ಮೂಕ ರೋದನೆ
© ಗುರುಪ್ರಸಾದ್ ಕೆ. ಆರ್
ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ಇತ್ತೀಚಿನ ಕೆಲವು ವರ್ಷಗಳಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದು ತಂತಾನೇ ಸೃಷ್ಟಿಯಾದ ಸ್ವಾಭಾವಿಕ ಸಂಗತಿಯೇ? ಈ ಪ್ರಶ್ನೆ ನಿತ್ಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳ ಕೆಲ ಲೇಖನಗಳಲ್ಲಿ ಕೋಲ್ಮಿಂಚಿನಂತೆ ಮಿಂಚಿ ಮರೆಯಾಗುತ್ತಿರುತ್ತದೆ. ಆದರೆ ಇಂದಿಗೂ ಇದು ಗಂಭೀರ ಚರ್ಚೆಯ ವಿಷಯವಾಗದಿರುವುದು ಮಾತ್ರ ಅತ್ಯಂತ ಕಳವಳಕರ ಹಾಗೂ ನೋವಿನ ಸಂಗತಿ.
ಈ ಲೇಖನದ ಆರಂಭದಲ್ಲಿ ತಿಳಿಸಿದಂತೆ ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ಸರ್ವೇಸಾಮಾನ್ಯವಲ್ಲ, ಬದಲಾಗಿ ನಾವು ಅದನ್ನು ಅನಿವಾರ್ಯ ಹಾಗೂ ಸರ್ವೇಸಾಮಾನ್ಯವಾಗಿಸಿ ಬಿಟ್ಟಿದ್ದೇವೆ ಎಂದರೆ ಖಂಡಿತ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಹೊಣೆಗಾರರು ಬೇರೆ ಯಾವುದೋ ಅನ್ಯಗ್ರಹ ಜೀವಿಯಂತೂ ಖಂಡಿತ ಅಲ್ಲ. ಈ ಎಲ್ಲಾ ಸಂಘರ್ಷಗಳ ಮೂಲ ಕಾರಣಿಭೂತ ಯಾರು ಎಂದು ಹುಡುಕುತ್ತಾ ಹೊರಟರೆ, ಎಲ್ಲಾ ಬೆರಳುಗಳು ಮಾನವನ ಕಡೆಗೆ ತಿರುಗುತ್ತವೆ. ಮಾನವನ ದುರಾಸೆ, ಪ್ರಾಕೃತಿಕ ಸಂಪನ್ಮೂಲಗಳೆಲ್ಲವೂ ಕೇವಲ ತನಗೆ ಮಾತ್ರ ಸೃಷ್ಟಿಯಾದಂತವು ಎಂಬ ಸ್ವಾರ್ಥ ಮನೋಭಾವವೇ ಇದೆಲ್ಲಕ್ಕೂ ಕಾರಣ.
ವಿಜ್ಞಾನದ ಪ್ರಕಾರ ಪ್ರಪಂಚದಲ್ಲಿ ಉನ್ನತ ಸ್ಥರದಲ್ಲಿರುವ ಹಾಗೂ ಶ್ರೇಷ್ಠ ಜೀವಿ ಎನಿಸಿಕೊಂಡಿರುವ ಪ್ರಾಣಿ, ‘ಮಾನವ’. ಆದರೆ ನಿಜವಾಗಿಯೂ ‘ಮಾನವ’ ಶ್ರೇಷ್ಠ ಜೀವಿಯೇ? ನನಗೆ ಖಂಡಿತ ಇದರಲ್ಲಿ ಸಂದೇಹವಿದೆ. ಸುತ್ತಮುತ್ತಲಿನ ಎಲ್ಲಾ ಜೀವಿಗಳು, ಅವುಗಳ ಆವಾಸಸ್ಥಾನ ಎಲ್ಲವನ್ನೂ ಹಾಳು ಮಾಡಿ, ತಾನು ಮಾತ್ರ ಈ ಭೂಮಿಯಲ್ಲಿ ಉಳಿಯಬೇಕು ಎಂಬ ಧೋರಣೆ ಹೊಂದಿದವನು ಶ್ರೇಷ್ಠ ಪ್ರಾಣಿ ಹೇಗಾದಾನು?
ಇತ್ತೀಚಿನ ಕೆಲ ದಿನಗಳಲ್ಲಿ ಅತಿಯಾಗಿ ಚರ್ಚೆಗೆ ಗ್ರಾಸವಾದದ್ದು ಎಂದರೆ ಮಾನವನ ಮೇಲೆ ಆದ ಚಿರತೆಗಳ ದಾಳಿ. ಈ ಚರ್ಚೆ ದಿನಪತ್ರಿಕೆಯ ಒಂದೆರಡು ಲೇಖನದ ಹಾಗೂ ದೃಶ್ಯಮಾಧ್ಯಮದ ಕೆಲ ನಿಮಿಷಗಳ ಕಾರ್ಯಕ್ರಮಗಳಿಗೆ ಸೀಮಿತವಾಗಿ ಕೊನೆಗೊಂಡಿತು. ಆದರೆ ಇದನ್ನು ನಾವ್ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಏಕೆಂದರೆ ಕಾಡು, ಕಾಡು ಪ್ರಾಣಿಗಳ ಮಹತ್ವದ ಕುರಿತು ನಮಗಿರುವ ಅರಿವಿನ ಕೊರತೆ. ಅರಿವಿನ ಕೊರತೆಯೋ ಅಥವಾ ಪ್ರಾಣಿಗಳಲ್ಲಿ ನಾವೇ ಶ್ರೇಷ್ಠ, ನಾವು ಮಾತ್ರ ಬದುಕಿದ್ದರೆ ಸಾಕು, ಬೇರೆ ಪ್ರಾಣಿ-ಪಕ್ಷಿಗಳು ಉಳಿದರೆಷ್ಟು, ಬಿಟ್ಟರೆಷ್ಟು? ಎಂಬ ನಮ್ಮ ಮನೋಧೋರಣೆಯೊ? ನನಗಂತೂ ತಿಳಿದಿಲ್ಲ.
ಆಹಾರ ಸರಪಳಿಯಲ್ಲಿ ಮಾಂಸಾಹಾರಿ ಪ್ರಾಣಿಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಹುಲಿ, ಚಿರತೆಯಂತಹ ಬೇಟೆ ಪ್ರಾಣಿಗಳು ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ಅತ್ಯಾವಶ್ಯಕ. ಚಿರತೆಗಳು ಸಾಮಾನ್ಯವಾಗಿ ಮನುಷ್ಯನ ಮೇಲೆ ದಾಳಿ ಮಾಡುವುದು ವಿರಳ. ಮೂಲತಃ ಅವು ನಾಚಿಕೆ ಸ್ವಭಾವದ ಪ್ರಾಣಿಗಳು. ಸಾಮಾನ್ಯವಾಗಿ ಕಾಡಿನಲ್ಲಿ ಬೇಟೆಯಾಡಿ ತಿನ್ನಲು ಸಾಧ್ಯವಿಲ್ಲದ ಚಿರತೆಗಳು ಅಥವಾ ತನ್ನ ಮೇಲೆ ಎಲ್ಲಿ ದಾಳಿ ಮಾಡಿಬಿಡುತ್ತಾರೋ ಎಂಬ ಭಯದಿಂದ ಅವುಗಳು ಮಾನವನ ಮೇಲೆ ದಾಳಿ ಮಾಡುತ್ತವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ದಿನಾಂಕ: 03/12/2022 ರಂದು ಮೈಸೂರಿನಲ್ಲಿ 23 ವರ್ಷದ ಯುವತಿಯನ್ನು ಚಿರತೆ ಬಲಿ ಪಡೆದದ್ದು, ನಂತರ ದಿನಾಂಕ: 10/12/2022 ರಂದು ತುಮಕೂರಿನ ಇಬ್ಬರು ಹುಡುಗರ ಮೇಲಾದ ದಾಳಿ. ಇಂತಹ ಸಂದರ್ಭಗಳಲ್ಲಿ ದಾಳಿ ಮಾಡಿದ ಚಿರತೆ ಸಿಗದಿದ್ದಾಗ ಅಥವಾ ಪದೇ ಪದೇ ಚಿರತೆ ದಾಳಿಗಳಾದಾಗ ಒತ್ತಡಕ್ಕೆ ಮಣಿದು ಅಂತಹ ಚಿರತೆಗಳನ್ನು ಕೊಲ್ಲಲು ಸರ್ಕಾರ ಕೆಲವು ಸಲ ಆದೇಶ ಹೊರಡಿಸುವುದುಂಟು. ನಾವು ಮಾತ್ರ ಬದುಕಲು ಯೋಗ್ಯವಾದ ಪ್ರಾಣಿಗಳು, ಇನ್ನುಳಿದ ಜೀವಜಂತುಗಳೆಲ್ಲವೂ ಪ್ರಕೃತಿಯಲ್ಲಿರಲು ಯೋಗ್ಯವಲ್ಲ ಎಂಬ ಧೋರಣೆಯ ಇನ್ನೊಂದು ಮುಖ.
ಬೆಂಗಳೂರು, ಮೈಸೂರುಗಳಂತಹ ಜನನಿಬಿಡ ಮಹಾನಗರಗಳಲ್ಲಿ ಚಿರತೆ ಕಾಣಿಸಿಕೊಂಡು, ದಾಳಿ ಮಾಡುತ್ತಿರುವುದು ನಿಜಕ್ಕೂ ಚಿಂತಿಸಬೇಕಾದ ವಿಷಯ. ಇದಕ್ಕೆಲ್ಲ ಕಾರಣ ಅವುಗಳ ಆವಾಸಸ್ಥಾನವಾದ ಕಾಡಿನ ಅತಿಯಾದ ನಾಶ, ಅಕ್ರಮ ಗಣಿಗಾರಿಕೆ, ಪ್ರಾಣಿಗಳು ವಾಸಿಸಲು ಯೋಗ್ಯವಾದ ಪರಿಸರದ ನಾಶವೇ ಹೊರತು, ಇನ್ಯಾವುದೂ ಅಲ್ಲ. ರಾಮನಗರದ ಸುತ್ತಮುತ್ತ ಇತ್ತೀಚೆಗೆ ಚಿರತೆಗಳು ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದು ವರದಿಯಾಯಿತು. ಅದಕ್ಕೆ ಕಾರಣವಾದದ್ದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ. ಮಾನವನಿಗೆ ಸಂಪರ್ಕ ಸಾಧಿಸಲು ಹೆದ್ದಾರಿಗಳು ಎಷ್ಟು ಮುಖ್ಯವೋ, ಕಾಡುಪ್ರಾಣಿಗಳಿಗೆ ಒಂದು ಅರಣ್ಯ ಪ್ರದೇಶದಿಂದ ಇನ್ನೊಂದು ಅರಣ್ಯ ಪ್ರದೇಶಕ್ಕೆ ಸರಾಗವಾಗಿ ಓಡಾಡಲು “ಪ್ರಾಣಿಗಳ ಕಾರಿಡಾರ್” ಕೂಡ ಅಷ್ಟೇ ಮುಖ್ಯ. ಆದರೆ ರಾಮನಗರದ ಸುತ್ತ-ಮುತ್ತ ಹೆದ್ದಾರಿ ಹಾದು ಹೋಗುವಲ್ಲಿ ಈ ತರಹದ “ಪ್ರಾಣಿಗಳ ಕಾರಿಡಾರ್” ನಿರ್ಮಿಸಲಾಗಿದೆ ಎಂಬುದು ರಾಜಕಾರಣಿಗಳ ವಾದ. ನಿಜಕ್ಕೂ ‘ಕಾರಿಡಾರ್’ ನಿರ್ಮಾಣವಾಗಿದೆಯೋ? ಗೊತ್ತಿಲ್ಲ.
ಇದೆಲ್ಲವನ್ನು ಗಮನಿಸಿದರೆ ಕಾಡುಪ್ರಾಣಿಗಳು ಅವುಗಳ ಉಳಿವಿಗಾಗಿ ಸಂಘರ್ಷಕ್ಕಿಳಿದಿವೆ, ನಾವು ಅವುಗಳ ನಾಶಕ್ಕಾಗಿ ಸಂಘರ್ಷಕ್ಕೆ ಇಳಿದಿದ್ದೇವೆ. ಪ್ರಾಣಿಗಳು ನಮ್ಮ ಮನೆಗಳಿಗೆ ದಾಳಿ ಮಾಡುತ್ತಿಲ್ಲ, ಬದಲಾಗಿ ನಾವೇ ಅವುಗಳ ವಾಸ ಸ್ಥಾನಗಳ ಮೇಲೆ ದಾಳಿ ಮಾಡುತ್ತಿದ್ದೇವೆ. ರಸ್ತೆ ಅಭಿವೃದ್ಧಿ, ಅಣೆಕಟ್ಟುಗಳ ನಿರ್ಮಾಣ, ಅಂತೆಲ್ಲ ಅವುಗಳ ಜಾಗವನ್ನು ನಾವು ಆಕ್ರಮಿಸಿಕೊಂಡು ಕೂತಿದ್ದೇವೆ. ನಮಗೆ ಅನ್ಯಾಯವಾದರೆ ಅಥವಾ ನಮ್ಮ ಸ್ಥಳವನ್ನು ಬೇರೆ ಯಾರೋ ಅತಿಕ್ರಮಿಸಿದರೆ ನಾವು ನ್ಯಾಯಾಲಯದ ಮೊರೆ ಹೋಗಿ, ದೂರು ದಾಖಲಿಸಿ, ಪ್ರತಿಭಟಿಸಿ ಹೋರಾಡಬಹುದು. ಆದರೆ ದುರದೃಷ್ಟವಶಾತ್ ಮಾತು ಬಾರದ ಪ್ರಾಣಿ ಪಕ್ಷಿಗಳಿಗೆ ಈ ಸೌಲಭ್ಯವಿಲ್ಲ. ಅವುಗಳದ್ದು ಯಾರೊಂದಿಗೂ ಹೇಳಿಕೊಳ್ಳಲಾಗದಂತಹ ಮೂಕ ರೋದನೆ.
ಪ್ರಕೃತಿ, ಕಾಡು ಉಳಿಯಬೇಕಾದರೆ ಜೀವ ವೈವಿಧ್ಯತೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಜೀವವೈವಿಧ್ಯತೆ ಇದ್ದಾಗ ಮಾತ್ರ ಎಲ್ಲವೂ ಸಮತೋಲನದಿಂದಿರಲು ಸಾಧ್ಯ. ಇಲ್ಲವಾದರೆ ಎಲ್ಲಾ ಜೀವಸಂಕುಲವೂ ವಿನಾಶದ ಅಂಚಿಗೆ ಬಂದು ನಿಲ್ಲುತ್ತದೆ. ಈಗಾಗಲೇ ಕೆಲ ಅತ್ಯಮೂಲ್ಯ ಪ್ರಾಣಿ ಹಾಗೂ ಸಸ್ಯ ಸಂಕುಲಗಳು ಕಣ್ಮರೆಯಾಗಿವೆ. ಮಾನವನ ದಾಳಿಗೆ ತುತ್ತಾಗಿ ಅದೆಷ್ಟೋ ಪ್ರಭೇದದ ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಪತ್ತು ನಾಶವಾಗಿದೆ. ಅವುಗಳ ಮೇಲೆ ಪದೇ ಪದೇ ದಾಳಿಗಳಾದಾಗ ಅವು ಪ್ರತಿರೋಧ ತೋರದೆ ಮೂಕವಾಗಿ ರೋಧಿಸುತ್ತ ನಿರ್ಗಮಿಸುತ್ತವೆ. ಅವುಗಳ ನಿರ್ಗಮನ ನಮ್ಮೆಲ್ಲರ ನಿರ್ಗಮನದ ಮುನ್ಸೂಚನೆಯಾಗಿ ಕಾಣುತ್ತಿದೆ.
ಲೇಖನ: ಆನಂದಕುಮಾರ ಕೋತಂಬರಿ.
ರಾಮನಗರ ಜಿಲ್ಲೆ.
Super