ಕಾಡ ಒಡಲ ಬೆಂಕಿ ಬದುಕ ಸುಡದಿರುವುದೇ?
©ಪ್ರಕಾಶ ಗಾಣಿಗೇರ
“ಅಮ್ಮಾ ಅಮ್ಮಾ… ಅಲ್ನೋಡು, ಆ ಬೆಟ್ಟದ ತುದೀಲಿ ಯಾರೋ ಸೌದೆ ಉರಿಸಿ ಅಡುಗೆ ಮಾಡ್ತಾ ಇದಾರೆ, ಎಷ್ಟೊಂದು ಹೊಗೆ ಬರ್ತಾ ಇದೆ” ಎಂದು ಚಿಕ್ಕವನಿದ್ದಾಗ ಬೇಸಿಗೆ ರಜೆಗೆ ಅಜ್ಜಿಯ ಊರಿಗೆ ಹೋಗುವಾಗ ಬಸ್ಸಿನ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ನಾನು ಕೇಳಿದ ಈ ಪ್ರಶ್ನೆಗೆ ನನ್ನಮ್ಮನಿಂದ ಬಂದದ್ದೂ ಅಷ್ಟೇ ಮುಗ್ಧ ಉತ್ತರ. “ಅಯ್ಯೋ… ಅದು ಅಡುಗೆ ಮಾಡ್ತಾ ಇರೋದಲ್ಲಪ್ಪ, ಅದು ಕಾಡ್ಗಿಚ್ಚು. ಬೇಸಿಗೆಯಲ್ಲಿ ಒಣಗಿದ ಮರ ಮತ್ತೊಂದು ಮರಕ್ಕೆ ಉಜ್ಜಿದಾಗ ಬೆಂಕಿಯ ಕಿಡಿ ಹುಟ್ಟಿ ಕಾಡನ್ನೆಲ್ಲಾ ಸುಟ್ಟು ಬಿಡುತ್ತದೆ” ಎಂದು ಅಮ್ಮ ಹೇಳಿದ ತಲೆಮಾರುಗಳ ಜ್ಞಾನವನ್ನು ತಲೆಗೆ ತುಂಬಿಕೊಂಡಿದ್ದೆ. ಎಂಟನೇ ತರಗತಿ ಓದುವಾಗ ಬಯಾಲಜಿಯನ್ನು ಭಯಾಲಜಿಯನ್ನಾಗಿಸಿ ಪಾಠ ಮಾಡುತ್ತಿದ್ದ ನಮ್ಮ ಮೇಷ್ಟ್ರು ಕೇಳಿದ ‘ಕಾಡ್ಗಿಚ್ಚು ಹೇಗೆ ಉಂಟಾಗುತ್ತದೆ?’ ಎಂಬ ಪ್ರಶ್ನೆಗೆ ಇದೇ ಉತ್ತರ ಕೊಟ್ಟು ‘ಶಹಬ್ಬಾಸ್’ ಎಂದು ಬೆನ್ನು ತಟ್ಟಿಸಿಕೊಂಡಿದ್ದನ್ನು ನೆನಪಿಸಿಕೊಂಡು ನಕ್ಕಿದ್ದೇನೆ.
ಈಗಲೂ ಕಾಡ್ಗಿಚ್ಚು ಮರಗಳ ಘರ್ಷಣೆಯಿಂದಲೇ ಹತ್ತುತ್ತದೆ ಎಂದು ಅನೇಕರು ನಂಬಿರುವುದನ್ನು, ಮಾತನಾಡುವುದನ್ನು ಕೇಳಿದ್ದೇನೆ. ಅಂತಹ ಒಂದು ಕಿಡಿಯಿಂದ ಕಾಡಿಗೆ ಬೆಂಕಿ ಹೊತ್ತಬೇಕೆಂದರೆ ಇಡೀ ಕಾಡಿಗೆ ಯಾರಾದರೂ ಪೆಟ್ರೋಲ್ ಸುರಿದರೆ ಮಾತ್ರ ಸಾಧ್ಯ. ವೈಜ್ಞಾನಿಕ ಹಿನ್ನೆಲೆಯಿಲ್ಲದ ಈ ‘ಕಿಡಿ’ಕಾರನ ಬಗ್ಗೆ ಯಾವುದೇ ಪುರಾವೆಯಿಲ್ಲ. ಆದರೆ ಬಹುತೇಕ ಕಾಡ್ಗಿಚ್ಚುಗಳಿಗೆ ಕಾರಣ ಮಾತ್ರ ಮನುಷ್ಯನ ‘ಕಿಡಿ’ಗೇಡಿತನ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.
ಅಕ್ಟೋಬರ್ 7, 1825 ರಂದು ಕೆನಡಾದ ಮಿರಾಮಿಚಿ ನದಿ ತೀರದ ಕಾಡಿಗೆ ಹತ್ತಿದ್ದ ಬೆಂಕಿ 16000 ಚದರ ಕಿಮೀ ನಷ್ಟು ಕಾಡನ್ನು ಆಹುತಿ ತೆಗೆದುಕೊಂಡಿತ್ತು. ನ್ಯೂ ಬ್ರನ್ಸ್ ವಿಕ್ ನ ಉತ್ತರ ಭಾಗ ಸ್ಮಶಾನವಾಗಿತ್ತು. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಮಿರಾಮಿಚಿ ನದಿಗೆ ಹಾರಿದ ಜೀವಜಂತುಗಳಿಗೆ ಲೆಕ್ಕವೇ ಇಲ್ಲ. 1910 ರ ಆಗಸ್ಟ್ 20 ರಂದು ಅಮೇರಿಕಾ ಸಂಯುಕ್ತ ಸಂಸ್ಥಾನದ ಮೊಂಟಾನ ಹಾಗೂ ವಾಷಿಂಗ್ಟನ್ ಬಳಿ ಕಾಣಿಸಿಕೊಂಡ ಕಾಡ್ಗಿಚ್ಚು ಮೂವತ್ತು ಲಕ್ಷ ಎಕರೆ ಅರಣ್ಯವನ್ನು ಸುಟ್ಟು ಹಾಕಿದ್ದಲ್ಲದೆ ಬೆಂಕಿ ಆರಿಸುವಲ್ಲಿ ನಿರತರಾಗಿದ್ದ 87 ಅರಣ್ಯ ರಕ್ಷಕರನ್ನೂ ಭಸ್ಮ ಮಾಡಿತ್ತು. 2007 ರಲ್ಲಿ ಗ್ರೀಸ್ ನಲ್ಲಿ ಉಂಟಾದ ಕಾಡ್ಗಿಚ್ಚು ಆರೂವರೆ ಲಕ್ಷ ಎಕರೆ ಪ್ರದೇಶದ ಕಾಡನ್ನು ಸುಟ್ಟು ಕರಕಲಾಗಿಸಿತ್ತು. ಕಾಡನ್ನು ಸುಟ್ಟು ತಿನ್ನುವ ಇಂತಹ ಅದೆಷ್ಟೋ ಬೆಂಕಿ ಅನಾಹುತಗಳು ಭಾರತದಲ್ಲೂ ನಡೆದಿವೆ. 2016 ರಲ್ಲಿ ಉತ್ತರಾಖಂಡದಲ್ಲಿ ಉಂಟಾದ ಕಾಡ್ಗಿಚ್ಚು ದುರಂತ ಎಂಟೂವರೆ ಸಾವಿರ ಎಕರೆಯಲ್ಲಿ ಬೆಳೆದು ನಿಂತಿದ್ದ ಪೈನ್ ಮರಗಳನ್ನು ಸುಟ್ಟು ಹಾಕಿತ್ತು. ದಟ್ಟ ಹೊಗೆಯಿಂದಾಗಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (ಎನ್. ಡಿ. ಆರ್. ಎಫ್) ತಂಡ ಸಹ ಕೈಚೆಲ್ಲಿ ಕುಳಿತಿತ್ತು. ನಿಸರ್ಗದ ಲೀಲೆಯೆಂಬಂತೆ ಮರು ದಿನ ಬಂದ ಜೋರು ಮಳೆ ಆಗಬಹುದಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿತ್ತು. 2019 ರಲ್ಲಿ ನಮ್ಮದೇ ರಾಜ್ಯದ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಉಂಟಾದ ಕಾಡ್ಗಿಚ್ಚನ್ನು ಯಾರು ತಾನೇ ಮರೆಯಲು ಸಾಧ್ಯ? ಹತ್ತು ಸಾವಿರ ಎಕರೆಗೆ ಹತ್ತಿದ್ದ ಬೆಂಕಿಯನ್ನು ತಹಬದಿಗೆ ತರಲು ಅರಣ್ಯ ಸಿಬ್ಬಂದಿ ಐದಾರು ದಿನಗಳ ಕಾಲ ಪ್ರಾಣದ ಹಂಗು ತೊರೆದು ಹೋರಾಡಬೇಕಾಯಿತು. ಈ ಯಾವುದೇ ಕಾಡ್ಗಿಚ್ಚುಗಳು ಮರಕ್ಕೆ ಮರ ಉಜ್ಜಿ ಅಂಟಿಕೊಂಡವಲ್ಲ. ಇವೆಲ್ಲವಕ್ಕೂ ಮನುಷ್ಯನ ದುರಾಸೆ, ಕೊಳ್ಳೆಬಾಕತನ, ಬೇಜವಾಬ್ದಾರಿತನ, ಕಿಡಿಗೇಡಿತನಗಳೇ ಕಾರಣ. ಫಾರೆಸ್ಟ್ ಸರ್ವೆ ಆಫ್ ಇಂಡಿಯಾ (Forest Survey of India) ನಡೆಸಿದ ಅಧ್ಯಯನದ ಪ್ರಕಾರ ಭಾರತದ ಒಟ್ಟು ಅರಣ್ಯದ ಶೇಕಡ 55 ರಷ್ಟು ಭಾಗದಲ್ಲಿ ಈ ಕಾಡಿನ ಬೆಂಕಿ ಸರ್ವೇ ಸಾಮಾನ್ಯ. ಬೆಂಕಿಗೆ ಆಹುತಿಯಾದ ಒಟ್ಟು ಅರಣ್ಯದಲ್ಲಿ ಶೇಕಡ 75 ರಷ್ಟು ಭಾಗದಲ್ಲಿ ಕಾಡು ಮತ್ತೆ ಜೀವ ಪಡೆವ ಪ್ರಮಾಣ ನಿರೀಕ್ಷೆಗೂ ಕಡಿಮೆ ಇರುವುದಾಗಿ ವಿಜ್ಞಾನಿಗಳು ವರದಿ ಮಾಡಿದ್ದಾರೆ.
©ಧನರಾಜ್ ಎಂ.
ಕಾಡ್ಗಿಚ್ಚುಗಳು ಸಹಜವಾಗಿ ಎಲೆ ಉದುರುವ ಕಾಡುಗಳು, ಕುರುಚಲು ಕಾಡುಗಳು, ಹುಲ್ಲುಗಾವಲಿನ ಕಾಡುಗಳಲ್ಲಿ ಕಂಡುಬರುತ್ತವೆ. ನಿತ್ಯ ಹರಿದ್ವರ್ಣದ ಮಳೆ ಕಾಡುಗಳಲ್ಲಿ ಕಾಡ್ಗಿಚ್ಚಿನ ಸಮಸ್ಯೆ ತಲೆದೋರುವುದಿಲ್ಲ. ಆದರೆ ಶೋಲೆ ಅರಣ್ಯ ಪ್ರದೇಶಗಳ ಹುಲ್ಲುಗಾವಲುಗಳಲ್ಲಿ ಕಾಡ್ಗಿಚ್ಚು ಹತ್ತುವುದು ಸುಲಭ. ಅಸ್ಸಾಂ, ಮಿಜೋರಾಂ, ಒಡಿಶಾ ಹಾಗೂ ತ್ರಿಪುರಾ ರಾಜ್ಯಗಳಲ್ಲಿ ಕಾಡ್ಗಿಚ್ಚಿನ ದುರಂತಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತವೆ. ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಕಾಡ್ಗಿಚ್ಚಿನ ಅನಾಹುತಗಳು ಕರ್ನಾಟಕದಲ್ಲಿ ಕಡಿಮೆಯೇ ಇದ್ದರೂ ಸಂಭವಿಸಿದಾಗ ಹತೋಟಿಗೆ ಬರಲು ಹೆಚ್ಚಿನ ಸಮಯ ತೆಗೆದುಕೊಂಡ ಉದಾಹರಣೆಗಳು ಬಹಳಷ್ಟಿವೆ.
ನನ್ನೂರಾದ ಶಿವಮೊಗ್ಗದ ಸುತ್ತಮುತ್ತ ಹಬ್ಬಿರುವ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಇತ್ತೀಚೆಗೆ ಸುಮಾರು ಐವತ್ತಕ್ಕೂ ಹೆಚ್ಚು ಜಾಗದಲ್ಲಿ ಕಾಡ್ಗಿಚ್ಚು ಕಂಡುಬಂದಿದೆ. ಅದನ್ನೆಲ್ಲಾ ಹತೋಟಿಗೆ ತರಲು ಅರಣ್ಯ ಸಿಬ್ಬಂದಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಇಲ್ಲಿ ಕಂಡುಬರುತ್ತಿರುವ ಹೊಸ ಹೊಸ ರಬ್ಬರ್ ಪ್ಲಾಂಟೇಶನ್ ಗಳಿಗೂ ಈ ಬೆಂಕಿಗಳಿಗೂ ಸಂಬಂಧವಿರಬಹುದೇ? ಮಲೆನಾಡಿನ ಭಾಗದಲ್ಲಿ ನವೆಂಬರ್ ನಿಂದ ಮಾರ್ಚ್ ವರೆಗೂ ಅನೇಕ ವಲಸೆ ಹಕ್ಕಿಗಳು ಆಗಮಿಸಿರುತ್ತವೆ. ಜೊತೆಗೆ ಸ್ಥಳೀಯ ಪಕ್ಷಿ ಪ್ರಭೇದಗಳು, ಪ್ರಾಣಿಸಂಕುಲವೂ ಈ ಭಾಗದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಕಾಡ್ಗಿಚ್ಚಿನಿಂದಾಗಿ ಅಪಾಯಕ್ಕೆ ಸಿಲುಕುತ್ತಿವೆ.
ಕಾಡ್ಗಿಚ್ಚಿನಿಂದಾಗುವ ಅಪಾಯಗಳು
ಕಾಡು ಕೇವಲ ಮರ ಗಿಡಗಳ ಸಮೂಹವಲ್ಲ. ಅಷ್ಟೇ ಆಗಿದ್ದರೆ ಅರಣ್ಯಗಳನ್ನು ಬೆಳೆಸುವುದು ಮಾನವನಿಗೆ ಸವಾಲಿನ ಕೆಲಸವಾಗುತ್ತಿರಲಿಲ್ಲ. ಅದೊಂದು ನಿಸರ್ಗ ನಿರ್ಮಿಸಿದ ಸಂಕೀರ್ಣ ವ್ಯವಸ್ಥೆ. ಸೂಕ್ಷ್ಮಾತಿಸೂಕ್ಷ್ಮ ಜೀವ ಪ್ರಕ್ರಿಯೆಗಳು ಒಂದಕ್ಕೊಂದು ಹೆಣೆದುಕೊಂಡು ನೂರಾರು ವರ್ಷಗಳ ಸುದೀರ್ಘ ಅವಧಿಯಲ್ಲಿ ಮಾತ್ರವೇ ಸೃಷ್ಟಿಯಾಗುವ ಸೊಬಗು ಅರಣ್ಯ. ಮನುಷ್ಯ ಸೃಷ್ಟಿಸಲಾಗದ ನೈಸರ್ಗಿಕ ಸಂಪತ್ತು.
ಬೆಲೆಯೇ ಕಟ್ಟಲಾಗದ ಅಪಾರ ಅರಣ್ಯ ಸಂಪತ್ತು ಕಾಡ್ಗಿಚ್ಚಿನಿಂದಾಗಿ ನಾಶ ಹೊಂದುತ್ತದೆ. ಕಾಡ್ಗಿಚ್ಚಿನ ಪ್ರಮಾಣವನ್ನು ಸುಟ್ಟು ಹೋದ ಮರಗಳ ಸಂಖ್ಯೆಯಲ್ಲಿ ಮಾತ್ರ ಲೆಕ್ಕಾಚಾರ ಹಾಕಿಬಿಡುವ ಟಿಂಬರ್ ವ್ಯಾಪಾರಿಯಂತಹ ಮನಸ್ಥಿತಿ ಅಪಾಯಕರ. ಸರ್ಕಾರಗಳಿಗೆ ಬೇಕಿರುವುದು ಈ ಆರ್ಥಿಕ ಲೆಕ್ಕಾಚಾರ ಮಾತ್ರ. ಆದರೆ ಬೆಂಕಿಗೆ ಆಹುತಿಯಾಗುವ ಮರಗಿಡಗಳನ್ನೇ ಆಶ್ರಯಿಸಿ ಗೂಡು ಕಟ್ಟಿ ಸಂತಾನ ಬೆಳೆಸುವ ಪಕ್ಷಿಗಳು, ಅನೇಕ ಸಸ್ತನಿಗಳು, ಉರಗಗಳು, ಲೆಕ್ಕಕ್ಕೇ ಸಿಗದಷ್ಟು ಕ್ರಿಮಿ ಕೀಟಗಳು, ಇವುಗಳ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೆ? ಹುಲ್ಲು ಅಥವಾ ಕುರುಚಲು ಹೆಚ್ಚಿರುವ ಕಾಡಿಗೆ ಬೆಂಕಿ ತಗುಲಿದರಂತೂ ಧಗಧಗಿಸಿ ಬಿಡುತ್ತದೆ. ಹುಲ್ಲಿನ ನಡುವೆ ಇರುವ ಹಕ್ಕಿಗಳ, ಹಾವುಗಳ ಇತರೆ ಸರೀಸೃಪಗಳ ಮೊಟ್ಟೆಗಳು, ಮರಿಗಳು ಉರಿಬೆಂಕಿಯಲ್ಲಿ ಬೆಂದು ಹೋಗುತ್ತವೆ. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡು ಹಾರಿ ಹೋಗಬಲ್ಲ, ಓಡಿ ಹೋಗಬಲ್ಲ ಒಂದಷ್ಟು ಜೀವಚರಗಳು ಪ್ರಾಣ ಉಳಿಸಿಕೊಳ್ಳಬಹುದೇನೋ. ಆದರೆ ಉಳಿದವುಗಳ ಪರಿಸ್ಥಿತಿ ಊಹೆಗೂ ನಿಲುಕದ್ದು. ಆ ಮೂಕಪ್ರಾಣಿಗಳ ನರಳಾಟ ಕೇವಲ ಅರಣ್ಯರೋಧನವಾಗಿಬಿಡುತ್ತದೆ. ಸಣ್ಣ ಜೀವಿಗಳೇ ಆದರೂ ನಿಸರ್ಗ ವ್ಯವಸ್ಥೆಯ ಕೊಂಡಿಗಳಾಗಿರುವ ಕಪ್ಪೆ, ಜೇಡ, ಇರುವೆ, ಗೆದ್ದಲು, ಪತಂಗ, ಜೇನ್ನೊಣ, ಪಾಚಿ, ಶಿಲೀಂಧ್ರ, ಮುಂತಾದ ಜೀವಿಗಳು ಸುಟ್ಟು ಹೋದ ಕಾಡಿನಲ್ಲಿ ಮತ್ತೆ ಬರುವವರೆಗೂ ಕಾಡಿಗೆ ಮರುಹುಟ್ಟು ಸಿಗುವುದಿಲ್ಲ. ಬೆಂಕಿಯ ಕಾವಿಗೆ ನಾಶವಾಗುವ ಮಣ್ಣೊಳಗಿನ ಸೂಕ್ಷ್ಮ ಪ್ರಪಂಚ ಮರುಸೃಷ್ಟಿಯಾದರೆ ಮಾತ್ರ ಹಸಿರಸಿರಿ ಮತ್ತೆ ಬೆಳೆಯಲು ಅಡಿಪಾಯ ಸಿಗುತ್ತದೆ.
ಒಂದೆಡೆ ಕಾಡ್ಗಿಚ್ಚಿನಿಂದಾಗಿ ಜೀವವೈವಿಧ್ಯತೆ ನಾಶ ಹೊಂದಿದರೆ, ಮತ್ತೊಂದೆಡೆ ಪರಿಸರದ ಮೇಲೂ ಹಾಗೂ ಮಾನವನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಕಾಡು ಉರಿದು ಉಂಟಾಗುವ ಹೊಗೆಯಿಂದ ಗಾಳಿ ಮಲಿನವಾಗುತ್ತದೆ, ಕೆಲವೊಮ್ಮೆ ಆ ಹೊಗೆ ಬಹುದೂರದವರೆಗೂ ವ್ಯಾಪಿಸಿ ಜನರ ಉಸಿರುಗಟ್ಟಿಸಿದ ಉದಾಹರಣೆಗಳು ಬಹಳಷ್ಟಿವೆ. ಆರೋಗ್ಯದ ಮೇಲೆ ಧೀರ್ಘ ಕಾಲದ ಪರಿಣಾಮಗಳು ಉಂಟಾಗಿ ಉಸಿರಾಟ ಸಮಸ್ಯೆ, ಕೆಮ್ಮು, ಅಸ್ತಮಾ, ಮುಂತಾದ ಸಮಸ್ಯೆಗಳೂ ಉಲ್ಬಣವಾಗುತ್ತವೆ. ಕಾಡ್ಗಿಚ್ಚು ಜಲಮಾಲಿನ್ಯಕ್ಕೂ ಕಾರಣವಾಗುತ್ತದೆ ಎಂಬುದು ಮತ್ತೊಂದು ಗಮನಿಸಲೇಬೇಕಾದ ಪರಿಣಾಮ. ಬೆಂಕಿ ಆರಿದ ನಂತರ ಕಾಡಿನ ನೆಲ ನೀರನ್ನು ಇಂಗಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ. ಹಾಗಾಗಿ ಮೊದಲ ಮಳೆಯ ನೀರು ಕಾಡ ನೆಲದಲ್ಲಿ ಇಂಗುವ ಬದಲಾಗಿ ಕಸವನ್ನು, ಬೆಂಕಿಯಿಂದುಂಟಾದ ಬೂದಿಯಲ್ಲಿನ ಅಪಾಯಕಾರಿ ಲೋಹಗಳನ್ನು ಹೊತ್ತು ಸಾಗಿ ಕೆರೆ, ನದಿಗಳಿಗೆ ಸೇರಿಸಿ ಬಿಡುತ್ತದೆ.
ಕಾಡ್ಗಿಚ್ಚಿನ ಮತ್ತೊಂದು ಮುಖ
ಕಾಡ್ಗಿಚ್ಚಿನಿಂದಾಗಿ ದುಷ್ಪರಿಣಾಮಗಳು ಉಂಟಾಗುವುದು ಒಂದೆಡೆಯಾದರೆ, ಪ್ರಾಕೃತಿಕವಾಗಿ ಒಂದಷ್ಟು ಅನುಕೂಲಗಳು ಇರುವುದೂ ಸಹ ವೈಜ್ಞಾನಿಕವಾಗಿ ಧೃಡಪಟ್ಟಿದೆ. ಕಾಡಿನ ಸಸ್ಯ ವೈವಿಧ್ಯತೆಯನ್ನು ಒಮ್ಮೊಮ್ಮೆ ಈ ಬೆಂಕಿಯೇ ನಿರ್ಧರಿಸುತ್ತದೆ. ಕಾಡಿನ ಕೆಲವು ಗಿಡಮರಗಳು ಉದುರಿಸುವ ಬೀಜಗಳು ಮೊಳಕೆಯೊಡೆಯಬೇಕೆಂದರೆ ಬೆಂಕಿಯ ಶಾಖ ತಾಗಲೇಬೇಕು. (ಉದಾಹರಣೆಗೆ ಲಾಡ್ಜ್ಪೋಲ್ ಪೈನ್, ಯೂಕಲಿಪ್ಟಸ್ ಮತ್ತು ಬ್ಯಾಂಕ್ಸಿಯಾ) ಇಂತಹ ಗಿಡಗಳ ಜೀವನಚಕ್ರ ಹೇಗೆ ರೂಪಿತವಾಗಿರುತ್ತದೆಯೆಂದರೆ ಕಾಡು ಒಣಗುವ ಸಮಯಕ್ಕೆ ಮುಂಚಿತವಾಗಿ ಬೀಜಗಳನ್ನು ಪಸರಿಸಿರುತ್ತವೆ. ಕಾಡ್ಗಿಚ್ಚು ಈ ಸಮಯಕ್ಕೆ ಉಂಟಾದರೆ ಮಾತ್ರ ಇವು ಕಾವು ತಾಗಿ ಚುರುಕಾಗಿ ಮೊಳಕೆಯೊಡೆಯಬಲ್ಲವು. ಈ ಸಮಯಕ್ಕಿಂತ ಮುಂಚೆ ಬೆಂಕಿ ಉಂಟಾದರೆ ಕಾವು ಪಡೆಯಬೇಕಾದ ಬೀಜಗಳೇ ಇನ್ನೂ ನೆಲ ತಲುಪಿರುವುದಿಲ್ಲ. ತುಂಬಾ ತಡವಾಗಿ ಉಂಟಾದರೆ ಬೀಜಗಳು ತಮ್ಮ ಜೀವಿತಾವಧಿಯನ್ನು ಮುಗಿಸಿಬಿಟ್ಟಿರುತ್ತವೆ.
ಪೈರೋಫೈಟ್ಸ್ (Pyrophytes) ಎಂದು ಕರೆಯಲ್ಪಡುವ ಒಂದು ಸಸ್ಯ ವರ್ಗ ಪದೇಪದೇ ಉಂಟಾಗುವ ಕಾಡ್ಗಿಚ್ಚನ್ನು ತಡೆದುಕೊಳ್ಳಬಲ್ಲವು. ಮುಂದೆ ಅಲ್ಲಿ ಹುಟ್ಟುವ ಹೊಸ ಅರಣ್ಯದ ಸಸ್ಯವೈವಿಧ್ಯತೆಯನ್ನು, ಅದನ್ನು ಆಶ್ರಯಿಸಿ ಬರುವ ಪ್ರಾಣಿ ಸಂಕುಲವನ್ನು ನಿರ್ಧರಿಸುವುದು ಇಂತಹುದೇ ಸಸ್ಯಗಳು. ಕಾಡ್ಗಿಚ್ಚಿನ ನಂತರ ವಿಭಿನ್ನ ಸ್ವರೂಪ ಹಾಗೂ ವೈವಿಧ್ಯತೆಯಿಂದ ಕೂಡಿ ಬೆಳೆದ ಅರಣ್ಯಗಳ ಉದಾಹರಣೆಗಳು ಕಾಡನ್ನು ಸುಡುವ ಬೆಂಕಿಯ ಮತ್ತೊಂದು ಮುಖವನ್ನು ತೋರಿಸುತ್ತದೆ.
ಕಾಡ್ಗಿಚ್ಚಿಗೆ ಕಾರಣಗಳು
ಶೇಕಡ 84 ರಷ್ಟು ಕಾಡ್ಗಿಚ್ಚುಗಳು ಮನುಷ್ಯನಿಂದಲೇ ಹುಟ್ಟುವಂತವು. ಇದರಲ್ಲಿ ಮನುಷ್ಯನ ದುರಾಸೆ, ಅಜಾಗರೂಕತೆ, ಅಜ್ಞಾನ, ಮೂಢನಂಬಿಕೆ, ದುಷ್ಟತನ ಎಲ್ಲವೂ ಸೇರಿವೆ. ಕಾಡಿನ ಜಡ್ಡು ಕಾಡುಗಳ್ಳರಿಗೆ ಅರಣ್ಯದ ಒಳಹೊಕ್ಕಲು ಅಡ್ಡಿಯಾಗುತ್ತದೆ. ಆ ಜಡ್ಡಿನಲ್ಲಿ ಬೆಳೆವ ಲಂಟಾನದಂತಹ ಮುಳ್ಳಿನ ಗಿಡಗಳು ಸುಟ್ಟು ಹೋದರೆ ಮಾತ್ರ ಇವರಿಗೆ ದಾರಿ ಸರಾಗವಾಗುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿ ಹೇಳುವ ಪ್ರಕಾರ ಈ ರೀತಿ ಜಡ್ಡಿಗೆ ಬೆಂಕಿ ಬಿದ್ದ ಕೆಲವು ದಿನಗಳ ಅಂತರದಲ್ಲಿ ಮರಗಳ್ಳತನ ಆಗುವ ಸಾಧ್ಯತೆಗಳು ಹೆಚ್ಚು. ಆದರೆ ಈ ಕಾರಣಕ್ಕಾಗಿ ಕಾಡಿಗೆ ಬೆಂಕಿ ಹಚ್ಚುವುದನ್ನು ತಡೆಯಲು ಅರಣ್ಯ ಇಲಾಖೆ ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದೆ. ಆದರೆ ಬೆಂಕಿ ಹಚ್ಚುವ ಕೈ ಯಾವುದೆಂದು ತಿಳಿದಿದ್ದರೂ ಸಹ ಅರಣ್ಯ ಸಿಬ್ಬಂದಿ ಕೈಕಟ್ಟಿ ಕೂರಬೇಕಾದ ಕೆಲವು ಪರಿಸ್ಥಿತಿಯೂ ದೇಶದ ಹಲವೆಡೆ ಇದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಕೃಷಿ ಭೂಮಿ ವಿಸ್ತರಣೆಗಾಗಿ ಕಾಡು ಸುಡುವ ಪದ್ಧತಿ ಇದೆ. ಇದನ್ನು ತಡೆಯುವ ಅಥವಾ ವಿರೋಧಿಸುವ ಇಚ್ಛಾಶಕ್ತಿ ಇರುವ ಯಾವುದೇ ಪಕ್ಷ ಅಲ್ಲಿ ಇನ್ನೂ ಅಧಿಕಾರಕ್ಕೇ ಬಂದಿಲ್ಲ.
ಗ್ರಾಮೀಣ ಭಾಗದಲ್ಲಿ ಈಗಲೂ ಸಹ ದನ ಕರುಗಳಿಗೆ, ಕುರಿ-ಮೇಕೆಗಳಿಗೆ ಮೇವಿನ ಮೂಲವೇ ಅರಣ್ಯ. ಒಣಗಿ ನಿಂತ ಹುಲ್ಲಿಗೆ ಬೆಂಕಿ ಹಚ್ಚಿದರೆ ಮಳೆಯ ನಂತರ ಹುಟ್ಟುವ ಹೊಸ ಹುಲ್ಲು ತುಂಬಾ ಚೆನ್ನಾಗಿ ಬೆಳೆಯುತ್ತದೆಯೆಂಬ ನಂಬಿಕೆ ಜನರಲ್ಲಿದೆ. ಇದು ಭಾಗಶಃ ನಿಜವೂ ಹೌದು ಎನ್ನುತ್ತಾರೆ ಕೆಲವು ಅರಣ್ಯ ಅಧಿಕಾರಿಗಳು. ಇದೇ ಕಾರಣಕ್ಕಾಗಿ ಕುರಿಗಾಹಿಗಳು ಕಾಡಿನ ಹುಲ್ಲಿಗೆ ಬೆಂಕಿ ತಾಗಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಅವರ ಅಜಾಗರೂಕತೆಯಿಂದ ಬೆಂಕಿ ಇತರೆ ಗಿಡಮರಗಳಿಗೆ ತಾಗಿ ತೀವ್ರತೆ ಪಡೆಯುವ ಸಂಭವವೇ ಹೆಚ್ಚು.
ಕೆಲವೊಮ್ಮೆ ಪ್ರವಾಸಿಗರಿಂದಲೂ ಕಾಡ್ಗಿಚ್ಚು ಉಂಟಾಗುತ್ತವೆ. ಮೋಜು ಮಸ್ತಿಯ ನೆಪದಲ್ಲಿ ಅರಣ್ಯ ಸಿಬ್ಬಂದಿಯ ಕಣ್ತಪ್ಪಿಸಿ ಕಾಡಿನ ಒಳಗೆ ಕ್ಯಾಂಪ್ ಫೈರ್ (Camp fire) ಹಚ್ಚಿ ನಂತರ ಬೆಂಕಿ ನಂದಿಸದೇ ಇರುವುದು, ಸಿಗರೇಟು ಸೇದಿ ಹಾಗೆಯೇ ಬಿಸಾಡಿಬಿಡುವುದು, ಮುಂತಾದ ಕಾರಣಗಳಿಂದ ಕಾಡಿಗೆ ಬೆಂಕಿ ಹತ್ತಿದ ಹಲವಾರು ಪ್ರಸಂಗಗಳಿವೆ. ಇದನ್ನು ಪ್ರಶ್ನಿಸುವ ಅರಣ್ಯ ಸಿಬ್ಬಂದಿಯೊಂದಿಗೆ ಘರ್ಷಣೆಗಿಳಿದು ಉದ್ಧಟತನ ತೋರುವ ‘ಕಿಡಿ’ಗೇಡಿಗಳೂ ಸಹ ಅರಣ್ಯಕ್ಕೆ ಮಾರಕ.
ಮತ್ತೊಂದು ಪ್ರಮುಖ ಕಾರಣ ಸ್ಥಳೀಯರಿಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ನಡುವೆ ಇರುವ ಒಂದು ತೆರೆಮರೆಯ ಸಂಘರ್ಷ. ತೋಟ ವಿಸ್ತರಣೆಗಾಗಿಯೋ, ಕಳ್ಳನಾಟ ಸಾಗಿಸಲೆಂದೋ ಯಾರಾದರೂ ಮರ ಕಡಿದಾಗ ಅರಣ್ಯ ಸಿಬ್ಬಂದಿ ಅವರ ಹೆಡೆಮುರಿ ಕಟ್ಟಿರುತ್ತಾರೆ. ಇದರಿಂದ ಅರಣ್ಯ ಸಿಬ್ಬಂದಿ ಸ್ಥಳೀಯರ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲದೆ ಅರಣ್ಯ ಸಂರಕ್ಷಣಾ ಕಾಯ್ದೆಯ ಕಠಿಣ ನಿಯಮಗಳು ಅನುಷ್ಠಾನಗೊಂಡ ನಂತರ ಸ್ಥಳೀಯರು ಅರಣ್ಯಗಳಿಂದ ಪಡೆಯುತ್ತಿದ್ದ ಸಣ್ಣ ಪುಟ್ಟ ಉತ್ಪನ್ನಗಳಿಗೂ ಅಡ್ಡಿಯಾಗಿದೆ. ಶೇಕಡ ತೊಂಬತ್ತರಷ್ಟು ಗ್ರಾಮೀಣ ಜನ ಅರಣ್ಯ ಇಲಾಖೆಯ ಜೊತೆಗೆ ಕೈಜೋಡಿಸಿ ಅರಣ್ಯ ಸಂರಕ್ಷಣೆಗೆ ಸಹಕರಿಸಿದರೆ, ಕೆಲವರು ತಮ್ಮ ದ್ವೇಷ ತೀರಿಸಿಕೊಳ್ಳಲು ಕಾಡಿಗೆ ಬೆಂಕಿ ಹಚ್ಚುವ ವಿಕೃತ ಕೃತ್ಯಕ್ಕೆ ಕೈ ಹಾಕುತ್ತಾರೆ.
ಹೀಗೂ ಉಂಟು
ಕಾಡ್ಗಿಚ್ಚುಗಳು ನೈಸರ್ಗಿಕವಾಗಿ ಸಿಡಿಲಿನಿಂದ ಅಥವಾ ಕೃತಕವಾಗಿ ಮನುಷ್ಯರಿಂದ ಉಂಟಾಗುವುದು ಸಹಜ. ಆದರೆ ಕೆಲವು ಹಕ್ಕಿಗಳು ಕಾಡಿಗೆ ಬೆಂಕಿ ಹಚ್ಚುತ್ತವೆಯೆಂದರೆ ಅಚ್ಚರಿಯಲ್ಲವೇ? ಆಸ್ಟ್ರೇಲಿಯಾದಲ್ಲಿ ನಡೆದ ಸಂಶೋಧನೆಯಲ್ಲಿ ಈ ಅಂಶ ಬಯಲಿಗೆ ಬಂದಿದೆ. Fire hawk raptors ಎಂದು ಕರೆಲ್ಪಡುವ Black kite, Whistling kite ಹಾಗೂ Brown Falcon ಹಕ್ಕಿಗಳು ಕಾಡ್ಗಿಚ್ಚನ್ನು ಹರಡುತ್ತವೆಯಂತೆ. ಸ್ಥಳೀಯ ಬುಡಕಟ್ಟು ಜನರಿಗಿರುವ ಮಾಹಿತಿಯಂತೆ ಹಕ್ಕಿಗಳ ಈ ಸ್ವಭಾವಕ್ಕೆ ಸುಮಾರು ನಲವತ್ತು ಸಾವಿರ ವರ್ಷಗಳ ಇತಿಹಾಸವಿದೆ. ಕಾಡಿನ ಯಾವುದೋ ಒಂದು ಭಾಗದಲ್ಲಿ ಒಂದು ಸಣ್ಣ ಬೆಂಕಿ ಕಂಡ ಕೂಡಲೆ ನೂರಾರು ಸಂಖ್ಯೆಯಲ್ಲಿ ಈ ಹಕ್ಕಿಗಳು ಅಲ್ಲಿಗೆ ದಾಂಗುಡಿಯಿಡುತ್ತವೆ. ಬೆಂಕಿ ತಾಗಿದ ಸಣ್ಣ ಕಡ್ಡಿಗಳನ್ನು ಸುಮಾರು ಒಂದು ಕಿಲೋಮೀಟರ್ ವರೆಗೂ ಹೊತ್ತು ಸಾಗುತ್ತವೆ. ತಮಗೆ ಆಹಾರವಾಗಬಲ್ಲ ಇಲಿ, ಹೆಗ್ಗಣಗಳಂತಹ ಪ್ರಾಣಿಗಳು ಹೆಚ್ಚಾಗಿ ಇರುವ ಜಾಗವನ್ನು ಮುಂಚೆಯೇ ಗುರುತಿಸಿರುತ್ತವೆ. ಇಂತಹ ಜಾಗಕ್ಕೆ ಬೆಂಕಿ ತಂದು ನಿಯಂತ್ರಿತವಾಗಿ ಹರಡುತ್ತವೆ. ಬೆಂಕಿಯ ಶಾಖಕ್ಕೆ ಹೊರಬರುವ ಸಣ್ಣ ಸಣ್ಣ ಪ್ರಾಣಿಗಳನ್ನು ಸರಾಗವಾಗಿ ಹಿಡಿದು ಮುಕ್ಕುತ್ತವೆ. ಇಂತಹ ಸಂದರ್ಭದಲ್ಲಿ ತುಸುವೇ ಹೆಚ್ಚು ಗಾಳಿ ಬೀಸಿದರೆ ಬೆಂಕಿ ಹಕ್ಕಿಗಳ ನಿಯಂತ್ರಣವನ್ನು ಮೀರಿ ಕಾಡೆಲ್ಲ ಹರಡುತ್ತದೆ.
ಕಾಡ್ಗಿಚ್ಚು – ತಡೆಯುವುದು ಹೇಗೆ?
ಕಾಡ್ಗಿಚ್ಚಿನಿಂದಾಗುವ ವಿನಾಶವನ್ನು ತಡೆಯುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಕಾಡ್ಗಿಚ್ಚು ಆಗದಂತೆ ತಡೆಯುವುದು. ಮುಂಜಾಗ್ರತೆ ಹಾಗೂ ಮುನ್ನೆಚ್ಚರಿಕೆಯಿಂದ ಮನುಷ್ಯರಿಂದ ಉಂಟಾಗುವ ಕಾಡ್ಗಿಚ್ಚನ್ನು ತಡೆಯಲು ಸಾಧ್ಯ. ಇದರಲ್ಲಿ ಅರಣ್ಯ ಇಲಾಖೆಯ ಪರಿಶ್ರಮ ಎಷ್ಟಿದೆಯೋ, ಜನರ ಸಹಕಾರವೂ ಅಷ್ಟೇ ಮುಖ್ಯ..
ಅರಣ್ಯ ಸಿಬ್ಬಂದಿ ಹೇಳುವ ಪ್ರಕಾರ ಕಾಡ್ಗಿಚ್ಚನ್ನು ನಿಯಂತ್ರಿಸುವಲ್ಲಿ ಒಂದಷ್ಟು ತಾಂತ್ರಿಕ ಸಮಸ್ಯೆಗಳಿವೆ. ಮೊದಲನೆಯದಾಗಿ, ಎಷ್ಟೋ ಬಾರಿ ಬೆಂಕಿ ಹತ್ತಿರುವ ಕಾಡಿನ ಭಾಗಕ್ಕೆ ವಾಹನದಲ್ಲಿ ತೆರಳಲು ಸಾಧ್ಯವೇ ಇರುವುದಿಲ್ಲ, ನಡೆದೇ ಸಾಗಬೇಕು. ಬೆಂಕಿ ನಿಯಂತ್ರಿಸುವ ಪರಿಕರಗಳನ್ನು ಹೊತ್ತು ಆ ದುರ್ಗಮ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಲು ತಗಲುವ ಸಮಯದಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಬಿಟ್ಟಿರುತ್ತದೆ. ಹಾಗಾಗಿ ಅರಣ್ಯ ಇಲಾಖೆಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿರುವಂತೆ ಕಾಡಿನ ಎಲ್ಲಾ ಭಾಗಗಳನ್ನು ಸಂಪರ್ಕಿಸುವ ಮಾರ್ಗಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ನನ್ನ ಪರಿಚಯದ RFO ಒಬ್ಬರು ಹಂಚಿಕೊಂಡ ಅನುಭವ ಇಲ್ಲಿ ತಿಳಿಸುವುದು ಔಚಿತ್ಯವೆನಿಸುತ್ತದೆ. ಅವರು ಕರ್ನಾಟಕದ ಗಡಿಭಾಗದ ವಲಯದಲ್ಲಿ ಕೆಲಸ ನಿರ್ವಸಹಿಸುತ್ತಿದ್ದ ಸಮಯ. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸಾಲಿಗೆ ಹೊಂದಿಕೊಂಡಂತೆ ಇದ್ದ ಇನ್ನೊಂದು ಬೆಟ್ಟದಲ್ಲಿ ಬೆಂಕಿ ಬಿದ್ದಿರುವುದಾಗಿ ಇವರಿಗೆ ಮಾಹಿತಿ ಬರುತ್ತದೆ. ಆಗ ಸಮಯ ಸುಮಾರು ರಾತ್ರಿ ಒಂಬತ್ತು ಗಂಟೆ. ಅದಾಗಲೇ ಒಂದಷ್ಟು ಮಂದಿ ರಾತ್ರಿ ಬೀಟಿಗೆ ಬೇರೆ ಮಾರ್ಗಕ್ಕೆ ತೆರಳಿದ್ದರಿಂದಾಗಿ ಉಳಿದ ಸಿಬ್ಬಂದಿಯೊಡನೆ ಬೆಂಕಿ ನಿಯಂತ್ರಿಸಲು ಹೊರಟು ನಿಂತರಂತೆ. ಆದರೆ ದುರದೃಷ್ಟವೆಂದರೆ ಕಾಡಿನ ಆ ಭಾಗಕ್ಕೆ ರಸ್ತೆ ಇರಲಿ ಕಾಲುದಾರಿಯೂ ಇರಲಿಲ್ಲವಾಗಿತ್ತು. ಅಂತಹ ಕಗ್ಗತ್ತಲಲ್ಲಿ ಪರಿಕರಗಳನ್ನು ಹೊತ್ತು ದಾರಿ ಮಾಡಿಕೊಳ್ಳುತ್ತ ಕಾಡಿನಲ್ಲಿ ಬೆಟ್ಟ ಹತ್ತಲು ಗುಂಡಿಗೆ ಹಾಗೂ ದೇಹ ಎರಡೂ ಗಟ್ಟಿ ಇದ್ದರೆ ಮಾತ್ರ ಸಾಧ್ಯ. ಹೇಗೋ ಕಷ್ಟಪಟ್ಟು ಅವರು ಬೆಂಕಿ ಹತ್ತಿದ್ದ ಭಾಗಕ್ಕೆ ತಲುಪಿದರೆ ಅವರಿಗೆ ಮತ್ತೊಂದು ಆಘಾತ ಕಾದಿತ್ತು. ಇವರು ಬೆಟ್ಟದ ತುದಿ ತಲುಪಿದ ದಿಕ್ಕಿನಲ್ಲೇ ಗಾಳಿಯು ರಭಸವಾಗಿ ಬೀಸಲು ಆರಂಭಿಸಿತು. ಇವರಿದ್ದ ಬದಿಯಿಂದ ಬೆಂಕಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರೆ, ವಿರುದ್ಧ ದಿಕ್ಕಿನಲ್ಲಿ ಬೆಂಕಿ ಹಬ್ಬುತ್ತಲೇ ಇತ್ತು. ಆ ಬದಿಗೆ ನೇರ ಸಾಗಲು ಎರಡೂ ಕಡೆ ಪ್ರಪಾತ. ಮತ್ಯಾವ ಬದಲಿ ದಾರಿಯೂ ಇಲ್ಲ. ಇಷ್ಟೆಲ್ಲಾ ಸವಾಲುಗಳ ನಡುವೆ ಪ್ರಾಣದ ಹಂಗು ತೊರೆದು ಅರಣ್ಯ ರಕ್ಷಕರು ಹೋರಾಡಿದ ಫಲವಾಗಿ ಬೆಂಕಿಯನ್ನು ಆರಿಸಿದಾಗ ಬೆಳಗಿನ ಜಾವ ಮೂರು ಗಂಟೆಯಾಗಿತ್ತಂತೆ. ಈ ಘಟನೆ ಕೇಳಿದಾಗ ದೇಶದ ಅಪಾರ ನೈಸರ್ಗಿಕ ಸಂಪತ್ತಿನ ರಕ್ಷಣೆಗೆ ಹಗಲು ರಾತ್ರಿಯೆನ್ನದೆ ದುಡಿವ ನಮ್ಮ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲಿದ್ದ ಗೌರವ ದುಪ್ಪಟ್ಟಾಯಿತು.
ಎರಡನೆಯದಾಗಿ, ಅರಣ್ಯ ಇಲಾಖೆಯಲ್ಲಿ ಬೆಂಕಿ ನಿಯಂತ್ರಿಸುವ ಆಧುನಿಕ ಉಪಕರಣಗಳ ಕೊರತೆ ಇದೆ. ಕೆಲವೊಮ್ಮೆ ಕನಿಷ್ಠ Fire jacket ಗಳೂ ಇಲ್ಲದಂತೆ ಬೆಂಕಿ ನಿಯಂತ್ರಿಸಲು ಹೋಗಿ ಅರಣ್ಯ ರಕ್ಷಕರು ಪ್ರಾಣ ಕಳೆದುಕೊಂಡದ್ದಿದೆ. ವಿದೇಶಗಳಲ್ಲಿರುವಂತೆ Drone based Fire extinguisher, Fire monitoring and alert systems, Satellite based wildfires monitoring ಗಳಂತಹ ಆಧುನಿಕ ವ್ಯವಸ್ಥೆಗಳು ಇಲಾಖೆಗೆ ತುರ್ತಾಗಿ ಬೇಕಿವೆ.
ಇವೆಲ್ಲದಕ್ಕೂ ಮೀರಿ, ಸಾರ್ವಜನಿಕರ ಸಹಕಾರ ಅತ್ಯವಶ್ಯಕ. ಕಾಡು ಕೇವಲ ಅರಣ್ಯ ಇಲಾಖೆಯ ಆಸ್ತಿಯಲ್ಲ. ಅದು ದೇಶದ ಆಸ್ತಿ, ಅದರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ. ಇದನ್ನರಿತು ಜನರೂ ಸಹ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದರೆ ಮಾತ್ರ, ನಮ್ಮ ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡಲು ಸಾಧ್ಯ. Peace on the Earth ಸಂಸ್ಥೆಯ ಅಮಿತ್ ರಾಯ್ ಹೇಳುವಂತೆ “ಮಾನವೀಯತೆಯು ಕಾಡ್ಗಿಚ್ಚು ಅಥವಾ ಕಾಳ್ಗಿಚ್ಚುಗಳಿಗೆ ಸಂವೇದನಾಶೀಲತೆಯನ್ನು ಕಳೆದುಕೊಳ್ಳಬಾರದು. ನಾವು ಎಚ್ಚೆತ್ತುಕೊಳ್ಳದಿದ್ದರೆ, ಜೀವವೈವಿಧ್ಯತೆಯ ನಷ್ಟ ಹಾಗೂ ಗಿಡಮೂಲಿಕೆಗಳು, ಪಕ್ಷಿಗಳು, ಪ್ರಾಣಿಗಳ ಅಳಿವು ಮತ್ತು ಮರಗಳು, ಪಕ್ಷಿಗಳು, ಪ್ರಾಣಿಗಳ ನೋವುಗಳು ಮಾನವೀಯತೆಯ ಅಳಿವಿನ ಆತಂಕಕಾರಿ ಸಂಕೇತವಾಗುತ್ತದೆ”.
ಲೇಖನ: ಶ್ರೀಕಾಂತ್ ಎ. ವಿ.
ಶಿವಮೊಗ್ಗ ಜಿಲ್ಲೆ
ಜನ್ಮ ದಿನಾಂಕ: 03/11/1982
· ಜನ್ಮ ಸ್ಥಳ: ಶಿವಮೊಗ್ಗ
· ಪ್ರಾಥಮಿಕ ಶಿಕ್ಷಣ: ಶಿವಮೊಗ್ಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆ
· ಪದವಿ ಶಿಕ್ಷಣ: ಪ್ರತಿಷ್ಠಿತ ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ ಇಲ್ಲಿ ಬಿ.ಎಸ್ಸಿ ಪದವಿ -2003
· ಸ್ನಾತಕೋತ್ತರ ಶಿಕ್ಷಣ: ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಸ್ವರ್ಣ ಪದಕ– ಕುವೆಂಪು ವಿಶ್ವವಿದ್ಯಾನಿಲಯ–ಶಂಕರಘಟ್ಟ – 2005
· ಎಂ.ಫಿಲ್ ಪದವಿ – 2008 – ಕುವೆಂಪು ವಿಶ್ವವಿದ್ಯಾನಿಲಯ–ಶಂಕರಘಟ್ಟ
· ಪ್ರಸ್ತುತ ಪಿ.ಹೆಚ್.ಡಿ ಸಂಶೋಧನಾ ಅಧ್ಯಯನ – ಶಿವಮೊಗ್ಗ ಜಿಲ್ಲೆಯ ಸಸ್ಯ ವೈವಿಧ್ಯತೆ ಹಾಗೂ ಹಕ್ಕಿಗಳ ವೈವಿಧ್ಯತೆಯ ಪರಿಸರ ಅಧ್ಯಯನ
· 2005-07 – ಸಹ್ಯಾದ್ರಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕನಾಗಿ ವೃತ್ತಿ ಪ್ರಾರಂಭ
· 2007-09 – ಪ್ರತಿಷ್ಟಿತ ಶ್ರೀ ಅರಬಿಂದೋ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕನಾಗಿ ಸೇವೆ
· 2009 – ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಜೀವಶಾಸ್ತ್ರ ಉಪನ್ಯಾಸಕನಾಗಿ ಕೆ.ಪಿ.ಎಸ್.ಸಿ ಯಿಂದ ಆಯ್ಕೆ.
· 2009-2015 – ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಾಗರ
· 2015 – ಪ್ರಸ್ತುತ – ಸರ್ಕಾರಿ ಪದವಿ ಪೂರ್ವ ಕಾಲೇಜು, ಸೈನ್ಸ್ ಮೈದಾನ, ಶಿವಮೊಗ್ಗ
· ಯುಜಿಸಿ ವತಿಯಿಂದ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಯಲ್ಲಿ ಎರಡು ಬಾರಿ ತೇರ್ಗಡೆ–
– 42ND RANK IN 2011
– 30TH RANK IN 2013
· ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ– 2013 (K_SET) ನಲ್ಲಿ ಪ್ರಥಮ rank ನಲ್ಲಿ ತೇರ್ಗಡೆ.
· Centre for Teachers’ Accreditation (Centa) Teaching Professionals Olympiad ನಲ್ಲಿ ಪ್ರಾದೇಶಿಕ 38 ನೇ rank ನಲ್ಲಿ ತೇರ್ಗಡೆ.
· ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮದ (TALP-Technology Assisted Learning Program) Master trainer.
· ಇತ್ತೀಚಿಗೆ ನಡೆದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆಯಲ್ಲಿ ಸಸ್ಯಶಾಸ್ತ್ರ ವಿಷಯದಲ್ಲಿ 3 ನೇ rank.
· ಹವ್ಯಾಸಗಳು – ವನ್ಯಜೀವಿ ಛಾಯಾಗ್ರಹಣ, ವೈಜ್ಞಾನಿಕ ಲೇಖನಗಳ ರಚನೆ, ಸಣ್ಣ ಕವಿತೆಗಳ ರಚನೆ, Quotes Writing