ಮಾನವ – ವನ್ಯ ಜೀವಿಗಳ ಸಂಘರ್ಷ, ಸಹಬಾಳ್ವೆಯ ಮಂತ್ರ

© ಶ್ರೀನಿವಾಸ್ ಶಾಮಾಚಾರ್
ವನ್ಯಜೀವಿಗಳಾದ ಆನೆ, ಚಿರತೆ, ಹುಲಿ ಮುಂತಾದ ಪ್ರಾಣಿಗಳನ್ನು ಕಾಪಾಡಿಕೊಳ್ಳುವುದು ಈಗಿನ ಪರಿಸ್ಥಿತಿಯಲ್ಲಿ ನಮ್ಮ ಮುಂದಿರುವ ಅತೀ ಮುಖ್ಯವಾದ, ಕ್ಲಿಷ್ಟಕರವಾದ ಸವಾಲಾಗಿದೆ. ಅದಕ್ಕೆ ಕಾರಣ ಮಾನವ-ವನ್ಯಜೀವಿ ಸಂಘರ್ಷ.
ಮಾನವ – ವನ್ಯಜೀವಿಗಳು ಮುಖಾಮುಖಿಯಾದಾಗ ಅಲ್ಲಿ ಪ್ರಾಣಹಾನಿ, ಆಸ್ತಿ-ಸ್ವತ್ತುಗಳ ಹಾನಿ ಅಥವಾ ಜೀವನೋಪಾಯಕ್ಕೆ ತೊಂದರೆಯುಂಟಾದಲ್ಲಿ ಅದನ್ನು ಮಾನವ-ವನ್ಯಜೀವಿ ಸಂಘರ್ಷ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾನವರು ತೆಗೆದುಕೊಳ್ಳುವ ನಿರ್ಧಾರದಿಂದ ಆ ಪ್ರಾಣಿಗಳ ಜೀವಕ್ಕೆ ಆಪತ್ತುಂಟಾಗಿ ಅವುಗಳ ಸಂತತಿಯ ನಾಶಕ್ಕೆ ಕಾರಣವಾಗುತ್ತದೆ ಹಾಗೂ ಮನುಷ್ಯನ ಪ್ರಾಣಕ್ಕೂ ಹಾನಿಯುಂಟಾಗುತ್ತದೆ. ಇಂತಹ ಘಟನೆಗಳಿಂದ ಮಾನವರಿಗಷ್ಟೇ ಅಲ್ಲದೆ ಪ್ರಾಣಿಗಳಿಗೂ ಕೂಡ ತೊಂದರೆ. ಮೇಲ್ನೋಟಕ್ಕೆ ಇದು ಒಂದು ಪ್ರಾಂತ್ಯದ ಸಮಸ್ಯೆಯೆಂದು ಕಂಡು ಬಂದರೂ, ಇಂದು ವಿಶ್ವದಾದ್ಯಂತ ಕಾಡುವ ಭೂಮಿಯ ಸಮತೋಲನಕ್ಕೆ ಅಡಚಣೆಯುಂಟಾಗುತ್ತಿರುವ ಸಮಸ್ಯೆಯಾಗಿದ್ದು, ಗಮನಹರಿಸಬೇಕಾದ ಅತೀ ಮುಖ್ಯ ಸವಾಲಾಗಿದೆ. ಕಾಡಿನ ನಡುವೆ ವಾಸಿಸುವ ರೈತರು, ಜಾನುವಾರು ಕಾಯುವವರು, ಮೀನು ಹಿಡಿಯುವವರು ಮುಂತಾದವರು ಈ ಸಮಸ್ಯೆಗೆ ಸಿಕ್ಕಿಕೊಳ್ಳುತ್ತಿರುವವರಲ್ಲಿ ಪ್ರಮುಖರು.

ಈ ಸಮಸ್ಯೆಯು ಹೆಚ್ಚಾಗಲು ಕಾರಣಗಳು ಬೇಕಾದಷ್ಟಿವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಭೂ ವಿಸ್ತರಣೆ ಮಾಡುವ ನೆಪದಲ್ಲಿ ವನ್ಯಜೀವಿಗಳ ಆವಾಸಸ್ಥಾನಗಳಾದ ಕಾಡುಗಳನ್ನು ಕಬಳಿಸಿ ನಾಶಮಾಡುತ್ತಿದ್ದೇವೆ. ಇದರಿಂದ ಪ್ರಾಣಿಗಳು ಆಹಾರಕ್ಕಾಗಿ ನಾಡಿನೆಡೆಗೆ ಬರುತ್ತಿವೆ. ಕಾಡುಗಳ ಅಕ್ಕ-ಪಕ್ಕ ಮತ್ತು ಕಾಡುಗಳ ನಡುವೆ ಇರುವ ಹಳ್ಳಿಗಳು ಮತ್ತು ಅವುಗಳಿಗೆ ಸಂಪರ್ಕ ಕಲ್ಪಿಸುವ ದಾರಿಗಳು ಮಾನವ-ವನ್ಯಜೀವಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತವೆ. ಕಾಡಿನಲ್ಲಿ ಸಂಗ್ರಹಿಸುವ ಸಂಪನ್ಮೂಲಗಳನ್ನು ಪ್ರಾಣಿಗಳಿಗೆ ಹಾನಿಯುಂಟು ಮಾಡದೇ ಪಡೆದುಕೊಳ್ಳುವ ಬುಡಕಟ್ಟು ಜನಗಳಿಗೆ ಮಾಹಿತಿಯ ಕೊರತೆಯಿಂದಾಗಿ ಹಾಗು ಕಾಡಿನ ನಡುವಿರುವ ಜನರು ಸಂರಕ್ಷಿತ ಅರಣ್ಯ ಪ್ರದೇಶದ ನಿಯಮಗಳನ್ನು ಪಾಲಿಸದೇ ಹಲವು ಬಾರಿ ಮಾನವ-ವನ್ಯಜೀವಿ ಸಂಘರ್ಷದ ದುರ್ಘಟನೆಗಳು ನಡೆದುಹೋಗುತ್ತವೆ. ಇತ್ತೀಚೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಟ್ರಕ್ ಒಂದು ವೇಗವಾಗಿ ಚಲಾಯಿಸಿದ್ದರಿಂದ ಆನೆಯೊಂದಕ್ಕೆ ಡಿಕ್ಕಿ ಹೊಡೆದು ಆ ಹೆಣ್ಣಾನೆಯು ಸ್ಥಳದಲ್ಲೇ ಮೃತಪಟ್ಟಿತು. ಈ ರೀತಿಯ ಸಂಘರ್ಷಗಳು ಮನುಷ್ಯ ಮತ್ತು ಹುಲಿ, ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳ ನಡುವೆ ನಡೆದರೆ ಅದನ್ನು ಮನುಷ್ಯ- ಮಾಂಸಾಹಾರಿ ಪ್ರಾಣಿಗಳ ಸಂಘರ್ಷವೆನ್ನುತ್ತಾರೆ.
ಈ ಸಮಸ್ಯೆಗಿರುವ ಪರಿಹಾರವೆಂದರೆ ಮನುಷ್ಯ – ವನ್ಯಜೀವಿಗಳು ಸಹಬಾಳ್ವೆಯಿಂದಿರುವುದು. ಆದರೆ ಇದರ ಕುರಿತಾಗಿ ಆದಷ್ಟು ಬೇಗ ಹೆಚ್ಚೆಚ್ಚು ಚಿಂತನೆಗಳು ನಡೆಯಬೇಕಿದೆ. ಸದ್ಯಕ್ಕೆ ಅದರ ಬಗ್ಗೆ ತಜ್ಞರು ಹಾಗು ವಿಜ್ಞಾನಿಗಳು ತಮ್ಮ ಆಲೋಚನೆ ಹಾಗು ಸಂಶೋಧನೆಗಳನ್ನು ಮುಂದುವರೆಸಿದ್ದಾರೆ. ಅಂತಹ ಚಿಂತನೆಗಳಿಂದ ಕಾರ್ಯರೂಪಕ್ಕಿಳಿಯುತ್ತಿರುವ ಯೋಜನೆಗಳಲ್ಲಿ ಒಂದು ಬಿಹಾರದ 5 ಹಳ್ಳಿಗಳನ್ನು ಮನುಷ್ಯ-ಮಾಂಸಾಹಾರಿ ಪ್ರಾಣಿಗಳ ಸಹಬಾಳ್ವೆಯ ವಲಯವಾಗಿ ಅಭಿವೃದ್ಧಿಗೊಳಿಸುತ್ತಿರುವುದು.

ಪಶ್ಚಿಮ ಚಂಪಾರನ್ ನಲ್ಲಿರುವ ವಾಲ್ಮೀಕಿ ಟೈಗರ್ ರಿಸರ್ವ್‌ನ ಐದು ಹಳ್ಳಿಗಳನ್ನು ರಾಜ್ಯ ಸರ್ಕಾರ ಮತ್ತು ವೈಲ್ಡ್ಫ್ ಲೈಫ಼್ ಟ್ರಸ್ಟ್ ಆಫ್ ಇಂಡಿಯಾವು ಮಾದರಿ ಮನುಷ್ಯ-ಮಾಂಸಾಹಾರಿ ಪ್ರಾಣಿಗಳ ಸಹಬಾಳ್ವೆಯ ವಲಯವಾಗಿ ಅಭಿವೃದ್ಧಿಗೊಳಿಸಲು ಕೈಜೋಡಿಸಿದ್ದಾರೆ. ಅಲ್ಲಿನ ಹುಲಿಗಳ ದೃಢವಾದ ಆನುವಂಶಿಕ ಸಂತತಿ ಉಳಿಸಲು ಅಥವಾ ಕಾಪಾಡಲು ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶವು ಮಹತ್ವವಾದ ಪಾತ್ರ ವಹಿಸುತ್ತದೆ ಎಂದು ಬಿಹಾರದ ಮುಖ್ಯ ವನ್ಯಜೀವಿ ವಾರ್ಡನ್‌ರಾದ ಪಿ.ಕೆ.ಗುಪ್ತ ತಿಳಿಸಿದ್ದಾರೆ. ಈ ಮೂರು ವರ್ಷದ ಉಪಕ್ರಮವು 2023ರಲ್ಲಿ ಪ್ರಾರಂಭಗೊಳ್ಳಲಿದ್ದು ಇದರ ಮುಖ್ಯ ಉದ್ದೇಶ ವಾಲ್ಮೀಕಿ-ಚಿತ್ವಾನ್-ಪಾರ್ಸಾ ಆಸುಪಾಸಿನ ಸ್ಥಳಗಳಲ್ಲಿ ಮನುಷ್ಯ-ಮಾಂಸಾಹಾರಿ ಪ್ರಾಣಿಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುವುದಾಗಿದೆ
ವಾಲ್ಮೀಕಿ ಟೈಗರ್ ರಿಸರ್ವ್ನ ಇತ್ತೀಚಿನ ಸುದ್ದಿಯ ಪ್ರಕಾರ ಮನುಷ್ಯನನ್ನು ತಿನ್ನುವ ಹುಲಿಯೊಂದು ಒಂಬತ್ತು ಜನರನ್ನು ಹಾಗು ಬಹಳಷ್ಟು ಹಸು, ಆಡು, ಮುಂತಾದ ಜಾನುವಾರಾದಿ ಸಾಕುಪ್ರಾಣಿಗಳನ್ನು ತಿಂದಿದ್ದಕಾಗಿ ಅದನ್ನು 2022ರ ಅಕ್ಟೋಬರ್ ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಆದರೆ ಈ ರೀತಿಯ ಮನುಷ್ಯ-ಮಾಂಸಾಹಾರಿ ಪ್ರಾಣಿಗಳ ಸಂಘರ್ಷದಿಂದ ಹುಲಿಗಳ ಸಂತತಿಗೆ ತೊಡಕಿರುವುದರಿಂದ, ಈ ಯೋಜನೆಯ ಮೂಲಕ ಅದನ್ನು ನಿವಾರಿಸಬಹುದು ಎಂದು ಪಿ. ಕೆ. ಗುಪ್ತ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಯೋಜನೆಯು ಮುಖ್ಯವಾಗಿ ರೈತಸಮುದಾಯಗಳಿಗೆ ಈ ವಿಷಯದ ಕುರಿತು ಅರಿವನ್ನು ಮೂಡಿಸುವುದಾಗಿದೆ. ಹುಲಿಗಳಿಂದ ತಿನ್ನಲ್ಪಡುವ ಜಾನುವಾರುಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಆ ಹಳ್ಳಿಯ ಜನರು ತಮ್ಮ ಜೀವನ ಪದ್ಧತಿ, ಆಚರಣೆಗಳಲ್ಲಿ ಹಾಗು ತಮ್ಮ ನಡವಳಿಕೆಯಲ್ಲಿ ಹೇಗೆ ಬದಲಾವಣೆಯನ್ನು ತಂದುಕೊಂಡು, ಅವುಗಳೊಡನೆ ಹೊಂದಿಕೊಂಡು ಸಹಬಾಳ್ವೆ ನಡೆಸಬಹುದು ಎಂಬುದನ್ನು ತಿಳಿಸಿಕೊಡುವುದಾಗಿದೆ.
ಆದ್ದರಿಂದ ಅವುಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಈ ಮಹತ್ತರವಾದ ನಡೆಗೆ ಅವರು ಸಮ್ಮತಿ ಸೂಚಿಸಿದ್ದಾರೆ.
ಇಂತಹ ಮಹತ್ತರವಾದ ವನ್ಯಜೀವಿ ಸಂರಕ್ಷಣಾ ಯೋಜನೆಗಳು ಎಲ್ಲಾ ಪ್ರದೇಶಗಳಲ್ಲಿ ಜಾರಿಯಾಗಿ ಅವು ಯಶಸ್ಸು ಕಂಡರೆ ಅದು ನಮ್ಮೆಲ್ಲರ ಗೆಲುವಾಗುತ್ತದೆ. ಭೂಮಿಯು ಕೇವಲ ಮನುಷ್ಯರಿಗೆ ಮಾತ್ರ ಸೇರಿದ್ದಲ್ಲ. ಎಲ್ಲಾ ಪ್ರಾಣಿಗಳೊಡನೆ ಹೊಂದಿಕೊಂಡು ಸಹಬಾಳ್ವೆಯಿಂದ ಜೀವನ ನಡೆಸುವುದೇ ಈ ಜಗತ್ತಿನ ಮೂಲ ನಿಯಮವಾಗಿದ್ದು ಅದನ್ನು ತಿಳುವಳಿಕೆಯುಳ್ಳ ನಾವೆಲ್ಲ ಅರಿವಿನಲ್ಲಿಟ್ಟುಕೊಳ್ಳಬೇಕಾಗಿದೆ.

ಲೇಖನ: ಶಾಂಭವಿ ಎನ್.
ಬೆಂಗಳೂರು ನಗರ ಜಿಲ್ಲೆ.