ಸೋಜಿಗದ ಸೋಲಿಗರ ಕಣಜ ಪತ್ತೆ.

ಸೋಜಿಗದ ಸೋಲಿಗರ ಕಣಜ ಪತ್ತೆ.

©ATREE

ಅಶೋಕ ಟ್ರಸ್ಟ್ ಫಾರ್ ರಿಸರ್ಚ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್ (ATREE) ನ ಕೀಟಶಾಸ್ತ್ರಜ್ಞರ ತಂಡ ಚಾಮರಾಜನಗರದ ಬಿಳಿಗಿರಿ ರಂಗನಬೆಟ್ಟ ಮತ್ತು ಮಲೆ ಮಹದೇಶ್ವರ ಬೆಟ್ಟಗಳಲ್ಲಿ ಡಾರ್ವಿನ್ ಕಣಜಗಳ ಕುಟುಂಬದ, ಮೆಟೋಪಿನೆ ಉಪಕುಟುಂಬಕ್ಕೆ ಸೇರಿದ ಇಚ್ನೋಮೊನಿಡೆ – ಕಣಜವನ್ನು ಪತ್ತೆಮಾಡಿದೆ.

ಈ ಹೊಸ ಕಣಜದ ಮಾದರಿ (ಸ್ಪೆಸಿಮನ್) ಗಳನ್ನು ಪಶ್ಚಿಮ ಘಟ್ಟದ ಶುಷ್ಕ, ಎಲೆ ಉದುರುವ ಕಾಡುಗಳು ಮತ್ತು ಈಶಾನ್ಯ ಹಿಮಾಲಯದ ಆರ್ದ್ರ ಅರಣ್ಯಗಳಿಂದ ಸಂಗ್ರಹಿಸಲಾಗಿದೆ. ದಕ್ಷಿಣ ಭಾರತದ ಕಾಡುಗಳಲ್ಲಿ ಪತ್ತೆಯಾದ ಈ ಹೊಸ ಪ್ರಭೇದದ ಕಣಜವು ಮೆಟೋಪಿನೆ ಉಪಕುಟಂಬದ ಎರಡನೇ ಹಾಗು ದಕ್ಷಿಣ ಭಾರತದಿಂದ ವರದಿಯಾದ ಮೊದಲ ಕಣಜವಾಗಿದೆ ಎಂದು ಸಂಶೋಧನಾ ತಂಡದ ಹಿರಿಯ ಸಂಶೋಧಕರಾದ ಡಾ. ಪ್ರಿಯದರ್ಶನ್ ಧರ್ಮರಾಜನ್ ಮತ್ತು ರಂಜಿತ್ ಎ. ಪಿ. ವಿಜಯ ಕರ್ನಾಟಕ ಪತ್ರಿಕೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯು 2ನೇ ಫೆಬ್ರವರಿ 2023 ರಲ್ಲಿ ಪ್ರಕಟವಾಗಿತ್ತು.

© ATREE

ಈ ಸಂಶೋಧನಾ ಆವಿಷ್ಕಾರವನ್ನು ಯುರೋಪಿಯನ್ ಜರ್ನಲ್ ಆಫ್ ಟ್ಯಾಕ್ಸಾನಮಿಯಲ್ಲಿ ಪ್ರಕಟಿಸಲಾಗಿದೆ. ಮೆಟೋಪಿನೆ ಉಪಕುಟಂಬವು 27 ಜೆನೆರಾಗಳನ್ನು (ಕುಲ) ಮತ್ತು 862 ಪ್ರಭೇದದ ಕಣಜಗಳನ್ನೊಳಗೊಂಡಿದೆ. ಇವುಗಳಲ್ಲಿ ಹೆಚ್ಚಿನ ಪ್ರಭೇದದ ಕಣಜಗಳು ಪ್ಯಾಲೆಯಾರ್ಕ್ಟಿಕ್, ನಿಯೋಟ್ರೋಪಿಕ್ಲ ಮತ್ತು ನಾರ್ಕ್ಟಿಕ್ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಸೋಲಿಗರು ಬಿಳಿಗಿರಿ ರಂಗನ ಬೆಟ್ಟದ ವಾಸಿಗಳಾಗಿದ್ದು, ಬಿ. ಆರ್. ಟಿ ವನ್ಯಜೀವಿ ಅಭಯಾರಣ್ಯದ ಸುಸ್ಥಿರತೆ ಮತ್ತು ಅದನ್ನು ಸಂರಕ್ಷಿಸುವಲ್ಲಿ ಈ ಸ್ಥಳೀಯ ಸಮುದಾಯದ ಪ್ರಯತ್ನ ಶ್ಲಾಘನೀಯ, ಹಾಗಾಗಿ ಇವರ ಈ ಕಾರ್ಯಕ್ಕೆ ಗೌರವಸೂಚಕವಾಗಿ ಈ ವರ್ಣರಂಜಿತ ಹೊಸ ಕಣಜಕ್ಕೆ “ಸೋಲಿಗ ಎಕಾರಿನಾಟ (Soliga Ecarinata)” ಎಂದು ಹೆಸರಿಸಲಾಗಿದೆ.

© ATREE

ಬಿ. ಆರ್. ಟಿ. ಅಭಯಾರಣ್ಯವು 120 ಪ್ರಭೇದದ ಇರುವೆ, 120 ಪ್ರಭೇದದ ಚಿಟ್ಟೆ, 105 ಪ್ರಭೇದದ ಜೀರುಂಡೆಗಳ ಆವಾಸವಾಗಿದೆ. ಸೋಲಿಗರು ಬಿಳಿಗಿರಿ ರಂಗನ ಬೆಟ್ಟದಲ್ಲಿನ ಸ್ಥಳೀಯ ಸಮುದಾಯವಾಗಿದ್ದು, ಅಭಯಾರಣ್ಯದ ಸೂಕ್ಷ್ಮತೆಗಳನ್ನು ಚೆನ್ನಾಗಿ ಅರಿತವರಾಗಿದ್ದಾರೆ ಮತ್ತು ಈ ಅಭಯಾರಣ್ಯದ ಜೊತೆ ಭಾವನಾತ್ಮಕ ನಂಟನ್ನು ಹೊಂದಿದ್ದಾರೆ.  ಹೀಗಾಗಿ ಹೊಸ ಕಣಜಕ್ಕೆ ಸೋಲಿಗರ ಹೆಸರನ್ನಿಟ್ಟಿರುವುದು ತುಂಬ ಸೂಕ್ತವಾಗಿದೆ. ಕೀಟಗಳು ಕಾಡಿನ ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಮಹತ್ತರ ಪಾತ್ರವಹಿಸುತ್ತವೆ.

ಲೇಖನ: ಮಂಜುನಾಥ ಎಸ್. ನಾಯಕ.
             ಗದಗ ಜಿಲ್ಲೆ
.

Print Friendly, PDF & Email
Spread the love
error: Content is protected.