ಎಲೆ ಕತ್ತರಿಸಿದವರು ಯಾರು?

ಎಲೆ ಕತ್ತರಿಸಿದವರು ಯಾರು?

©ಹಯಾತ್  ಮೊಹಮ್ಮದ್

ಕಳೆದ ಲೇಖನಗಳಲ್ಲಿ ಉಲ್ಲೇಖಿಸಿದಂತೆ, ಈ ಜೇಡಗಳ ಗುರುತಿಸುವಿಕೆಯ ಕಷ್ಟವನ್ನರಿತು, ಈಗೀಗ ನಾನು ಜೇಡಗಳ ಉಸಾಬರಿಗೆ ಹೋಗುತ್ತಿರಲಿಲ್ಲ. ‘ಇಲ್ನೋಡು ಇದೇನೋ ವಿಶೇಷವಾಗಿದೆ!’ ಎಂದು ಮಗ ಕರೆದು ತೋರಿಸಿದಾಗ ಅನಿವಾರ್ಯವೆಂಬಂತೆ ನೋಡುತ್ತಿದ್ದೆ. ನನಗೇ ಸಾಕಷ್ಟು ಗೊಂದಲಗಳಿದ್ದು, ಇನ್ನು ಮಗನ ಪ್ರಶ್ನೆಗಳಿಗೆ ಹೇಗೆ ಮತ್ತು ಏನನ್ನು ಓದಿ ಉತ್ತರಿಸಬೇಕು ಎಂಬ ಪ್ರಶ್ನೆಯು ಕಾಡಿತ್ತು. ಆದರೆ ಈ ಕೀಟದ ನಂಟು ನನ್ನ ಬಿಡಬೇಕಲ್ಲ? ಬೆಳಿಗ್ಗೆ ಉಪಹಾರ ಸೇವಿಸುತ್ತಾ ಹೊರಗೆ ನಮ್ಮ ಬಾಲ್ಕನಿಯಲ್ಲಿ ಕುಳಿತುಕೊಳ್ಳುವುದು ಅಭ್ಯಾಸ. ಸ್ವಲ್ಪ ಸಮಾಧಾನ ಮತ್ತು ಶಾಂತಿಯಿಂದ ನನ್ನ ಉಪಹಾರ ಸೇವಿಸಬೇಕೆಂದು, ಮಗನಿಗೆ ಮೊದಲೇ ನಿಯೋಜಿಸಿದ ಕೆಲ ಆಟಿಕೆಗಳನ್ನು ಹಾಗು ಆಟಗಳನ್ನು ಕೊಡುವುದು ವಾಡಿಕೆ. ಆದರೆ ಮಕ್ಕಳಿರುವುದೇ ವಾಡಿಕೆಗಳನ್ನು ಮುರಿಯಲು ಅಲ್ಲವೇ? ಮೊದಲೆರಡು ದಿನ ಅತಿ ಉತ್ಸಾಹ ಹಾಗು ಸ್ವಲ್ಪ ಸಮಯ ಆಟದಲ್ಲಿ ತಲ್ಲೀನನಾಗಿದ್ದವನು, ಈಗ ಕೆಲ ಕ್ಷಣಗಳಲ್ಲಿ ಆ ಆಟಗಳನ್ನು ಮುಗಿಸಿ ‘ಇನ್ನೇನು ಬಾಕಿಯಿದೆ?’ ಎಂಬಂತೆ ನನ್ನ ಮುಂದೆ ಹಾಜರಾಗತೊಡಗಿದ. ಇನ್ನೇನು ಕೊಡಬಹುದು ಇವನನ್ನು ವ್ಯಸ್ತವಾಗಿಡಲು? ಎಂದು ಯೋಚಿಸುತ್ತಿರುವಾಗ ’ಜುಯ್ಯ’ ಎಂಬ ಸದ್ದಿನೊಂದಿಗೆ ಹಸಿರು ಎಲೆ ಹಾರಿ ಹೋಯಿತು! ಅದು ಗಾಳಿಯಲ್ಲಿ ತೇಲಿ ಬಂದ ಎಲೆ ಅಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು.  ಅದು ನೇರವಾಗಿ ನನ್ನ ಹಿಂಬದಿಯಲ್ಲಿದ್ದ ಹೂ ಕುಂಡದ ತಳಕ್ಕೆ, ಹೆಚ್ಚಿನ ನೀರು ಹರಿದು ಹೋಗಲು ಅನುವು ಮಾಡಿಕೊಡುವ ರಂಧ್ರದ ಒಳಗೆ ಹೋಯಿತು.

ಇದೇನಿದು…! ಎಂದು ನಾವಿಬ್ಬರೂ ಅದು ಹೊರಗೆ ಬರುವುದನ್ನೇ ಕಾಯುತ್ತ ಕುಳಿತೆವು. ಸ್ವಲ್ಪ ಸಮಯವಾದ ಬಳಿಕ ಜೇನು ಹುಳದಂತೆಯೇ ಕಾಣುತ್ತಿದ್ದ ಹುಳ ಹೊರಬಂದು ಅಷ್ಟೇ ವೇಗದಿಂದ ಎಲ್ಲೋ ಮರೆಯಾಯಿತು. ಇದಕ್ಕಿಂತ ಮೊದಲು ನಾನು ಜೇನು ಹುಳವು ಹೂವಿನ ಸುತ್ತ ಗಿರಕಿ ಹೊಡೆಯುವುದನ್ನು ನೋಡಿದ್ದೇನೆ ಹೊರತು, ಈ ತರಹ ರಂಧ್ರದೊಳಗೆ ಮಾಯವಾಗುವುದನ್ನು ಇದೇ ಮೊದಲ ಬಾರಿ ನೋಡಿದ್ದು. ಮತ್ತೆ ಹಾರಿ ಬಂದಿತು. ನಮ್ಮ ಹಾಜರಿ, ಅದಕ್ಕೇನು ತೊಂದರೆ ಕೊಡುತ್ತಿಲ್ಲ ಎಂದು ಮನವರಿಕೆಯಾಯಿತು ನಮಗೆ. ತನ್ನ ಪಾಡಿಗೆ ತಾನು ಎಲೆ ತರುವುದರಲ್ಲಿ ಕಾರ್ಯನಿರತವಾಗಿತ್ತು. ಎಲೆಯನ್ನು ತನ್ನ ಕಾಲುಗಳಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿರುತ್ತಿತ್ತು. ನಾನು ಚಿಕ್ಕವಳಿದ್ದಾಗ, ಕಿಟಕಿಯ ಸಂದಿಗಳಲ್ಲಿ, ಕೆಲ ಬಾರಿ ಮಣ್ಣಿನಲ್ಲಿ, ಬಾಗಿಲ ಚಿಲಕ ಹಾಕುವ ರಂಧ್ರದಲ್ಲಿ ಎಲೆಯಿಂದ ಮಾಡಿದ ನಾಜೂಕಾದ ಕೊಳವೆಗಳು ಸಿಗುತ್ತಿದ್ದವು. ಇವು ಹಸಿರಾಗಿದ್ದರೆ, ಇನ್ನು ಹಲವು ಸಲ ಒಣಗಿದೆಲೆಯ ಕೊಳವೆಗಳೇ ಹೆಚ್ಚು. ಇದರಲ್ಲಿ ಯಾವ ಹುಳ ಇರುತ್ತಿದ್ದಿರಬಹುದು ಎಂದು ಯೋಚಿಸುತ್ತಿದ್ದೆ. ಈಗ ಅದರ ಸಂಬಂಧಿಯೇ ಇಲ್ಲಿ ಗೂಡು ಕಟ್ಟುತ್ತಿದೆ ಎಂದು ಖುಷಿಯಾಯಿತು. ಹಾಗೆಯೇ ನಮ್ಮ ಹೂದೋಟದಲ್ಲಿರುವ ಗುಲಾಬಿ ಹೂವಿನ ಗಿಡದ ಎಲೆಯನ್ನು ಯಾರು ಕತ್ತರಿಸುತ್ತಿದ್ದಾರೆ ಎಂಬುದೂ ಗೊತ್ತಾಗಿತ್ತು. ಎಲೆ ಕೊರೆಯುವ ಜೇನು ಹುಳು (Leaf cutter bee) ಎಂದು ಕರೆಯಲ್ಪಡುವ ಇದು Megachilidae ಎಂಬ ವೈಜ್ಞಾನಿಕ ಗುಂಪಿಗೆ ಸೇರಲ್ಪಡುತ್ತದೆ. ಇದರ ಹೆಸರಿನಲ್ಲಿ ಜೇನು ಹುಳು ಅಂತಿದ್ದರೂ ಇದು ಜೇನುಹುಳವಲ್ಲ. ಇದು ಜೇನುಹುಳಗಳಂತೆ ದೊಡ್ಡ ಗೂಡಿನಲ್ಲಿ ವಾಸಿಸುವುದಿಲ್ಲ. ಇದು ಏಕಾಂಗಿಯಾಗಿಯೇ ಬದುಕುತ್ತದೆ. ಇದರ ಮುಖ್ಯ ಆಹಾರ ಹೂವಿನ ಮಕರಂದ. ಹೀಗಾಗಿ ಪರಾಗಸ್ಪರ್ಶ ಕ್ರಿಯೆಯಲ್ಲಿ ಇದರ ಪಾಲು ದೊಡ್ಡದಿದೆ.

© ಸುನೀಲ್ ಕುಂಬಾರ್

ಲೀಫ್ ಕಟ್ಟರ್ ಅಂತ ಹೆಸರು ಬಂದಿರುವುದು ಇದು ಗೂಡುಗಳ ನಿರ್ಮಾಣಕ್ಕಾಗಿ, ಎಲೆ ಕೊರೆಯುವುದರಿಂದ. ಅದು ಕೂಡ ತುಂಬಾ ಪಳಗಿದ ಕಲಾವಿದನಂತೆ ಅತ್ಯಂತ ನಾಜೂಕುತನದಿಂದ ಎಲೆಯನ್ನು ಕತ್ತರಿಸುತ್ತದೆ. ಬಾಲ್ಯದಲ್ಲಿ ಆಟಿಕೆ ಆಟವಾಡುವಾಗ ಚಪಾತಿ, ರೊಟ್ಟಿ ಎಂದು ಬೇರೆ ಬೇರೆ ಗಿಡದ ಎಲೆಗಳನ್ನು ತಂದು ಅದನ್ನು ಹರಿತವಾದ ಆಟಿಕೆಗಳಿಂದ ಗುಂಡಾಗಿ ಕತ್ತರಿಸಿ ಅಡುಗೆ ಮಾಡಿದಂತೆ ನಾಟಕ ಮಾಡುತ್ತಿದ್ದೆವು. ಆದರೂ ಎಲ್ಲೋ ಜಾಮಿಟ್ರಿ ಕೈ ಕೊಟ್ಟು ನಮ್ಮ ರೊಟ್ಟಿಗಳೆಲ್ಲವೂ ಹೊಸ ಹೊಸ ಆಕಾರ ಪಡೆಯುತ್ತಿದ್ದವು (ಈಗಲೂ ಇದು ನಿಜ ಜೀವನದ ಆಟದಲ್ಲಿ ಮುಂದುವರೆದಿದೆ!). ಈ ಚಿಕ್ಕ ಗಾತ್ರದ ಹುಳ ಮಾತ್ರ ಇದಕ್ಕೆ ತದ್ವಿರುದ್ಧ! ಪ್ರತಿ ಬಾರಿಯೂ ಒಂದೇ ಆಕಾರದ ಎಲೆಯನ್ನು ಕತ್ತರಿಸಿ ತಂದು ಅವುಗಳನ್ನು ಕೊಳವೆಯಂತೆ ಜೋಡಿಸುತ್ತದೆ. ಅದು ಕೂಡ ಕೆಲ ಸಸ್ಯಗಳ ಎಲೆಗಳನ್ನು ಮಾತ್ರ. ಎಲೆಗಳು ನುಣುಪಾಗಿ ತೆಳುವಾಗಿ ಇರಬೇಕು. ಹೆಚ್ಚಾಗಿ ಗುಲಾಬಿ ಹೂವಿನ ಗಿಡಗಳ ಎಲೆ, ಬೊಗನ್ ವಿಲ್ಲೆ ಸಸ್ಯದ ಎಲೆಗಳು ಇದಕ್ಕೆ ಅತಿಪ್ರಿಯ. ಎಲೆ ಕತ್ತರಿಸಿದ ಕೂಡಲೇ ಅದು ಕೆಳಗೆ ಬೀಳದಂತೆ ಹಿಡಿಯುವ ಕೌಶಲ್ಯವನ್ನು ನೋಡುವುದೇ ಒಂದು ಸೋಜಿಗ.  ಒಂದು ಕೋಣೆಯಲ್ಲಿ ಒಂದು ಮೊಟ್ಟೆ ಇಡುತ್ತದೆ. ಕೆಲವೊಮ್ಮೆ ಒಂದೇ ಉದ್ದವಾದ ಕೊಳವೆ ತಯಾರಿಸಿ ಅದರಲ್ಲಿ ಒಂದು ಮೊಟ್ಟೆ ಇಟ್ಟ ನಂತರ ಒಂದು ಎಲೆಯನ್ನು ಹಾಕಿ ಇನ್ನೊಂದು ಮೊಟ್ಟೆಯನ್ನು ಮತ್ತೊಂದು ಕೋಣೆಯಲ್ಲಿ ಇಡುತ್ತದೆ. ಇದು ಒಂಥರಾ ಒಂದೇ ಮನೆಯಲ್ಲಿ ಬೇರೆ ಬೇರೆ ಕೋಣೆಗಳನ್ನು ಪರದೆಯ ಮುಖಾಂತರ ಬೇರ್ಪಡಿಸಿದಂತೆ. ಒಂದು ಕೋಣೆಯಲ್ಲಿರುವ ಮೊಟ್ಟೆಯಿಂದ ಲಾರ್ವ ಬಂದೊಡನೆ ಅದಕ್ಕೆ ತಿನ್ನಲು ಬೇಕಾಗುವ ಪರಾಗವನ್ನು ಮೊದಲೇ ತುಂಬಿಸಿಟ್ಟಿರುತ್ತದೆ. ಇದಾದ ಮೇಲೆ ಕೊಳವೆಯನ್ನು/ ಕೋಣೆಯನ್ನು ಮತ್ತೊಂದು ಎಲೆಯಿಂದ ಮುಚ್ಚಿ ಬಿಡುತ್ತದೆ. ಬೇರೆ ಯಾವ ಭಕ್ಷಕ ಕೀಟಗಳು ಮೊಟ್ಟೆ ಅಥವಾ ಲಾರ್ವಾಗಳನ್ನು ಭಕ್ಷಿಸಬಾರದೆಂಬ ಮುಂದಾಲೋಚನೆಯಿಂದ ಈ ವ್ಯವಸ್ಥೆ. ಮೊಟ್ಟೆಯಿಂದ ಹೊರಬಂದ ಲಾರ್ವಾ ಅದರೊಳಗೆ ಶೇಖರಿಸಿಟ್ಟಿರುವ ಪರಾಗವನ್ನು ತಿಂದು ಬೆಳೆಯುತ್ತದೆ. ಅದರಲ್ಲಿಯೇ ಪ್ಯೂಪಾವಸ್ಥೆಗೆ ಹೋಗುತ್ತವೆ. ಬಹುತೇಕ ಇಡೀ ಚಳಿಗಾಲವನ್ನೆಲ್ಲ ಇದೇ ಅವಸ್ಥೆಯಲ್ಲಿ ಕಳೆಯುತ್ತವೆ! ಬೇಸಿಗೆಯ ಪ್ರಾರಂಭಿಕ ದಿನಗಳಲ್ಲಿ, ಪ್ರೌಢಾವಸ್ಥೆಯ ಹುಳಗಳು ಎಲೆ ಕೊಳವೆಯ ಗೂಡುಗಳಿಂದ ಹೊರಬಂದು ಮತ್ತೆ ಜೀವನಚಕ್ರವನ್ನು ಆರಂಭಿಸುತ್ತವೆ. ವಾತಾವರಣದಲ್ಲಿರುವ ಉಷ್ಣತೆಯ ಪ್ರಕಾರ ಈ ಪ್ರಕ್ರಿಯೆ ನಡೆಯುತ್ತದೆ. ಉಷ್ಣತೆ ಹೆಚ್ಚಿದ್ದಲ್ಲಿ ಹುಳಗಳು ಬೇಗನೆ ಹೊರಬರುತ್ತವೆ, ಉಷ್ಣತೆ ಏರುಪೇರಾದಾಗ ಕೆಲ ದಿನಗಳ ನಂತರ ಇವುಗಳ ಹುಟ್ಟು. ಗಂಡು ಎಲೆ ಕೊರೆಯುವ ಜೇನ್ನೊಣಗಳು ಕೆಲ ದಿನಗಳು ಮುಂಚಿತವಾಗಿ ಬಂದು ಹೆಣ್ಣು ಜೇನ್ನೊಣಗಳು ಹೊರ ಬರುವುದನ್ನೇ ಕಾಯುತ್ತಿರುತ್ತವೆ. ಸಮಾಗಮದ ನಂತರ ಹೆಚ್ಚಾಗಿ ಗಂಡು ಎಲೆ ಕೊರಕ ಜೇನ್ನೊಣ ಸಾಯುತ್ತದೆ. ಹೆಣ್ಣು ಜೇನ್ನೊಣ ಎಲೆ ಕತ್ತರಿಸುವ ಕಾಯಕವನ್ನು ಮುಂದುವರಿಸಿ ಪೀಳಿಗೆಯನ್ನು ಮುಂದುವರೆಸಲು ತೊಡಗುತ್ತದೆ. ಹೆಣ್ಣು ಎಲೆ ಕೊರಕ ಹುಳದ ಜೀವಿತಾವಧಿ 2 ತಿಂಗಳು. ಈ ಜೀವಿತಾವಧಿಯಲ್ಲಿ ಸುಮಾರು 30-40 ಮೊಟ್ಟೆಗಳನ್ನು ಇಡುತ್ತದೆ.

ನೋಡಲು ಜೇನು ಹುಳದಂತೆಯೇ ಕಂಡರೂ, ಪರಾಗವನ್ನು ತನ್ನ ಹೊಟ್ಟೆಯ ಮೇಲಿರುವ ರೇಷ್ಮೆಯಂಥ ಕೂದಲುಗಳಿಂದ ಹಿಡಿದಿಟ್ಟುಕೊಂಡಿರುತ್ತದೆ. ಅದೇ ಜೇನುಹುಳಗಳು ತಮ್ಮ ಕಾಲಿನಿಂದ ಪರಾಗಸ್ಪರ್ಶ ಕ್ರಿಯೆಯನ್ನು ನಡೆಸುತ್ತವೆ. ಕೆಲವು ಪ್ರದೇಶಗಳಲ್ಲಿ ಪರಾಗಸ್ಪರ್ಶಕ್ಕಾಗಿಯೇ ಇವುಗಳನ್ನು ಸಾಕುತ್ತಾರೆ.

 

© ಪವನ್ ಕುಮಾರ್ ಟಿ. ಎಸ್

ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
             ಬೆಂಗಳೂರು ಜಿಲ್ಲೆ
.

Print Friendly, PDF & Email
Spread the love
error: Content is protected.