ಪ್ರಕೃತಿಯ ಅದ್ಭುತ ಕಲಾಕಾರ- ಗೀಜಗ

©ಅರುಂಧತಿ
ಬಯಲು ಸೀಮೆ ಕಡೆ ಪ್ರವಾಸಕ್ಕೆ ಹೋದಾಗಲೆಲ್ಲಾ ಬಯಲು ಪ್ರದೇಶದಲ್ಲಿ ಇರುತ್ತಿದ್ದ ಜಾಲಿ ಮರದ ರೆಂಬೆಗೆ ಕಟ್ಟಿದ್ದ ಗೀಜಗದ ಗೂಡು ಹುಬ್ಬೇರಿಸುವಂತೆ ಮಾಡುತಿತ್ತು. ಆದರೆ ಪ್ರತಿಬಾರಿಯೂ ಕಾರಣಾಂತರಗಳಿಂದ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ.
ಆದರೆ ಈ ಬಾರಿ ಶಿವಮೊಗ್ಗದಲ್ಲಿ ನಮ್ಮ ಮನೆಯ ಹತ್ತಿರದಲ್ಲಿಯೇ ಇದ್ದ ಜಾಲಿ ಮರದ ಮೇಲೆ ನೂರಾರು ಗೀಜಗ ಹಕ್ಕಿಗಳು ಗೂಡು ಕಟ್ಟಿದ್ದು, ನನಗೆ ಸಂತೋಷ ತಂದಿತ್ತು. ಕೊಕ್ಕಿನಿಂದ ಹುಲ್ಲು, ಕಡ್ಡಿಗಳನ್ನು ತಂದು ಗೂಡುಗಳನ್ನು ನೇಯುವ ಜಾಣತನಕ್ಕೆ ಗೀಜಗ ಹಕ್ಕಿಗಳಿಗೆ ಸಮನಾದ ಬೇರೆ ಯಾವ ಹಕ್ಕಿಯೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ.
ಸಾಮಾನ್ಯವಾಗಿ ಬಯಲು ಸೀಮೆಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಗೀಜಗಗಳು ಮಲೆನಾಡಿನಲ್ಲೂ ಕೆಲವು ಕಡೆ ಕಂಡುಬರುತ್ತವೆ. ಗುಂಪುಗಳಲ್ಲಿ ವಾಸಿಸುವ ಗೀಜಗಗಳು ಕೃಷಿ ಪ್ರದೇಶ, ನೀರಿರುವ ಪ್ರದೇಶ, ಬೆಳೆ ಕಟಾವು ಮಾಡಿದ ಜಾಗಗಳಲ್ಲಿ, ಮುಳ್ಳು ಹೊಂದಿರುವ ಮರಗಳಾದ ಜಾಲಿಮರ, ಈಚಲು ಮರ ಮುಂತಾದವುಗಳಲ್ಲಿ, ಮೇ ತಿಂಗಳಿನಿಂದ ಸೆಪ್ಟೆಂಬರ್ ಅವಧಿಯಲ್ಲಿ, ಭತ್ತ ಅಥವಾ ಕಬ್ಬಿನ ಗರಿಗಳಿಂದ ಕಾಲುಚೀಲದಂತಹ ತೂಗಾಡುವ ಗೂಡುಗಳನ್ನು ಕಟ್ಟುತ್ತವೆ. ಇದರಲ್ಲಿ ಕೊಂಬೆಗೆ ತೂಗುಹಾಕುವ ಭಾಗ, ಮೊಟ್ಟೆಯಿಡುವ ವಿಶಾಲವಾದ ಭಾಗ ಮತ್ತು ಪ್ರವೇಶ ಭಾಗ ಎಂಬ ವಿಂಗಡಣೆ ಇದ್ದು, ಪ್ರವೇಶ ಭಾಗ ಕೆಳಮುಖವಾಗಿದೆ; ಇತರ ಜೀವಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಹಾಗೆ ಗೂಡು ಕಟ್ಟುತ್ತವೆ.

ಗೀಜಗ ಗಾತ್ರದಲ್ಲಿ ಗುಬ್ಬಿಯಷ್ಟೇ ಕಂಡುಬಂದರೂ ಅದರ ಜಾಣ್ಮೆ ಹುಬ್ಬೇರಿಸುವಂಥದ್ದು. ಗಂಡು ಹಕ್ಕಿಗಳು ಹುಲ್ಲುಕಡ್ಡಿಗಳಿಂದ ಉದ್ದದ ಗೂಡನ್ನು ಕಟ್ಟಲು ಪ್ರಾರಂಭಿಸಿ ಅರ್ಧ ಮುಗಿದ ನಂತರ, ಹೆಣ್ಣು ಹಕ್ಕಿ ಒಲಿದರೆ ಮಾತ್ರ ಗೂಡನ್ನು ಮುಂದುವರೆಸುತ್ತವೆ. ನೂರಾರು ಬಾರಿ ತಿರಸ್ಕರಿಸಿದರೂ, ಹಲವಾರು ಬಾರಿ ಹಾರಿಹೋಗಿ ಕಬ್ಬಿನಗದ್ದೆ, ಜೋಳದ ಹೊಲ, ಭತ್ತದ ಗರಿಗಳನ್ನು ತನ್ನ ಬಲವಾದ ಕೊಕ್ಕಿನಿಂದ ಬಿಡಿಸಿ ತಂದು ಅಷ್ಟೇ ಪ್ರೀತಿಯಿಂದ, ತಾಳ್ಮೆಯಿಂದ ಇನ್ನೊಂದು ಗೂಡನ್ನು ಕಟ್ಟುವ ಬದ್ಧತೆ ಮೆಚ್ಚುವಂಥದ್ದು. ಒಮ್ಮೆ ಸಂಗಾತಿ ಸಿಕ್ಕಳೆಂದರೆ, ಗೂಡು ಹೇಗೆ ಕಟ್ಟಿದ್ದರೂ ನಂತರ ತನಗೆ ಬೇಕಾದಂತೆ ಒಳಾಂಗಣವನ್ನು ಬದಲಿಸಿ 2- 4 ಬಿಳಿ ಮೊಟ್ಟೆಗಳನ್ನು ಇಟ್ಟು, ಸುಮಾರು 17 ದಿನ ಕಾವು ಕೊಟ್ಟು ಮರಿಮಾಡುತ್ತದೆ.


ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಗೀಜಗಗಳನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಬೆಳೆಯುವ ಬೆಳೆಗಳಿಗೆ ಔಷಧ ಸಿಂಪಡಿಸುವುದು ಮತ್ತು ಅಲಂಕಾರಕ್ಕಾಗಿ ಗೂಡುಗಳನ್ನು ಬಳಸುವ ಹುಮ್ಮಸ್ಸಿನಲ್ಲಿ ಗೀಜಗಗಳ ಸಂತತಿ ಮತ್ತು ಗೂಡುಗಳ ನಾಶಕ್ಕೆ ಕಾರಣವಾಗುತ್ತಿದ್ದಾನೆ. ಪರಿಸರದ ಸಮತೋಲನ ಕಾಪಾಡಲು ಎಲ್ಲವೂ ಬೇಕು. ಕಾಡು ಕಡಿದು ನಾಡು ಮಾಡುವುದರಿಂದ ಹಕ್ಕಿಗಳು ಗೂಡು ಕಟ್ಟಲು ಪರಿತಪಿಸಬೇಕಾಗಿದೆ. ಹೀಗೆಯೇ ಆದರೆ ಗೀಜಗನ ಜಾಣ್ಮೆಗೆ ತಲೆದೂಗುವ ದಿನಗಳೂ ಕಡಿಮೆ ಆದೀತು. ಅದಕ್ಕೂ ಮೊದಲು ನಾವು ಎಚ್ಚರಗೊಳ್ಳೋಣ.
ಲೇಖನ: ಅರುಂಧತಿ.
ಶಿವಮೊಗ್ಗ ಜಿಲ್ಲೆ.