ಪಶ್ಚಿಮ ಘಟ್ಟದ ತುಂಗಾ ತೀರದಲ್ಲೊಂದು ಹೊಸ ಕಪ್ಪೆ.
© ಪವನ್ ಕುಮಾರ್ ಕೆ. ಎಸ್.
ಭಾರತದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಚಾಚಿನಿಂತಿರುವ ಪಶ್ಚಿಮ ಘಟ್ಟಗಳ ಸಾಲು ಸುಮಾರು 18,0000 ಚ. ಕಿ. ಮೀ ಗಳ ಸರಪಳಿಯನ್ನು ಹಾಸಿದೆ. ಇದು ಎತ್ತರದ ಪರ್ವತಗಳು, ಅಂಕುಡೊಂಕಾದ ನದಿಗಳು, ತೆರೆದ ಹುಲ್ಲುಗಾವಲುಗಳು ಹಾಗೂ ದಟ್ಟ ಕಾಡಿನಿಂದ ಮಾರ್ಪಾಡಾಗಿದ್ದು, 250ಕ್ಕೂ ಹೆಚ್ಚು ಉಭಯವಾಸಿಗಳನ್ನು ತನ್ನ ಮಡಿಲಿನಲ್ಲಿ ಸಲಹುತ್ತಿದೆ. ಹೊಸ ಹೊಸ ಪ್ರಭೇದಗಳ ಸೃಷ್ಟಿಕರ್ತನಾಗಿರುವ ಈ ಪಶ್ಚಿಮ ಘಟ್ಟವು ಇದೀಗ ತನ್ನ ಮಡಿಲಲ್ಲಿ ಇರುವ ಹೊಸದೊಂದು ಕಪ್ಪೆಯನ್ನು ಪ್ರಪಂಚಕ್ಕೆ ತೆರೆದಿಟ್ಟಿದೆ. ಅಧ್ಯಯನಗಳ ಪ್ರಕಾರ ಪಶ್ಚಿಮ ಘಟ್ಟವು ಸುಮಾರು 170 ಕಪ್ಪೆ ಪ್ರಭೇದಗಳನ್ನು ಹೊಂದಿದ್ದು, ಅದರಲ್ಲಿ Nyctibatrachus ಕುಲವು ಹಲವು ನಿಗೂಢ ಕಪ್ಪೆಗಳನ್ನು ಹೊಂದಿದೆ. ಇದುವರೆಗೆ Nyctibatrachus ಕುಲದಲ್ಲಿ 33 ಪ್ರಭೇದದ ಕಪ್ಪೆಗಳನ್ನು ಗುರುತಿಸಲಾಗಿದೆ.
ಮೊದಲ ಭೇಟಿ.
ಚಳಿಗಾಲ ಬಂತೆಂದರೆ ಸಾಕು ಮಲೆನಾಡಿನಲ್ಲಿ ಅಡಿಕೆ ಕುಯ್ಲು ಸ್ಪುಟಿದೇಳುತ್ತದೆ. ಚಿಕ್ಕಂದಿನಲ್ಲಿ ನಮಗೆ ತೊಟದಲ್ಲಿ ಬಿದ್ದಿರುವ ಅಡಿಕೆ ಹೆರಕುವುದೇ ಕೆಲಸ. ಹೀಗೆ ಒಂದು ದಿನ ಅಡಿಕೆ ಹೆರಕುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಅಲ್ಲೇ ಪಕ್ಕದಲ್ಲಿದ್ದ ಕಪ್ಪಿನಿಂದ (ಸಣ್ಣ ಹಳ್ಳ) “ಟೊಕ್ ಟೊಕ್ ಟೊಕ್ ಟೊಕ್” ಎಂಬ ಧ್ವನಿಯೊಂದು ಕೇಳಿಸಿತು. ತುಂಬಾ ಹೊಸತನದ ಹಾಗೂ ತುಂಬ ಸ್ಪಷ್ಟವಾಗಿ ಕೇಳಿಸಿದ ಆ ಧ್ವನಿ, ಕೆಲ ಹೊತ್ತು ನಿಂತಂತಾಗಿ ನನ್ನಲ್ಲಿ ಆಶ್ಚರ್ಯ ಭುಗಿಲೇಳುವಂತೆ ಮಾಡಿತು. ಅದೆಷ್ಟು ಹುಡುಕಿದರೂ ಅಂದು ನನ್ನಿಂದ ಆ ಆಕಾಶವಾಣಿಯ ಚಹರೆಯನ್ನು ಹುಡುಕಲು ಆಗಲೇ ಇಲ್ಲ. ಇದಾದ ಎಷ್ಟೋ ವರುಷಗಳು ನನಗೆ ಆ ಧ್ವನಿಯ ಕಡೆ ಗಮನ ಹರಿಯಲಿಲ್ಲ. ಇದರ ಧ್ವನಿಯನ್ನು ಮತ್ತೊಮ್ಮೆ ಆಲಿಸಲು ನನಗೆ ಅವಕಾಶ ಸಿಕ್ಕಿದ್ದು 2018ರ ಡಿಸೆಂಬರ್ ನಲ್ಲಿ. ಆಗ ನಾನು ಶೃಂಗೇರಿಯ ಜೆ. ಸಿ. ಬಿ. ಎಂ. ಕಾಲೇಜಿನಲ್ಲಿ ಬಿ.ಎಸ್ಸಿ. ತೃತೀಯ ವರ್ಷದ ವ್ಯಾಸಂಗವನ್ನು ಮಾಡುತ್ತಿದ್ದೆ. ಸಸ್ಯಶಾಸ್ತ್ರ ಅಧ್ಯಾಪಕರಾದ ಉಡುಪ ಸರ್ ರವರಿಂದ ಕಾಡು ಮೇಡು ಸುತ್ತುವುದರಲ್ಲಿ ಪ್ರಭಾವಿತರಾಗಿದ್ದ ನಾನು ಮತ್ತು ನನ್ನ ಆಪ್ತ ಗೆಳೆಯ ವಿಶ್ವಜಿತ್ ಬಿಡುವಿನ ಸಮಯದಲ್ಲಿ ಹಲವಾರು ಕಾಡುಗಳನ್ನು ಜೊತೆಯಲ್ಲಿ ಸುತ್ತುತ್ತಿದ್ದೆವು ಹಾಗೂ ಅವಕಾಶ ಸಿಕ್ಕರೆ ಅದೇ ರೀತಿಯ ಪ್ರೊಜೆಕ್ಟ್ ಗಳನ್ನು ತೆಗೆದುಕೊಳ್ಳುತ್ತಿದ್ದೆವು. ಬಿ.ಎಸ್ಸಿ. ತೃತೀಯ ವರ್ಷದ ಪ್ರೊಜೆಕ್ಟ್ ಗೆ ಮಲೆನಾಡಿನಲ್ಲಿ ಸಿಕ್ಕುವ ಕಪ್ಪೆಗಳ ಪಟ್ಟಿಮಾಡುವುದನ್ನು ತೆಗೆದುಕೊಂಡೆವು. ನಮ್ಮ ತೋಟದಲ್ಲೇ ಹಲವಾರು ಕಪ್ಪೆಗಳು ಕಾಣಸಿಗುತ್ತಿದುದರಿಂದ ನಾವು ನಮ್ಮ ತೋಟದಿಂದಲೇ ಅಧ್ಯಯನವನ್ನು ಶುರು ಮಾಡಿದೆವು. ಕೆಲವು ದಿನಗಳ ನಮ್ಮ ಅಧ್ಯಯನದ ತರುವಾಯ, ನಾನು ಚಿಕ್ಕಂದಿನಲ್ಲಿ ಕೇಳಿದ ಧ್ವನಿಯು ಝೇಂಕರಿಸಿತು. ಈ ಬಾರಿ ನಾವು “ಟೊಕ್ ಟೊಕ್ ಟೊಕ್ ಟೊಕ್” ಸದ್ದಿನ ಮೂಲವನ್ನು ಹುಡುಕಲು ಯಶಸ್ವಿಯಾದೆವು. ಅಂದಿನಿಂದ ಆ ಕಪ್ಪೆಯ ಜಾಡು ಹಿಡಿದು ಹೊರಟೆವು. ಮೊದಮೊದಲು ಇದನ್ನು Nyctibatrachus dattatreyaensisss ಎಂದು ಊಹಿಸಿದ್ದ ನಮಗೆ ವಿಜ್ಞಾನಿಗಳಾದ ಡಾ. ಕೆ. ವಿ. ಗುರುರಾಜ ರವರು ಈ ಕಪ್ಪೆಯನ್ನು ಸೂಕ್ಷವಾಗಿ ಗಮನಿಸಿ ಇದು ಕೂಗುವಾಗ ಹೊರಹೊಮ್ಮುವ ತರಂಗಗಳಲ್ಲಿ (frequency) ಗಮನಾರ್ಹ ವ್ಯತ್ಯಾಸ ಇದೆ ಎಂದು ತಿಳಿಸಿ ಇನ್ನೂ ಹೆಚ್ಚಿನ ಆಸಕ್ತಿ ಮೂಡಿಸಿದರು.
ಕಪ್ಪೆಯ ಆವಾಸಸ್ಥಾನ:ಇದರ ಆವಾಸ ಕುರಿತು ಹೇಳುವುದಾದರೆ ಉಳಿದೆಲ್ಲಾ ರಾತ್ರಿ ಕಪ್ಪೆಗಳಂತೆ ಮಂದಗತಿಯಲ್ಲಿ ಹರಿಯುವ ಸಣ್ಣ ಪ್ರಮಾಣದ ಕೆಸರು ತುಂಬಿದ ತೊರೆಗಳು, ಇದರ ನೆಚ್ಚಿನ ತಾಣ. ಈ ರಾತ್ರಿ ಕಪ್ಪೆಯು ಅಪಾಯಕಾರಿ ಸೂಚನೆಗಳು ಸಿಕ್ಕಿದ ಕೂಡಲೇ ತನ್ನ ಕಣ್ಣುಗಳನ್ನು ಹೊರತುಪಡಿಸಿ ಇಡೀ ದೇಹವನ್ನು ಕೆಸರಿನಲ್ಲಿ ಮುಳುಗಿಸಿ ಕುಳಿತುಬಿಡುತ್ತದೆ (mud dwelling). ಅಷ್ಟೇ ಅಲ್ಲದೆ ತೊರೆಗಳ ಬದಿಯ ಕಲ್ಲಿನ ಪೊಟರೆಗಳು ಕೂಡಾ ಇದರ ಆವಾಸ ಸ್ಥಾನವಾಗಿದೆ. ಇದು ಸಹ ಕುಂಬಾರ ಕಪ್ಪೆಯಂತೆ (Nyctibatrachus kumbara) ಕಲ್ಲಿನ ತಳಭಾಗಕ್ಕೋ, ಗಿಡಗಳ ಎಲೆ ಕೊಂಬೆಗೋ ಅಥವಾ ಒಣಗಿ ಬಿದ್ದಿರುವ ಕಟ್ಟಿಗೆಗೋ ತನ್ನ ಮೊಟ್ಟೆಗಳನ್ನು ಅಂಟಿಸಿ ಅದರ ಮೇಲೆ ಮಣ್ಣನ್ನು ಹಚ್ಚುತ್ತದೆ. ಈ ಕಪ್ಪೆಯ ಈ ರೀತಿಯ ವರ್ತನೆಗಳು ಸಂಶೋಧಕರನ್ನು ಹಾಗೂ ಹವ್ಯಾಸಿ ಕಪ್ಪೆ ವೀಕ್ಷಕರನ್ನು ಆಕರ್ಷಿಸುತ್ತವೆ.
ವೈಜ್ಞಾನಿಕ ಅನುಮೋದನೆ ಕಾರ್ಯ
ಈ ಕಪ್ಪೆಯು ತನ್ನ ಧ್ವನಿಯ ವಿಶೇಷತೆಯಿಂದಾಗಿ ಕೇವಲ ನಮ್ಮನ್ನು ಮಾತ್ರ ಅಲ್ಲದೇ ಹಲವು ವನ್ಯಜೀವಿ ಸಂಶೋಧಕರನ್ನೂ ತನ್ನತ್ತ ಸೆಳೆದಿದೆ. ಇಷ್ಟೇ ಅಲ್ಲದೆ ವಿಜ್ಞಾನಿಗಳಾದ ಡಾ. ಪ್ರೀತಿ ಹೆಬ್ಬಾರ್ ಅವರು ಇದರ ಅನುವಂಶೀಯತೆಯನ್ನೂ ಕೂಡ ಅಧ್ಯಯನ ಮಾಡಿದ್ದು, ಇದು ತನ್ನ ಅನುಜಾತರಾದ N.vrijeuni ಮತ್ತುN.shiradi ಗಿಂತ ಕ್ರಮವಾಗಿ 2.0% ಹಾಗೂ 2.64% ರಷ್ಟು ಭಿನ್ನತೆಯನ್ನೂ ಹೊಂದಿದೆ. ಇದುವರೆಗೆ ತಿಳಿದಂತೆ ಈ ಕಪ್ಪೆಯು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು (ಸಿದ್ದರಮಠ) ಹಾಗೂ ಶೃಂಗೇರಿ ತಾಲೂಕಿನಲ್ಲಿ (ನೆಮ್ಮಾರು) ಕಂಡುಬಂದಿದೆ. ತುಂಗಾ ನದಿಯ ಹಾಗೂ ನದಿಗೆ ಸೇರುವ ಚಿಕ್ಕಪುಟ್ಟ ಹಳ್ಳಗಳಲ್ಲಿ ಈ ಕಪ್ಪೆಯು ಕಂಡುಬಂದಿರುವುದರಿಂದ ಈ ಕಪ್ಪೆಗೆ “ತುಂಗಾ ನದಿ ಇರುಳುಕಪ್ಪೆ” (Nyctibatrachus tunga) ಎಂದು ನಾಮಕರಣ ಮಾಡಲಾಗಿದೆ. ಇದನ್ನು ದಿನಾಂಕ 15-11-2022 ರಂದು, Zootaxa ಪತ್ರಿಕೆಯ ಮೂಲಕ ವಿಜ್ಞಾನ ಜಗತ್ತಿಗೆ ತೆರೆದಿಡಲಾಗಿದೆ. ಈ ವೈಜ್ಞಾನಿಕ ಲೇಖನದ ಲೇಖಕರು ಪವನ್ ಕುಮಾರ್ (ನಾನು), ವಿಶ್ವಜಿತ್, ದಯಾನಂದ, ಅನಿಶ, ಪ್ರೀತಿ, ಗುರುರಾಜ ರವರು. ಕೇವಲ ಸಂರಕ್ಷಿತ ಪ್ರದೇಶಗಳನ್ನು ಮಾತ್ರವಲ್ಲದೇ ಪಶ್ಚಿಮ ಘಟ್ಟಗಳ ಸಾಗುವಳಿ ಆಧಾರಿತ ಪ್ರದೇಶಗಳ ಸಂರಕ್ಷಣೆ ಕೂಡ ಅವಶ್ಯಕವಾಗಿದೆ ಎಂಬುದು ಈ ಅಧ್ಯಯನದ ಮೂಲಕ ತಿಳಿಯುತ್ತಿದೆ. ಆಸಕ್ತರು ಈ ಕೆಳಗೆ ನೀಡಿರುವ ಅಂತರ್ಜಾಲದ ಕೊಂಡಿಯ ಮೂಲಕ ಪೂರ್ಣ ಪ್ರಬಂಧವನ್ನು ವೀಕ್ಷಿಸಬಹುದಾಗಿದೆ.
https://www.mapress.com/zt/article/view/zootaxa.5209.1.4
.
ಲೇಖನ: ಪವನ್ ಕುಮಾರ್ ಕೆ. ಎಸ್..
ಚಿಕ್ಕಮಗಳೂರು ಜಿಲ್ಲೆ