ನವರಂಗಿ ಹಕ್ಕಿಯ ಕಣ್ತುಂಬಿಕೊಂಡ ಕ್ಷಣ

ನವರಂಗಿ ಹಕ್ಕಿಯ ಕಣ್ತುಂಬಿಕೊಂಡ ಕ್ಷಣ

© ಅಂಕುಶ ನಿರ್ಮಲ್ಕರ್

ಚಳಿಗಾಲ ಪ್ರಾರಂಭವಾಗುತ್ತಿದಂತೆ ದೇಶ-ವಿದೇಶಗಳಿಂದ ವಿವಿಧ ಪ್ರಭೇದದ ಹಕ್ಕಿಗಳು ದಕ್ಷಿಣ ಭಾರತಕ್ಕೆ ವಲಸೆ ಬರುವುದು ಎಲ್ಲರಿಗೂ ತಿಳಿದೇ ಇದೆ. ಹೀಗೆ ಹಿಮಾಲಯದ ಚಳಿಯನ್ನು ಸಹಿಸದೆ ದಕ್ಷಿಣ ಭಾರತ ಬೆಚ್ಚಗಿನ ಕಾಡು-ಮೇಡುಗಳನ್ನು ಅರಸಿ ವಲಸೆ ಬರವ ಅಪರೂಪದ ಅತಿಥಿಗಳಲ್ಲಿ ನವರಂಗಿಯೂ ಒಂದು.

ಇಂಡಿಯನ್ ಪಿಟ್ಟಾ (Indian Pitta) ಎಂದು ಇಂಗ್ಲಿಷಿನಲ್ಲಿ ಕರೆಯಲ್ಪಡುವ ಇದು, ಪಿಟ್ಟ ಬ್ರಾಚಿಯುರಾ (Pitta brachyura) ವರ್ಗಕ್ಕೆ ಸೇರಿದೆ. ಗೋಲಾಕಾರದ ದೇಹ ಹಾಗೂ ಗಾತ್ರದಲ್ಲಿ ಮೈನಾ ಹಕ್ಕಿಯನ್ನು ಹೋಲುತ್ತದೆ. ಬೆನ್ನಮೇಲೆ ಹಸಿರು, ನೀಲಿ, ಕಂದು, ಕಪ್ಪು ವರ್ಣ ಇದರದ್ದಾಗಿದೆ. ತಳಭಾಗದಲ್ಲಿ ಹಳದಿ, ಕೆಂಪು, ಕಿತ್ತಳೆ ವರ್ಣ ಹೊಂದಿದ್ದರೆ, ಕತ್ತು ಬಿಳಿಯಾಗಿದೆ. ಕಣ್ಣ ಬಳಿ ಕಪ್ಪುರೇಖೆ ಇದೆ. ಕಾಲು ಗುಲಾಬಿ ವರ್ಣವಿದೆ ಹಾರುವಾಗ ರೆಕ್ಕೆಯ ಬಿಳಿ ಪಟ್ಟೆ ಪ್ರಧಾನವಾಗಿ ಕಾಣುತ್ತದೆ. ಬರೊಬ್ಬರಿ ಒಂಬತ್ತು ಬಣ್ಣಗಳನ್ನು ಹೊತ್ತು ಗುಂಡು ಗುಂಡಾಗಿರುವ ಇದನ್ನು ಕನ್ನಡದಲ್ಲಿ ನವರಂಗಿ ಎಂದು ಕರೆಯುತ್ತಾರೆ.

ರಂಗು ರಂಗಿನ ಇದರ ಮನಮೋಹಕ ರೂಪವನ್ನು ನೋಡುವುದು ಅದೃಷ್ಟವೇ ಸರಿ. ಸುಮಾರು ಎರಡು-ಮೂರು ವರ್ಷಗಳಿಂದ ಪಕ್ಷಿವೀಕ್ಷಣೆಯಲ್ಲಿ ತೋಡಗಿಕೊಂಡಿರುವ ನಾನು, ಇದನ್ನು ಚಳಿಗಾಲದ ಬೆಳಗಿನ ನಸುಕಿನಲ್ಲಿ ಹಾಗು ಸಂಜೆಯಲ್ಲಿ “ವೀಟ್ವೀ” ಎಂದು ಅಲಾರಾಮಿನಂತೆ ಮೆಲುದನಿಯಲ್ಲಿ ಕೂಗುವುದನ್ನು ಸಾಮಾನ್ಯವಾಗಿ ಕೇಳಿಸಿಕೊಳ್ಳುತ್ತಿದ್ದೆ. ಹಲವು ಬಾರಿ ಸಂಜೆಯ ನಸುಗತ್ತಲಿನಲ್ಲಿ ಕಂಡದ್ದು ಇದೆ. ಆದರೆ ಬೆಳಕಿನಲ್ಲಿ ಇದನ್ನು ಕಣ್ತುಂಬಿಕೊಳ್ಳಬೇಕು ಎಂದು ತುಂಬಾ ದಿನಗಳಿಂದ ಕಾಯುತ್ತಾ ಇದ್ದೆ.

© ಅಂಕುಶ ನಿರ್ಮಲ್ಕರ್

ದಕ್ಷಿಣ ಭಾರತದ ಕಾಡುಗಳಲ್ಲಿ ಇದು ಗೂಡು ಮಾಡುವುದು ಬಹು ಅಪರೂಪ. ಹಿಮಾಲಯದಲ್ಲಿ ಮೇ ಯಿಂದ ಆಗಸ್ಟ್ ವರೆಗೆ ಹುಲ್ಲಗಳನ್ನೂ, ಕಡ್ಡಿಗಳನ್ನೂ ಒಟ್ಟು ಮಾಡಿ ಸಾಧಾರಣ ಎತ್ತರದ ಮರಗಳ ಕವೆಗಳ ನಡುವೆ ಬಟ್ಟಲಿನಾಕಾರದ ಗೂಡು ಮಾಡುತ್ತವೆ. ನೆಲ ಕೆದಕುತ್ತಾ, ತರಗೆಲೆಗಳನ್ನು ಎತ್ತಿಹಾಕುತ್ತಾ ಹುಳು ಹುಪ್ಪಟೆಗಳನ್ನು ಹಿಡಿದು ತಿನ್ನುತ್ತದೆ.

ಈ ಹಕ್ಕಿ ದಟ್ಟ ಮರಗಳಿರುವೆಡೆ ತಂಪಾದ ಹನಾಲುಗಳಲ್ಲಿರುತ್ತದೆ. ಸಾಧಾರಣವಾಗಿ ನೆಲದ ಮೇಲೆ ಕುಪ್ಪಳಿಸಿ ಕುಪ್ಪಳಿಸಿ ಚೋಟುದ್ದದ ಬಾಲವನ್ನು ಲಯಬದ್ಧವಾಗಿ ಎತ್ತಿ ಎತ್ತಿ ಕುಣಿಸುತ್ತ ಓಡಾಡುತ್ತದೆ. ಮರಗಳ ಕೊಂಬೆಗಳಲ್ಲಿ ಕೂರುವುದು ಅಪರೂಪ. ಮೊನ್ನೆ Nature’s own nest ಎಂದು ಕರೆಯಲ್ಪಡುವ ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ಬೆಂಗಳೂರಿನ ಆವರಣದ ಕುರುಚಲು ಕಾಡಿನಲ್ಲಿ ಮಧ್ಯಾಹ್ನದ ಹೊತ್ತು ಪಕ್ಷಿವೀಕ್ಷಣೆ ಮಾಡುವಾಗ ಆಶ್ಚರ್ಯ ಎನ್ನುವಂತೆ ನನ್ನ ಮುಂದೆ ಇರುವ ಮರದ ಕೊಂಬೆ ಮೇಲೆ ಮುದ್ದಾದ ನವರಂಗಿ ಬಂದು ಕುಳಿತಿಕೊಂಡು ಪೋಸ್ ಕೊಡಲು ಪ್ರಾರಂಭಿಸಿತ್ತು.

ನನಗೆ ತಿಳಿಯದೇ ಗಮನವೆಲ್ಲ ಅದರ ಮೇಲೆ ಹರಿಸಿ ಜಗದ ಜಂಜಾಟವನ್ನೆಲ್ಲಾ ಮರೆತಂತವನಾಗಿ, ಉಸಿರನ್ನು ಒಳಗೆ ಎಳೆದು ಅದರ ಸೌಂದರ್ಯವನ್ನು ಕಣ್ತುಂಬಿಕೊಂಡು, ನಂತರ ನನ್ನ ಕ್ಯಾಮೆರಾ ತೆಗೆದು ಒಂದಷ್ಟು ಫೋಟೋ ಕ್ಲಿಕ್ಕಿಸಿ ನಿಟ್ಟುಸಿರು ಬಿಟ್ಟೆ. ಧ್ಯಾನ ಅಂದರೆ ಇದೆ ಇರಬೇಕು ಅನ್ನಿಸಿತ್ತು. ವರ್ಷಗಳಿಂದ ಈ ಕ್ಷಣಕ್ಕಾಗಿಯೇ ಕಾಯುತ್ತಾ ಇದ್ದೆ!

© ಅಂಕುಶ ನಿರ್ಮಲ್ಕರ್

ಲೇಖನ: ಅಂಕುಶ ನಿರ್ಮಲ್ಕರ್
 ಗುಲ್ಬರ್ಗಾ ಜಿಲ್ಲೆ        

Print Friendly, PDF & Email
Spread the love
error: Content is protected.