಿನಗಳ ಹಿಂದಷ್ಟೇ ಸಾಹಿತ್ಯ ಸಮ್ಮೇಳನ ಇದ್ದಾಗ ಮೂಡಿಗೆರೆಗೆ ಹೋಗಿದ್ದೆವು. ಅಲ್ಲಿ ಸ್ವಲ್ಪ ಕಾಡಲ್ಲಿ ಕೂಡ ಅಲೆದಿದ್ದೆವು. ಆಗ ಸ್ವಲ್ಪ ಚಿಕ್ಕ ಹುತ್ತಗಳನ್ನು ತೋರಿಸಿದ್ದೆ. ಅದೇ ನಮ್ಮ ಬಯಲುಸೀಮೆಯಲ್ಲಿ ಅಂದರೆ ಹಳಿಯಾಳದ ಹತ್ತಿರದ ಕಾಡಲ್ಲಿ ನನಗಿಂತ ಎತ್ತರವಾದ ಹುತ್ತವನ್ನು ಕೂಡ ತೋರಿಸಿದ್ದೆ. ನಾನು ಕೂಡ ಅಷ್ಟು ಎತ್ತರದ ಹುತ್ತವನ್ನು ನೋಡಿದ್ದು ಅದೇ ಮೊದಲು! 12 ಅಡಿಗಿಂತಲೂ ಎತ್ತರವಾದ ಹುತ್ತಗಳು ಆಫ್ರಿಕಾದ ಕಾಡುಗಳಲ್ಲಿವೆ ಎಂದು ಡಿಸ್ಕವರಿ ಚಾನೆಲ್ಲಿನಲ್ಲಿ ನೋಡಿದ್ದೆನಾದರೂ ಇಲ್ಲೇ ನಮ್ಮ ಧಾರವಾಡದ ಹತ್ತಿರ 7 ಅಡಿಗಳ ಹುತ್ತವನ್ನು ನೋಡಿದ್ದು ನಂಬಲು ಅಸಾಧ್ಯವಾಗಿತ್ತು. ಅದರಲ್ಲಿ ಹುಳುಗಳು ಇದ್ದವೊ ಅಥವಾ ಅದನ್ನು ತೊರೆದು ಹೋಗಿದ್ದವೋ ಗೊತ್ತಿಲ್ಲ. ಆದರೆ ಅವುಗಳ ಕಟ್ಟಡ ಮಾತ್ರ ಇಂಜಿನಿಯರಿಂಗ್ ಪ್ರಪಂಚಕ್ಕೆ ಒಂದು ಸವಾಲೇ ಸರಿ. ಮೊದಲನೆಯ ಅಂಶ, ಇದರ ಬೃಹತ್ ಗಾತ್ರ, ಹುಳು ಅಷ್ಟು ಚಿಕ್ಕದಾದ್ರೂ ಅದ್ರ ಸಾವಿರ ಪಟ್ಟು ದೊಡ್ಡದಾದ ಗೂಡು. ಅದೂ ಬರಿ ತನ್ನ ಬಾಯಿಯ ಲಾಲಾರಸ ಮತ್ತು ಮಣ್ಣಿನಿಂದ ಕಟ್ಟಿದ್ದು. ಎರಡನೆಯ ಅಂಶ ಇದರ ವಾತಾನುಕೂಲಿತ ಅಂದರೆ AC ವ್ಯವಸ್ಥೆಯಿರುವ ತಂತ್ರಜ್ಞಾನ.  AC ವ್ಯವಸ್ಥೆ ಸ್ವಲ್ಪ ವಿಚಿತ್ರವೆನಿಸಿದರೂ ಇದು ಸತ್ಯ. ಹುತ್ತದ ತಳಭಾಗದಲ್ಲಿ ಇರುವ ಲಕ್ಷಗಟ್ಟಲೆ ಹುಳುಗಳಿಂದ ಅಲ್ಲಿ ಬಿಸಿ ಗಾಳಿಯ ವಾತಾವರಣ ನಿರ್ಮಾಣವಾಗಿರುತ್ತದೆ. ಅದು ಸೀದಾ ಮೇಲೆ ಬರುವಂತೆ ಒಂದು ಚಿಮಿಣಿ ತರಹ ಕಟ್ಟಿರುತ್ತವೆ. ಈ ಬಿಸಿ ಗಾಳಿ ಮೇಲೆ ಬಂದಾಗ ಸುತ್ತಮುತ್ತಲಿನ ತಂಪು ಹವೆಯೊಂದಿಗೆ ಬೆರೆತು ಹುತ್ತದ ತಾಪಮಾನವನ್ನು ನಿಯಂತ್ರಿಸುತ್ತದೆ. ಹುತ್ತದ ಸುತ್ತಮುತ್ತ ಕೂಡ ಚಿಕ್ಕ ಚಿಕ್ಕ ರಂಧ್ರಗಳಿದ್ದು, ಈ ರಂಧ್ರಗಳ ಮೂಲಕ ತಂಪು ಗಾಳಿ ಹುತ್ತದ ಒಳ ಪ್ರವೇಶಿಸಿ ಉಳಿದ ಭಾಗಗಳಿಗೆ ಕೂಡ ಪ್ರಸಾರವಾಗುತ್ತದೆ.

© ಅಭಿಷೇಕ್ ಎಸ್. ಆರ್.

ಇಲ್ಲಿಯವರೆಗೆ ಗೆದ್ದಲುಗಳ ಬಗ್ಗೆ ಸತ್ಯತೆಯನ್ನು ಮಾತ್ರ ಹೇಳಿದರೆ, ಇನ್ನು ಕೆಲವು ಅಂಶಗಳು ಸತ್ಯವೋ ಅಥವಾ ಮೂಢನಂಬಿಕೆಯೋ ಗೊತ್ತಿಲ್ಲ. ಈ ದೊಡ್ಡ ಹೊಟ್ಟೆಯ ರಾಣಿ ಗೆದ್ದಲು ಹುಳುವನ್ನು ತಿಂದರೆ ಮನುಷ್ಯನಿಗೆ ಮುಪ್ಪು ಬರುವುದಿಲ್ಲವಂತೆ! ಆದರೆ ಇದನ್ನು ಜೀರ್ಣಗೊಳಿಸುವುದು ಕೂಡ ಅಷ್ಟೇ ಕಷ್ಟಕರವಂತೆ. ಮೊದಲು ರಾಣಿ ಹುಳುವನ್ನು ನೋಡುವುದೇ ತುಂಬಾ ಅಪರೂಪ, ಏಕೆಂದರೆ ಇವು ತಮ್ಮ ಸಂತತಿಯನ್ನು ಶುರು ಮಾಡಿದ ಕೂಡಲೇ ಗೂಡು ಬಿಟ್ಟು ಹೊರ ಹೋಗುವುದೇ ಇಲ್ಲ. ಇದನ್ನು ಹುಡುಕಬೇಕಾದರೆ ಇಡೀ ಹುತ್ತವನ್ನು ಅಗೆದು ತಳಭಾಗಕ್ಕೆ ಅಗೆಯಬೇಕು. ಇಷ್ಟೆಲ್ಲಾ ಮಾಡಿದ ಮೇಲೂ ಇದು ಸಿಕ್ಕರೆ ಅದನ್ನು ತಿಂದ ನಂತರ ಓಡುತ್ತಲೇ ಇರಬೇಕು. ಒಂದು ವೇಳೆ ಇದನ್ನು ಜೀರ್ಣಿಸಿಕೊಳ್ಳಲು ಅಸಫಲವಾದನೆಂದರೆ ಆ ಮನುಷ್ಯನಿಗೆ ಸಾವು ಕಟ್ಟಿಟ್ಟ ಬುತ್ತಿ. ಆದರೂ ಯೌವ್ವನದ ಆಸೆಗಾಗಿ ಈ ಪ್ರಯತ್ನಕ್ಕೆ ಕೈ ಹಾಕುವವರಿದ್ದಾರೆ.  ಕೆಲ ಆದಿವಾಸಿ ಜನರು ಇವುಗಳ ಚಟ್ನಿಯನ್ನು ಮಾಡಿ ಸವಿಯುತ್ತಾರೆ.

© ಪವನ್ ಕುಮಾರ್ ಟಿ. ಎನ್.

ಮಳೆಗಾಲದ ಆರಂಭದಲ್ಲಿ; ಭೂಮಿಯಿಂದ ಹೊರಬರುವ ಹುಳುಗಳಿಗೆ ಪುಕ್ಕಗಳಿದ್ದು ಎರಡು ರೆಕ್ಕೆಗಳೂ ಸಮವಾಗಿರುತ್ತವೆ. ರೆಕ್ಕೆಗಳು ಬಹಳ ಬಲಿಷ್ಠವಾಗಿರದೆ ಗೂಡಿನ ಹತ್ತಿರವೇ ಹಾರುವಷ್ಟು ಮಾತ್ರ ಸಶಕ್ತವಾಗಿರುತ್ತವೆ. ಅವುಗಳ ಹಾರಾಟದಲ್ಲಿಯೇ ಮಿಲನಗೊಂಡು ಭೂಮಿಗೆ ಇಳಿದ ತಕ್ಷಣ ರೆಕ್ಕೆಗಳನ್ನು ತ್ಯಜಿಸುತ್ತವೆ. ಸರಿಯಾದ ಆವಾಸಸ್ಥಾನ ಸಿಕ್ಕಿದಾಗ ಅಲ್ಲೊಂದು ಹೊಸ ಕಾಲೋನಿಯೇ ಸೃಷ್ಟಿಯಾಗುತ್ತದೆ. ಬಹುತೇಕ ಹುಳುಗಳು ಹಕ್ಕಿಗಳಿಗೆ, ಕಪ್ಪೆ, ಹಲ್ಲಿ, ಓತಿಕ್ಯಾತಗಳಿಗೆ ಆಹಾರವಾಗುತ್ತವೆ. ಹೀಗಾಗಿ ಹೊಸ ಕಾಲೋನಿ ಶುರುವಾಗುವುದು ಕೇವಲ ಬೆರಳೆಣಿಕೆಯಷ್ಟು!

ಇವು ಮನುಷ್ಯನಿಗೆ ಉಪದ್ರವಿ ಕೀಟಗಳಾಗಿದ್ದರೂ ಅತ್ಯಂತ ಪುರಾತನ ಜೀವಿಗಳಾದ ಇವು ಕಾಡಿನ ಗೊಬ್ಬರ ತಯಾರಕರೇ ಒಣಗಿದ ಎಲೆ, ಕಟ್ಟಿಗೆ ಹೀಗೆ ಎಲ್ಲವನ್ನು ಜೀರ್ಣಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. Blattodea ಗುಂಪಿಗೆ ಸೇರಲ್ಪಡುವ ಇವು, ಜಿರಳೆಗಳ ಹತ್ತಿರದ ಸಂಬಂಧಿಗಳು ಕೂಡ. ಇವುಗಳ ಹುತ್ತದ ಮಣ್ಣನ್ನು ನೀರಿನಲ್ಲಿ ಕರಗಿಸಿ ಸ್ವಲ್ಪ ಕಾಲ ಇಟ್ಟು ತಿಳಿ ನೀರನ್ನು ದಿನವೂ ಕುಡಿಯುವುದರಿಂದ ಬಹಳಷ್ಟು ಕಾಯಿಲೆಗಳು ದೂರ ಉಳಿದು, ರೋಗನಿರೋಧಕ ಶಕ್ತಿ ಹೆಚ್ಚುತ್ತೆ ಎನ್ನುವುದು ಯಾವುದೋ ಮಂಡನೆಯಲ್ಲಿ ಕೇಳಿದ ಮಾತು. ಅದೆಷ್ಟು ಸತ್ಯವೋ ನಾ ಕಾಣೆ.

ಅಂದ ಹಾಗೆ ಇವತ್ತು ರಾತ್ರಿ ನಾನು ಗೆದ್ದಲು ಹುಳುಗಳ ಕಥೆ ಹೇಳಬೇಕಂತೆ. ಅದು ನನ್ನ ಹೋಮ್ ವರ್ಕ್ ಅಂತೆ!


ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ
.
         ಬೆಂಗಳೂರು ನಗರ ಜಿಲ್ಲೆ
.

Spread the love
error: Content is protected.