ಪ್ರಕೃತಿ ಬಿಂಬ
ಬೂದು ಬಣ್ಣದ ಲಂಗೂರ್ © ಗುರುಪ್ರಸಾದ್ ಕೆ. ಆರ್.
ಭಾರತೀಯ ಉಪಖಂಡದಲ್ಲಿ, ಭೂತಾನ್ ಮತ್ತು ನೇಪಾಳದ ಉಷ್ಣವಲಯದ ಮಳೆಕಾಡುಗಳು, ಒಣ ಎಲೆಯುದುರುವ ಕಾಡುಗಳು, ತೋಪುಗಳು, ಉದ್ಯಾವನಗಳು ಮತ್ತು ಪೊದೆಗಳಲ್ಲಿ ಈ ಬೂದು ಬಣ್ಣದ ಲಂಗೂರ್ ಗಳು ಕಂಡುಬರುತ್ತವೆ.
ಸೆರ್ಕೊಪಿಥೆಸಿಡೆ (Cercopithecidae) ಕುಟುಂಬಕ್ಕೆ ಸೇರುವ ಈ ಸಸ್ತನಿಯನ್ನು ವೈಜ್ಞಾನಿಕವಾಗಿ ಸಿಮಿಯಾ ಎಂಟೆಲಸ್ (Simia entellus) ಎಂದು ಕರೆಯಲಾಗುತ್ತದೆ. ಬೂದು ಬಣ್ಣದ ತುಪ್ಪಳವಿದ್ದು, ಕಪ್ಪು ಮುಖಗಳು, ಕಿವಿಗಳು, ಬೆರಳುಗಳು ಮತ್ತು ಕಾಲ್ಬೆರಳುಗಳನ್ನು ಹೊಂದಿರುತ್ತವೆ. ಬಾಲವು ದೇಹಕ್ಕಿಂತ ಉದ್ದವಾಗಿದ್ದು, ಮರಗಳ ನಡುವೆ ಹಾರಲು ಸಹಾಯಕವಾಗುತ್ತದೆ. ಸಸ್ಯಾಹಾರಿಯಾದ ಇವುಗಳು ಎಲೆ, ಹಣ್ಣು, ಚಿಗುರು, ಬೇರು, ಹುಲ್ಲು, ಜರೀಗಿಡ, ಪಾಚಿ ಮತ್ತು ಕಲ್ಲುಹೂವುಗಳನ್ನು ಸೇವಿಸುತ್ತವೆ. ಜಿಂಕೆಗಳು ಈ ಲಂಗೂರ್ ಗಳು ಎಸೆಯುವ ಆಹಾರದ ಮೇಲೂ ಅವಲಂಬಿತವಾಗಿರುತ್ತವೆ. ಹಾಗಾಗಿ, ಇವೆರಡೂ ಪ್ರಾಣಿಗಳು ಪರಸ್ಪರ ಎಚ್ಚರಿಕೆ ಕರೆಗಳನ್ನು ನೀಡಿ ಪರಭಕ್ಷಕದಿಂದ ಪಾರಾಗುವುದು ವಿಶೇಷವಾಗಿದೆ.
ಭಾರತದಾದ್ಯಂತ ವ್ಯಾಪಕವಾಗಿ ಕಾಣಸಿಗುವ ಈ ನರಿಗಳು, ಹಿಮಾಲಯದ ತಪ್ಪಲಿನಿಂದ, ಪಶ್ಚಿಮ ಘಟ್ಟಗಳವರೆಗೆ ಒಣ ಎಲೆಯುದುರುವ ಕಾಡುಗಳು, ಅರೆ-ಶುಷ್ಕ ಪ್ರದೇಶಗಳು, ಕೃಷಿ ಭೂಮಿಗಳು ಮತ್ತು ಮಾನವರ ಆವಾಸಸ್ಥಾನಗಳಿರುವೆಡೆ ಕಂಡುಬರುತ್ತವೆ. ಕ್ಯಾನಿಡೇ (Canidae) ಕುಟುಂಬಕ್ಕೆ ಸೇರುವ ಇವನ್ನು ವೈಜ್ಞಾನಿಕವಾಗಿ ಕ್ಯಾನಿಸ್ ಔರೆಸ್ ಇಂಡಿಕಸ್ (Canis aureus indicus) ಎಂದು ಕರೆಯಲಾಗುತ್ತದೆ. ಸಣ್ಣ ಸಸ್ತನಿಗಳಾದ ಇವುಗಳಿಗೆ ಕಪ್ಪು ಮತ್ತು ಬಿಳಿ ಮಿಶ್ರಿತ ತುಪ್ಪಳವಿದ್ದು, ಬೆನ್ನು ಹಾಗೂ ಬಾಲದ ಮೇಲೆ ಕಪ್ಪು ಕೂದಲು ಪ್ರಧಾನವಾಗಿದೆ. ಹೊಟ್ಟೆ, ಎದೆ ಮತ್ತು ಕಾಲುಗಳ ಬದಿಗಳು ಬಿಳಿಯಾಗಿರುತ್ತವೆ. ಸಾಮಾನ್ಯವಾಗಿ ಸತ್ತ ಅಥವಾ ಕೊಳೆತ ಪ್ರಾಣಿಗಳನ್ನು ಸೇವಿಸುವ ಇವುಗಳು ಕೆಲವೊಮ್ಮೆ ಇಲಿಗಳು, ಸರೀಸೃಪಗಳು, ಹಣ್ಣುಗಳು ಮತ್ತು ಕೀಟಗಳನ್ನೂ ಸಹ ಸೇವಿಸುತ್ತವೆ. ಸಣ್ಣ ಗುಂಪುಗಳನ್ನು ರಚಿಸಿ ಜಿಂಕೆ ಮತ್ತು ಹುಲ್ಲೆಗಳನ್ನು ಬೇಟೆಯಾಡುವುದು ವಿಶೇಷವಾಗಿದೆ.
ಭಾರತಕ್ಕೆ ಸ್ಥಳೀಯವಾಗಿರುವ ಈ ಅಳಿಲುಗಳು ಎಲೆ ಉದುರುವ ಕಾಡುಗಳು, ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತವೆ. ಸ್ಕ್ಯೂರಿಡೆ (Sciuridae) ಕುಟುಂಬಕ್ಕೆ ಸೇರುವ ಈ ಸಸ್ತನಿಯನ್ನು ವೈಜ್ಞಾನಿಕವಾಗಿ ರಟುಫಾ ಇಂಡಿಕಾ (Ratufa indica) ಎಂದು ಕರೆಯಲಾಗುತ್ತದೆ. ಮೈಬಣ್ಣವು ಕಡು ಗೆಂಪು ಅಥವಾ ಬೂದು ಬಣ್ಣದ್ದಾಗಿದ್ದು, ಹೊಟ್ಟೆಯ ಮೇಲೆ ಮತ್ತು ತಳಭಾಗದಲ್ಲಿ ಬಿಳಿಯ ಮಚ್ಚೆಗಳನ್ನು ಹೊಂದಿರುತ್ತದೆ. ಬಲಿಷ್ಟ ಮತ್ತು ಉದ್ದನೆಯ ಬಾಲವನ್ನು ಹೊಂದಿದ್ದು, 6 ಮೀಟರ್ ಎತ್ತರಕ್ಕೆ ಜಿಗಿಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ನಾಚಿಕೆ ಸ್ವಭಾವದ ಈ ಜೀವಿಗಳು ಮರದ ರಂಧ್ರಗಳಲ್ಲಿ ಅಥವಾ ದೊಡ್ಡ ಗೋಳಾಕಾರದ ಗೂಡುಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ಹಣ್ಣುಗಳು, ಹೂವುಗಳು, ಬೀಜಗಳು, ಪಕ್ಷಿಗಳ ಮೊಟ್ಟೆಗಳು ಮತ್ತು ಕೀಟಗಳು ಸೇರಿದಂತೆ ವಿವಿಧ ರೀತಿಯ ಆಹಾರವನ್ನು ಸೇವಿಸುತ್ತವೆ.
ಪಶ್ಚಿಮ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುವ ಈ ಬೂದು ಮುಂಗುಸಿ ಸಾಮಾನ್ಯವಾಗಿ ತೆರೆದ ಕಾಡುಗಳು, ಕುರುಚಲು ಪ್ರದೇಶಗಳು ಮತ್ತು ಕೃಷಿ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಇದು ಬಿಲಗಳು, ಮುಳ್ಳುಗಿಡಗಳು, ಪೊದೆಗಳು, ನೆಡು ತೋಪುಗಳ ನಡುವಿನ ಬಂಡೆಗಳ ಅಡಿಯಲ್ಲಿ ವಾಸಿಸುತ್ತದೆ. ಹರ್ಪೆಸ್ಟಿಡೆ (Herpestidae) ಕುಟುಂಬಕ್ಕೆ ಸೇರುವ ಈ ಸಸ್ತನಿಯನ್ನು ವೈಜ್ಞಾನಿಕವಾಗಿ ಉರ್ವ ಎಡ್ವರ್ಡ್ಸಿ (Urva edwardsii) ಎಂದು ಕರೆಯಲಾಗುತ್ತದೆ. ರೋಮದಿಂದ ಕೂಡಿದ ದೇಹವಿದ್ದು, ಮುಂದೆ ಚಾಚಿಕೊಂಡಂತಹ ಮುಖ ಹಾಗೂ ಪೊದೆಯಂತಿರುವ ಬಾಲವನ್ನು ಹೊಂದಿದೆ. ಇದು ಇಲಿಗಳು, ಹಾವುಗಳು, ಪಕ್ಷಿಗಳ ಮೊಟ್ಟೆಗಳು ಅಥವಾ ಮರಿಗಳು, ಹಲ್ಲಿಗಳು ಮತ್ತು ವಿವಿಧ ಕೀಟಗಳನ್ನು ಬೇಟೆಯಾಡುತ್ತದೆ. ವಿಶೇಷ ತಂತ್ರಗಳನ್ನು ಬಳಸಿಕೊಂಡು ಹಾವುಗಳ ವಿರುದ್ಧ ಹೋರಾಡಿ ಭಕ್ಷಿಸಿ ತಿನ್ನುವ ಕೌಶಲ್ಯವನ್ನು ಹೊಂದಿವೆ. ಇವು ಸುಮಾರು ಒಂದು ಗಂಟೆಗಳ ಕಾಲ ಹಾವನ್ನು ಯುದ್ಧದಲ್ಲಿ ತೊಡಗಿಸುತ್ತವೆ.
ಚಿತ್ರಗಳು : ಗುರುಪ್ರಸಾದ್ ಕೆ. ಆರ್.
ಲೇಖನ : ದೀಪ್ತಿ ಎನ್.