ಶರೀರವನ್ನು ವಜ್ರಕಾಯವಾಗಿಸುವ ಸಸ್ಯ “ತುತ್ತಿ” ಗಿಡ

ಶರೀರವನ್ನು ವಜ್ರಕಾಯವಾಗಿಸುವ ಸಸ್ಯ “ತುತ್ತಿ” ಗಿಡ

©ಶಶಿಧರಸ್ವಾಮಿ ಆರ್. ಹಿರೇಮಠ

ಸಂಜೆ ನಾಲ್ಕರ ಸಮಯ, ಕೈಯಲ್ಲಿ ಕ್ಯಾಮೆರಾ ಹಿಡಿದು ಪಕ್ಷಿ ವೀಕ್ಷಣೆಗೆ ಸಾಗುತ್ತಿದ್ದೆ. ಹೊಲದ ಬದುಗಳಲ್ಲಿ ಪೊದೆಯಾಕಾರದ ಗಿಡ; ಅದರಲ್ಲಿ ಬಿರಿದ ಹಳದಿ ಹೂವುಗಳು ಬಲು ಆಕರ್ಷಣೀಯವಾಗಿ ಕಂಡವು. ಆ ಸಸ್ಯದ ಎಲೆ, ಹೂವು, ಕಾಯಿಗಳ ಫೋಟೊ ಕ್ಲಿಕ್ಕಿಸಿಕೊಂಡೆ. ಇದಕ್ಕೆ ತುತ್ತಿ ಎಂಬ ಹೆಸರಿದ್ದು, ಗ್ರಾಮ್ಯ ಭಾಷೆಯಲ್ಲಿ ತುರುಬಿ ಗಿಡ ಎಂತಲೂ, ಕನ್ನಡದಲ್ಲಿ ಪೆಟ್ಟಿಗೆ ಗಿಡ, ಮುದ್ರೆ ಗಿಡಗಳೆಂಬ ಇತ್ಯಾದಿ ಹೆಸರುಗಳು ಉಂಟು. ಸಂಸ್ಕೃತದಲ್ಲಿ “ಅತಿಬಲ” ಎಂದು ಕರೆಯಲಾಗುತ್ತದೆ. ಇಂಗ್ಲೀಷ್ ನಲ್ಲಿ ಹೇರಿ ಇಂಡಿಯನ್ ಮಾಲ್ವೋ (Hairy Indian Mallow) ಅಥವಾ ಇಂಡಿಯನ್ ಮಾಲ್ವೋ (Indian Mallow) ಎಂದು ಕರೆದು ಸಸ್ಯಶಾಸ್ತ್ರೀಯವಾಗಿ “ಅಬುಟಿಲೋನ್ ಹಿರ್ಟಮ್” (Abutilon hirtum), Synonyms: Abutilon heterotrichum, Abutilon indicum var. hirtum) ಎಂದು ಹೆಸರಿಸಿ, ಮಾಲ್ವೇಸೀ (Malvaceae) ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ.

ಈ ಸಸ್ಯದ ಮೂಲ ಭಾರತ. ಇದು ಬಹುವಾರ್ಷಿಕ (ದಿರ್ಘಕಾಲಿಕ)ವಾಗಿ 0.5 ರಿಂದ 2 ಮೀಟರ್ ಎತ್ತರ ಬೆಳೆಯುವ ಪೊದೆ ಗಿಡವಾಗಿದೆ. ಬುಡದಿಂದ ಅನೇಕ ಕವಲೊಡೆದ ಹಸಿರಾದ ಕಾಂಡಗಳಲ್ಲಿ ಸೂಕ್ಷ್ಮ ರೋಮಗಳಿವೆ. ಹೃದಯಾಕಾರದ ತುದಿಯಲ್ಲಿ ಮೊನಚಾದ ಎಲೆಗಳ ಕೆಳ ಹಾಗೂ ಮೇಲ್ಭಾಗವು ತಿಳಿ ಹಸಿರು, ನಾಳ ವಿನ್ಯಾಸವು ಎದ್ದು ಕಾಣುತ್ತದೆ. ಪರ್ಯಾಯ ಜೋಡಣೆ ಹೊಂದಿರುವ ಎಲೆಗಳ ಅಂಚು ಗರಗಸದ ಹಲ್ಲಿನಂತಿವೆ. ಎಲೆಗಳಲ್ಲಿ ಅಂಟು ಅಂಟಾದ ಸಣ್ಣ ಸಣ್ಣ ಮೃದು ರೋಮಗಳಿರುವುದರಿಂದ ಮಖಮಲ್ (ವೆಲ್‌ವೆಟ್ಟ) ಬಟ್ಟೆಯನ್ನು ಮುಟ್ಟಿದಂತಾಗುತ್ತದೆ. ಎಲೆಗಳ ಕಂಕುಳಲ್ಲಿ ಕಿತ್ತಳೆ ಹಳದಿಯುಕ್ತವಾಗಿ ಮಧ್ಯದಲ್ಲಿ ಕೆಂಪಾಗಿರುವ ಐದು ಪಕಳಿಗಳಿರುವ ಒಂಟಿ ಹೂವು ಅರಳುತ್ತದೆ. ಹೂವಿನ ಮಧ್ಯದಲ್ಲಿ ಕೆಂಪು-ಹಳದಿ ಜುಟ್ಟಿನಾಕಾರದ ಕೇಸರಗಳ ಕುಚ್ಚವಿದೆ. ಕೆಂಪು ಬಣ್ಣದ ನಳಿಕೆ ಸುತ್ತಲೂ ಗಾಢ ಹಳದಿ ಬಣ್ಣದ ಪರಾಗ ಕೋಶವಿದೆ. ಈ ಪುಷ್ಪಗಳು ಮಧ್ಯಾಹ್ನದ ನಂತರ ಅರಳಿ ಮುಂಜಾನೆಗೆ ಬಾಡುತ್ತವೆ, ಮತ್ತೆ ಮಧ್ಯಾಹ್ನ ಅರಳುವ ನಡುವಳಿಕೆ ಹೊಂದಿವೆ. ಪರಾಗಸ್ಪರ್ಶವಾದ ಹೂವುಗಳಿಂದ ಠಸ್ಸೆಯಂತಿರುವ (ಮುದ್ರೆ) ಹಸಿರು ಕಾಯಿಗಳು ಬಲಿತು ಒಣಗಿದಾಗ ಕಪ್ಪಾಗುತ್ತವೆ. ನೋಡಲು ಮುದ್ರೆಯಂತಿರುವ ಕಾಯಿಗಳಿಂದ ಈ ಸಸ್ಯಕ್ಕೆ ಮುದ್ರೆ ಗಿಡ ಎಂಬ ಹೆಸರು ಬಂದಿದೆ. ಕಪ್ಪಾದ ಕಾಯಿಗಳಲ್ಲಿ ಸಣ್ಣದಾದ ಸಂಯುಕ್ತ ಬೀಜಗಳಿವೆ. ಈ ಸಸ್ಯವು ಪಾಳುಭೂಮಿ, ಕೃಷಿಪ್ರದೇಶದ ಬದುಗಳು, ಹಾದಿಯ ಇಕ್ಕೇಲಗಳಲ್ಲಿ, ಕುರುಚಲು ಕಾಡುಗಳಲ್ಲಿ ಹುಲುಸಾಗಿ ಕಳೆಗಿಡದಂತೆ ಬೆಳೆಯುತ್ತದೆ. ಈ ಸಸ್ಯವನ್ನು ಕರ್ನಾಟಕದೆಲ್ಲೆಡೆ ಕಾಣಬಹುದು.

ರಾಮಾಯಣ ಹಾಗೂ ಮಹಾಭಾರತದಲ್ಲಿ ಉಲ್ಲೇಖ: ಆಯುರ್ವೇದ ತಜ್ಞರಾದ ಪಾರ್ಥಸಾರಥಿ ಕ್ಷತ್ರಿಯರವರು ಹೇಳುವಂತೆ ಅತಿಬಲ ಗಿಡದ ಬಗ್ಗೆ ರಾಮಾಯಣ ಹಾಗೂ ಮಹಾಭಾರತದಲ್ಲಿ ಉಲ್ಲೇಖವಿದ್ದು, ವಿಶ್ವಾಮಿತ್ರ ಮಹರ್ಷಿಗಳು ಬ್ರಾಹ್ಮೀ ಮುಹೂರ್ತದಲ್ಲಿ ನಿರ್ಜನ ಪ್ರದೇಶದಲ್ಲಿ ಶ್ರೀರಾಮ-ಲಕ್ಷ್ಮಣರಿಗೆ ರಹಸ್ಯವಾಗಿ ಮಂತ್ರೋಪದೇಶ ಮಾಡುತ್ತಿದ್ದಾಗ, ಅಲ್ಲೇ ಬೆಳೆದಿದ್ದ ಗಿಡಗಳೆರಡು ರಹಸ್ಯ ಮಂತ್ರೋಪದೇಶ ಕೇಳಿಸಿಕೊಂಡುಬಿಟ್ಟವು, ಇದನ್ನು ಮನಗೊಂಡ ಮಹರ್ಷಿಗಳು, ನೀವು ಎಲ್ಲೆಂದರಲ್ಲಿ ಬೆಳೆದು ಬಲ-ಅತಿಬಲವೆಂಬ ಹೆಸರಿಂದ ಜನರ ಆರೋಗ್ಯ ರಕ್ಷಣೆ ಮಾಡಿರೆಂದು ಆಶೀರ್ವಾದ ಮಾಡಿದರಂತೆ.

ಇನ್ನು ಮಹಾಭಾರತ ಕಾಲಘಟ್ಟದಲ್ಲಿ, ಕುರುಕುಲದ ಯುವರಾಜ ದುರ್ಯೋಧನನ ತಾಯಿಯಾದ ಗಾಂಧಾರಿ, ಋಷಿಮುನಿಗಳ ಹಿತೋಪದೇಶದಂತೆ ತನ್ನ ಮಗನಿಗೆ ಯಾವುದೇ ಆಯುಧಗಳಿಂದ ಸಾವು ಬಾರದಂತೆ, ದೇಹ ವಜ್ರಕಾಯವಾಗಲೆಂದು ಅತಿಬಲದ ರಸವನ್ನು ಅಭಿಮಂತ್ರಿಸಿ, ದೇಹಕ್ಕೆಲ್ಲ ಲೇಪನ ಮಾಡುತ್ತಿದ್ದಾಗ, ಶ್ರೀಕೃಷ್ಣನ ತಂತ್ರಗಾರಿಕೆಯಿಂದ ತೊಡೆಯ ಭಾಗವನ್ನು ಬಿಟ್ಟಿದ್ದ ಕಾರಣ, ದುರ್ಯೋಧನನ ಅಂತ್ಯಕ್ಕೆ ಕಾರಣವಾಯ್ತು ಎಂದು ಮಹಾಭಾರತ ಗ್ರಂಥದಲ್ಲಿ ಉಲ್ಲೇಖವಿದೆ. ನಮ್ಮ ಪೂರ್ವಿಕರು, ಋಷಿಮುನಿಗಳು ಪ್ರಕೃತಿಯಲ್ಲಿನ ಅನೇಕ ವನಮೂಲಿಕೆಗಳಲ್ಲಿನ ಔಷಧೀಯ ಗುಣಗಳ ಮಹತ್ವವನ್ನು ಅರಿತು ಜನರ ಒಳಿತಿಗಾಗಿ ಪರಿಚಯಿಸಿದ್ದಾರೆ. ಅಂತಹ ವನಮೂಲಿಕೆಗಳಲ್ಲಿ ಅತಿಬಲ ಗಿಡವು ಒಂದು ಅದ್ಭುತವಾದ ಔಷಧೀಯ ಸಸ್ಯ. ಇದರಲ್ಲಿನ ಅಪಾರವಾದ ಶಕ್ತಿಯನ್ನು ಮನಗೊಂಡ ಋಷಿವರ್ಯರು “ಅತಿಬಲ” ಎಂದು ಕರೆದರು. ಇದರ ಸೇವನೆಯಿಂದ ಮಾನವರ ದೇಹ ವಜ್ರದಂತೆ ಗಟ್ಟಿಯಾಗುತ್ತೆ ಎಂದು ಪೂರ್ವಿಕರು ಇದನ್ನ “ವಜ್ರಕಾಯ”ಎಂದು ಕರೆದರು.


ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
.
         ಹಾವೇರಿ ಜಿಲ್ಲೆ

Print Friendly, PDF & Email
Spread the love
error: Content is protected.