ಕಾಡ್ಗಿಚ್ಚಿನ ನಡುವೆ
©ಮಹದೇವ ಕೆ. ಸಿ.
ನಾನು ನಾಗರಹೊಳೆಯಲ್ಲಿ ಅರಣ್ಯ ರಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲವದು. ಬೇಸಿಗೆಯ ಸಮಯದಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಿಸುವ ಕಾಲದಲ್ಲಿ ನಡೆದ ಘಟನೆ.
ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಜನವರಿ ತಿಂಗಳ ಆರಂಭದಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಿಸುವ ಕೆಲಸಕ್ಕೆ ಹತ್ತಿರದ ಆಡಿಗಳ (ಕಾಡಿನ ನಡುವೆ ಇರುವ ಸಣ್ಣ ಹಳ್ಳಿ) ಐದು ಜನ ಕಾಡುಕುರುಬರನ್ನು ತೆಗೆದುಕೊಂಡು ಅವರೊಂದಿಗೆ ಏಪ್ರಿಲ್ ಮಧ್ಯಭಾಗದವರೆಗೂ (ಮಳೆ ಬರುವವರೆಗೂ) ಕಾಡನ್ನು ಬೆಂಕಿಯಿಂದ ರಕ್ಷಿಸುವ ಹೊಣೆ ನಮ್ಮ ಮೇಲೆ ಇತ್ತು.
ಅದರಂತೆ ಜನವರಿ ಒಂದನೇ ತಾರೀಕಿನಂದು ಐದು ಜನ ನನ್ನನ್ನು ಸಂಪರ್ಕಿಸಿ ತಾವು ಬರುವುದಾಗಿ ತಿಳಿಸಿದರು. ಅವರಲ್ಲಿ ಒಬ್ಬ ಗುರುವ ಅಂತ (ಹೆಸರು ಬದಲಿಸಲಾಗಿದೆ), ಅವನು ಒಬ್ಬ ಅನಾಥ, ಈ ಹಿಂದೆ ಅರಣ್ಯ ಇಲಾಖೆ ಕೆಲಸ ಮಾಡಿದವನು. ಅವರ ಕೆಲಸ ಗಸ್ತಿನ ಪ್ರಮುಖ ಪ್ರದೇಶದಲ್ಲಿನ ಯಾವುದಾದರೂ ಒಂದು ಎತ್ತರದ ಮರವನ್ನು ಹುಡುಕಿ ಅದಕ್ಕೆ ಅಟ್ಟಣಿಗೆ ಕಟ್ಟಿ, ಆ ಅಟ್ಟಣಿಗೆಯಲ್ಲಿ ಕುಳಿತು ಸುತ್ತಲೂ ಸೂಕ್ಷ್ಮವಾಗಿ ಗಮನಿಸಿ ಎಲ್ಲಾದರೂ ಹೊಗೆಯಾಡಿದರೆ ಆ ಪ್ರದೇಶದ ಎಲ್ಲಾ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಅವರಿಗೆ ನೀಡಿದ್ದ ವಾಕಿಟಾಕಿಗಳ ಮೂಲಕ ಎಚ್ಚರಿಸುವುದಾಗಿತ್ತು. ನಾವು ಉಳಿದ ಫೈರ್ ವಾಚರ್ ಮತ್ತು ಕ್ಯಾಂಪ್ ಸಿಬ್ಬಂದಿಗಳನ್ನು ಎರಡು ತಂಡಗಳನ್ನಾಗಿ ವಿಂಗಡಿಸಿಕೊಂಡು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುತ್ತ, ಮಧ್ಯಾಹ್ನ ಫೈರ್ ವಾಚ್ ಟವರ್ ಹತ್ತಿರವೇ ಊಟ ಮಾಡಿ ಸಾಯಂಕಾಲ ಸೂರ್ಯಸ್ತ ಆದ ಮೇಲೆ ಕ್ಯಾಂಪಿಗೆ ಹಿಂದಿರುಗುತ್ತಿದ್ದೆವು.
ಯೋಜನೆಗಳಂತೆ ಎಲ್ಲಾ ಕೆಲಸವು ಸುಸೂತ್ರವಾಗಿ ನಡೆಯುತ್ತಿತ್ತು. ಒಂದು ದಿನ ಬೆಳಗ್ಗೆ ಗುರುವನು ನನ್ನ ಬಳಿ ಬಂದು ‘ಸರ್… ಇವತ್ತು ನಾನು ಅಟ್ಟಣಿಗೆ ಮೇಲೆ ಕುಂದ್ರುತೀನಿ’ ಎಂದ. ನಾನು ‘ಬೇಡ ಅವ್ರು ಇದಾರೆ ಸಾಕು’ ಎಂದೆ. ಹಠಬಿಡದ ಅವನು ‘ಸರ್…, ಇವತ್ತು ಒಂದು ಸಾರಿ’ ಎಂದು ಗೋಗರೆದ. ಅದಕ್ಕೆ ನಾನು ‘ಆಯ್ತು…’ ಎಂದು ಸಮ್ಮತಿಸಿದೆ. ಮಧ್ಯಾಹ್ನ ಊಟದ ಸಮಯವಾಯ್ತು ಎಲ್ಲರೂ ನಿಗದಿತ ಸ್ಥಳಕ್ಕೆ ಊಟಕ್ಕೆ ಬಂದರು, ಆದರೆ ಈ ಗುರುವ ಮಾತ್ರ ಬಂದಿರಲಿಲ್ಲ. ನಾನು ಎಲ್ಲಿ ಅವನು ಎಂದು ಕೇಳಿದ್ದಕ್ಕೆ, ಕೆಳಗೆ ಊಟಕ್ಕೆ ಬಂದ ಅವನ ಜೊತೆಗಾರರು ‘ಸರ್ ಅವ್ನು ಕುಡಿದು ಮಲಗಿದಾನೆ, ಅಲ್ಲೇ ಊಟ ಒಯ್ಯುತ್ತೇವೆ.’ ಎಂದರು. ಗುರುವ ಹಠಹಿಡಿದು ಅಟ್ಟಣಿಗೆ ಏರಿದ ಗುಟ್ಟು ಈಗ ತಿಳಿಯಿತು. ನಶೆ ಇಳಿದಾದ ಮೇಲೆಯೇ ಬರಲಿ ಅವನು ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ‘ಸರಿ ಅಲ್ಲಿಗೆ ಊಟ ತಗೊಂಡ್ ಹೋಗಿ ಕೊಡಿ’ ಎಂದು ಅವರಿಗೆ ಹೇಳಿ ನಾವೆಲ್ಲೇರು ನಮ್ಮ ನಮ್ಮ ಕೆಲಸಗಳ ಕಡೆ ಹೊರಟೆವು. ಸಂಜೆ ಗುರುವನನ್ನು ಬಿಟ್ಟು ಎಲ್ಲರೂ ಅಟ್ಟಣಿಗೆಯಿಂದ ಕೆಳ ಬಂದರು, ಅವನ ಬಗ್ಗೆ ವಿಚಾರಿಸಿದಾಗ ‘ಅವನಿಗೆ ಇನ್ನೂ ನಶೆ ಇಳಿದಿಲ್ಲ ಸರ್, ಆಮೇಲೆ ವಾಪಾಸ್ ಬಂದು ಕರ್ಕೊಂಡು ಹೋಗ್ತಿವಿ’ ಎಂದೇಳಿ ಹೊರಟರು. ಒಬ್ಬೊಬ್ಬರನ್ನೇ ಬಿಟ್ಟು ಹೋಗುವುದು ಅವರಿಗೆ ಸರ್ವೇ ಸಾಮಾನ್ಯ ಎಂದು ತಿಳಿದಿದ್ದ ನಾನು ‘ಸರಿ ಆಗಲಿ’ ಎಂದು ನಾನು ಕ್ಯಾಂಪಿಗೆ ಬಂದೆ.
ಕಾಡಿನ ಮಧ್ಯದಲ್ಲಿನ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ವಾಸಿಸುವ ಎಲ್ಲಾ ಅರಣ್ಯ ಇಲಾಖೆಯವರಂತೆ ನಾವು ಸಹ ನಮಗೆ ಬೇಕಾದ ಅಡುಗೆಯನ್ನು ನಾವೇ ಸಿದ್ಧಪಡಿಸಿಕೊಳ್ಳಬೇಕಿದ್ದ ಕಾರಣ ಆದಷ್ಟು ಬೇಗ ಅಡುಗೆ ಮಾಡಿದರೆ ಒಳಿತು ಎಂದು ನಾನು ನಮ್ಮ ಕ್ಯಾಂಪಿಗೆ ಬಂದವನೆ ನೀರು ತಂದು ಪಾತ್ರೆ ತೊಳೀತಾ ಇದ್ದೆ. ಕತ್ತಲು ಸುತ್ತಲೂ ಆವರಿಸುತ್ತಿತ್ತು. ದೂರದಲ್ಲಿ ಯಾರೋ ಇಬ್ರು ನಮ್ಮ ರೂಮಿನ ಕಡೆ ನಡೆದು ಬರುತ್ತಿದುದು ಕಾಣಿಸಿತು. ಇಷ್ಟೊತ್ತಲ್ಲಿ ಯಾರಿರಬಹುದು ಎಂದು ನೋಡಿದ್ರೆ ಅವ್ರೆ ಫೈರ್ ವಾಚರ್ಸ್! ಕಂಠಮಟ್ಟ ಕುಡಿದು ನಿಲ್ಲೋಕು ಸಹ ಆಗ್ದೇ ಬಂದು ನನ್ನ ಮುಂದೆ ನಿಂತರು. ನಾನು ‘ಏನು ಇಷ್ಟೋತ್ತಲ್ಲಿ?’ ಅಂತ ಕೇಳ್ದೆ. ‘ಎಲ್ಲಿ ಸರ್ ಗುರುವ?’ ಅಂದ್ರು… ನನಗೆ ಪರಮಾಶ್ಚರ್ಯ ಇವರೇ ಆಮೇಲೆ ಬಂದು ಕರ್ಕೊಂಡ್ ಹೋಗ್ತಿವಿ ಅಂತ ಹೇಳಿ ಈಗ ನನ್ನನ್ನೇ ಕೇಳುತ್ತಿದ್ದಾರಲ್ಲ! ‘ನೀವೇ ಹೇಳಿದ್ರಲ್ಲ ವಾಪಾಸ್ ಬಂದು ಕರ್ಕೊಂಡು ಹೋಗ್ತಿವಿ ಅಂತ, ಈಗ ನೋಡುದ್ರೆ ನನ್ನ ಕೇಳ್ತಾ ಇದ್ದೀರಾ?’ ಅಂದೆ. ‘ನಿಮ್ಮ ಹತ್ತಿರ ಕೆಲಸಕ್ಕೆ ಬಂದರೆ ಅವನು ನಿಮ್ಮ ಜವಾಬ್ಧಾರಿ ಸರ್, ಅವನನ್ನು ನಮ್ಮ ಆಡಿಯವರು ಆಡಿಯ ಮಗನಂತೆ ಸಾಕಿದ್ದಾರೆ, ಏನಾದ್ರು ಹೆಚ್ಚು ಕಡಿಮೆ ಆದ್ರೆ ನೋಡಿ ಸುಮ್ಮನಿರಲ್ಲ’ ಎಂದು ಧಮ್ಕಿ ಹಾಕಿದರು. ನನಗೆ ಏನು ಉತ್ತರಿಸಬೇಕೆಂದು ಹೊಳೆಯದೆ ಸ್ತಬ್ಧನಾದೆ. ಆದರೂ ‘ಅಲ್ರೋ ಕರ್ಕೊಂಡು ಹೋಗ್ತಿವಿ ಅಂತ ಹೇಳಿ ಈಗ ನೀವೇ ಕುಡ್ಕೊಂಡು ಬಂದು ಗಲಾಟೆ ಮಾಡ್ತಾ ಇದೀರ, ಏನು ಆಟ ಆಡ್ತಿದಿರಾ ನನ್ನತ್ರ.’ ಎಂದು ಗದರಿದೆ. ಸ್ವಲ್ಪ ಮಾತು ನಿಲ್ಲಿಸಿದ ಅವರನ್ನು ಕರೆದುಕೊಂಡು ಮರದ ಮೇಲಿರುವ ಅವನ ಕಥೆ ಏನಾಯ್ತೋ ಎಂದು ಭಯದಲ್ಲಿ ಎಲ್ಲರೂ ಅಟ್ಟಣಿಗೆ ಹಾಕಿದ್ದ ಮರದ ಬಳಿ ಸಾಗಿದೆವು. ಅಲ್ಲಿ ಮರದ ಸುತ್ತಲೂ ಟಾರ್ಚಿನ ಸಹಾಯದಿಂದ ಹುಡುಕಿದೆವು, ಕೂಗಿದೆವು ಪತ್ತೆಯಿಲ್ಲ, ಕೊನೆಗೆ ಒಬ್ಬ ಮರವೇರಿ ಅಟ್ಟಣಿಗೆಯಲ್ಲಿ ನೋಡಿದಾಗ ತಿಳಿಯಿತು ಅವನು ನಶೆಯಲ್ಲೇ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂದು. ಇದನ್ನೆಲ್ಲಾ ಮುಂಚೆಯೇ ತಿಳಿದಿದ್ದ ಅವನ ಜೊತೆಗಾರರು ಅವನು ಕೆಳಗೆ ಬೀಳಬಾರದೆಂದು ನಡುವಿಗೆ ಮತ್ತು ಅಟ್ಟಣಿಗೆಗೆ ಬಟ್ಟೆಯಿಂದ ಬಿಗಿದು ಬಂದಿದ್ದಾರೆ ಆದರೂ ನಮಗೆ ಏನೂ ತಿಳಿದಿಲ್ಲ ಎಂಬಂತೆ ನಟಿಸುತ್ತಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಯ ಕ್ವಾಟ್ರಸ್ನಲ್ಲಿ ಉಳಿದಿದ್ದ ಮಾಜಿ ಸೈನಿಕರಾದ ನನ್ನ ಸಹ ಕೆಲಸಗಾರರಿಗೆ ಈ ವಿಷಯ ತಿಳಿಸಿ ಹಗ್ಗವನ್ನು ತೆಗೆದುಕೊಂಡು ಬರಲಾಯಿತು. ಇವರು ಇದ್ದ ಸ್ಥಿತಿಯಲ್ಲಿ ಖಂಡಿತವಾಗಿಯೂ ಅವನನ್ನು ಇವರ ಸಹಾಯದಿಂದ ಮೆಟ್ಟಿಲುಗಳ ಮೂಲಕ ಕೆಳಗಿಳಿಸಲು ಅಸಾಧ್ಯ ಎಂದು ತಿಳಿದ ಆ ಮಾಜಿ ಸೈನಿಕರು, ಇಬ್ಬರನ್ನು ಕರೆದುಕೊಂಡು ಮೇಲೆ ಹೋಗಿ ಹಗ್ಗದ ಸಹಾಯದಿಂದ ಆ ಗುರುವನನ್ನು ಕೆಳಗೆ ಇಳಿಸಿದರು. ಅವನಿಗಂತೂ ಸ್ವಲ್ಪವೂ ಪ್ರಜ್ಞೆಯೇ ಇರಲಿಲ್ಲ. ನನಗೆ ಅವನ ಸ್ಥಿತಿಯನ್ನು ನೋಡಿ ಕೈ ಕಾಲು ಅಲುಗಾಡಲು ಶುರುವಾಯಿತು.
ಇಷ್ಟೆಲ್ಲಾ ನಡೆಯುವಷ್ಟರಲ್ಲಿ ತಡ ರಾತ್ರಿಯಾಗಿದ್ದರಿಂದ 5 ಕಿಲೋ ಮೀಟರ್ ದೂರವಿರುವ ಇವರ ಆಡಿಗೆ ಗುರುವನನ್ನು ಆನೆಗಳ ಕಾಟದಲ್ಲಿ ಹೇಗೆ ಕಳುಹಿಸುವುದು ಎಂದು ಯೋಚಿಸಿ ಈ ರಾತ್ರಿ ನಮ್ಮ ಕ್ಯಾಂಪಿನಲ್ಲಿ ಉಳಿಸಿಕೊಂಡು ಬೆಳಗ್ಗೆ ಕಳಿಸಿದರಾಯಿತು ಎಂದು ತೀರ್ಮಾನಿಸಿದೆ. ಅವನನ್ನು ಇವರಿಬ್ಬರು ತಮ್ಮ ಹೆಗಲ ಮೇಲೆ ಹೊತ್ತು ಕುಡಿತದ ಅಮಲಿನಲ್ಲಿ ತೇಲಾಡುತ್ತಾ ನಮ್ಮ ರೂಮ್ ಮುಟ್ಟಬೇಕಾದರೆ ಹರಸಾಹಸ ಪಟ್ಟರು. ಅವನನ್ನು ನಮ್ಮ ಕ್ಯಾಂಪ್ ರೂಮಿನ ಒಂದು ಮೂಲೆಯಲ್ಲಿ ಮಲಗಿಸಿದೆವು. ಅವರು ‘ಅವನನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಲು ಹಣ ಕೊಡಿ’ ಎಂದರು. ಇವರ ಈ ಸ್ಥಿತಿಯನ್ನು ಕಂಡ ನಾನು ‘ಬೆಳಗ್ಗೆ ಬನ್ನಿ ಕೊಡ್ತೀನಿ’ ಅಂದೆ. ಅವರು ಅದಕ್ಕೆ ಸುತಾರಾಂ ಒಪ್ಪದೆ ಗಲಾಟೆ ಶುರು ಮಾಡಿದ ಕಾರಣ ವಿಧಿಯಿಲ್ಲದೆ ಸ್ವಲ್ಪ ಹಣ ಕೊಟ್ಟು ಸಾಗಾಕಿದೆ.
ಗುರುವನ ಸಾರಾಯಿ ವಾಸನೆಯಿಂದ ನನಗೆ ಅಂದು ನಿದ್ರೆಯೇ ಬರಲಿಲ್ಲ, ಒಂದು ಹೊತ್ತಿನಲ್ಲಿ ನೀರು, ನೀರು ಎನ್ನುವ ಗುರುವನ ಕ್ಷೀಣ ಧ್ವನಿ ಕೇಳಿಸಿತು. ನಾನು ಅವನಿಗೆ ಒಂದು ಜಗ್ ನೀರು ಕೊಟ್ಟೆ, ಗಟಗಟನೆ ಒಂದು ತೊಟ್ಟು ಉಳಿಸದಂತೆ ಖಾಲಿ ಮಾಡಿದ್ದನ್ನು ನೋಡಿ ಆಶ್ಚರ್ಯನಾದೆ. ನಂತರ ಊಟ ಬೇಕೆಂದು ಕೈಸನ್ನೆ ಮಾಡಿದ, ಈ ಗದ್ದಲದಲ್ಲಿ ನಾನು ಅಡುಗೆಯನ್ನೇ ಮಾಡಿರಲಿಲ್ಲ, ಪುಣ್ಯಕ್ಕೆ ಬನ್ ಇತ್ತು, ನೀರು ಮತ್ತು ಬನ್ ಕೊಟ್ಟು ಮಲಗಿದೆ ತುಂಬಾ ಲೇಟಾಗಿ ಮಲಗಿದ್ದರಿಂದ ಸೂರ್ಯ ಹುಟ್ಟಿದ್ದೇ ಗೊತ್ತಾಗಲಿಲ್ಲ. ಎಚ್ಚರ ಆದ ತಕ್ಷಣ ಅವನ ಬಳಿ ಹೋಗಿ ನೋಡಿದ್ರೆ ಮಲಗಿದ್ದಲ್ಲಿಯೇ ಮೂತ್ರ ವಿಸರ್ಜನೆ ಮಾಡ್ಕೊಂಡು ನಡುಗುತ್ತ ಮಲಗಿದ್ದ. ಅವನನ್ನು ಎಬ್ಬಿಸಿ ಹೊರಗಡೆ ಸೂರ್ಯನ ಬಿಸಿಲಲ್ಲಿ ಕೂರಿಸಿದೆ, ನಂತರ ನಿನ್ನೆ ರಾತ್ರಿ ಬಂದಿದ್ದ ಇಬ್ಬರಿಗೂ ಫೋನ್ ಮಾಡಿದೆ, ಅವ್ರಿಗೆ ಆಸ್ಪತ್ರೆಗೆ ಕರ್ಕೊಂಡು ಹೋಗಲು ಹೇಳಿದೆ, ಬಂದವರು ಪುನಃ ದುಡ್ಡು ಕೇಳಿದ್ರು, ‘ನಿನ್ನೆ ರಾತ್ರಿ ಕೊಟ್ಟಿದ್ದು ಏನಾಯ್ತು?’ ಎಂದಿದ್ದಕ್ಕೆ ಅವರು, ‘ಅದು ನಮಗೆ ಸರಿ ಹೋಯ್ತು’ ಅಂದ್ರು. ಬೇಸತ್ತ ನಾನು ಇವರ ಸಹವಾಸವೇ ಬೇಡ ಎಂದೆಣಿಸಿ ಮತ್ತೊಮ್ಮೆ ದುಡ್ಡು ಕೊಟ್ಟು ಕಳುಹಿಸಿದೆ. ಪಕ್ಕದ ಎಸ್ಟೇ ಟಿನವರು ಈ ಸುದ್ದಿ ತಿಳಿದು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಬಿಟ್ಟು ಬಂದರು. ನಾನು ಅವನಿಗೆ ಏನು ಆಗದಿರಲೆಂದು ಮನಸ್ಸಿನಲ್ಲಿ ಬೇಡಿಕೊಳ್ತಾ ಅವನ ಬಗ್ಗೆ ವಿಚಾರಿಸ್ತಾ ಇದ್ದೆ, ಕ್ಯಾಂಪಿನ ಸಿಬ್ಬಂದಿಗಳು ಹೇಳಿದ್ರು ‘ಅವನಿಗೆ ಆಗಾಗ ಮೂರ್ಛೆ ರೋಗ ಬರ್ತಿತ್ತು’ ಅಂತ. ಈ ಹಿಂದೆ ಇದೇ ರೀತಿ ಎಂದಾದ್ರೂ ಆಗಿತ್ತ? ಎಂದೆ ಅದಕ್ಕೆ ಅವರು ಗೊತ್ತಿಲ್ಲ ಎಂದು ಸುಮ್ಮನಾದರು. 15 ದಿನಗಳ ನಂತರ ಮತ್ತೆ ಗುರುವ ಕೆಲಸ ಕೇಳುತ್ತಾ ಬಂದ. ಇವರ ನಾಟಕವನ್ನು ಕಂಡು ಬೇಸತ್ತಿದ್ದ ನಾನು ‘ದಯವಿಟ್ಟು ಬರಬೇಡ, ಹುಷಾರಾಗು ಎಂದು ಹೇಳಿ ಕಳುಹಿಸಿ ಬೇರೊಬ್ಬನನ್ನು ಕೆಲಸಕ್ಕೆ ತೆಗೆದುಕೊಂಡೆ.’
ಪ್ರತೀ ವರ್ಷ ಕಾಡ್ಗಿಚ್ಚಿನಿಂದ ಕಾಡನ್ನು ರಕ್ಷಿಸಿಕೊಳ್ಳುವುದು ಅರಣ್ಯ ಇಲಾಖೆಯವರಿಗೆ ಒಂದು ಯಾಗದ ರೀತಿಯೇ ಇರುತ್ತದೆ. ಅದರ ಮಧ್ಯದಲ್ಲಿ ಅನಿರೀಕ್ಷಿತವಾಗಿ ಬರುವ ಈ ರೀತಿಯ ಘಟನೆಗಳಿಗೂ ನಾವು ತಯಾರಿರಬೇಕು.
ಲೇಖನ: ಶಿವಕುಮಾರ್ ವಾಲಿ