ಮಿರಿಸ್ಟಿಕ ಜೌಗು

ಮಿರಿಸ್ಟಿಕ ಜೌಗು

©ಪ್ರಿಯಾ ರಂಗರಾವ್

ವನ್ಯ ಸಂಪತ್ತಿನ ಆಗರವಾದ ನಿತ್ಯ ಹರಿದ್ವರ್ಣ ಕಾಡುಗಳು ಅನೇಕ ಕೌತುಕಗಳ ತಾಣ. ಇಲ್ಲಿಯ ಇನ್ನೊಂದು ಅಚ್ಚರಿಯ ಲೋಕ “ಮಿರಿಸ್ಟಿಕ”. “ಮಿರಿಸ್ಟಿಕ ಜೌಗು”, ಕಾಡಿನಲ್ಲಿಯ ಸಿಹಿನೀರಿನ ಜೌಗು ಪ್ರದೇಶಕ್ಕೆ ಹೊಂದಿಕೊಂಡು ತನ್ನದೇ ಆದ ವಿಶಿಷ್ಠ ಜೀವ ವೈವಿಧ್ಯತೆಯಿಂದ ಕೂಡಿದೆ. ಹಿಂದೆ ಮಳೆ ಕಾಡುಗಳಲ್ಲಿ ಹೇರಳವಾಗಿದ್ದ ಇವುಗಳು ಈಗ ಪಶ್ಚಿಮ ಘಟ್ಟದ ಮಳೆಕಾಡಿನ ಅಲ್ಲಲ್ಲಿ ಕೊಂಚ ಉಳಿದಿವೆ.

©  ಪ್ರಿಯಾ ರಂಗರಾವ್

ಆರೋಗ್ಯವಾದ ಕಾಡು ತನ್ನಲ್ಲೇ ಮಳೆನೀರು ಕೊಯ್ಲು ಮಾಡಿಕೊಳ್ಳುತ್ತದೆ. ಇಂತಹ ಕಾರ್ಯಕ್ಕೆಂದೇ “ಮಿರಿಸ್ಟಿಕ ಜೌಗು” ಹೊಂದಿಕೊಂಡಿವೆ. ಇಲ್ಲಿನ ಮರಗಳ ಪ್ರಜಾತಿಯಲ್ಲಿ ಎರಡು ರೂಪದ ವಿಶಿಷ್ಠ ಬೇರಿನ ರಚನೆಯನ್ನು ಕಾಣಬಹುದು. ಒಂದಂಕಿ ಮರ ಎಂದು ಕರೆಯಲಾಗುವ ಜಿಮ್ನಕ್ಯಾಂಥೆರಾ ಕೆನಾರಿಕ (Gymnacranthera canarica) ಮರಗಳ ಬೇರು ಕನ್ನಡದ ಒಂದಂಕಿಯ ರೂಪದಲ್ಲಿ ಮೇಲೆದ್ದು, ಮತ್ತೇ ಭೂಮಿಗಿಳಿದಿವೆ. ಹಾಗಾಗಿಯೇ ಇವುಗಳನ್ನು ಒಂದಂಕಿ ಮರಗಳು ಎನ್ನುತ್ತೇವೆ. ಇನ್ನು ಮಿರಿಸ್ಟಿಕೆಸಿಯೆ (Myristicaceae) ಕುಟುಂಬಕ್ಕೆ ಸೇರಿದ ಇನ್ನೊಂದು ಮರ ಮಿರಿಸ್ಟಿಕ ಫಟುವ (Myristica fatua) ಕನ್ನಡದಲ್ಲಿ ಕಾಡು ಜಾಪತ್ರೆ ಅಥವಾ ರಾಮಪತ್ರೆ ಎಂದು ಕರೆಯಲಾಗುತ್ತದೆ. ಈ ಮರಗಳಿಗೆ ಕಾಂಡ್ಲ ಮರಗಳಲ್ಲಿ ಇರುವಂತೆ ಸ್ಟಿಲ್ಟ್ ಬೇರುಗಳನ್ನು ಕಾಣಬಹುದು. ಆದರೆ ಈ ಮರಗಳು ಕಾಂಡ್ಲಗಳಲ್ಲಾ! ಕಾಂಡ್ಲಕಾಡುಗಳು ಬೆಳೆಯುವ ಪರಿಸರ ಉಪ್ಪುನೀರಿನ ಜೌಗು. ಮಿರಿಸ್ಟಿಕ ಮತ್ತು ಕಾಂಡ್ಲ ಸಸ್ಯಗಳು ಬೇರೆ ಬೇರೆ ಕುಟುಂಬಕ್ಕೆ ಸೇರಿದವು. ಇದರ ಜೊತೆಗೆ ಭದ್ರಾಕ್ಷಿ (Elaeocarpus tuberculatus), ಬನಾಟೆ (Lophopetalum wightianum), ಬೊಬ್ಬಿ (Calophyllum apetalum), ಅರಶಿನ ಬೂರುಗ (Garcinia morella) ಮರಗಳನ್ನೂ ಕೂಡ ಈ ಜೌಗಿನಲ್ಲಿ ಸಾಮಾನ್ಯವಾಗಿ ಕಾಣಬಹುದು.

ಮಳೆಗಾಲದಲ್ಲಿ ಅಧಿಕ ನೀರನ್ನು ಈ ಜೌಗು ಪ್ರದೇಶ ಹೀರಿಕೊಂಡು, ಬೇಸಿಗೆಯಲ್ಲೂ ನದಿ ಹರಿವಿಗೆ ಕಾರಣವಾಗುತ್ತದೆ. ಇವುಗಳು ಹೆಚ್ಚು ಮಳೆಯಾದಾಗ ಪ್ರವಾಹ ತಡೆಯುವ ರಕ್ಷಕರೂ ಹೌದು! ಈ ಪರಿಸರಕ್ಕೆ ಹೊಂದಿಕೊಂಡಂತೆ ಅನೇಕ ವನ್ಯ ಜೀವಿಗಳ ಸಮೂಹಗಳು ವಿಕಸನವಾಗಿವೆ. ಮಿರಿಸ್ಟಿಕ ಸಫೈರ್ ಎನ್ನುವ ಕೋಲುದುಂಬಿ ಸೇರಿದಂತೆ ಅನೇಕ ಮರಗಳು, ಸಣ್ಣ ಕೀಟ ಮತ್ತು ಪ್ರಾಣಿ ವರ್ಗಗಳು ಈ ಪ್ರದೇಶಕ್ಕಷ್ಟೇ ಸೀಮಿತ. ಹೀಗೇ ಸೆಮಿಕಾರ್ಪಸ್ ಕತ್ತಲೇಕಾನೆನ್ಸಿಸ್ (Semecarpus kathalekanensis) ಉತ್ತರ ಕನ್ನಡದ ಕತ್ತಲೆ ಕಾನಿನಲ್ಲಿ ಕಂಡು ಬಂದ ಹೊಸ ಸಸ್ಯವರ್ಗಕ್ಕೆ ಒಳ್ಳೆಯ ಉದಾಹರಣೆ.

ಇಂತಹ ಪ್ರದೇಶಗಳು ಹಿಂದಿದ್ದ ಸಂಖ್ಯೆಯಲ್ಲಿ ಈಗಿಲ್ಲ. ಹವಾಮಾನ ವೈಪರೀತ್ಯ, ಜೌಗುಗಳ ನೀರಿನ ಹರಿವನ್ನು ತೋಟಕ್ಕೆ ತಿರುಗಿಸುವುದು, ಅಕ್ರಮ ಒತ್ತುವರಿಗಳಿಂದಾಗಿ, ಇಲ್ಲಿನ ವನ್ಯ ಸಮೂಹ ಅಳಿವಿನಂಚಿಗೆ ಬಂದು ತಲುಪಿವೆ. ಹೊರ ದೇಶದಿಂದ ನಮ್ಮಲ್ಲಿಗೆ ಬಂದ ಜಾಯಿಕಾಯಿ, ಜಾಪತ್ರೆಗಳು ನಮಗೆ ತಿಳಿದಿದೆಯೇ ಹೊರತು, ಇದೇ ಕುಟುಂಬಕ್ಕೆ ಸೇರಿದ ರಾಮಪತ್ರೆ, ಉದ್ದಪತ್ರೆ ಇತ್ಯಾದಿ ಮರಗಳ ಪರಿಚಯ ಇಲ್ಲದಿರುವುದು ವಿಷಾದನೀಯ. ಈಗಾದರೂ ನಮ್ಮ ಸುತ್ತಲಿನ ಜೀವವೈವಿಧ್ಯತೆಯನ್ನು ಅರಿತು, ಪರಿಸರ ಸುಸ್ಥಿರವಾಗುವಂತೆ ಕಾಪಾಡಿಕೊಳ್ಳಬೇಕಾಗಿದೆ.


ಲೇಖನ: ರಕ್ಷಾ
.
         ಉಡುಪಿ ಜಿಲ್ಲೆ

Print Friendly, PDF & Email
Spread the love
error: Content is protected.