ಪ್ರಕೃತಿ ಬಿಂಬ

ಕಪ್ಪು ಕುತ್ತಿಗೆಯ ಮೊಲ © ಸನತ್ ಶಾನುಭೋಗ
ಭಾರತದೆಲ್ಲೆಡೆ ಕಂಡುಬರುವ ಈ ಮೊಲವು, ಪೊದೆ ಮತ್ತು ಗುಡ್ಡಗಾಡು ಪ್ರದೇಶಗಳು, ವಿಶೇಷವಾಗಿ ಬೆಟ್ಟಗಳ ತಳದಲ್ಲಿರುವ ತಗ್ಗುಗಳಲ್ಲಿ ವಾಸಿಸುತ್ತದೆ. ಲೆಪೋರಿಡೇ (leporidae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ಲೆಪಸ್ ನಿಗ್ರಿಕೊಲಿಸ್ (Lepus nigricollis) ಎಂದು ಕರೆಯಲಾಗುತ್ತದೆ. ಎಲ್ಲಾ ಮೊಲಗಳಂತೆ, ಇವು ಉದ್ದವಾದ ಕಿವಿಗಳು ಮತ್ತು ದೊಡ್ಡ ಹಿಂಗಾಲುಗಳನ್ನು ಹೊಂದಿರುತ್ತವೆ. ಕತ್ತಿನ ತುದಿಯಲ್ಲಿ ಕಪ್ಪು ತುಪ್ಪಳದ ಮಚ್ಚೆಯನ್ನು ಹೊಂದಿರುತ್ತದೆ ಹಾಗೂ ಬಾಲದ ಮೇಲ್ಭಾಗವು ಕಪ್ಪಾಗಿದ್ದು, ಬೆನ್ನು ಮತ್ತು ಮುಖವು ಕಂದು ಬಣ್ಣದ್ದಾಗಿರುತ್ತದೆ. ಅಲ್ಲಲ್ಲಿ ಕಪ್ಪು ಕೂದಲುಗಳಿದ್ದು, ದೇಹದ ಕೆಳಭಾಗವು ಬಿಳಿಯಾಗಿರುತ್ತದೆ. ರಾತ್ರಿ ವೇಳೆ ಸಕ್ರಿಯವಾಗಿರುವ ಈ ಮೊಲವು ಸಸ್ಯಾಹಾರಿಯಾಗಿದೆ. ಇದು ಸಣ್ಣ ಹುಲ್ಲುಗಳು, ಹೂಬಿಡುವ ಸಸ್ಯಗಳು, ಮೊಳಕೆಯೊಡೆಯುವ ಬೀಜಗಳು ಮತ್ತು ಬೆಳೆಗಳನ್ನು ತಿನ್ನುತ್ತದೆ.

ಭಾರತೀಯ ಉಪಖಂಡ, ದಕ್ಷಿಣ ಮತ್ತು ಆಗ್ನೇಯ ಏಷ್ಯಾ, ಶ್ರೀಲಂಕಾ ಮತ್ತು ದಕ್ಷಿಣ ಚೀನಾಕ್ಕೆ ಸ್ಥಳೀಯವಾಗಿರುವ ಈ ಕಾಡು ಬೆಕ್ಕು, ದಟ್ಟವಾದ ಮರ ಗಿಡಗಳನ್ನು ಹೊಂದಿರುವ ಸಮುದ್ರ ಮತ್ತು ನದಿತೀರಗಳಂತಹ ಜೌಗು ಪ್ರದೇಶಗಳಲ್ಲಿ ವಾಸಿಸುತ್ತದೆ. ಫೆಲಿಡೆ (Felidae) ಕುಟುಂಬಕ್ಕೆ ಸೇರುವ ಈ ಬೆಕ್ಕನ್ನು ವೈಜ್ಞಾನಿಕವಾಗಿ ಫೆಲಿಸ್ ಚೌಸ್ (Felis chaus) ಎಂದು ಕರೆಯಲಾಗುತ್ತದೆ. ಈ ಮಧ್ಯಮ ಗಾತ್ರದ ಬೆಕ್ಕಿನ ತುಪ್ಪಳವು ಮರಳಿನ ಹಳದಿ, ಕೆಂಪು ಮಿಶ್ರಿತ ಕಂದು ಅಥವಾ ಬೂದು ಬಣ್ಣದ್ದಾಗಿರುತ್ತದೆ. ಕಾಲುಗಳ ಮೇಲೆ ತಿಳಿ ಕಂದು ಬಣ್ಣದ ಪಟ್ಟೆಗಳನ್ನು ಹೊಂದಿದ್ದು, ಕಪ್ಪು ಬಣ್ಣದ ಕೂದಲಿನಿಂದ ಕೂಡಿದ ದುಂಡಗಿನ ಕಿವಿಗಳನ್ನು ಹೊಂದಿರುತ್ತದೆ. ಬೇಟೆಯನ್ನು ಬೆಳಗಿನ ಸಮಯದಲ್ಲಿ ಹೆಚ್ಚಾಗಿ ಮಾಡುವ ಈ ಬೆಕ್ಕು ಉತ್ತಮ ಈಜುಗಾರನಾಗಿದೆ. ತನ್ನ ಬಾಯನ್ನು ಬಳಸಿ ಮೀನುಗಳನ್ನು ಹಿಡಿಯಲು ಮತ್ತು ಅಪಾಯದಿಂದ ಪಾರಾಗಲು ನೀರಿಗೆ ಧುಮುಕುತ್ತದೆ.

ವಾಯುವ್ಯ ಭಾರತೀಯ ಉಪಖಂಡ, ಪಾಕಿಸ್ತಾನದ ಮರುಭೂಮಿ ಜಿಲ್ಲೆಗಳು, ಬಲೂಚಿಸ್ತಾನ್, ದಕ್ಷಿಣ ಇರಾನ್ ಮತ್ತು ಇರಾಕ್‌ನಲ್ಲಿ ವ್ಯಾಪಕವಾಗಿ ಕಂಡುಬರುವ ಈ ನರಿಯು, ಮರಳು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಕ್ಯಾನಿಡೇ (Canidae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ವಲ್ಪೆಸ್ ವಲ್ಪೆಸ್ ಪುಸಿಲ್ಲಾ (Vulpes vulpes pusilla) ಎಂದು ಕರೆಯಲಾಗುತ್ತದೆ. ಉದ್ದ ಮತ್ತು ತೆಳುವಾದ ದೇಹ ಹಾಗೂ ಪ್ರತ್ಯೇಕವಾದ ಬಿಳಿ ತುದಿಯನ್ನು ಹೊಂದಿರುವ ಬಾಲದಿಂದ ಇದನ್ನು ಗುರುತಿಸಬಹುದಾಗಿದೆ. ಸಾಮಾನ್ಯವಾಗಿ ಮರುಭೂಮಿಯಲ್ಲಿ ಕಂಡುಬರುವ ಇಲಿಗಳು, ಮೊಲಗಳು ಹಾಗೂ ವಿವಿಧ ಸಸ್ಯಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ.

ಪಶ್ಚಿಮ ಘಟ್ಟಗಳಲ್ಲಿ ಮತ್ತು ಶ್ರೀಲಂಕಾದಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಮುಂಗುಸಿಗಳು ಕಾಡು ಹಾಗೂ ಸಸ್ಯಗಳ ಪೊದೆಗಳಿರುವೆಡೆ ವಾಸಿಸುತ್ತವೆ. ಹರ್ಪೆಸ್ಟಿಡೆ (Herpestidae) ಕುಟುಂಬಕ್ಕೆ ಸೇರುವ ಇವನ್ನು ವೈಜ್ಞಾನಿಕವಾಗಿ ಉರ್ವ ವಿಟ್ಟಿಕೋಲ (Urva vitticolla) ಎಂದು ಕರೆಯಲಾಗುತ್ತದೆ. ಚಿಕ್ಕ ಕಾಲುಗಳಿದ್ದು, ಕಂದು ಅಥವಾ ಬೂದು ಬಣ್ಣದ ತುಪ್ಪಳವನ್ನು ಹೊಂದಿರುತ್ತವೆ. ಕುತ್ತಿಗೆಯ ಎರಡೂ ಬದಿಗಳಲ್ಲಿ ಕಪ್ಪು ಪಟ್ಟಿಯಿದ್ದು, ತಳದಲ್ಲಿ ಬೂದು ಬಣ್ಣ ಇರುವ ಚಿಕ್ಕದಾದ ಕಪ್ಪು ಬಾಲವನ್ನು ಹೊಂದಿರುತ್ತವೆ. ಕಪ್ಪೆಗಳು, ಏಡಿಗಳು, ಇಲಿಗಳು, ಕಪ್ಪು ಮೊಲಗಳು, ಕೋಳಿಗಳು ಮತ್ತು ಇತರೆ ಸರೀಸೃಪಗಳು ಇದರ ಆಹಾರವಾಗಿದೆ.
ಚಿತ್ರಗಳು : ಸನತ್ ಶಾನುಭೋಗ
ಲೇಖನ : ದೀಪ್ತಿ ಎನ್.