ನಿಲ್ಲು ನಿಲ್ಲೆ ಪತಂಗ

ನಿಲ್ಲು ನಿಲ್ಲೆ ಪತಂಗ

©ಸುಬ್ರಹ್ಮಣ್ಯ ಹೆಗಡೆ

ಮಹಾಭಾರತದಲ್ಲಿ ಬರುವ ಬಕಾಸುರನಿಗೂ ಹಾಗೂ ಈ ಹುಳುವಿಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದು ಇತ್ತೀಚಿನ ದಿನಗಳಲ್ಲಿ ನನಗೆ ಅರಿವಾಗಿರುವ ಸಂಗತಿ!

ಯಾಕೆ ಅಂದರೆ ಕಳೆದ ಎರಡು ದಿನಗಳಲ್ಲಿ, ನಮ್ಮ ಕೈದೋಟದಲ್ಲಿ ತಕ್ಕಮಟ್ಟಿಗೆ ದೊಡ್ಡದು ಎನ್ನುವಷ್ಟು ಬೆಳೆದಿದ್ದ ನಂದಿಬಟ್ಟಲು/ನಂಜಟ್ಲೆ (Tabernaemontana divaricata) ಹೂವಿನ ಗಿಡವನ್ನು ಈ ಕೀಟ ಪೂರ್ತಿಯಾಗಿ ಬೋಳಿಸಿಬಿಟ್ಟಿದೆ! ಒಂದೇ ದಿನದಲ್ಲಿ ಹಗಲು ರಾತ್ರಿಯೆನ್ನದೆ, ಎಲೆ ಮೊಗ್ಗುಗಳನ್ನೂ ನೋಡದೆ ಎಲ್ಲವನ್ನು ಮನಸೋ ಇಚ್ಛೆ ಮುಕ್ಕಿದ ನಂತರ ನಮಗೆ ಉಳಿದಿದ್ದು ಗಿಡದ ಖಾಲಿ ಕೊಂಬೆಗಳು ಹಾಗೂ ಒಂದು ಬೊಗಸೆಯಷ್ಟಾಗುವ ಇದರ ಹಿಕ್ಕೆಗಳು!

ಒಂದು ತಿಂಗಳಕಾಲ ಹೀಗೆ ಬಕಾಸುರನಂತೆ ಭಕ್ಷಿಸುವ ಈ ಕಂಬಳಿಹುಳುಗಳು ಮುಂದೆ ಅತ್ಯಾಕರ್ಷಕವಾದ ಓಲಿಯಾಂಡರ್ ಹಾಕ್ ಮೊತ್ (Oleander hawk moth) ಅಥವಾ ಆರ್ಮಿ ಮೊತ್ (Army moth) ಅಥವಾ ಡಾಫ್ನಿಸ್ ನೀರಿ (Daphnis nerii) ಎಂಬ ಪತಂಗವಾಗಿ ಬದಲಾಗುತ್ತವೆ ಎಂದರೆ ಪ್ರಕೃತಿ ಮಾತೆ ಅದ್ಯಾವ ಕುಂಚವನ್ನು ಹಿಡಿದಿರಬೇಕು!

ಇದು ಸುಮಾರು 1450 ಪ್ರಭೇದಗಳನ್ನು ಒಳಗೊಂಡಿರುವ Sphingidae ಕುಟುಂಬಕ್ಕೆ ಸೇರಿದ ಪತಂಗ. ಆಫ್ರಿಕಾ, ಏಷ್ಯಾ ಹಾಗೂ ಯೂರೋಪ್ ಖಂಡಗಳಲ್ಲಿ ಕಂಡುಬರುವ ಈ ಪತಂಗಗಳಿಗೆ, ಕೈದೋಟಗಳಲ್ಲಿ ಅಲಂಕಾರಿಕ ಗಿಡವಾಗಿ ಬೆಳೆಯಲ್ಪಡುವ Nerium (ಕಣಗಿಲೆ) ಎಂಬ ಗಿಡ ಅಚ್ಚುಮೆಚ್ಚು.

©ಸುಬ್ರಹ್ಮಣ್ಯ ಹೆಗಡೆ

ವಿಷಕಾರಿ ಎನಿಸಿರುವ ಕಣಗಿಲೆ ಗಿಡದ ಎಲೆಗಳನ್ನು ಬಹುತೇಕ ಯಾವ ಕೀಟಗಳೂ ತಿನ್ನುವುದಿಲ್ಲ. ಆದರೆ ಈ ಕಂಬಳಿಹುಳುಗಳಿಗೆ ಕಣಗಿಲೆ ಗಿಡದ ವಿಷ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ! ಸಬ್ಬಕ್ಕಿ ಕಾಳಿನ ಗಾತ್ರದಷ್ಟಿರುವ ಮೊಟ್ಟೆಯನ್ನು ಒಡೆದು ಬರುವ ಈ ಕಂಬಳಿಹುಳುಗಳು ಬಲು ಬೇಗ ಬೆಳೆಯುತ್ತವೆ. 4 ರಿಂದ 5 ದಿನಗಳಲ್ಲಿ 4 ಮೀ. ಮೀ. ಗಾತ್ರದಲ್ಲಿರುವ ಈ ಹುಳುಗಳು 15 ದಿನಗಳಲ್ಲೇ 7 ಸೆ.ಮೀ. – 8 ಸೆ.ಮೀ.  ಗಳಷ್ಟು ಬೆಳೆದುಬಿಡುತ್ತವೆ.  

ಈಗ ನೀವು ಚಿತ್ರದಲ್ಲಿ ನೋಡುತ್ತಿರುವುದು ಅಂದಾಜು 16 -18 ದಿನಗಳಲ್ಲಿ ಬೆಳೆದಿರುವ ಹುಳು. 20 ದಿನಗಳವರೆಗೆ ಇವುಗಳಿಗೆ ಆಹಾರ ಅತ್ಯಂತ ಅವಶ್ಯಕತೆಯಿರುತ್ತದೆ. ಹಾಗಾಗಿಯೇ ಇವುಗಳಿರುವ ಗಿಡಗಳಲ್ಲಿ ಬರಿ ರೆಂಬೆ – ಕೊಂಬೆಗಳಷ್ಟೇ ಉಳಿದುಕೊಳ್ಳುತ್ತವೆ.

©ಹಯಾತ್ ಮೊಹಮ್ಮದ್

ಮೊಟ್ಟೆಯೊಡೆದು ಹೊರಬಂದ ಲಾರ್ವಗಳು ಮೊದಲು ಹಳದಿ ಬಣ್ಣ ಹೊಂದಿರುತ್ತವೆ. ನಂತರದ ದಿನಗಳಲ್ಲಿ ಈ ಹುಳುಗಳ ಬಣ್ಣ ಹಸಿರು ಬಣ್ಣಕ್ಕೆ ತಿರುಗುತ್ತದೆ. ಬಾಲದ ತುದಿಯಲ್ಲಿ ಕಾಣುವ ಕೊಂಬು ಸಹ ಮೊದಲಿನ ದಿನಗಳಲ್ಲಿ ಕಪ್ಪು ಬಣ್ಣದಿಂದ ಕೂಡಿದ್ದು, ಉದ್ದವಾಗಿರುತ್ತದೆ. ನಂತರದ ದಿನಗಳಲ್ಲಿ ಚಿಕ್ಕದಾಗುತ್ತಾ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಕಂಬಳಿಹುಳುಗಳನ್ನು ಕಂಡ ತಕ್ಷಣ ನಮ್ಮ ಗಮನ ಸೆಳೆಯುವುದು ಇವುಗಳ ಕಣ್ಣು. ಪ್ಯೂಪ (pupa) ಹಂತವನ್ನು ತಲುಪುವ ವೇಳೆಗೆ ಇವುಗಳ ಬಣ್ಣ ಕಂದು ಬಣ್ಣಕ್ಕೆ ಬದಲಾಗುತ್ತದೆ.

20 ದಿನಗಳ ನಂತರ ಇವುಗಳ ಚಟುವಟಿಕೆ ನಿಧಾನವಾಗುತ್ತಾ ಪ್ಯೂಪ ಹಂತಕ್ಕೆ ತನ್ನನ್ನು ತಾನು ಸಿದ್ಧ ಪಡಿಸಿಕೊಳ್ಳುತ್ತದೆ. ಒಣ ಎಲೆಗಳ ಅಥವಾ ಕೊಳೆಯುತ್ತಿರುವ ಎಲೆಗಳ ನಡುವೆ ಪ್ಯೂಪ ಕೋಶದೊಳಗೆ (pupa shell) ತಾನು ಪತಂಗವಾಗಿ ಹೊರಹೊಮ್ಮಲು ಕಾಯುತ್ತಾ ಕುಳಿತಿರುತ್ತದೆ! ಸುಮಾರು 30 ರಿಂದ 35 ದಿನಗಳವರೆಗೆ ಕೋಶದೊಳಗೆ ಪತಂಗವಾಗಿ ಮಾರ್ಪಾಡಾಗುತ್ತದೆ.

ಕೋಶವನ್ನೊಡೆದು ಹೊರಗೆ ಬಂದ ಪತಂಗಗಳು ತಮ್ಮ ಬಣ್ಣದಿಂದಾಗಿ ಹಾಗೂ ಅವುಗಳು ಪಡೆದ ವಿನ್ಯಾಸದಿಂದ, ಈ ಪತಂಗಗಳು ತಮ್ಮನ್ನು ಬೆನ್ನತ್ತಿ ಹೊರಟವರ ಕಣ್ಣಿಗೆ ಮಣ್ಣೆರಚಿಬಿಡುತ್ತವೆ!

© ಅಶ್ವಥ ಕೆ. ಎನ್.


ಲೇಖನ: ಸುಬ್ರಹ್ಮಣ್ಯ ಹೆಗಡೆ
     ಉತ್ತರ ಕನ್ನಡ ಜಿಲ್ಲೆ
.

Print Friendly, PDF & Email
Spread the love
error: Content is protected.